ಜಮಖಂಡಿ: ಅಂಗನವಾಡಿಗಳಲ್ಲಿ ಆಹಾರವಿಲ್ಲದೆ ಪುಟಾಣಿಗಳ ಉಪವಾಸ

ಆಹಾರ ಇಲ್ಲದ್ದಕ್ಕೆ ಮಕ್ಕಳ ಹೊಟ್ಟೆಗೆ ತಣ್ಣೀರ ಬಟ್ಟೆ| ಅಂಗನವಾಡಿಗಳಲ್ಲಿ ಆಹಾರ ಖಾಲಿ| ಅಂಗನವಾಡಿ ಕೇಂದ್ರಗಳಿಗೆ 20 ದಿನಗಳಿಂದ ಆಹಾರ ಪೂರೈಕೆಯಾಗದ ಕಾರಣ ಮಕ್ಕಳು ನಿತ್ಯ ಉಪವಾಸದಿಂದ ಪಾಠ ಕಲಿತು, ಮನೆಗೆ ತೆರಳುವ ಸ್ಥಿತಿ ನಿರ್ಮಾಣವಾಗಿದೆ| ಅಂಗನವಾಡಿ ಕೇಂದ್ರಗಳಲ್ಲಿ ಅಡುಗೆ ಮಾಡಲು ದವಸ-ಧಾನ್ಯಗಳಿಲ್ಲದೇ ಅಂಗನವಾಡಿ ಅಡುಗೆ ಸಹಾಯಕಿಯರು ಕೆಲಸವಿಲ್ಲದಂತಾಗಿದೆ|

No Food in Anganavadi Centers in Jamakhandi in Bagalkot District

ಗುರುರಾಜ ವಾಳ್ವೇಕರ 

ಜಮಖಂಡಿ(ಡಿ.21): ಅಂಗನವಾಡಿ ಕೇಂದ್ರಗಳಿಗೆ 20 ದಿನಗಳಿಂದ ಆಹಾರ ಪೂರೈಕೆಯಾಗದ ಕಾರಣ ಮಕ್ಕಳು ನಿತ್ಯ ಉಪವಾಸದಿಂದ ಪಾಠ ಕಲಿತು, ಮನೆಗೆ ತೆರಳುವ ಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಅನೇಕ ಅವಾಂತರ ಕಾಣುತ್ತಿದ್ದು, ಇಲಾಖೆಯ ಅಧಿಕಾರಿಗಳು ಇತ್ತ ಕಡೆ ಕಣ್ಣು ಹಾಯಿಸಬೇಕಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆಂದೆ ಬಾಗಿಲು ತೆರೆದಿರುವ ಅಂಗನವಾಡಿ ಕೇಂದ್ರಗಳು ಮಕ್ಕಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ಹಾಕಲು ಆಹಾರ ಪದಾರ್ಥ ನೀಡಲಾರದ್ದಕ್ಕೆ ಕಳೆದ 20 ದಿನಗಳಿಂದ ಮಕ್ಕಳು ಉಪವಾಸ ವನವಾಸ ಅನುಭವಿಸುತ್ತಿದ್ದಾರೆ. ಇದರಿಂದಾಗಿ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹರಸಾಹಸ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ತಾಲೂಕಿನ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಆಹಾರ ಪದಾರ್ಥ ಖಾಲಿಯಾಗಿ 20 ದಿನಗಳು ಕಳೆದರೂ ಇನ್ನೂವರೆಗೆ ಮಹಿಳಾ ಮತ್ತು ಮಕ್ಕಳ ಇಲಾಖೆ ಯಾವುದೇ ಸಾಮಗ್ರಿಗಳನ್ನು ಸರಬರಾಜು ಮಾಡುತ್ತಿಲ್ಲ. ಪ್ರತಿ ತಿಂಗಳು 5ನೇ ತಾರೀಖಿನಂದು ಪೂರೈಕೆಯಾಗಬೇಕಾದ ಆಹಾರ ಪದಾರ್ಥಗಳನ್ನು ಇದುವರೆಗೆ ಪೂರೈಸದ ಕಾರಣ ಮಕ್ಕಳು ಹಾಜರಾತಿಯಲ್ಲಿ ಕ್ಷೀಣಗೊಂಡಿರುವುದು ಕೂಡ ಬೆಳಕಿಗೆ ಬಂದಿದೆ. ಅಂಗನವಾಡಿ ಕೇಂದ್ರಕ್ಕೆ ಬಂದು ಕಾರ್ಯಕರ್ತೆಯರು ಹೇಳುವ ಅಭಿನಯ ಗೀತೆ ಕೇಳಿಕೊಂಡು ಹೋಗುವಂತಾಗಿದೆ. ಅಂಗನವಾಡಿ ಕೇಂದ್ರಗಳಲ್ಲಿ ಅಡುಗೆ ಮಾಡಲು ದವಸ-ಧಾನ್ಯಗಳಿಲ್ಲದೇ ಅಂಗನವಾಡಿ ಅಡುಗೆ ಸಹಾಯಕಿಯರು ಕೆಲಸವಿಲ್ಲದಂತಾಗಿದೆ.

