mandya : ನಾಲ್ವರು ಸಚಿವರಿದ್ದರೂ ಜಿಲ್ಲೆಯಲ್ಲಿ ಅಭಿವೃದ್ಧಿ ಮರೀಚಿಕೆ

  ಬಿಜೆಪಿ ರಾಜಕೀಯ ಕಾರಣಕ್ಕೆ ಹಾಗೂ ಪಕ್ಷ ಸಂಘಟನೆ ಉದ್ದೇಶದಿಂದ ಉಸ್ತುವಾರಿ ಸಚಿವರ ಜಿಲ್ಲೆಗಳನ್ನು ಬದಲಾವಣೆ ಮಾಡಿದ್ದರಿಂದ ನಿರೀಕ್ಷೆಯಂತೆ ಪಕ್ಷದ ಬೆಳವಣಿಗೆಯೂ ಆಗಿಲ್ಲ, ಆಯಾ ಜಿಲ್ಲೆಗಳ ಅಭಿವೃದ್ಧಿಗೂ ಸಹಕಾರಿಯಾಗಿಲ್ಲ. ಬಿಜೆಪಿ ನಡೆಸಿದ ಹೊಸ ಪ್ರಯೋಗ ವೈಫಲ್ಯ ಕಂಡಿರುವುದು ಸತ್ಯಸಂಗತಿ.

 No Developments Works In Mandya District snr

ಮಂಡ್ಯ ಮಂಜುನಾಥ

 ಮಂಡ್ಯ (ನ.02):  ಬಿಜೆಪಿ ರಾಜಕೀಯ ಕಾರಣಕ್ಕೆ ಹಾಗೂ ಪಕ್ಷ ಸಂಘಟನೆ ಉದ್ದೇಶದಿಂದ ಉಸ್ತುವಾರಿ ಸಚಿವರ ಜಿಲ್ಲೆಗಳನ್ನು ಬದಲಾವಣೆ ಮಾಡಿದ್ದರಿಂದ ನಿರೀಕ್ಷೆಯಂತೆ ಪಕ್ಷದ ಬೆಳವಣಿಗೆಯೂ ಆಗಿಲ್ಲ, ಆಯಾ ಜಿಲ್ಲೆಗಳ ಅಭಿವೃದ್ಧಿಗೂ ಸಹಕಾರಿಯಾಗಿಲ್ಲ. ಬಿಜೆಪಿ ನಡೆಸಿದ ಹೊಸ ಪ್ರಯೋಗ ವೈಫಲ್ಯ ಕಂಡಿರುವುದು ಸತ್ಯಸಂಗತಿ.

ಮಂಡ್ಯ (Mandya )  ಜಿಲ್ಲೆಗೆ ರಾಷ್ಟ್ರೀಯ ಹಬ್ಬಗಳ ಧ್ವಜಾರೋಹಣಕ್ಕೆ ಆರ್‌.ಅಶೋಕ್‌ (R Ashok) , ಉಸ್ತುವಾರಿ ಹೆಸರಿನಲ್ಲಿ ಡಿ.ಗೋಪಾಲಯ್ಯ, ಅಘೋಷಿತ ಉಸ್ತುವಾರಿಯಂತೆ ಕೆ.ಸಿ.ನಾರಾಯಣಗೌಡ, ಪಕ್ಷ ಸಂಘಟನೆಗೆ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ಬರುತ್ತಿರುವುದರಿಂದ ಎಲ್ಲವೂ ಗೊಂದಲಮಯವಾಗಿ ಕಂಡುಬರುತ್ತಿದೆ. ನಾಲ್ವರು ಸಚಿವರು ಒಂದೊಂದು ಕಾರ್ಯಕ್ಕೆ ಸೀಮಿತವಾಗಿ ಬಂದು ಹೋಗುತ್ತಿದ್ದು, ಜಿಲ್ಲೆಯ ಅಭಿವೃದ್ಧಿಯಲ್ಲಿ ಮಾತ್ರ ಶೂನ್ಯ ಆವರಿಸಿದೆ.

