ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಕಾರ್ಯಕರ್ತರ ಮನೆಗಳಿಗೆ ಪೊಲೀಸರ ರಾತ್ರಿ ಭೇಟಿ ಪ್ರಕರಣದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರ ವಿರುದ್ಧ ತನಿಖೆಗೆ ಆದೇಶಿಸಿದೆ. ಎನ್‌ಎಚ್‌ಆರ್‌ಸಿ ತನಿಖಾ ವಿಭಾಗದ ಡಿಜಿಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದೆ.
ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ ಮಂಗಳೂರು
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಲವು ಹಿಂದೂ ಕಾರ್ಯಕರ್ತರ (Hindu Activist) ಮನೆಗಳಿಗೆ ಪೊಲೀಸರ ರಾತ್ರಿ ಭೇಟಿಯ ಬಗ್ಗೆ ದಾಖಲಾದ ದೂರಿನ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕು ಆಯೋಗ (National Human Rights Commission-ಎನ್ಎಚ್‌ಆರ್‌ಸಿ) ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರ (Dakshina Kannada District Police) ವಿರುದ್ಧ ಸಮಗ್ರ ತನಿಖೆಗೆ ಆದೇಶ ನೀಡಿದೆ.
ಎರಡು ವಾರದಲ್ಲಿ ವರದಿ ನೀಡುವಂತೆ ಸೂಚನೆ
ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಡಾ. ವೈ. ಭರತ್ ಶೆಟ್ಟಿ ಈ ಕುರಿತು ಎನ್ಎಚ್‌ಆರ್‌ಸಿಗೆ ನೀಡಿದ ದೂರು ಆಧಾರವಾಗಿ, ಆಯೋಗದ ತನಿಖಾ ವಿಭಾಗದ ಡಿಜಿಗೆ ತನಿಖೆ ನಡೆಸುವಂತೆ ಸೂಚಿಸಲಾಗಿದೆ. ತನಿಖೆಯ ಭಾಗವಾಗಿ ಸ್ಥಳ ಪರಿಶೀಲನೆ ನಡೆಸಿ, ಎಲ್ಲಾ ದಾಖಲೆಗಳು ಹಾಗೂ ಸಂತ್ರಸ್ತರ ಹೇಳಿಕೆ ಆಧಾರಿಸಿ ಎರಡು ವಾರಗಳೊಳಗೆ ವರದಿ ಸಲ್ಲಿಸುವಂತೆ ಎನ್ಎಚ್‌ಆರ್‌ಸಿ ಸೂಚಿಸಿದೆ.
ದಕ್ಷಿಣ ಕನ್ನಡ ಎಸ್.ಪಿ ವಿರುದ್ಧವೂ ದೂರು
ರಾತ್ರಿ 11 ಗಂಟೆಯ ನಂತರ, ಯಾವುದೇ ಎಫ್‌ಐಆರ್, ತನಿಖೆ ಅಥವಾ ವಾರೆಂಟ್ ಇಲ್ಲದೆ ಪೊಲೀಸರು ಕೆಲ ಸಂಘಟನೆಗಳಿಗೆ ಸೇರಿದ ಜನರ ಮನೆಗಳಿಗೆ ಭೇಟಿ ನೀಡಿ, ಛಾಯಾಚಿತ್ರ, GPS ಮಾಹಿತಿ ಸಂಗ್ರಹಿಸಿದ್ದಾರೆ ಎಂಬ ಆಕ್ಷೇಪಗಳು ಕೇಳಿಬಂದಿತ್ತು. ಕಾನೂನುಬದ್ಧ ಜೀವನ ನಡೆಸುತ್ತಿರುವ ಜನರಿಗೆ ತೊಂದರೆಯಾಗುತ್ತಿದೆ ಎಂದು ಶಾಸಕ ಭರತ್ ಶೆಟ್ಟಿ ಅವರು ದಕ್ಷಿಣ ಕನ್ನಡ ಎಸ್.ಪಿ ವಿರುದ್ಧವೂ ದೂರು ಸಲ್ಲಿಸಿದ್ದರು.
