Asianet Suvarna News Asianet Suvarna News

ಮಾರ್ಷಲ್‌ ಹುದ್ದೆಗೆ ಸಿಗುತ್ತಿಲ್ಲ ನಿವೃತ್ತ ಯೋಧರು!

ನಗರದ ಕೆರೆ ಸಂರಕ್ಷಣೆ ಕುರಿತು ವಿಚಾರಣೆ ನಡೆಸುತ್ತಿರುವ ‘ರಾಷ್ಟ್ರೀಯ ಹಸಿರು ನ್ಯಾಯ ಪೀಠ(ಎನ್‌ಜಿಟಿ)’ ಬಿಬಿಎಂಪಿಯ ಎಲ್ಲ ಕೆರೆಗಳ ಸಂರಕ್ಷಣೆಗೆ ನಿವೃತ್ತ ಸೈನಿಕರನ್ನು ಮಾರ್ಷಲ್‌ಗಳನ್ನಾಗಿ ನೇಮಿಸುವಂತೆ ಆದೇಶಿಸಿದೆ. ಆದರೆ ಯಾರೂ ಕೂಡ ಈ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಲು ಸಿದ್ಧರಿಲ್ಲ

No One Ready To Serve As Marshal in Bengaluru
Author
Bengaluru, First Published Nov 16, 2019, 9:14 AM IST

ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು [ನ.16]:  ನಗರದ ಎಲ್ಲಾ ಕೆರೆಗಳನ್ನು ಸಂರಕ್ಷಣೆ, ಭದ್ರತೆಗೆ ಮಾರ್ಷಲ್‌ ನೇಮಿಸುವಂತೆ ‘ರಾಷ್ಟ್ರೀಯ ಹಸಿರು ನ್ಯಾಯಪೀಠ’ ಆದೇಶ ಪಾಲನೆ ಮಾಡದಂತಹ ಸ್ಥಿತಿಯನ್ನು ಬಿಬಿಎಂಪಿ ಎದುರಿಸುತ್ತಿದೆ. ಕೈ ತುಂಬಾ ಸಂಬಳ ನೀಡಲು ಮುಂದಾಗಿದ್ದರೂ ಮಾರ್ಷಲ್‌ ಹುದ್ದೆಗೆ ಬೇಕಾದ ನಿವೃತ್ತ ಸೈನಿಕರೇ ಸಿಗುತ್ತಿಲ್ಲ!

ನಗರದ ಕೆರೆ ಸಂರಕ್ಷಣೆ ಕುರಿತು ವಿಚಾರಣೆ ನಡೆಸುತ್ತಿರುವ ‘ರಾಷ್ಟ್ರೀಯ ಹಸಿರು ನ್ಯಾಯ ಪೀಠ(ಎನ್‌ಜಿಟಿ)’ ಬಿಬಿಎಂಪಿಯ ಎಲ್ಲ ಕೆರೆಗಳ ಸಂರಕ್ಷಣೆಗೆ ನಿವೃತ್ತ ಸೈನಿಕರನ್ನು ಮಾರ್ಷಲ್‌ಗಳನ್ನಾಗಿ ನೇಮಿಸುವಂತೆ ಆದೇಶಿಸಿದೆ. ಈಗಾಗಲೇ ಕೆಲವು ವಾರ್ಡ್‌ಗಳಲ್ಲಿ ಮಾರ್ಷಲ್‌ಗಳನ್ನು ನೇಮಿಸಲಾಗಿದೆ. ಆದರೆ, ನಗರದಲ್ಲಿನ ಎಲ್ಲಾ ಕೆರೆಗಳಿಗೂ ಮಾರ್ಷಲ್‌ಗಳನ್ನು ನೇಮಿಸುವುದಕ್ಕೆ ಎನ್‌ಜಿಟಿ ಸೂಚಿಸಿರುವುದರಿಂದ ಬಿಬಿಎಂಪಿ ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ತಿಂಗಳಿಗೆ 25 ಸಾವಿರ ಸಂಬಳ

