ಗುಂಡಿ ಮುಚ್ಚಲು ಹೊಸ ಡೆಡ್‌ಲೈನ್, ಗುಂಡಿ ಮುಚ್ಚಲು 2 ದಿನ ಬಿಸಿಲ ವಾತಾವರಣ ಬೇಕು: ತುಷಾರ್ ಸ್ಪಷ್ಟನೆ
ಬೆಂಗಳೂರು(ನ.16): ನಗರದಲ್ಲಿ ನಿತ್ಯ ಸುರಿಯುತ್ತಿರುವ ಮಳೆ ಹಾಗೂ ಇನ್ನೂ ಎರಡು ದಿನ ಮುಂದುವರಿಯುವ ಮುನ್ಸೂಚನೆಯ ಹಿನ್ನೆಲೆಯಲ್ಲಿ ನಗರದ ಎಲ್ಲ ರಸ್ತೆಗಳ ಗುಂಡಿಗಳನ್ನು ಸಂಪೂರ್ಣ ಭರ್ತಿ ಮಾಡಲು ಪಾಲಿಕೆ ಅಧಿಕಾರಿಗಳಿಗೆ ನಿಗದಿಪಡಿಸಿದ ಗಡುವನ್ನು ನ.19ರವರೆಗೆ ವಿಸ್ತರಿಸಲಾಗಿದೆ. ಈ ಮೊದಲು ನ.9ರವರೆಗೆ, ನಂತರ ಮಳೆಯ ಕಾರಣದಿಂದ ನ.14ರವರೆಗೆ ವಿಸ್ತರಣೆ ಮಾಡಿದ್ದ ಪಾಲಿಕೆ, ಇದೀಗ ಮತ್ತೆ ನ.19ರವರೆಗೆ ವಿಸ್ತರಣೆ ಮಾಡಿದೆ. ಈವರೆಗೆ ಬಿಬಿಎಂಪಿ ಗುರುತಿಸಿದ 33 ಸಾವಿರ ರಸ್ತೆ ಗುಂಡಿಗಳ ಪೈಕಿ 32 ಸಾವಿರಕ್ಕೂ ಅಧಿಕ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಬಾಕಿ 1 ಸಾವಿರ ಗುಂಡಿ ಮುಚ್ಚುವುದು ಬಾಕಿಯಿದೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ನಿರಂತರ ಮಳೆ ಸುರಿದ ಕಾರಣ ಗುಂಡಿ ಮುಚ್ಚುವ ಕಾರ್ಯಕ್ಕೆ ಹಿನ್ನಡೆಯಾಗಿದೆ. ಹಾಗಾಗಿ ರಸ್ತೆಗುಂಡಿ ಮುಚ್ಚುವ ಗಡುವನ್ನು ವಿಸ್ತರಣೆ ಮಾಡಲಾಗಿತ್ತು. ಈಗ ಇನ್ನೂ ಎರಡು ದಿನ ಮಳೆ ಬರುವ ಮುನ್ಸೂಚನೆ ನೀಡಿದೆ. ಪೂರ್ಣ ಪ್ರಮಾಣದಲ್ಲಿ ರಸ್ತೆ ಗುಂಡಿಗಳ ಮುಕ್ತಿಗೆ ಎರಡು ದಿನ ಬಿಸಿಲ ವಾತಾವರಣ ಬೇಕಾಗುತ್ತದೆ. ಹೀಗಾಗಿ, ಪಾಲಿಕೆಯ ಅಧಿಕಾರಿಗಳಿಗೆ ನ.19ರೊಳಗೆ ರಸ್ತೆಗುಂಡಿ ಮುಚ್ಚಲು ಗಡುವು ನೀಡಲಾಗಿದೆ ಎಂದರು.
Bengaluru Rains: ದಾಖಲೆಯತ್ತ ಬೆಂಗಳೂರು ಮಳೆ?
ಶೀಘ್ರ ರಸ್ತೆ ಗುಂಡಿ ಮುಕ್ತ ವಲಯ ಘೋಷಣೆ
ಈವರೆಗೆ ಪ್ರಮುಖ ರಸ್ತೆಗಳಲ್ಲಿನ ಎಲ್ಲ ಗುಂಡಿಗಳನ್ನು ಮುಚ್ಚಲಾಗಿದ್ದು, ವಾರ್ಡ್ ಮಟ್ಟದ ರಸ್ತೆಗಳಲ್ಲಿ ಮಾತ್ರ ಕೆಲವು ಗುಂಡಿಗಳಿವೆ. ಈ ಬಗ್ಗೆ ಸಾರ್ವಜನಿಕರಿಂದ ವಾಟ್ಸ್‌ಆಪ್ ಮೂಲಕ ಬಂದ ದೂರು ಆಧರಿಸಿ ಎಲ್ಲ ಗುಂಡಿಗಳನ್ನು ಶೀಘ್ರ ಮುಚ್ಚಲಾಗುತ್ತದೆ. ಪೂರ್ಣ ಪ್ರಮಾಣದಲ್ಲಿ ಗುಂಡಿ ಮುಚ್ಚಲಾಗಿರುವ ವಲಯಗಳನ್ನು ರಸ್ತೆಗುಂಡಿ ಮುಕ್ತ ವಲಯ ಎಂದು ಘೋಷಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಅಪಘಾತಕ್ಕೆ ಜಲ ಮಂಡಳಿ ಕಾರಣ
ರಾಜಾಜಿ ನಗರದ ಸೋಮವಾರ ಸಂಭವಿಸಿದ ರಸ್ತೆ ಅಪಘಾತಕ್ಕೆ ಜಲಮಂಡಳಿಯಿಂದ ಅಗೆಯಲಾಗಿದ್ದ ರಸ್ತೆಗುಂಡಿ ಕಾರಣವಾಗಿದೆ ಎಂದು ತುಷಾರ್ ಗಿರಿನಾಥ್ ಆರೋಪಿಸಿದರು. ರಸ್ತೆಯಲ್ಲಿ ನೀರಿನ ಕೊಳವೆ ಅಳವಡಿಸಲು ಜಲಮಂಡಳಿ ಗುಂಡಿ ತೋಡಿದ್ದು, ಕೆಲಸ ಪೂರ್ಣಗೊಂಡ ನಂತರ ಜಲ್ಲಿ ಕಲ್ಲುಗಳಿಂದ ಗುಂಡಿ ಮುಚ್ಚಿದ್ದಾರೆ. ಇದರಿಂದ ಬೈಕ್‌ನಲ್ಲಿ ಹೋಗುವಾಗ ಸ್ಕಿಡ್ ಆಗಿ ಯುವಕ ಬಿದ್ದು ಅಪಘಾತ ಸಂಭವಿಸಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಅಂತಿಮವಾಗಿ ವರದಿ ಬಂದ ನಂತರ ಕ್ರಮ ಕೈಗೊಳ್ಳುತ್ತದೆ ಎಂದರು.
