ರಾಮನಗರ-ಚನ್ನಪಟ್ಟಣ ಕ್ಷೇತ್ರ ಜವಾಬ್ದಾರಿ ನಿಖಿಲ್‌ಗೆ!
ವಿಧಾನಸಭಾ ಚುನಾವಣೆಗೆ ಆರು ತಿಂಗಳು ಬಾಕಿ ಇರುವಾಗಲೇ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪಕ್ಷಕ್ಕೆ ಶಕ್ತಿ ತುಂಬಲು ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರಗಳ ಪ್ರವಾಸದಲ್ಲಿ ಸಕ್ರಿಯರಾಗಿದ್ದಾರೆ. ಇದು ರಂಗ ಪ್ರವೇಶದ ತಯಾರಿ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆದಿವೆ.
ಎಂ.ಅಫ್ರೋಜ್ ಖಾನ್
ರಾಮನಗರ (ನ.11): ವಿಧಾನಸಭಾ ಚುನಾವಣೆಗೆ ಆರು ತಿಂಗಳು ಬಾಕಿ ಇರುವಾಗಲೇ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪಕ್ಷಕ್ಕೆ ಶಕ್ತಿ ತುಂಬಲು ರಾಮನಗರ ಹಾಗೂ ಚನ್ನಪಟ್ಟಣ ಕ್ಷೇತ್ರಗಳ ಪ್ರವಾಸದಲ್ಲಿ ಸಕ್ರಿಯರಾಗಿದ್ದಾರೆ. ಇದು ರಂಗ ಪ್ರವೇಶದ ತಯಾರಿ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆದಿವೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (HD Kumaraswamy) ಪಂಚರತ್ನ ರಥಯಾತ್ರೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಹೊರಡಲು ಅಣಿಯಾಗುತ್ತಿದ್ದಾರೆ. ಅವರ ಅನುಪಸ್ಥಿತಿ ಕೊರಗು ನೀಗಿಸುವ ಉದ್ದೇಶದಿಂದ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆಯ ಜವಾಬ್ದಾರಿ ಹೊತ್ತಿದ್ದಾರೆ.
ವಾರದಲ್ಲಿ ನಾಲ್ಕೈದು ದಿನ ಉಭಯ ಕ್ಷೇತ್ರಗಳಿಗೆ ಭೇಟಿ ನೀಡುತ್ತಿರುವ ನಿಖಿಲ್ ಕಾರ್ಯಕರ್ತರ ಸಭೆ ನಡೆಸಿ ಪಕ್ಷ ಸಂಘಟನೆ ಜತೆ ಜತೆಗೆ ಕ್ಷೇತ್ರದ ಜನರ ಕುಂದು ಕೊರತೆಗಳನ್ನು ಆಲಿಸುತ್ತಿದ್ದಾರೆ. ಹಳ್ಳಿಗಳಲ್ಲಿ ಮೂಲಸೌಲಭ್ಯ ಕೊರತೆ ಸಂಬಂಧ ಶಾಸಕದ್ವಯರ ಗಮನಕ್ಕೆ ತಂದು ಕೆಲಸ ಮಾಡಿಕೊಡುತ್ತಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಕುಮಾರಸ್ವಾಮಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಶಾಸಕಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸುವುದಿಲ್ಲ ಹಾಗೂ ಜೆಡಿಎಸ್ 126 ಅಭ್ಯರ್ಥಿಗಳ ಪಟ್ಟಿಯಲ್ಲಿ ನಿಖಿಲ್ ಹೆಸರೂ ಇರಬಹುದೆಂದು ಸುಳಿವು ನೀಡಿದ್ದರು. ಇದಾದ ಬಳಿಕ ನಿಖಿಲ್ ಎರಡು ಕ್ಷೇತ್ರಗಳಿಗೆ ಹೆಚ್ಚಿನ ಸಮಯ ಮೀಸಲಿಡುತ್ತಿದ್ದಾರೆ.
ಆಕಾಂಕ್ಷಿತ ಅಭ್ಯರ್ಥಿಗಳು ಅಲರ್ಚ್:
ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರಗಳಲ್ಲಿ ಪಕ್ಷವನ್ನು ಬೇರು ಮಟ್ಟದಿಂದ ಗಟ್ಟಿಗೊಳಿಸಲು ಮುಂದಾಗಿರುವ ನಿಖಿಲ್ ಕುಮಾರಸ್ವಾಮಿ ಮನೆ ಸೇರಿರುವ ಮುಖಂಡರ ಮನವೊಲಿಸುತ್ತಿದ್ದಾರೆ. ಇದು ಜೆಡಿಎಸ್ ಪಾಳಯದಲ್ಲಿ ಕೊಂಚ ಸಮಾಧಾನ ಮೂಡಿಸಿದೆ. ಇದನ್ನು ಕಂಡು ಕಾಂಗ್ರೆಸ್ ಮತ್ತು ಬಿಜೆಪಿ ಆಕಾಂಕ್ಷಿತ ಅಭ್ಯರ್ಥಿಗಳು ಫುಲ್ ಅಲರ್ಚ್ ಆಗಿದ್ದಾರೆ.
ರಾಮನಗರದಲ್ಲಿ ಕಾಂಗ್ರೆಸ್ ಆಕಾಂಕ್ಷಿತ ಅಭ್ಯರ್ಥಿ ಇಕ್ಬಾಲ್ ಹುಸೇನ್, ಬಿಜೆಪಿ ಆಕಾಂಕ್ಷಿತ ಅಭ್ಯರ್ಥಿಗಳಾದ ಗೌತಮ್‌ಗೌಡ, ಡಿ.ನರೇಂದ್ರ ಹಾಗೂ ಚನ್ನಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್, ಕಾಂಗ್ರೆಸ್ ಆಕಾಂಕ್ಷಿತ ಅಭ್ಯರ್ಥಿ ಪ್ರಸನ್ನ ಪಿ.ಗೌಡರು ಪಕ್ಷ ಸಂಘಟನೆಯಲ್ಲಿ ಹಿಂದೆ ಬಿದ್ದಿಲ್ಲ. ಪಕ್ಷದ ಮುಖಂಡರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ, ಸ್ವ ಪಕ್ಷೀಯ ಅಸಮಾಧಾನ ತಣಿಸುವ, ಅತೃಪ್ತರ ಮನವೊಲಿಸುವುದರ ಜೊತೆಗೆ ಅನ್ಯ ಪಕ್ಷಗಳ ಮುಖಂಡರನ್ನು ಸೆಳೆಯುವ ಪ್ರಯತ್ನದಲ್ಲಿದ್ದಾರೆ. ಅಲ್ಲದೆ, ಕ್ಷೇತ್ರಗಳಲ್ಲಿನ ಸಣ್ಣಪುಟ್ಟಕಾರ್ಯಕ್ರಮಗಳನ್ನೂ ಬಿಡದೆ ಹಾಜರಿ ಹಾಕುತ್ತಿದ್ದಾರೆ.
ಎಚ್‌ಡಿಕೆ ಒಂದೇ ಕ್ಷೇತ್ರದಿಂದ ಸ್ಪರ್ಧೆ:
ಕಳೆದ ವಿಧಾನಸಭಾ ಚುನಾವಣೆಯ ಸಮಯದ ಪರಿಸ್ಥಿತಿಯೇ ಬೇರೆ ಇತ್ತು. ಈಗಿನ ಪರಿಸ್ಥಿತಿಯೇ ಬೇರೆ ಇದೆ. ಇದನ್ನು ಅರಿತಿರುವ ಕುಮಾರಸ್ವಾಮಿ ಈಗಾಗಲೇ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸ್ಪಷ್ಟಸಂದೇಶವನ್ನು ಕಾರ್ಯಕರ್ತರಿಗೆ ರವಾನಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದ ಅವರು ಚನ್ನಪಟ್ಟಣ ಕ್ಷೇತ್ರ ಉಳಿಸಿಕೊಂಡಿದ್ದರು. ಈ ಬಾರಿ ಒಂದು ಕ್ಷೇತ್ರದಿಂದ ಸ್ಪರ್ಧೆ ಮಾಡುವ ನಿರ್ಧಾರಕ್ಕೆ ಬಂದಿದ್ದಾರೆ. ಹಾಗಾದರೆ ರಾಮನಗರ ಕ್ಷೇತ್ರದಿಂದ ಜೆಡಿಎಸ್ ಹುರಿಯಾಳು ಯಾರಾಗುತ್ತಾರೆಂಬ ಕುತೂಹಲ ಮೂಡಿಸುತ್ತಿದೆ.
ಬಾಕ್ಸ್........