ಮಾರ್ಷಲ್‌ ಹುದ್ದೆಗೆ ವೇತನವೇನು ಕಡಿಮೆ ಇಲ್ಲ. ಕಳೆದ ಸೆಪ್ಟೆಂಬರ್‌ನಲ್ಲಿ ವಾರ್ಡ್‌ ಮಟ್ಟದಲ್ಲಿ ನೇಮಿಸಲಾದ ಕ್ಲೀನ್‌ ಅಪ್‌ ಮಾರ್ಷಲ್‌ ಹುದ್ದೆಗೆ ಮಾಸಿಕವಾಗಿ 25 ಸಾವಿರ ರು. ವೇತನ, ದಿನಕ್ಕೆ ಎರಡು ಲೀಟಲ್‌ ಪೆಟ್ರೋಲ್‌, ತಿಂಗಳಿಗೆ 500 ರು. ಮೊಬೈಲ್‌ ಬಿಲ್‌, ವರ್ಷಕ್ಕೆ ಎರಡು ಜೊತೆ ಸಮವಸ್ತ್ರ ನೀಡಲಾಗುತ್ತದೆ. ಆದೇ ರೀತಿ ಕೆರೆ ಹಾಗೂ ಇಂದಿರಾ ಕ್ಯಾಂಟೀನ್‌ ಭದ್ರತೆ ನೇಮಿಸಿದ ಮಾರ್ಷಲ್‌ಗಳಿಗೂ ನೀಡಲಾಗುತ್ತದೆ. ಆದರೂ ಮಾರ್ಷಲ್‌ ಹುದ್ದೆಗೆ ನಿವೃತ್ತ ಸೈನಿಕರ ಕೊರತೆ ಎದ್ದು ಕಾಣುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪಾಲಿಕೆಗೆ ವೇತನದ ಹೊರೆ:

ಇಂದಿರಾ ಕ್ಯಾಂಟೀನ್‌ ಭದ್ರತೆಗೆ ಎರಡು ಪಾಳಿಯಲ್ಲಿ ಕಾರ್ಯನಿರ್ವಹಿಸುವುದಕ್ಕೆ ಒಟ್ಟು 482 ಮಾರ್ಷಲ್‌, ವಾರ್ಡ್‌ಗೆ ಒಬ್ಬರಂತೆ 198 ಕ್ಲೀನ್‌ಅಪ್‌ ಮಾರ್ಷಲ್‌, ಬೆಳ್ಳಂದೂರು ಕೆರೆಗೆ ಮೂರು ಪಾಳಿಯಲ್ಲಿ ಕಾವಲಿಗೆ 21 ಮಾರ್ಷಲ್‌ ಸೇರಿದಂತೆ ಒಟ್ಟು 531 ಮಾರ್ಷಲ್‌ಗಳು ಪಾಲಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವಾರ್ಡ್‌ ಮಟ್ಟದ ಕ್ಲೀನ್‌ ಅಪ್‌ ಮಾರ್ಷಲ್‌ ಮತ್ತು ಅಧಿಕಾರಿಗಳಿಗೆ ವೇತನ, ಸಮವಸ್ತ್ರ, ಮೊಬೈಲ್‌ ಬಿಲ್‌, ಇಂಧನ ಭತ್ಯೆಗೆ ಮಾಸಿಕವಾಗಿ 88.38 ಲಕ್ಷ ರು. ಸೇರಿದಂತೆ ಒಟ್ಟು 10.60 ಕೋಟಿ ರು.ಗಳನ್ನು ವಾರ್ಷಿಕವಾಗಿ ಪಾಲಿಕೆ ವೆಚ್ಚ ಮಾಡುತ್ತಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜತೆಗೆ ಇಂದಿರಾ ಕ್ಯಾಂಟೀನ್‌ ಹಾಗೂ ಬೆಳ್ಳಂದೂರು ಕೆರೆ ಭದ್ರತೆ ನೇಮಿಸಲಾದ ಮಾಷ್‌ರ್‍ಲ್‌ಗಳಿಗೆ ವೇತನ ನೀಡುತ್ತಿದೆ. ಅದರೊಂದಿಗೆ ಎನ್‌ಜಿಟಿ ಹೇಳಿದಂತೆ ಬಿಬಿಎಂಪಿಯ 169 ಕೆರೆಗಳಿಗೆ ಮೂರು ಪಾಳಿಗೆ ಸುಮಾರು 507 ಜನ ಮಾರ್ಷಲ್‌ ಬೇಕಾಗಲಿದೆ. ಅಷ್ಟೊಂದು ಸಿಬ್ಬಂದಿಗೆ ವೇತನ ನೀಡುವುದು ಪಾಲಿಕೆಗೆ ಹೊರೆಯಾಗಲಿದೆ ಎಂಬುದು ಅಧಿಕಾರಿಗಳ ವಾದವಾಗಿದೆ.

