Asianet Suvarna News Asianet Suvarna News

ಜಾತಿ, ಧರ್ಮಗಳ ಎಲ್ಲೆ ಮೀರಿ ನಿಂತ ಯಕ್ಷಗಾನ : ಸರ್ವಧರ್ಮೀಯರು ಯಕ್ಷಗಾನ ಕಲಾವಿದರು

  • ವಿಶ್ವದ 52 ದೇಶಗಳಲ್ಲಿ ಪ್ರದರ್ಶನಗೊಂಡು ಛಾಪು ಮೂಡಿಸಿರುವ ಕರುನಾಡಿನ ಯಕ್ಷಗಾನ ಕಲೆ
  • ಯಕ್ಷಗಾನ ಕಲೆ ಕೇವಲ ಹಿಂದೂ ಧರ್ಮಕ್ಕೆ ಮಾತ್ರ ಸೀಮಿತವಾಗದೆ, ಸರ್ವ ಧರ್ಮೀಯರನ್ನೊಳಗೊಂಡು ಸಹಬಾಳ್ವೆಗೂ ಕಾರಣವಾಗುತ್ತಿದೆ
NO Cast religious Restriction  For Yakshagana Art learning snr
Author
Bengaluru, First Published Oct 5, 2021, 3:29 PM IST

ವರದಿ :  ಸಂದೀಪ್‌ ವಾಗ್ಲೆ

ಮಂಗಳೂರು (ಅ.05):  ವಿಶ್ವದ 52 ದೇಶಗಳಲ್ಲಿ ಪ್ರದರ್ಶನಗೊಂಡು ಛಾಪು ಮೂಡಿಸಿರುವ ಕರುನಾಡಿನ ಯಕ್ಷಗಾನ (Yakshagana) ಕಲೆ ಕೇವಲ ಹಿಂದೂ ಧರ್ಮಕ್ಕೆ ಮಾತ್ರ ಸೀಮಿತವಾಗದೆ, ಸರ್ವ ಧರ್ಮೀಯರನ್ನೊಳಗೊಂಡು ಸಹಬಾಳ್ವೆಗೂ ಕಾರಣವಾಗುತ್ತಿದೆ. ಯಕ್ಷಗಾನದಲ್ಲಿ ಎಲ್ಲ ಜಾತಿ, ಎಲ್ಲ ಧರ್ಮದ ಕಲಾವಿದರಿದ್ದಾರೆ, ಆಟವನ್ನೂ ಆಡಿಸುತ್ತಾರೆ. ತನು- ಮನ- ಧನ ಸಹಾಯದ ಮೂಲಕ ಯಕ್ಷಗಾನವನ್ನು ಇನ್ನಷ್ಟು ಶ್ರೀಮಂತಗೊಳಿಸಿದ್ದಾರೆ.

ಸಾಮಾನ್ಯವಾಗಿ ಯಕ್ಷಗಾನದಲ್ಲಿ ಹಿಂದೂ (Hindhu) ಪೌರಾಣಿಕ ಪ್ರಸಂಗಗಳೇ ಅಧಿಕ. ಹೀಗಿದ್ದರೂ ಹಿಂದೆಯೂ ಯಕ್ಷಗಾನವು ಉಳಿದ ಧರ್ಮೀಯರನ್ನು ಆಕರ್ಷಿಸಿತ್ತು. ಈಗಲೂ ಆಕರ್ಷಿಸುತ್ತಿದೆ. ಹೊಸ ತಲೆಮಾರು ಕೂಡ ಧರ್ಮಾತೀತವಾಗಿ ಯಕ್ಷಗಾನವನ್ನು ಪ್ರೀತಿಸತೊಡಗಿದ್ದಾರೆ. ಯಾರನ್ನೂ ದೂರ ಇರಿಸದೆ ಎಲ್ಲರನ್ನೂ ಒಳಗೊಳಿಸಿಕೊಂಡು ಯಕ್ಷಗಾನ ಸುಧೆ ಹರಿಯುತ್ತಲೇ ಇದೆ.

