Asianet Suvarna News Asianet Suvarna News

Mandya : ಪಿಡಬ್ಲ್ಯುಡಿ ಖಜಾನೆ ಖಾಲಿ..!

ಲೋಕೋಪಯೋಗಿ ಇಲಾಖೆಯಲ್ಲಿ ಹಣವಿಲ್ಲ, ಇಲಾಖಾ ವ್ಯಾಪ್ತಿಯ ರಸ್ತೆಗಳನ್ನು ನಗರಸಭೆಯಿಂದ ಅಭಿವೃದ್ಧಿ ಪಡಿಸಲಾಗುತ್ತಿದೆ. ಮಳೆಯಿಂದ ಹಾನಿಗೊಳಗಾದ ರಸ್ತೆ, ಸೇತುವೆಗಳಿಗೆ ತಾತ್ಕಾಲಿಕವಾಗಿ ತೇಪೆ ಹಾಕಿರುವುದನ್ನು ಬಿಟ್ಟರೆ ಶಾಶ್ವತ ಪರಿಹಾರ ಸೂಚಿಸಿಲ್ಲ. ಸರ್ಕಾರದಿಂದ ಹಣ ಬಿಡುಗಡೆಯಾಗದೆ ಅಧಿಕಾರಿಗಳು ಪೇಚಿಗೆ ಸಿಲುಕಿದ್ದಾರೆ.

No Money In PWD Treasury Mandya  snr
Author
First Published Dec 10, 2022, 5:40 AM IST

 ಮಂಜುನಾಥ

  ಮಂಡ್ಯ(ಡಿ.10):ಲೋಕೋಪಯೋಗಿ ಇಲಾಖೆಯಲ್ಲಿ ಹಣವಿಲ್ಲ, ಇಲಾಖಾ ವ್ಯಾಪ್ತಿಯ ರಸ್ತೆಗಳನ್ನು ನಗರಸಭೆಯಿಂದ ಅಭಿವೃದ್ಧಿ ಪಡಿಸಲಾಗುತ್ತಿದೆ. ಮಳೆಯಿಂದ ಹಾನಿಗೊಳಗಾದ ರಸ್ತೆ, ಸೇತುವೆಗಳಿಗೆ ತಾತ್ಕಾಲಿಕವಾಗಿ ತೇಪೆ ಹಾಕಿರುವುದನ್ನು ಬಿಟ್ಟರೆ ಶಾಶ್ವತ ಪರಿಹಾರ ಸೂಚಿಸಿಲ್ಲ. ಸರ್ಕಾರದಿಂದ ಹಣ ಬಿಡುಗಡೆಯಾಗದೆ ಅಧಿಕಾರಿಗಳು ಪೇಚಿಗೆ ಸಿಲುಕಿದ್ದಾರೆ.

ದಾಖಲೆ ಮಳೆಯಿಂದ (Rain)  ಗುಂಡಿ ಬಿದ್ದು ಹಾಳಾಗಿದ್ದ ನಗರದ ಗುತ್ತಲು ಕಾಲೋನಿಯ ಕೆ.ಎಂ.ದೊಡ್ಡಿ, ಮಳವಳ್ಳಿ ಸಂಪರ್ಕಿಸುವ ರಾಜ್ಯ ಹೆದ್ದಾರಿ ರಸ್ತೆ (Road)  ಅಭಿವೃದ್ಧಿ ಕಾಮಗಾರಿಯನ್ನು ನಡೆಸಲು ಇಲಾಖಾ ಅಧಿಕಾರಿಗಳಿಂದ ಸಾಧ್ಯವಾಗಲಿಲ್ಲ. ಹಣಕಾಸಿನ ಕೊರತೆಯಿಂದಾಗಿ 1250 ಮೀಟರ್‌ ರಸ್ತೆ ಅಭಿವೃದ್ಧಿ ಪಡಿಸುವ ಜವಾಬ್ದಾರಿಯನ್ನು ನಗರಸಭೆಗೆ ವಹಿಸಿದ್ದು, ಈ ರಸ್ತೆಯನ್ನು ನಗರೋತ್ಥಾನ ಯೋಜನೆಯಡಿ ಸೇರಿಸಿಕೊಂಡು ಬುಧವಾರ ಶಂಕುಸ್ಥಾಪನೆ ನೆರವೇರಿಸಲಾಯಿತು.