ಕೆ.ಆರ್‌.ಪೇಟೆಗಷ್ಟೇ ಸೀಮಿತ: ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಕೆ.ಸಿ. ನಾರಾಯಣಗೌಡ ಅವರಿಗೆ ಜಿಲ್ಲೆಯ ಉಸ್ತುವಾರಿ ವಹಿಸಿದ್ದರು. ಆದರೆ, ಕೆ.ಸಿ.ನಾರಾಯಣಗೌಡರು ಜಿಲ್ಲಾ ಮಂತ್ರಿಯಂತೆ ಕಾರ್ಯನಿರ್ವಹಿಸದೆ ಕೆ.ಆರ್‌.ಪೇಟೆಗೆ ಸೀಮಿತರಾದಂತೆ ಕೆಲಸ ನಿರ್ವಹಿಸಿದರು. ಕೆ.ಆರ್‌.ಪೇಟೆ ಕ್ಷೇತ್ರಕ್ಕೆ ನೀಡಿದ ಪ್ರಾಮುಖ್ಯತೆ ಯನ್ನು ಉಳಿದ ತಾಲೂಕುಗಳಿಗೆ ನೀಡಲಿಲ್ಲವೆಂಬ ಆರೋಪಕ್ಕೆ ಗುರಿಯಾದರು.

ಅತಿಥಿ ಸಚಿವ : ಉಸ್ತುವಾರಿ ಸಚಿವರ ಜವಾಬ್ದಾರಿ ವಹಿಸಿಕೊಂಡ ಡಿ.ಗೋಪಾಲಯ್ಯನವರು ಮಂಡ್ಯ ಜಿಲ್ಲೆಯ ಬಗ್ಗೆ ಸಮಗ್ರವಾಗಿ ಪರಿಚಯ ಮಾಡಿ ಕೊಂಡು ಅಭಿವೃದ್ಧಿ ಕಡೆಗೆ ಗಮನವನ್ನು ಕೇಂದ್ರೀಕರಿಸಲಿಲ್ಲ. ವರ್ಷವಾದರೂ ಇದುವರೆಗೂ ಉಸ್ತುವಾರಿ ಸಚಿವರ ಕೊಠಡಿಗೆ ಡಿ.ಗೋಪಾಲಯ್ಯ ಕಾಲಿಟ್ಟಿಲ್ಲ. ಜನರ ಸಮಸ್ಯೆಗಳನ್ನು ಅರಿತು ಪರಿಹರಿಸುವ ಕೆಲಸಕ್ಕೆ ಮುಂದಾಗಲೇ ಇಲ್ಲ. ಜಿಲ್ಲೆಯೊಂದಿಗೆ ನಿರಂತರ ಸಂಪರ್ಕವಿಟ್ಟುಕೊಳ್ಳದ ಡಿ.ಗೋಪಾಲಯ್ಯನವರು ಅತಿಥಿ ಸಚಿವರಂತೆ ಬಂದು ಹೋಗುತ್ತಿದ್ದಾರೆ. ಇದರಿಂದ ಪ್ರಗತಿ ನಿಂತ ನೀರಾಗಿದೆ. ಜಿಲ್ಲೆಯ ಪರಿಚಯವೇ ಇಲ್ಲದ ಸಚಿವರಿಂದ ಅಭಿವೃದ್ಧಿಯನ್ನು ನಿರೀಕ್ಷಿಸಲು ಸಾಧ್ಯವೇ ಎಂಬ ಪ್ರಶ್ನೆ ಜಿಲ್ಲೆಯ ಸಾರ್ವಜನಿಕರಲ್ಲಿ ಮೂಡಿದೆ.

