ಕೊರೋನಾ ಭೀತಿ: ಮತ್ತೆ ಸವದತ್ತಿ ಯಲ್ಲಮ್ಮ ದೇವಿ ದರ್ಶನಕ್ಕೆ ನಿರ್ಬಂಧ..!
* ಯಲ್ಲಮ್ಮ ದೇವಸ್ಥಾನದಲ್ಲಿ ದೇವಿ ದರ್ಶನಕ್ಕೆ ಇಂದಿನಿಂದ ಸಂಪೂರ್ಣ ನಿರ್ಬಂಧ
* ಬೆಳಗಾವಿ ಜಿಲ್ಲೆಯಲ್ಲಿರುವ ಶ್ರೀ ಕ್ಷೇತ್ರ ಯಲ್ಲಮ್ಮ ದೇವಸ್ಥಾನ
* ಶ್ರಾವಣ ಮಾಸದಲ್ಲಿ ಭಕ್ತರ ದಂಡು ಹೆಚ್ಚಾಗುವ ಸಾಧ್ಯತೆ
ಸವದತ್ತಿ(ಆ.08): ಕೊರೋನಾ 3ನೇ ಅಲೆ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಯಲ್ಲಮ್ಮ ದೇವಸ್ಥಾನದಲ್ಲಿ ದೇವಿ ದರ್ಶನಕ್ಕೆ ಆ.8ರಿಂದ ಸಂಪೂರ್ಣ ನಿರ್ಬಂಧಿಸಲಾಗಿದ್ದು, ಅದು ಶ್ರಾವಣ ಮಾಸ ಮುಗಿಯುವವರೆಗೂ ಮುಂದುವರಿಯಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಆ.8ರಿಂದ ಶ್ರಾವಣ ಮಾಸ ಪ್ರಾರಂಭಗೊಳ್ಳುತ್ತಿರುವುದರಿಂದ ದೇವಸ್ಥಾನಕ್ಕೆ ತಿಂಗಳ ಪೂರ್ತಿ ರಾಜ್ಯ ಮತ್ತು ಅಂತಾರಾಜ್ಯದಿಂದ ಭಕ್ತರ ದಂಡು ಹೆಚ್ಚಾಗುವ ಸಾಧ್ಯತೆಯಿಂದ ಭಕ್ತರಿಗೆ ದೇವರ ದರ್ಶನ ಬಂದ್ ಮಾಡಲಾಗಿದೆ. ಫೆಬ್ರವರಿ ತಿಂಗಳಲ್ಲಿ ಕೇವಲ 20 ದಿನಗಳವರೆಗೆ ಮಾತ್ರ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ನೀಡಲಾಗಿತ್ತು. ಈಗ 3ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಮತ್ತೆ ಸಾರ್ವಜನಿಕರ ದರ್ಶನ ಸ್ಥಗಿತಗೊಳಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಕೊರೋನಾ ಅಟ್ಟಹಾಸ: ಸವದತ್ತಿ ಯಲ್ಲಮ್ಮ, ಚಿಂಚಲಿ ಮಾಯಕ್ಕಾ ದರ್ಶನವಿಲ್ಲ
ಎಲ್ಲ ಪೂಜಾ ಮತ್ತು ಧಾರ್ಮಿಕ ಆಚರಣೆಗಳನ್ನು ಅರ್ಚಕರು ಮತ್ತು ಇಲಾಖೆಯ ಕೆಲವೆ ಕೆಲವು ಸಿಬ್ಬಂದಿ ಮಾಡಿಕೊಂಡು ಬರಲಾಗುತ್ತಿದ್ದು, ಶ್ರಾವಣ ಮಾಸದಲ್ಲೂ ಮುಂದುವರೆಸಿಕೊಂಡು ಹೋಗಲಾಗುತ್ತದೆ. ಭಕ್ತರು ಸಹಕಾರ ನೀಡಬೇಕೆಂದು ಕಾರ್ಯನಿರ್ವಾಹಕ ಅಧಿಕಾರಿಗಳು ಕೋರಿದ್ದಾರೆ. ಶ್ರೀ ಕ್ಷೇತ್ರಕ್ಕೆ ಸಂಪರ್ಕ ನೀಡುವ ಜೋಗಳ ಬಾವಿ, ಎಪಿಎಂಸಿ ಹಾಗೂ ಉಗರಗೋಳ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.