ಖಜಾನೆ ಖಾಲಿ:

ಅದೇ ರೀತಿ ವಿ.ವಿ.ರಸ್ತೆ, ಪಿಇಎಸ್‌ ವಿಜ್ಞಾನ ಕಾಲೇಜು ರಸ್ತೆಗಳನ್ನೂ ನಗರಸಭೆಯಿಂದಲೇ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಲೋಕೋಪಯೋಗಿ ಇಲಾಖೆ ಖಜಾನೆ ಹಣವಿಲ್ಲದೆ ಖಾಲಿಯಾಗಿರುವುದು ಇದಕ್ಕೆ ಉದಾಹರಣೆಯಾಗಿದೆ. ರಸ್ತೆ, ಸೇತುವೆ ಕಾಮಗಾರಿಗಳಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಬಿಡುಗಡೆಯಾದ ಹಣವನ್ನು ಹೊರತುಪಡಿಸಿದಂತೆ ಉಳಿದಂತೆ ಸರ್ಕಾರದಿಂದ ಈವರೆಗೆ ಶಾಶ್ವತ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ನಯಾಪೈಸೆ ಹಣ ಬಿಡುಗಡೆಯಾಗಿಲ್ಲ. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಲೋಕೋಪಯೋಗಿ ಇಲಾಖೆಗೆ ಸೇರಿದ ತಾಲೂಕು ರಸ್ತೆಗಳು, ಸಂಪರ್ಕ ರಸ್ತೆಗಳು, ಸೇತುವೆಗಳು ಬಹುತೇಕ ಹಾಳಾಗಿವೆ. ಮಳೆಗಾಲ ಮುಗಿದ ನಂತರದಲ್ಲಿ ಶಾಶ್ವತ ಪರಿಹಾರ ಕಾಮಗಾರಿಗಳನ್ನು ನಡೆಸಬೇಕಿತ್ತಾದರೂ ಇದುವರೆಗೆ ಶಾಶ್ವತ ಪರಿಹಾರ ಸೂಚಿಸುವಂತಹ ಒಂದೇ ಒಂದು ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿಲ್ಲ. ಇದಕ್ಕೆ ಕಾರಣ ಹಣವಿಲ್ಲ. ಸರ್ಕಾರದಿಂದ ಯಾವಾಗ ಬಿಡುಗಡೆಯಾಗುವುದೋ ಗೊತ್ತಿಲ್ಲ.

ಹಣ ಬಿಡುಗಡೆ ಯಾವಾಗ?

ಶಾಶ್ವತ ಪರಿಹಾರ ಕೈಗೊಳ್ಳಬೇಕಾದ ರಸ್ತೆ, ಸೇತುವೆ ಕಾಮಗಾರಿಗಳ ಅಂದಾಜು ಪಟ್ಟಿಯನ್ನು ತಯಾರಿಸಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಸರ್ಕಾರದಿಂದ ಹಣ ಬಂದ ಕೂಡಲೇ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಇಲಾಖಾ ಅಧಿಕಾರಿಗಳು ಹೇಳುವ ಮಾತಾಗಿದೆ. ಚುನಾವಣೆಗೆ ಇನ್ನು ಆರು ತಿಂಗಳಷ್ಟೇ ಬಾಕಿ ಇದೆ. ಈಗಾಗಲೇ ಉಸ್ತುವಾರಿ ಸಚಿವರೆನಿಸಿಕೊಂಡವರು ಪ್ರಗತಿ ಪರಿಶೀಲನಾ ಸಭೆ ನಡೆಸುವುದನ್ನೇ ಮರೆತಿದ್ದಾರೆ. ಕ್ಷೇತ್ರಗಳ ಕಡೆ ಎಲ್ಲರೂ ಹೆಚ್ಚಿನ ಆಸಕ್ತಿ ತೋರುತ್ತಿರುವ ಹೊತ್ತಿನಲ್ಲಿ ರಸ್ತೆ, ಸೇತುವೆ, ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆಯಾಗುವುದು ಯಾವಾಗ ಎನ್ನುವ ಪ್ರಶ್ನೆ ಮೂಡಿದೆ.

ಲೋಕೋಪಯೋಗಿ ಇಲಾಖೆಯಿಂದ ಯಾವೊಂದು ಕಾಮಗಾರಿಯೂ ನಡೆಯದಂತಾಗಿದೆ. ಗುತ್ತಿಗೆದಾರರ ಬಿಲ್‌ 280 ಕೋಟಿ ರು.ನಿಂದ 300 ಕೋಟಿ ರು.ನಷ್ಟಿದೆ. ಗುತ್ತಿಗೆದಾರರಿಗೆ ಬಾಕಿ ಕೊಡುವುದಕ್ಕೂ ಹಣವಿಲ್ಲ, ಹಾಳಾಗಿರುವ ರಸ್ತೆ, ಸೇತುವೆ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಶಾಶ್ವತ ಪರಿಹಾರ ರೂಪಿಸುವುದಕ್ಕೂ ಹಣವಿಲ್ಲದೆ ಪರದಾಡುವಂಮತಾಗಿದೆ.