ಬಹಿರಂಗ ಅಸಮಾಧಾನ: ಜಿಲ್ಲಾ ಉಸ್ತುವಾರಿ ಸಚಿವರಿಗೆ ಬೇರೆ ಜಿಲ್ಲೆಗಳ ಅಭಿವೃದ್ಧಿ ವಿಚಾರಗಳಿಗಿಂತ ಅವರವರ ಕ್ಷೇತ್ರ ಹಾಗೂ ತವರು ಜಿಲ್ಲೆಯ ಅಭಿವೃದ್ಧಿ ಮುಖ್ಯವೆನಿಸಿದೆ. ಹಾಗಾಗಿ ಅವರಿಗೆ ಸದಾಕಾಲ ತವರಿನ ಮೇಲೆಯೇ ಹೆಚ್ಚು ಪ್ರೀತಿ, ಆಸಕ್ತಿ ತೋರುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆ ಉಸ್ತುವಾರಿ ಸಚಿವನನ್ನಾಗಿ ಮಾಡಿ ನನ್ನ ಕೈಗಳನ್ನು ಕಟ್ಟಿಹಾಕಲಾಗಿದೆ. ಅಲ್ಲಿ ನನಗೆ ಒಳ್ಳೆಯ ಊಟ ಹಾಕಿ ಕಳುಹಿಸುತ್ತಿದ್ದಾರೆ. ಅಭಿವೃದ್ಧಿ ಕೆಲಸಗಳನ್ನು ಯಡಿಯೂರಪ್ಪ, ಈಶ್ವರಪ್ಪನವರೇ ನೋಡಿಕೊಳ್ಳುತ್ತಿದ್ದಾರೆ. ಬೇರೆ ಜಿಲ್ಲೆಯ ಉಸ್ತುವಾರಿ ನೀಡಿರುವ ಕುರಿತಂತೆ ಇಂತಹ ಅಸಮಾಧಾನದ ಮಾತುಗಳನ್ನು ಸ್ವತಃ ಕೆ.ಸಿ.ನಾರಾಯಣಗೌಡರು ಬಹಿರಂಗವಾಗಿಯೇ ವ್ಯಕ್ತಪಡಿಸಿದ್ದಾರೆ.

ಧ್ವಜಾರೋಹಣಕ್ಕಷ್ಟೇ ಸೀಮಿತವಾದÜ ಮಂತ್ರಿ: ರಾಷ್ಟ್ರೀಯ ಹಬ್ಬಗಳು, ಕನ್ನಡ ರಾಜ್ಯೋತ್ಸವಗಳಂದು ಧ್ವಜಾರೋಹಣ ಮಾಡುವುದಕ್ಕೆ ಸಚಿವ ಆರ್‌.ಅಶೋಕ್‌ ಕಾಯಂ ಸಚಿವರಾಗಿ ದ್ದಾರೆ. ಆರು ತಿಂಗಳಿಗೊಮ್ಮೆ ಧ್ವಜ ಆರಿಸಲು ಬರುವ ಅವರಿಗೆ, ಜಿಲ್ಲೆಯ ಕುರಿತು ಗಂಧ-ಗಾಳಿಯೂ ಗೊತ್ತಿಲ್ಲ. ಅಧಿಕಾರಿಗಳು ಬರೆದುಕೊಟ್ಟಭಾಷಣವನ್ನಷ್ಟೇ ಓದಿ ಹೋಗುವುದು ಅವರ ಕೆಲಸವಾಗಿದೆ. ಇವರ ಬಳಿಯೂ ಸಾರ್ವಜನಿಕರು ಸಮಸ್ಯೆಗಳನ್ನು ಹೇಳಿಕೊಂಡು ಏನು ಪ್ರಯೋಜನ. ಅದಕ್ಕಾಗಿ ಅವರಿಂದಲೂ ಪ್ರಗತಿಗೆ ಪೂರಕವಾದ ಯಾವುದೇ ಕೆಲಸ ಗಳೂ ನಡೆಯದಂತಾಗಿದೆ. ಕಂದಾಯ ಸಚಿವರಾಗಿ ಮಂಡ್ಯ ಜಿಲ್ಲೆಯಲ್ಲಿ ಗ್ರಾಮ ವಾಸ್ತವ್ಯ ಮಾಡುವುದರಿಂದಲೂ ಅವರು ದೂರವೇ ಉಳಿದಿದ್ದಾರೆ. ಹಾಗಾಗಿ ಆರ್‌.ಅಶೋಕ್‌ ಧ್ವಜಾರೋಹಣಕ್ಕಷ್ಟೇ ಸೀಮಿತವಾಗಿ ಜಿಲ್ಲೆಗೆ ಬರುವ ಮಂತ್ರಿಯಾಗಿದ್ದಾರೆ.