ನ್ಯಾಯಪೀಠಕ್ಕೆ ಮನವರಿಕೆ ಮಾಡಲು ಸಿದ್ಧತೆ:

ನ.27ರಂದು ಈ ವಿಚಾರದ ಬಗ್ಗೆ ಎನ್‌ಜಿಟಿ ಮತ್ತೆ ವಿಚಾರಣೆ ನಡೆಸಲಿದೆ. ಆಗ ಕೆರೆಗಳ ಭದ್ರತೆ ಮಾರ್ಷಲ್‌ಗಳ ನೇಮಕ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಡಲಾಗುವುದು. ಈಗಿರುವ ಮಾರ್ಷಲ್‌ ನಿರ್ವಹಣೆ ಹೊರೆ ಹೆಚ್ಚಾಗಿದೆ ಎಂದು ಬಿಬಿಎಂಪಿಯ ಮಾರ್ಷಲ್‌ ಚೀಫ್‌ ಕರ್ನಲ್‌ ರಾಜ್‌ ಬೀರ್‌ಸಿಂಗ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಕೆರೆ ಭದ್ರತೆಗೆ ಗೃಹ ರಕ್ಷಕ ದಳ ಸಿಬ್ಬಂದಿ

ಬಿಬಿಎಂಪಿ ವ್ಯಾಪ್ತಿಯಲ್ಲಿರುವ 169 ಕೆರೆಗಳ ಪೈಕಿ 94 ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಇನ್ನು 19 ಅಭಿವೃದ್ದಿ ಹಂತದಲ್ಲಿವೆ. 19 ಕೆರೆ ಕೇವಲ ದಾಖಲೆಯಲ್ಲಿ ಮಾತ್ರ ಉಳಿದಿದ್ದು ಅಲ್ಲಿ ಕಟ್ಟಡ ಇನ್ನಿತರ ಅಭಿವೃದ್ಧಿ ಕಾರ್ಯ ನಡೆಸಲಾಗಿದೆ. 37 ಕೆರೆಗಳನ್ನು ಅಭಿವೃದ್ಧಿ ಪಡಿಸುವುದು ಬಾಕಿ ಇದೆ. ಈ ಎಲ್ಲ ಕೆರೆಗಳ ಭದ್ರತೆ ಕಳೆದ ಒಂದು ವರ್ಷದಿಂದ ಮೂರು ಪಾಳಿಯಲ್ಲಿ ಕಾರ್ಯನಿರ್ವಹಿಸುವುದಕ್ಕೆ 360 ಗೃಹ ರಕ್ಷಕ ದಳದ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಕೆರೆಗಳಿಗೆ ಮಾರ್ಷಲ್‌ ನೇಮಕ ವಿಚಾರದ ಬಗ್ಗೆ ಮಾಹಿತಿ ಇಲ್ಲ ಎಂದು ಬಿಬಿಎಂಪಿ ಕೆರೆ ವಿಭಾಗದ ಮುಖ್ಯ ಎಂಜಿನಿಯರ್‌ ಮೋಹನ ಕೃಷ್ಣ ತಿಳಿಸಿದ್ದಾರೆ.

ಕಾರ್ಯ ನಿರ್ವಹಿಸುತ್ತಿರುವ ಮಾರ್ಷಲ್‌ ವಿವರ

198 ವಾರ್ಡ್‌ಗೆ- 198 ಕ್ಲೀನ್‌ ಅಪ್‌ ಮಾರ್ಷಲ್‌

191 ಸ್ಥಿರ ಇಂದಿರಾ ಕ್ಯಾಂಟೀನ್‌ಗೆ- 482 ಮಾರ್ಷಲ್‌ (ಎರಡು ಪಾಳಿಗೆ)

ಬೆಳ್ಳಂದೂರು ಕೆರೆಗೆ- 21 ಮಾರ್ಷಲ್‌ (ಮೂರು ಪಾಳಿಗೆ)

ವರ್ತೂರು ಕೆರೆಗೆ- 21 ಮಾರ್ಷಲ್‌ (ಮೂರು ಪಾಳಿಗೆ) (ಚಿಂತನೆ)

ಒಟ್ಟು-552 ಮಾರ್ಷಲ್‌

ಒಂದೇ ಬಾರಿಗೆ ಎಲ್ಲ ಕೆರೆಗಳಿಗೆ ಮಾರ್ಷಲ್‌ ನೇಮಿಸುವುದು ಅಸಾಧ್ಯ. ಆದರೆ, ಹಂತ ಹಂತವಾಗಿ ಕೋರ್ಟ್‌ ಆದೇಶದಂತೆ ಮಾರ್ಷಲ್‌ ನಿಯೋಜನೆಗೆ ಕ್ರಮ ಕೈಗೊಳ್ಳಲಾಗುವುದು.

- ವೆಂಕಟೇಶ್‌, ಜಂಟಿ ಆಯುಕ್ತ, ಬಿಬಿಎಂಪಿ ಹಣಕಾಸು ವಿಭಾಗ

Follow Us:
Download App:
  • android
  • ios