ಭಾರೀ ಮಳೆಯಿಂದ ಹಾನಿಗೊಳಗಾಗಿದ್ದ ಗ್ರಾಮೀಣ ರಸ್ತೆಗಳು, ಸಂಪರ್ಕ ರಸ್ತೆಗಳು, ಸೇತುವೆಗಳಿಗೆ ಜಿಲ್ಲಾಧಿಕಾರಿ ಬಿಡುಗಡೆ ಮಾಡಿದ ತಾತ್ಕಾಲಿಕ ಪರಿಹಾರದಿಂದ ತೇಪೆ ಹಾಕಿರುವುದೇ ಇಲಾಖೆಯ ದೊಡ್ಡ ಸಾಧನೆಯಾಗಿದೆ. ಈ ವರ್ಷ ಸುರಿದ ರಣಮಳೆಯಿಂದ ರಸ್ತೆಗಳೆಲ್ಲಾ ಛಿದ್ರಗೊಂಡಿವೆ. ಸಂಪರ್ಕ ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ಸೇತುವೆಗಳು ಕುಸಿದುಬಿದ್ದಿವೆ. ಈಗಾಗಲೇ ರಸ್ತೆ-ಸೇತುವೆಗಳ ಪರಿಸ್ಥಿತಿ ನೋಡಿ ಹಲವಾರು ಕಡೆಗಳಲ್ಲಿ ರಸ್ತೆ ಅಭಿವೃದ್ಧಿಪಡಿಸುವಂತೆ ಒತ್ತಾಯಿಸಿ ಪ್ರತಿಭಟನೆಗಳನ್ನು ನಡೆಸಿದ್ದಾರೆ.

ನೂರಾರು ಕೋಟಿ ರು. ನಷ್ಟ:

ಲೋಕೋಪಯೋಗಿ ಇಲಾಖೆ ಅಧಿಕಾರಿಗಳೇ ನಡೆಸಿರುವ ಅಂದಾಜಿನ ಪ್ರಕಾರ ರಾಜ್ಯ ಹೆದ್ದಾರಿಯ 22.30 ಕಿ.ಮೀ. ರಸ್ತೆ ಹಾಳಾಗಿದ್ದು, 17.50 ಕೋಟಿ ರು. ನಷ್ಟಉಂಟಾಗಿದೆ. ಜಿಲ್ಲಾಮಟ್ಟದ ರಸ್ತೆಗಳು 50.70 ಕಿ.ಮೀ. ಹಾಳಾಗಿದ್ದು, 64.35 ಕೋಟಿ ರು.ನಷ್ಟುನಷ್ಟವಾಗಿದೆ. 51 ಸೇತುವೆಗಳು ಕುಸಿದು 42.95 ಕೋಟಿ ರು. ನಷ್ಟವಾಗಿದೆ. ಗ್ರಾಮೀಣ ರಸ್ತೆಗಳು 245.4 ಕಿ.ಮೀ. ಹಾಳಾಗಿದ್ದು, 46.55 ಕೋಟಿ ರು. ನಷ್ಟವಾಗಿದ್ದರೆ, 30 ಸೇತುವೆಗಳು ಕುಸಿದು 8.11 ಕೋಟಿ ರು. ನಷ್ಟಉಂಟಾಗಿದೆ. 54 ವಾಟರ್‌ ಟ್ಯಾಂಕ್‌ ಹಾಗೂ ಸಂರಚನೆ ಹಾಳಾಗಿ 9..30 ಕೋಟಿ ರು ನಷ್ಟವಾಗಿದೆ ಎಂದು 22 ಆಗಸ್ಟ್‌ ತಿಂಗಳಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಈವರೆಗೂ ಸರ್ಕಾರ ಹಣ ಬಿಡುಗಡೆ ಮಾಡದೆ ವಿಳಂಬನೀತಿ ಅನುಸರಿಸುತ್ತಿದೆ.