ಗಂಭೀರವಾಗಿ ಪರಿಗಣಿಸಿದ ಎನ್ಎಚ್‌ಆರ್‌ಸಿ
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಎನ್ಎಚ್‌ಆರ್‌ಸಿ, "Action Taken Report" ಅನ್ನು ಎರಡು ವಾರಗಳಲ್ಲಿ ಸಲ್ಲಿಸಲು ಸ್ಪಷ್ಟ ಸೂಚನೆ ನೀಡಿದೆ. ನೂತನ ಎಸ್ಪಿ ಅರುಣ್ ದ.ಕ ಜಿಲ್ಲೆಯ ಹಿಂದೂ ಕಾರ್ಯಕರ್ತರು, ನಾಯಕರ ಮನೆಗಳಿಗೆ ರಾತ್ರಿ ಪೊಲೀಸರು ಭೇಟಿ ನೀಡಿ ಜಿಪಿಎಸ್ ಫೋಟೋ ಸಂಗ್ರಹಿಸಲು ಸೂಚನೆ ನೀಡಿದ್ದರು. ಕಡಬ, ಸುಳ್ಯ ಸೇರಿ ಹಲವು ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ರಾತ್ರಿ ವೇಳೆ ಮನೆಗಳಿಗೆ ಭೇಟಿ ನೀಡಿದ್ದು ಭಾರೀ ವಿರೋಧಕ್ಕೆ ಕಾರಣವಾಗಿತ್ತು.
ಪತ್ರ ಬರೆದಿದ್ದ ಸಚಿವೆ ಶೋಭಾ
ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕೂಡ ಈ ಪ್ರಕರಣದಲ್ಲಿ ಕರ್ನಾಟಕ ಪೊಲೀಸ್ ದೂರು ಪ್ರಾಧಿಕಾರ (ಪಿಸಿಎ) ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ)ದ ಮಧ್ಯಪ್ರವೇಶ ಮಾಡಬೇಕೆಂದು ಮನವಿ ಮಾಡಿದ್ದರು. ಪಿಸಿಎ ಅಧ್ಯಕ್ಷ ಎನ್‌ಕೆ ಸುಧೀಂದ್ರ ರಾವ್ ಮತ್ತು ಎನ್‌ಎಚ್‌ಆರ್‌ಸಿಗೆ ಪತ್ರ ಬರೆದಿದ್ದರು.
ದ.ಕ ಜಿಲ್ಲಾ ಎಸ್ಪಿ ಡಾ.ಅರುಣ್ ಹಾಗೂ ಪೊಲೀಸರ ವಿರುದ್ದ ಕ್ರಮಕ್ಕೆ ಆಗ್ರಹಿಸಿದ್ದ ಕರಂದ್ಲಾಜೆ ಆರ್ಟಿಕಲ್ 21ರಡಿಯಲ್ಲಿ ಜೀವಿತದ ಹಕ್ಕು ಹಾಗೂ ಗೌಪ್ಯತೆಗಿರುವ ಹಕ್ಕು, ಮತ್ತು ಆರ್ಟಿಕಲ್ 14ರಡಿಯಲ್ಲಿ ಸಮಾನತೆಯ ಹಕ್ಕುಗಳನ್ನು ಉಲ್ಲಂಘಿಸುತ್ತವೆ ಎಂದಿದ್ದರು. ಮಂಗಳೂರಿನಲ್ಲಿ ಪೊಲೀಸ್ ಅಧಿಕಾರಿಗಳ ಬದಲಾವಣೆ ನಂತರ ಈ ಕ್ರಮಗಳಾಗ್ತಿವೆ. ಹಿಂದೂ ಸಮುದಾಯದ ಸದಸ್ಯರನ್ನೇ ಗುರಿಯಾಗಿಸಿಕೊಂಡಿದ್ದಾರೆ. ಈ ತೊಂದರೆಗೊಳಗಾಗಿರುವವರು ಯಾವುದೇ ಅಪರಾಧ ಹಿನ್ನೆಲೆ ಇಲ್ಲದವರಾಗಿದ್ದು, ಯಾವುದೇ ದುಷ್ಕೃತ್ಯದಲ್ಲಿ ಭಾಗಿಯಾಗಿಲ್ಲ. ಈ ಕ್ರಮಗಳು ಪೊಲೀಸ್ ವ್ಯವಸ್ಥೆಯನ್ನು ರಾಜಕೀಯ ಪ್ರತೀಕಾರದ ಅಸ್ತ್ರವಾಗಿ ಬಳಸುವ ಆತಂಕವಿದೆ. ಈ ಕಾನೂನು ವಿರೋಧಿ ಕ್ರಿಯೆಗಳನ್ನು ತಡೆಗಟ್ಟಲು ತುರ್ತು ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇನೆ. ಇದರಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳ ವಿರುದ್ಧ ನ್ಯಾಯಸಮ್ಮತ ಮತ್ತು ಪಕ್ಷಪಾತವಿಲ್ಲದ ತನಿಖೆ ನಡೆಯಬೇಕು. ಸಂವಿಧಾನಾತ್ಮಕ ಮೌಲ್ಯಗಳು ಮತ್ತು ನಾಗರಿಕರ ಹಕ್ಕುಗಳನ್ನು ಉಲ್ಲಂಘಿಸಿದವರನ್ನು ಹೊಣೆಯಾಗಿ ಪರಿಗಣಿಸಬೇಕು ಎಂದು ಲಿಖಿತ ದೂರು ನೀಡಿದ್ದರು.