ಸಂಘಟನೆಗಾಗಿ ಬರುವ ಡಾ.ಅಶ್ವತ್ಥನಾರಾಯಣ: ಮಂಡ್ಯ ಸಹಜವಾಗಿಯೇ ಒಕ್ಕಲಿಗರ ಪ್ರಾಬಲ್ಯವಿರುವ ಜಿಲ್ಲೆ. ಪಕ್ಷ ಸಂಘಟನೆಯ ದೃಷ್ಟಿಯಿಂದ ಒಕ್ಕಲಿಗರನ್ನು ಸೆಳೆಯುವು¨ Üಕ್ಕಾಗಿ ಉನ್ನತ ಶಿಕ್ಷಣ ಸಚಿವರು ಆಗಾಗ ಜಿಲ್ಲೆಗೆ ಬಂದು ಹೋಗುವುದುಂಟು. ಮಂಡ್ಯ ಸ್ವಾಯತ್ತ ಮಹಾವಿದ್ಯಾಲಯವನ್ನು ವಿಶ್ವವಿದ್ಯಾನಿಲಯವನ್ನಾಗಿ ಮಾಡಿದ್ದು ಅವರ ಸಾಧನೆ. ಅದನ್ನು ಹೊರತುಪಡಿಸಿದಂತೆ ಪಕ್ಷ ಸಂಘಟನೆಯ ಸಾಮರ್ಥ್ಯ ಅವರಲ್ಲಿದ್ದರೂ ಪರಿಪೂರ್ಣವಾಗಿ ಬಿಜೆಪಿ ನಾಯಕರು ಅವರನ್ನು ತೊಡಗಿಸುತ್ತಿಲ್ಲ. ಇದಕ್ಕೆ ರಾಜಕೀಯ ಕಾರಣವೂ ಇದೆ.

ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರನ್ನು ಸೆಳೆಯುವ ಪ್ರಯತ್ನದಲ್ಲಿ ಆರ್‌.ಅಶೋಕ್‌ ಸಂಪೂರ್ಣ ವಿಫಲವಾಗಿದ್ದಾರೆ ಎನ್ನುವುದು ಬಿಜೆಪಿ ನಾಯಕರಿಗೂ ಗೊತ್ತಿದೆ. ಇದರ ನಡುವೆ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರೂ ಈ ಭಾಗದಲ್ಲಿ ಪ್ರವರ್ಧಮಾನಕ್ಕೆ ಬರದಂತೆ ತಡೆಯುವ ಪ್ರಯತ್ನಗಳನ್ನು ಬಿಜೆಪಿ ನಾಯಕರ ಮೂಲಕ ಕಾಣದ ಕೈಗಳು ನಡೆಸಿಕೊಂಡು ಬರುತ್ತಿವೆ. ಹೀಗಾಗಿ ಅವರೂ ಸಹ ಸಂಪೂರ್ಣವಾಗಿ ಜಿಲ್ಲೆಯೊಳಗೆ ಅಭಿವೃದ್ಧಿ, ಸಂಘಟನೆ ದೃಷ್ಟಿಯಿಂದ ತೊಡಗಿಸಿಕೊಳ್ಳಲಾಗುತ್ತಿಲ್ಲ. ಕೆಂಪೇಗೌಡ ಪ್ರತಿಮೆ ನಿರ್ಮಾಣಕ್ಕೆ ಮೃತ್ತಿಕೆ ಸಂಗ್ರಹಿಸಲು ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರನ್ನು ಜಿಲ್ಲೆಗೆ ಕಳುಹಿಸುವ ಬಿಜೆಪಿ ನಾಯಕರು, ಉಳಿದಂತೆ ಅವರನ್ನು ಇತ್ತ ತಿರುಗಿ ನೋಡದಂತೆ ಕಡಿವಾಣ ಹಾಕುತ್ತಿದ್ದಾರೆ. ಇದರಿಂದ ಸಂಘಟನಾತ್ಮಕವಾಗಿಯೂ ಜಿಲ್ಲೆಯೊಳಗೆ ಬಿಜೆಪಿ ಬೆಳವಣಿಗೆ ಕಾಣದಂತಾಗಿದೆ.