ಮತ್ತೆ ಜೋರಾದ ಯಕ್ಷಗಾನ ರಾಜ್ಯದ ಕಲೆಯಾಗಬೇಕೆನ್ನುವ ಕೂಗು

ವೇಷಕ್ಕೂ, ಅರ್ಥಗಾರಿಕೆಗೂ ಸೈ: ಯಕ್ಷಗಾನದ ಭಾವೈಕ್ಯತೆಗೆ ಸುದೀರ್ಘ ಇತಿಹಾಸ (History) ಇದೆ. ಕಳೆದ ಶತಮಾನದಲ್ಲಿ ಕ್ರಿಶ್ಚಿಯನ್‌ ಬಾಬು ಅವರು ಅದ್ವಿತೀಯ ಕಲಾವಿದರಾಗಿದ್ದರು. ಅವರು ವೇಷ ಹಾಕಿ ರಂಗಕ್ಕಿಳಿದರೆಂದರೆ ಪ್ರೇಕ್ಷಕರು ಮೂಕ ವಿಸ್ಮಿತರಾಗುತ್ತಿದ್ದರು, 30-40 ವರ್ಷಗಳ ಕಾಲ ಮೇಳದ ತಿರುಗಾಟದಲ್ಲಿದ್ದರು. ನಂತರದ ದಿನಗಳಲ್ಲಿ ಬಹಳಷ್ಟುಮುಸ್ಲಿಂ, ಕ್ರಿಶ್ಚಿಯನ್‌ ಬಂಧುಗಳು ಈಗಲೂ ಮೇಳದ ಆಟಗಳನ್ನು ಆಡಿಸುತ್ತಿದ್ದಾರೆ, ಮಾತ್ರವಲ್ಲದೆ ಕಲಾವಿದರಾಗಿಯೂ ಹೆಸರು ಮಾಡುತ್ತಿದ್ದಾರೆ. ಯಕ್ಷಗಾನ ಪ್ರದರ್ಶನ ನಡೆದರೆ ರಾತ್ರಿಯಿಡೀ ಕುಳಿತು ಆಸ್ವಾದಿಸುವ ಬಹಳಷ್ಟುಮಂದಿ ಇದ್ದಾರೆ, ಇದರಲ್ಲಿ ಯಾವುದೇ ಜಾತಿ- ಧರ್ಮದ ಪ್ರಶ್ನೆ ಇಲ್ಲ ಎಂದು ಯಕ್ಷಗಾನ ವಿದ್ವಾಂಸ ಪ್ರಭಾಕರ ಜೋಶಿ ಹೇಳುತ್ತಾರೆ.

ಪ್ರಸ್ತುತ ಜಬ್ಬಾರ್‌ ಸಮೊ (Zabbar samo) ಅವರು ತಾಳಮದ್ದಲೆಯ ಅರ್ಥಗಾರಿಕೆಯಲ್ಲಿ ಹೆಸರುವಾಸಿ, ವೇಷ ಹಾಕಿ ರಂಗದಲ್ಲೂ ಸೈ. ಬಡಗುತಿಟ್ಟಿನ ವೃತ್ತಿಪರ ಕಲಾವಿದರಾಗಿ ಮಹಮ್ಮದ್‌ ಗೌಸ್‌ ಕೂಡ ಜನಪ್ರಿಯರು. ಇತ್ತೀಚಿನ ವರ್ಷಗಳಲ್ಲಿ ವಿಟ್ಲದ ಮುಸ್ಲಿಂ ಯುವತಿ ಅರ್ಷಿಯಾ ಕೂಡ ಯಕ್ಷಗಾನ ಪ್ರದರ್ಶನಗಳನ್ನು ನೀಡಿ ಗಮನ ಸೆಳೆಯುತ್ತಿದ್ದಾರೆ. ಅದೇ ರೀತಿ ಅನೇಕ ಯುವ ಸಮುದಾಯ ಯಕ್ಷಗಾನದಿಂದ ಆಕರ್ಷಿತರಾಗಿ ಕಲಿಕೆಗೆ ಮುಂದಾಗುತ್ತಿದ್ದಾರೆ.

ಉಡುಪಿಯಲ್ಲಿ ವರ್ಷಕ್ಕೆ 1200 ಮಕ್ಕಳಿಂದ ಯಕ್ಷಗಾನ ಕಲಿಕೆ!

ಕಟೀಲಿನಲ್ಲಿ ಖಾದ್ರಿ ಬ್ಯಾರಿ ಎಂಬವರು ಪ್ರತಿವರ್ಷ ಕಟೀಲು ಮೇಳದ ಆಟ ಆಡಿಸುತ್ತಿದ್ದರು. ಈಗ ಅವರ ಮಕ್ಕಳು ಅದನ್ನು ಮುಂದುವರಿಸಿದ್ದಾರೆ. ಅರಸಿನಮಕ್ಕಿಯಲ್ಲಿ ಹತ್ತು ಸಮಸ್ತರ ಯಕ್ಷಗಾನ ಪ್ರದರ್ಶನ ಆರಂಭಿಸಿದ್ದೇ ಮುಸ್ಲಿಮರು. ಮುಡಿಪುವಿನಲ್ಲಿ ಮುಸ್ಲಿಂ ಬಂಧುವೊಬ್ಬರು ನಿರಂತರವಾಗಿ ಯಕ್ಷಗಾನ ಆಡಿಸುತ್ತಿದ್ದರು. ಅವರ ಕಾಲಾನಂತರ ಈಗಲೂ ಪ್ರದರ್ಶನ ಮುಂದುವರಿಯುತ್ತಿದೆ.

