ಮಂಡ್ಯ(ಫೆ.05): ಹಲವು ವರ್ಷಗಳ ನಂತರ ನಮ್ಮ ಕುಟುಂಬದಲ್ಲಿ ಶುಭ ಕಾರ್ಯ ನಡೆಯುತ್ತಿದೆ. ಬೆಂಗಳೂರು ನಗರ ಜನತೆಗೆ ತೊಂದರೆಯಾಗಬಾರದು ಎಂದೇ ರಾಮನಗರ, ಚನ್ನಪಟ್ಟಣ ಮಧ್ಯೆ ಪುತ್ರ ನಿಖಿಲ್‌ ಮದುವೆ ನಡೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ತಾಲೂಕಿನ ಟಿ.ಮಲ್ಲಿಗೆರೆ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುತ್ರ ನಿಖಿಲ್‌ ಅರತಕ್ಷತೆ, ಮದುವೆಗೆ ಸಿದ್ಧತೆ ನಡೆಯುತ್ತಿದೆ. ನನ್ನ ಕುಟುಂಬ ಪ್ರಥಮ ಶುಭ ಕಾರ್ಯ ಇದಾಗಿದೆ. ಇದರಲ್ಲಿ ದಕ್ಷಿಣ ಕರ್ನಾಟಕ ಭಾಗದ ಜನತೆ ಭಾಗವಹಿಸಿ ಪುತ್ರನಿಗೆ ಆಶೀರ್ವಾದ ಮಾಡಬೇಕು. ಬೆಂಗಳೂರಿನಲ್ಲಿ ನನ್ನ ಪುತ್ರನ ವಿವಾಹ ಕಾರ್ಯಕ್ರಮ ಆಯೋಜಿಸಬೇಕಿತ್ತು. ಆದರೆ, ಜನಸಂದಣಿ, ವಾಹನ ಸಂಖ್ಯೆ ಹೆಚ್ಚಾದರೆ ಅಲ್ಲಿನ ಜನತೆ, ಸಂಚಾರಕ್ಕೆ ತೊಂದರೆಯಾಗುತ್ತದೆ ಎಂದು ನಾನು ರಾಜಕೀಯವಾಗಿ ಜನ್ಮ ಬೆಳೆದ ರಾಮನಗರ, ಚನ್ನಪಟ್ಟಣದಲ್ಲಿ ಪುತ್ರನ ಮದುವೆ ಸಂಭ್ರಮವನ್ನು ಆಯೋಜಿಸುತ್ತಿರುವುದಾಗಿ ಹೇಳಿದ್ದಾರೆ.

ಗೋವಾದಲ್ಲಿ ಫಿಲ್ಮಿ ಸ್ಟೈಲ್‌ ಪ್ರಪೋಸ್‌; ಏಪ್ರಿಲ್‌ನಲ್ಲಿ ನಿಖಿಲ್‌ ಮದುವೆ ಡೇಟ್‌ ಫಿಕ್ಸ್‌!

ರಾಮನಗರ, ಮಂಡ್ಯ ಜಿಲ್ಲೆಗಳು ನನ್ನ ಕುಟುಂಬ ಹಾಗೂ ನನಗೆ ರಾಜಕೀಯ ಜನ್ಮ ನೀಡಿದ ಜಿಲ್ಲೆಗಳು. ಬೆಂಗಳೂರು ಗ್ರಾಮಾಂತರ, ಕೋಲಾರ, ಮೈಸೂರು, ಹಾಸನ, ಚಿಕ್ಕಬಳ್ಳಾಪುರ, ತುಮಕೂರು, ಮೈಸೂರು, ಚಿಕ್ಕಬಳ್ಳಾಪುರ ಜಿಲ್ಲೆಗಳು ನಾನು ಸಿಎಂ ಆಗಲು ಶಕ್ತಿ ನೀಡಿವೆ. ಈ ಭಾಗದ ಎಲ್ಲಾ ಜನರಿಗೂ ಪುತ್ರನ ಮದುವೆಗೆ ಬರುವಂತೆ ಆಹ್ವಾನ ನೀಡುತ್ತೇನೆ ಎಂದಿದ್ದಾರೆ.

ಪ್ಯಾಸೆಂಜರ್ ಆಟೋಗೆ ಲಾರಿ ಡಿಕ್ಕಿ, ಯುವಕರು ಸ್ಥಳದಲ್ಲೇ ಸಾವು

ಮಂಡ್ಯ, ರಾಮನಗರ ಜಿಲ್ಲೆಗಳ ಪ್ರತಿಯೊಂದು ಮನೆಗಳಿಗೂ ಆಹ್ವಾನ ಪತ್ರಿಕೆ ತಲುಪುವಂತೆ ಮಾಡಿ ಪುತ್ರನ ಮದುವೆಯಲ್ಲಿ ಪಾಲ್ಗೊಂಡು ಆಶೀರ್ವಾದ ಮಾಡುವಂತೆ ಕೋರುತ್ತೇನೆ. ಈಗಾಗಲೇ ರಾಮನಗರ, ಚನ್ನಪಟ್ಟಣ ಮಧ್ಯೆ ಮದುವೆ ಸಿದ್ಧತೆ ನಡೆಯುತ್ತಿದೆ. ಈ ಜಿಲ್ಲೆಗಳ ರೈತರು, ಜನರ ಆಶೀರ್ವಾದ, ಋುಣದ ಭಾರ ನನ್ನ ಮೇಲಿದೆ. ನಮ್ಮನ್ನು ಬೆಳೆಸಿರುವ ಈ ಜನರ ಋುಣ ತೀರಿಸಬೇಕಿದೆ. ಈ ಜನತೆಗೆ ಊಟ ಹಾಕಿಸಬೇಕು ಎಂದುಕೊಂಡಿದ್ದೇನೆ ಎಂದು ಹೇಳಿದ್ದಾರೆ.