ಅಘೋಷಿತ ಉಸ್ತುವಾರಿ ಮಂತ್ರಿ: ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕೆ.ಸಿ.ನಾರಾಯಣಗೌಡರು ಒಮ್ಮೊಮ್ಮೆ ಅಘೋಷಿತ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿಯೂ ಕೆಲಸ ನಿರ್ವಹಿಸುವರು. ಕೆ.ಆರ್‌.ಪೇಟೆಯಲ್ಲಿ ನಡೆದ ಮಹಾಕುಂಭಮೇಳದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡು ಕೆಲಸ ನಿರ್ವಹಿಸಿದರು. ಉಸ್ತುವಾರಿ ಸಚಿವರನ್ನು ಪಕ್ಕ ದಲ್ಲಿಟ್ಟುಕೊಂಡು ಜಿಲ್ಲೆಗೆ ಬರುವ ನಾರಾಯಣಗೌಡರು ಜಿಲ್ಲೆ ಹಾಗೂ ಕ್ಷೇತ್ರದಲ್ಲಿ ತಮ್ಮ ಹಿಡಿತ ಸಾಧಿಸುವ ಪ್ರಯತ್ನ ನಡೆಸಿಕೊಂಡು ಬರುತ್ತಿದ್ದಾರೆ.

ಹೀಗಾಗಿ ಜಿಲ್ಲೆಗೆ ಬರುವ ನಾಲ್ವರು ಸಚಿವರು ನಾಲ್ಕು ದಿಕ್ಕಾಗಿದ್ದಾರೆ. ಯಾರಲ್ಲೂ ಪರಿಪೂರ್ಣತೆ ಎನ್ನುವುದೇ ಇಲ್ಲ. ಬಿಜೆಪಿ ಸರ್ಕಾರ ಸೂಚಿಸಿದ್ದನ್ನಷ್ಟೇ ಮಾಡಿಹೋಗುವುದು ಅವರ ಕಾರ್ಯವೈಖರಿಯಾಗಿದೆ. ಜಿಲ್ಲೆಯ ಅಭಿವೃದ್ಧಿಪಡಿಸುವ ಆಲೋಚನೆಗಳಿಲ್ಲ. ಸ್ವಯಂ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವೂ ಇವರಲ್ಲಿ ಇಲ್ಲದಿರುವುದು ವಿಪರ್ಯಾಸದ ಸಂಗತಿ

ಯಾಗಿದೆ. ಇದರಿಂದ ಅಭಿವೃದ್ಧಿ ಮರೀಚಿಕೆಯಾಗಿ ರಾಜಕೀಯ ಮೇಲಾಟಗಳಷ್ಟೇ ನಡೆಯುತ್ತಿವೆ.

(ಡಿ.ಗೋಪಾಲಯ್ಯ, ಕೆ.ಸಿ.ನಾರಾಯಣಗೌಡ, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಆರ್‌.ಅಶೋಕ್‌) ಅವರ ಹೆಸರಿನಲ್ಲೇ ಫೋಟೋಗಳಿವೆ

Latest Videos
Follow Us:
Download App:
  • android
  • ios