ಅಷ್ಟುಮಾತ್ರವಲ್ಲ, ಏಸು ಕ್ರಿಸ್ತನ ಕುರಿತ ಕಥೆಯೂ ಯಕ್ಷಗಾನವಾಗಿ ಯಶಸ್ವಿ ಪ್ರದರ್ಶನ ಕಂಡಿರುವುದು ಯಕ್ಷಗಾನದ ವ್ಯಾಪ್ತಿ ಹಾಗೂ ಧಾರ್ಮಿಕ ವೈಶಾಲ್ಯತೆಗೆ ಸಾಕ್ಷಿ. ಅದೇ ರೀತಿ, ಪೆರ್ಮುದೆಯಲ್ಲಿ ಕ್ರೈಸ್ತ ಸಮುದಾಯದ ಪಿ.ಬಿ. ಪಿಂಟೊ ಆಟ ಆಡಿಸುತ್ತಾರೆ. ಜೆಪ್ಪು ಮಜಿಲದಲ್ಲಿ ಉದ್ಯಮಿ ಅಶೋಕ್‌ ನೇತೃತ್ವದಲ್ಲಿ ಈಗಲೂ ಯಕ್ಷಗಾನ ಆಯೋಜಿಸಲಾಗುತ್ತಿದೆ. ಪೊಳಲಿ ಧನುಪೂಜೆ ಹತ್ತಿರ ಮೋಂತು ರೊಡ್ರಿಗಸ್‌ ನೇತೃತ್ವದಲ್ಲಿ 30 ವರ್ಷಗಳಿಗೂ ಹೆಚ್ಚು ಕಾಲದಿಂದ ಹತ್ತು ಸಮಸ್ತರ ಯಕ್ಷಗಾನ ನಡೆಯುತ್ತಿದೆ, ಅಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಶಾಶ್ವತ ವೇದಿಕೆಯನ್ನೂ ಮಾಡಿದ್ದಾರೆ. ಬಜ್ಪೆಯ ಸುಡುಮದ್ದು ವ್ಯಾಪಾರಿ ಬಶೀರ್‌ ನಿರಂತರವಾಗಿ ಆಟ ಆಡಿಸಿಕೊಂಡು ಬಂದವರು.. ಹೀಗೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ನರು, ಜೈನರೆನ್ನದೆ ಯಕ್ಷಗಾನವನ್ನು ಪ್ರೀತಿಯಿಂದ ಪೋಷಿಸಿಕೊಂಡು ಬಂದಿದ್ದಾರೆ ಎಂದು ಹಿರಿಯ ವೇಷಧಾರಿ ಹಾಗೂ ಅರ್ಥಧಾರಿ ಸುಣ್ಣಂಬಳ ವಿಶ್ವೇಶ್ವರ ಭಟ್‌ ಹೇಳುತ್ತಾರೆ.

ಎಲ್ಲ ಕಲೆಗಳೂ ಶ್ರೇಷ್ಠವೇ ಆಗಿವೆ. ಶ್ರೀಗಂಧದಂತೆ, ಸಹ್ಯಾದ್ರಿ ಪರ್ವತದಂತೆ ಯಕ್ಷಗಾನವೂ ಪ್ರಾತಿನಿಧಿಕವೇ. ಅದು ಪ್ರಾತಿನಿಧಿಕವಾಗಿರುವಂತೆ ನೋಡಿಕೊಳ್ಳುವುದು ಕೂಡ ಮುಖ್ಯ. ಯಕ್ಷಗಾನ ಸಮ್ಮತವಾದ ಗುಣಮಟ್ಟ, ಶೈಲಿಯನ್ನು ಉಳಿಸಿಕೊಳ್ಳಬೇಕು. ಯಕ್ಷಗಾನದ ಮೇಲೆ ಗೌರವ ಇಟ್ಟು ಮುಂದುವರಿಸಿಕೊಂಡು ಹೋಗಬೇಕಿದೆ.

- ಪ್ರಭಾಕರ ಜೋಶಿ, ಯಕ್ಷಗಾನ ವಿದ್ವಾಂಸರು.

ಯಕ್ಷಗಾನವು ಜಾತಿ, ಧರ್ಮವನ್ನು ಮೀರಿ ನಿಂತ ಕಲೆ. ವ್ಯಾಪ್ತಿ ವಿಸ್ತಾರವಾದಂತೆ ಎಲ್ಲ ಜಾತಿ, ಧರ್ಮಗಳನ್ನು ಒಳಗೊಳಿಸುವ ಸಾಮರ್ಥ್ಯ ಅದಕ್ಕಿದೆ, ಎಲ್ಲರನ್ನೂ ಯಕ್ಷಗಾನ ಸೆಳೆದುಕೊಳ್ಳುತ್ತದೆ. ಹಾಗಾಗಿಯೇ ಎಲ್ಲ ಧರ್ಮದವರು ಯಕ್ಷಗಾನದತ್ತ ಆಕರ್ಷಿತರಾಗುತ್ತಿದ್ದಾರೆ.

- ಸುಣ್ಣಂಬಳ ವಿಶ್ವೇಶ್ವರ ಭಟ್‌, ಹಿರಿಯ ವೇಷಧಾರಿ ಹಾಗೂ ಅರ್ಥಧಾರಿ.

Follow Us:
Download App:
  • android
  • ios