ಸುಮಲತಾ ಜನರ ಹಿತದೃಷ್ಠಿಯಿಂದ ಮಾತನಾಡಿದ್ದಾರೆ : ಕೈ ಮುಖಂಡ
- ಕೆಆರ್‌ಎಸ್ ಅಣೆಕಟ್ಟು ಸದ್ಯ ಬಿರುಕು ಬಿಟ್ಟಿಲ್ಲ
- ಅಣೆಕಟ್ಟೆಯಿಂದ 20 ಕಿ.ಮೀ ದೂರದಲ್ಲಿರುವ ಗಣಿಗಾರಿಕೆಗೆ ಸ್ಫೋಟಕ ಬಳಕೆಯಿಂದ ಪ್ರಬಲ ಕಂಪನವಾಗುತ್ತಿದೆ
- ಕಾವೇರಿ ತಾಂತ್ರಿಕ ಸಲಹಾ ಸಮಿತಿ ಸಂಚಾಲಕರಾದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್
ಮೈಸೂರು (ಜು.07): ಕೆಆರ್‌ಎಸ್ ಅಣೆಕಟ್ಟು ಸದ್ಯ ಬಿರುಕು ಬಿಟ್ಟಿಲ್ಲ. ಆದರೆ ಅಣೆಕಟ್ಟೆಯಿಂದ 20 ಕಿ.ಮೀ ದೂರದಲ್ಲಿರುವ ಗಣಿಗಾರಿಕೆಗೆ ಸ್ಫೋಟಕ ಬಳಕೆಯಿಂದ ಪ್ರಬಲ ಕಂಪನವಾಗುತ್ತಿದೆ ಎಂದು ಕಾವೇರಿ ತಾಂತ್ರಿಕ ಸಲಹಾ ಸಮಿತಿ ಸಂಚಾಲಕರಾದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ತಿಳಿಸಿದರು.
ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಆರ್‌ಎಸ್ ಅಣೆಕಟ್ಟೆಯ ಭದ್ರತೆ ಹಿತದೃಷ್ಠಿಯಿಂದ ಎಂನಿಯರ್‌ಗಳ ಸಂಸ್ಥೆ ವತಿಯಿಂದ ಕಾವೇರಿ ತಾಂತ್ರಿಕ ಸಲಹಾ ಸಮಿತಿಯನ್ನು ಹಲವು ವರ್ಷಗಳ ಹಿಂದೆಯೇ ರಚಿಸಲಾಗಿದೆ. ಈ ಸಮಿತಿಯಲ್ಲಿರುವ ನುರಿತ ಎಂಜಿನಿಯರ್‌ಗಳು ಕಾಲ ಕಾಲಕ್ಕೆ ತಾಂತ್ರಿಕ ವಿಷಯಕ್ಕೆ ಸಂಬಂಧಿಸಿದಂತೆ ಸಲಹೆ, ಸೂಚನೆ ನೀಡುತ್ತಾ ಬಂದಿದ್ದಾರೆ ಎಂದರು.
ಗಣಿಗಾರಿಕೆ ಸ್ಥಳಕ್ಕೆ ಹೋಗೋದು ಸಂಸದರ ಡ್ಯೂಟಿನಾ? ಸುಮಲತಾಗೆ ಜೆಡಿಎಸ್ ಶಾಸಕ ಪ್ರಶ್ನೆ ...
ಸಂಸದೆ ಸುಮಲತಾ ಅಂಬರೀಶ್ ಹೇಳಿರುವಂತೆ ಅಣೆಕಟ್ಟು ಬಿರುಕು ಬಿಟ್ಟಿಲ್ಲ. ತಾಂತ್ರಿಕ ಸಲಹಾ ಸಮಿತಿ ಸಲಹೆ ಪಡೆಯದೇ ಹೇಳಿಕೆ ನೀಡಿದ್ದಾರೆ. ಅವರು ನೀಡಿರುವ ಹೇಳಿಕೆ ಅಪರಾಧವಲ್ಲ. ಅಣೆಕಟ್ಟೆಯ ಹಿತದೃಷ್ಠಿಯಿಂದ ಜನರನ್ನು ಹಾಗೂ ಆಡಳಿತವನ್ನು ಎಚ್ಚರಿಸುವ ಪ್ರಯತ್ನ ಮಾಡಿದ್ದಾರೆ ಎಂದು ಅವರು ಹೇಳಿದರು.
ಕೆಆರ್‌ಎಸ್ ಅಣೆಕಟ್ಟೆಯ 20 ಕಿ.ಮೀ ವ್ಯಾಪ್ತಿಯಲ್ಲಿ 106 ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಈ ಗಣಿಯಲ್ಲಿ ಬಳಸುವ ಸ್ಫೋಟದಿಂದಾಗಿ ಕೆಆರ್‌ಎಸ್ ಅಣೆಕಟ್ಟೆಕಂಪಿಸುತ್ತಿದೆ. ಅಣೆಕಟ್ಟೆಬಳಿ ಅಳವಡಿಸಿರುವ ಸ್ವಿಸ್‌ಮಿಕ್ ಯಂತ್ರದಲ್ಲಿ ಹಲವು ಬಾರಿ ಭಾರಿ ಪ್ರಮಾಣದ ಕಂಪನ ದಾಖಲಾಗಿದೆ. ಅಕ್ರಮ ಗಣಿಗಾರಿಕೆ ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ಕೆಆರ್‌ಎಸ್ ಅಣೆಕಟ್ಟೆಗೆ ಹಾನಿಯಾಗಬಹುದು ಎಂದು ಅವರು ಎಚ್ಚರಿಸಿದರು.
ಬಿಜೆಪಿ ಸರ್ಕಾರದ ಮಿತಿ ಮೀರಿದ ಭ್ರಷ್ಟಾಚಾರವನ್ನು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಹಾಗೂ ಇನ್ನಿತರರು ಬಯಲಿಗೆಳೆಯುತ್ತಿದ್ದಾರೆ ಎಂದು ಅವರು ಹೇಳಿದರು.
ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಮುಖಂಡರಾದ ಎಂ. ಶಿವಣ್ಣ, ಚಂದ್ರು, ಮಹೇಶ್, ಗಿರೀಶ್ ಮೊದಲಾದವರು ಇದ್ದರು.