ಬಹು ದೊಡ್ಡದು:

ಬಾಗಲಕೋಟೆ ಜಿಲ್ಲೆಯಲ್ಲಿ ಅವಳಿ ತಾಲೂಕಿನ (ಜಮಖಂಡಿ-ರಬಕವಿ-ಬನಹಟ್ಟಿ) ಅಂಗನವಾಡಿ ಕೇಂದ್ರ ದೊಡ್ಡದ್ದಾಗಿದ್ದು, ಇಲ್ಲಿ 527 ತಾಲೂಕಿನ ವ್ಯಾಪ್ತಿಯಲ್ಲಿರುವ ಅಂಗನವಾಡಿ ಕೇಂದ್ರಗಳಲ್ಲಿ 40619 ಉಪಹಾರ ಸೇವಿಸುವ ಮಕ್ಕಳು, 5321 ಉಪಹಾರ ಸೇವಿಸುವ ಬಾಣಂತಿಯರು, 4990 ಉಪಹಾರ ಸೇವಿಸುವ ಗರ್ಭಿಣಿಯರು ಒಟ್ಟು ಫಲಾನುಭವಿಗಳು ಅಂದಾಜು 67142 ಇದ್ದು, ಪ್ರತಿ ತಿಂಗಳು 1 ಕೋಟಿಯಷ್ಟು ಅಧಿಕ ಹೆಚ್ಚು ಹಣ ಖರ್ಚು ಇಲಾಖೆಗೆ ಹಾಕಲಾಗುತ್ತಿದೆ.
ಖಾಲಿ ಕೈಯಲ್ಲಿ ಹೋಗುತ್ತಿದ್ದಾರೆ:

ಬಾಣಂತಿಯರಿಗೆ, ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ನೀಡಲು ಅಂಗನವಾಡಿ ಕೇಂದ್ರಗಳಲ್ಲಿ ಅಡುಗೆ ಮಾಡಿ ಹಾಕಬೇಕು ಎಂದು ಸರ್ಕಾರ ಮಾತೃಪೂರ್ಣ ಯೋಜನೆ ತಂದು ಪ್ರತಿಯೊಬ್ಬರಿಗೆ ಎರಡು ಬಗೆಯ ತರಕಾರಿ, 5 ಮೊಟ್ಟೆ ನೀಡಬೇಕು. ಆದರೆ ಅಂಗನವಾಡಿ ಕೇಂದ್ರಗಳಲ್ಲಿ ತರಕಾರಿ-ಮೊಟ್ಟೆ ತರದೆ ಮಕ್ಕಳಿಗೆ ಮಾಡಿರುವ ಚಿತ್ರಣವನ್ನೇ ನೀಡುತ್ತಿರುವುದು ವಿಪರ್ಯಾಸ. ಆಹಾರ ಪದಾರ್ಥ ಇರಲಾರದಕ್ಕೆ ಬಾಣಂತಿಯರಿಗೆ, ಗರ್ಭಿಣಿಯರು ಅಂಗನವಾಡಿಗೆ ಬಂದು ಖಾಲಿ ಕೈಯಿಂದ ಹೋಗಬೇಕಾಗುತ್ತಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅಂಗನವಾಡಿ ಕಾರ್ಯಕರ್ತೆಯರಿಗೆ ಕಳೆದ ಮೂರು ತಿಂಗಳಿಂದ ವೇತನವಿಲ್ಲ. 10 ತಿಂಗಳಿಂದ ಕಟ್ಟಡ ಬಾಡಿಗೆ ನೀಡಿಲ್ಲ. ಕಳೆದ 8 ತಿಂಗಳಿಂದ ಮಾತೃಪೂರ್ಣ ಯೋಜನೆ ಹಣ ಹಾಗೂ ಮಕ್ಕಳಿಗೆ ನೀಡುವ ಮೊಟ್ಟೆಬಿಲ್‌ ಬಂದಿಲ್ಲ ಎಂದು ಹೆಸರು ಹೇಳದ ಕಾರ್ಯಕರ್ತೆ ತಿಳಿಸಿದ್ದಾರೆ.

