ಬೆಳಗಾವಿ (ಸೆ.02): ಮಹಾಮಾರಿ ಕೊರೋನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನ ಸೇರಿದಂತೆ ಜಿಲ್ಲೆಯ ಮೂರು ಪ್ರಮುಖ ದೇವಸ್ಥಾನಗಳು ಸೆ.30ರವರೆಗೆ ಬಂದ್‌ ಇರಲಿದ್ದು, ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ದೇವಸ್ಥಾನಗಳ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆದೇಶ ಹೊರಡಿಸಿದ್ದಾರೆ. 

ಸವದತ್ತಿಯ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನ, ಜೋಗುಳಬಾವಿ ಸತ್ತೆಮ್ಮದೇವಿ, ಚಿಂಚಲಿ ಮಾಯಕ್ಕಾದೇವಿ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ನಿರ್ಬಂಧ ಹೇರಲಾಗಿದೆ. ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಈ ಮೂರು ದೇವಸ್ಥಾನಗಳು ಮಾರ್ಚ್ 18ರಿಂದ ಬಂದ್‌ ಆಗಿವೆ.

ಕೋವಿಡ್‌-19 ಲಾಕ್‌ಡೌನ್‌ ನಿರ್ಬಂಧ ಸಡಿಲಿಕೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಅಧೀನದಲ್ಲಿರುವ ಎಲ್ಲ ದೇವಾಲಯಗಳಲ್ಲಿ ಸಾಮಾಜಿಕ ಅಂತರ ಮತ್ತು ಸ್ಯಾನಿಟೈಸ್‌ ಕ್ರಮ ಕೈಗೊಂಡು ತಕ್ಷಣದಿಂದ ಎಲ್ಲ ಸೇವೆಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ.

ಮಂಗಳವಾರ ಈ ಕುರಿತು ಸುತ್ತೋಲೆ ಹೊರಡಿಸಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರ ಹೊರಡಿಸಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಸಂಪೂರ್ಣ ಜವಾಬ್ದಾರಿ ಮೇರೆಗೆ ಸೇವೆಗಳನ್ನು ಪ್ರಾರಂಭಿಸುವಂತೆ ತಿಳಿಸಿದೆ.

ದೇವಾಲಯಗಳ ಸಂಪ್ರದಾಯಗಳಿಗೆ ಅನುಗುಣವಾಗಿ ಈ ಹಿಂದೆ ನಡೆಸುತ್ತಿದ್ದ ಸೇವೆಗಳನ್ನು ಭಕ್ತರ ಸಂಖ್ಯೆ ಹಾಗೂ ಸ್ಥಳಾವಕಾಶದ ಲಭ್ಯತೆ ಆಧಾರದ ಮೇಲೆ ನಡೆಸಬಹುದು. ಸೇವೆಗಳ ಸಂಖ್ಯೆಗಳನ್ನು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳು ಅಥವಾ ಆಡಳಿತಾಧಿಕಾರಿಗಳು ನಿರ್ವಹಿಸಬೇಕು. ಕೋವಿಡ್‌-19 ಹರಡದಂತೆ ಹಾಲಿ ಮಾರ್ಗಸೂಚಿಗಳಿಗೆ ಒಳಪಟ್ಟು ಭಕ್ತಾದಿಗಳು ಸೇವೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಬೇಕು.