ಬೆಂಗಳೂರು [ಮಾ.18]:  ನೈಜೀರಿಯಾ ಮೂಲದ ಹೆನ್ರಿ ದಂಪತಿ, 2016ರಲ್ಲಿ ಪ್ರವಾಸಿ ವೀಸಾದಡಿ ಭಾರತಕ್ಕೆ ಬಂದಿದ್ದರು. ಬಳಿಕ ನಗರಕ್ಕೆ ಆಗಮಿಸಿದ ಅವರು ಮೊದಲು ಕೋಗಿಲು ಅಗ್ರಹಾರದಲ್ಲಿ ನೆಲೆಸಿದ್ದರು. ಇಲ್ಲಿ ವಿಗ್‌ ಬಿಜಿನೆಸ್‌ ಮಾಡುತ್ತಿದ್ದರು. ಇತ್ತೀಚೆಗೆ ಹೆನ್ರಿ ಕುಟುಂಬ, ವಿದ್ಯಾರಣ್ಯಪುರ ಹತ್ತಿರದ ವಡೇರಹಳ್ಳಿಗೆ ವಾಸ್ತವ್ಯ ಬದಲಾಯಿಸಿತ್ತು. ನಗರದ ಹೊರವಲಯಗಳನ್ನು ಗುರಿಯಾಗಿಸಿಕೊಂಡು ಮಾದಕ ವಸ್ತು ಮಾರಾಟ ದಂಧೆ ಮಾಡುತ್ತಿದ್ದ ಹೆನ್ರಿ, ಕೊಕೇನ್‌, ಗಾಂಜಾ ಹಾಗೂ ಎಂಡಿಎಂಎ ಸೇರಿದಂತೆ ಮುಂತಾದ ಡ್ರಗ್‌ ಅನ್ನು ಬಿಕರಿ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಡ್ರಗ್‌ ಜಾಲದಿಂದ ಸಗಟು ದರದಲ್ಲಿ ಕೊಕೇನ್‌ ಖರೀದಿಸುತ್ತಿದ್ದ ಆರೋಪಿ, ಆನಂತರ ನಗರದಲ್ಲಿ ಅದನ್ನು ತಲಾ 1 ಗ್ರಾಂಗೆ 3 ಸಾವಿರಕ್ಕೆ ಮಾರುತ್ತಿದ್ದ. ಹೀಗೆ ಸಂಪಾದಿಸಿದ ಹಣದಲ್ಲಿ ಆತ ಐಷರಾಮಿ ಜೀವನ ಸಾಗಿಸುತ್ತಿದ್ದ. ಕಳೆದ 4 ವರ್ಷಗಳಲ್ಲಿ ಹೆನ್ರಿ ವಿರುದ್ಧ ಅವಲಹಳ್ಳಿ, ಕೊತ್ತನೂರು, ಬಾಣಸವಾಡಿ ಹಾಗೂ ಕೋಣನಕುಂಟೆ ಠಾಣೆಗಳಲ್ಲಿ 5 ಪ್ರಕರಣಗಳು ದಾಖಲಾಗಿವೆ. ಕೆಲ ತಿಂಗಳ ಹಿಂದೆ ಆತನನ್ನು ಬಂಧಿಸಿ ಸಿಸಿಬಿ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದರು. ತರುವಾಯ ಜಾಮೀನು ಪಡೆದು ಹೊರಬಂದ ಆತ ಮತ್ತೆ ತನ್ನ ಚಾಳಿ ಮುಂದುವರಿಸಿದ್ದ. ಈ ಕ್ರಿಮಿನಲ್‌ ಚಟುವಟಿಕೆ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಪಿಐಟಿ ಕಾಯ್ದೆಯಡಿ ಕ್ರಮ ಜರುಗಿಸಲು ಅಧಿಕಾರಿಗಳು ಮುಂದಾದರು.

ಮುಖ ಜಜ್ಜಿದ ಸ್ಥಿತಿಯಲ್ಲಿ ಮಹಿ​ಳೆಯ ಬೆತ್ತ​ಲೆ ಶವ ಪತ್ತೆ: ಅತ್ಯಾ​ಚಾರ ಎಸಗಿ ಕೊಲೆ?

ಆಗ ಆರೋಪಿಯ ಅಪರಾಧ ಚಟುವಟಿಕೆ ಕುರಿತು ಜಂಟಿ ಆಯುಕ್ತ ಸಂದೀಪ್‌ ಪಾಟೀಲ್‌ ಅವರಿಗೆ ಸಮಗ್ರ ವರದಿಯನ್ನು ಇನ್‌ಸ್ಪೆಕ್ಟರ್‌ ಶ್ರೀಧರ್‌ ಪೂಜಾರ್‌ ಸಲ್ಲಿಸಿದರು. ಈ ವರದಿ ಆಧರಿಸಿ ಪಿಐಟಿ ಕಾಯ್ದೆ ಜಾರಿಗೆ ಆಯುಕ್ತರಿಗೆ ಜಂಟಿ ಆಯುಕ್ತರು ಶಿಫಾರಸು ಕಳುಹಿಸಿದರು. ಅದರನ್ವಯ ಹೆನ್ರಿಯನ್ನು ಬಂಧಿಸುವಂತೆ ಆಯುಕ್ತರು ಆದೇಶ ಹೊರಡಿಸಿದರು.

ಅರೆ ನಗ್ನಳಾಗಿ ಹೆನ್ರಿ ಪತ್ನಿ ರಾದ್ಧಾಂತ :  ಪಿಐಟಿ ಕಾಯ್ದೆಯಡಿ ಹೆನ್ರಿಯನ್ನು ಬಂಧಿಸಲು ತೆರಳಿದ ಪೊಲೀಸರ ಮೇಲೆ ಆತನ ಪತ್ನಿ ರಂಪ ರದ್ಧಾಂತ ಮಾಡಿರುವ ಘಟನೆ ನಡೆದಿದೆ. ಪತಿ ಬಂಧನವನ್ನು ತೀವ್ರವಾಗಿ ವಿರೋಧಿಸಿದ ಆಕೆ, ಒಂದು ಹಂತದಲ್ಲಿ ಅರೆ ನಗ್ನಳಾಗಿ ಕೂಗಾಡಿದ್ದಾಳೆ. ಈ ಅಸಭ್ಯ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ, ಆಕೆಯ ಮೇಲೆ ಸ್ಥಳೀಯ ಠಾಣೆಯಲ್ಲಿ ದೂರು ದಾಖಲಿಸಲು ನಿರ್ಧರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.