ಕ್ರಮ ಕೈಗೊಳ್ಳುತ್ತಿಲ್ಲ:

ಮಹಿಳಾ ಪೂರಕ ಪೌಷ್ಟಿಕ ಆಹಾರ ತರಬೇತಿ ಮತ್ತು ತಯಾರಿಕಾ (ಎನ್‌ಜಿಒ) ಮೂಲಕ ವಿತರಣೆ ಮಾಡುತ್ತಿದ್ದು, ಈ ಸಂಸ್ಥೆಯಲ್ಲಿ ಕಳಪೆ ಗುಣಮಟ್ಟದ ಆಹಾರ ಪೂರೈಕೆಯಾಗುತ್ತಿದೆ. ವಾಹನದ ಬಾಡಿಗೆ ಮತ್ತು ಹಮಾಲರ ವೇತನದಲ್ಲಿ ಅವ್ಯವಹಾರ ಎಂದು ಹಲವಾರು ಆರೋಪಗಳು ಕೇಳಿ ಬಂದರು ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.

ಮೊದಲೇ ಅಂಗನವಾಡಿಗಳು ಎಂದರೆ ಮಕ್ಕಳು ಮಾರುದ್ಧ ದೂರು ಹೋಗುವ ಇಂತಹ ದಿನಮಾನಗಳಲ್ಲಿ ಮಕ್ಕಳಿಗೆ ಸಮರ್ಪಕವಾಗಿ ಆಹಾರ ಪೂರೈಕೆಯಾಗದಿದ್ದರೆ, ಅಂಗನವಾಡಿಗೆ ಬರುವ ಮಕ್ಕಳ ಸಂಖ್ಯೆ ಮತ್ತಷ್ಟುಕ್ಷೀಣಿಸುತ್ತದೆ. ಇನ್ನೂ ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ಕೂಡಾ ದೊರೆಯುತ್ತಿಲ್ಲ. ಈ ಸಮಸ್ಯೆಯನ್ನು ಸಂಬಂಧಿಸಿದರು ಶೀಘ್ರ ಪರಿಹರಿಸಬೇಕು ಎಂಬ ಒತ್ತಾಯ ಸಾರ್ವಜನಿಕರದ್ದು.

ಈ  ಬಗ್ಗೆ ಮಾತನಾಡಿದ ಜಮಖಂಡಿ ತಾಪಂ ಇಒ ಸಂಜಯ ಹಿಪ್ಪರಗಿ ಅವರು, ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಕೂಡಲೇ ಎಲ್ಲ ಅಂಗನವಾಡಿಗಳಿಗೆ ಪೂರೈಕೆ ಮಾಡಲು ಸೂಚಿಸಲಾಗುತ್ತಿದೆ. ವಿಳಂಬವಾಗಿರುವುದಕ್ಕೆ ಸಿಡಿಪಿಒರಿಂದ ವಿವರಣೆ ಪಡೆದು ವಿಚಾರಿಸುತ್ತೇನೆ ಎಂದು ತಿಳಿಸಿದ್ದಾರೆ.

ಇನ್ನೆರೆಡು ದಿನದಲ್ಲಿ ಎಲ್ಲ ಅಂಗನವಾಡಿ ಕೇಂದ್ರಗಳಿಗೆ ಆಹಾರ ಪದಾರ್ಥ ಕಳುಸಲು ಕ್ರಮ ತೆಗೆದುಕೊಳ್ಳಲಾಗುವುದು. ಆನ್‌ಲೈನ್‌ ಸಂಪರ್ಕವಿಲ್ಲದಕ್ಕೆ ವಿಳಂಬವಾಗಿದೆ. ಮುಂದಿನ ದಿನಗಳಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳುಲಾಗುವುದು ಎಂದು ಜಮಖಂಡಿ ಸಿಡಿಪಿಒ ಸಾಹೇಬಗೌಡ ಜಂಝರವಾಡ ತಿಳಿಸಿದ್ದಾರೆ. 

ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಪದಾರ್ಥ ಕಳಿಸುವುದಿಲ್ಲ, ತೂಕದಲ್ಲಿಯೂ ವ್ಯತ್ಯಾಸ, ರವಾದಲ್ಲಿ ಅರ್ಧದಷ್ಟುಉಪಯೋಗಕ್ಕೆ ಬರುವುದಿಲ್ಲ. ಶೆಂಗಾ, ಬೇಳೆಗಳಲ್ಲಿ ಹುಳುಗಳು ಇರುತ್ತವೆ. ಮೇಲಧಿಕಾರಿಗಳನ್ನು ಕೇಳಿದರೆ ನೌಕರಿ ಇದೆ ಸುಮ್ಮನೆ ಇರು ಎಂದು ಅಂಜಿಕೆ ಹಾಕುತ್ತಾರೆ ಎಂದು ಹೆಸರು ಹೇಳಲು ಇಚ್ಚಿಸದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ಹೇಳಿದ್ದಾರೆ. (ಚಿತ್ರ: ಸಾಂದರ್ಭಿಕ ಚಿತ್ರ)
 

Latest Videos
Follow Us:
Download App:
  • android
  • ios