ನಗರ ವ್ಯಾಪ್ತಿಯಲ್ಲಿರುವ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ನಗರಸಭೆಯವರು ತೆಗೆದುಕೊಳ್ಳುವುದಕ್ಕೆ ಅವಕಾಶವಿರುವುದರಿಂದ ಅನುದಾನ ಕೊರತೆ ಇರುವುದಾಗಿ ಹೇಳಿ ಎರಡು-ಮೂರು ರಸ್ತೆಗಳನ್ನು ವಹಿಸಲಾಗಿದೆ. ನಗರ-ಗ್ರಾಮೀಣ ಭಾಗದ ಜನರು ಹೆಚ್ಚು ಸಂಚರಿಸುವುದರಿಂದ ಈ ರಸ್ತೆಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ನಗರಸಭೆಯವರೇ ಕೈಗೆತ್ತಿಕೊಂಡು ಅಭಿವೃದ್ಧಿಪಡಿಸುತ್ತಿದ್ದಾರೆ.

ರಾಜ್ಯಹೆದ್ದಾರಿ, ಜಿಲ್ಲಾ ಮಟ್ಟದ ರಸ್ತೆಗಳು, ಗ್ರಾಮೀಣ ರಸ್ತೆಗಳು, ಸೇತುವೆಗಳು ಮಳೆಯಿಂದ ಸಾಕಷ್ಟುಹಾನಿಗೊಳಗಾಗಿದ್ದರೂ ಹಣವಿಲ್ಲದೆ ಅವುಗಳನ್ನು ಸುಧಾರಣೆಗೆ ತರಲಾಗುತ್ತಿಲ್ಲ. ಈಗಲೂ ಬೆಂಗಳೂರು-ಮಂಗಳೂರು ಹೆದ್ದಾರಿಯ ಬೆಳ್ಳೂರು ಕ್ರಾಸ್‌ ಬಳಿ ತಡೆಗೋಡೆ ಕುಸಿದಿದ್ದರೂ ಅಲ್ಲಿ ಮರಳು ಮೂಟೆಗಳನ್ನು ಮಾತ್ರ ಜೋಡಿಸಿಟ್ಟು ಬಿಟ್ಟಿದ್ದಾರೆ. ಅದಕ್ಕೊಂದು ಶಾಶ್ವತ ಪರಿಹಾರ ಕಲ್ಪಿಸುವ ಇಲಾಖೆ ಅಧಿಕಾರಿಗಳಿಂದ ಇದುವರೆಗೂ ಸಾಧ್ಯವಾಗದಿರುವುದು ದುರ್ದೈವದ ಸಂಗತಿಯಾಗಿದೆ.

ಭಾರೀ ಮಳೆಯಿಂದ ಹಾನಿಯಾಗಿರುವ ರಾಜ್ಯ ಹೆದ್ದಾರಿ, ಜಿಲ್ಲಾ ರಸ್ತೆಗಳು, ಸೇತುವೆಗಳು ಸೇರಿದಂತೆ ಇನ್ನಿತರ ಶಾಶ್ವತ ಅಭಿವೃದ್ಧಿ ಕಾಮಗಾರಿಗಳಿಗೆ ಅಂದಾಜುಪಟ್ಟಿತಯಾರಿಸಿ ಸರ್ಕಾರಕ್ಕೆ ಕಳುಹಿಸಿದ್ದೇವೆ. ಸರ್ಕಾರದಿಂದ ಹಣ ಬಿಡುಗಡೆಯಾದ ಬಳಿಕ ಹಂತ ಹಂತವಾಗಿ ಕಾಮಗಾರಿಗಳನ್ನು ಕೈಗೊಳ್ಳಲಿದ್ದೇವೆ. ಸದ್ಯಕ್ಕೆ ಅನುದಾನದ ಕೊರತೆ ಇದ್ದುದರಿಂದ ಗುತ್ತಲು ರಸ್ತೆ, ವಿ.ವಿ.ರಸ್ತೆಗಳನ್ನು ನಗರಸಭೆಯವರು ಅಭಿವೃದ್ಧಿಪಡಿಸಲು ಜವಾಬ್ದಾರಿ ನೀಡಲಾಗಿದೆ. ನಗರ ವ್ಯಾಪ್ತಿಯ ಲೋಕೋಪಯೋಗಿ ಇಲಾಖೆ ರಸ್ತೆಗಳನ್ನು ಅಭಿವೃದ್ಧಿಪಡಿಸಲು ನಗರಸಭೆಯವರಿಗೆ ಅವಕಾಶವಿದೆ.

- ಭಾಸ್ಕರ್‌, ಇಇ, ಲೋಕೋಪಯೋಗಿ ಇಲಾಖೆ 

Follow Us:
Download App:
  • android
  • ios