ಭವಾನಿ ಸ್ಪರ್ಧಿಸಿದರೆ ಅನಿತಾ ಸ್ಪರ್ಧೆ ನಿಶ್ಚಿತ
ಮುಂದಿನ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಪುತ್ರ ನಿಖಿಲ್ ಅವರಿಗೆ ಕ್ಷೇತ್ರ ಬಿಟ್ಟು ಕೊಡುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೀಗ ಅನಿತಾರವರು ಮತ್ತೊಂದು ಅವಧಿಗೆ ಶಾಸಕರಾಗುವ ಆಸೆ ಹೊಂದಿದ್ದಾರೆ. ಕುಮಾರಸ್ವಾಮಿಯ ನಿರಾಕರಣೆ ನಡುವೆಯೂ ಅನಿತಾರವರು ಟಿಕೆಟ್‌ಗಾಗಿ ಬಿಗಿ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಅಲ್ಲದೆ, ರಾಮನಗರ ದೇವೇಗೌಡ ಕುಟುಂಬದ ಪಾಲಿಗೆ ಅದೃಷ್ಟದ ಕ್ಷೇತ್ರ. ಅಷ್ಟಕ್ಕೂ ಕುಮಾರಸ್ವಾಮಿ ಅನಿತಾ ಅವರನ್ನು ಕಣಕ್ಕಿಳಿಸುವುದಿಲ್ಲ ಎಂದಿದ್ದಾರೆಯೇ ಹೊರತು ತಮ್ಮ ಕುಟುಂಬದವರು ಸ್ಪರ್ಧಿಸುವುದಿಲ್ಲ ಎಂದು ಎಲ್ಲಿಯೂ ಹೇಳಿಲ್ಲ. ಹೀಗಾಗಿ ಇಲ್ಲಿ ತಮ್ಮ ಕುಟುಂಬದವರನ್ನು ಹೊರತು ಪಡಿಸಿ ಬೇರೆ ಯಾರಿಗೂ ಜೆಡಿಎಸ್ನಿಂದ ಸ್ಪರ್ಧಿಸಲು ಕುಮಾರಸ್ವಾಮಿ ಅವಕಾಶ ನೀಡುವುದಿಲ್ಲ. ಹಾಸನ ಕ್ಷೇತ್ರದಿಂದ ಮಾಜಿ ಸಚಿವ ಎಚ್.ಎಂ.ರೇವಣ್ಣ ಧರ್ಮಪತ್ನಿ ಭವಾನಿ ಸ್ಪರ್ಧಿಸಿದರೆ ರಾಮನಗರ ಕ್ಷೇತ್ರದಲ್ಲಿ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಮಾಡುವುದು ನಿಶ್ಚಿತ. ಇಲ್ಲವೆ ಕೊನೆ ಘಳಿಗೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಆಧಾರದ ಮೇಲೆ ಕುಮಾರಸ್ವಾಮಿ, ಅನಿತಾ ಹಾಗೂ ನಿಖಿಲ್ ಪೈಕಿ ಯಾರು ಬೇಕಾದರೂ ಕಣಕ್ಕಿಳಿಯಬಹುದು ಎನ್ನುತ್ತಿವೆ ಜೆಡಿಎಸ್ ಮೂಲಗಳು.
ನಿಖಿಲ್‌ಗಾಗಿ ನಿಲ್ಲದ ಕ್ಷೇತ್ರ ಹುಡುಕಾಟ
ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಗೆಲುವು ಸುಲಭವಾಗುವ ಕ್ಷೇತ್ರದ ಹುಡುಕಾಟ ಮುಂದುವರಿದಿದೆ. ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ನಿಖಿಲ್ ರಾಜಕೀಯ ಭವಿಷ್ಯದ ಚಿಂತೆ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಕಾಡುತ್ತಿದೆ.
ಮಾಜಿ ಪ್ರಧಾನಿ ದೇವೇಗೌಡರು ನಿಖಿಲ್‌ರವರ ವಿವಾಹದ ಸಂದರ್ಭದಲ್ಲಿಯೇ ರಾಮನಗರ ಕ್ಷೇತ್ರದಿಂದ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ನೀಡಿದ್ದರು. ಆದರೆ, ನಿಖಿಲ್ ಕುಮಾರಸ್ವಾಮಿ ಅವರಿಗೆ ಸೋಲು ಕಂಡಿರುವ ನೆಲದಲ್ಲಿಯೇ ಗೆದ್ದು ಬರಬೇಕೆಂಬ ಹಂಬಲ. ಹೀಗಾಗಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಸಂಸತ್ ಕ್ಷೇತ್ರದಿಂದಲೇ ಸ್ಪರ್ಧಿಸುವ ಇರಾದೆ ಹೊಂದಿದ್ದಾರೆ. ಜೊತೆಗೆ ರಾಮನಗರ ಮತ್ತು ಮಾಗಡಿ ವಿಧಾನಸಭಾ ಕ್ಷೇತ್ರದ ಜತೆಗೆ ಮಂಡ್ಯ ಜಿಲ್ಲೆಯ ಮಂಡ್ಯ ಮತ್ತು ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರಗಳಲ್ಲಿಯೂ ನಿಖಿಲ್ ಕುಮಾರಸ್ವಾಮಿ ಹೆಸರು ಚಾಲ್ತಿಯಲ್ಲಿದೆ.