ಮಂಗಳೂರು(ಸೆ.08): ಅಲೆಟ್ಟಿಗ್ರಾಮದ ಕೋಲ್ಚಾರು ಎಂಬಲ್ಲಿ ಕರ್ನಾಟಕ ಮತ್ತು ಕೇರಳ ರಾಜ್ಯ ಗಡಿಪ್ರದೇಶ ಕೊಚ್ಚಿ ಗುಡ್ಡೆಯ ಮಲೆತೋಟ ಎಂಬಲ್ಲಿ ಕೆಲವು ದಿನಗಳ ಹಿಂದೆ ವಿಪರೀತ ಮಳೆಯಿಂದ ನೀರು ಉದ್ಭವ ಆಗಿದ್ದು ಭೂ ಕುಸಿತದ ಆತಂಕ ಸೃಷ್ಟಿಯಾಗಿದೆ. ಸ್ಥಳಕ್ಕೆ ಸುಳ್ಯ ತಹಸೀಲ್ದಾರ್‌ ಭೇಟಿ ನೀಡಿದ್ದಾರೆ.

ಜನರಲ್ಲಿ ಆತಂಕ:

ಕೋಲ್ಚಾರಿನಿಂದ ಬಟ್ಟಂಗಾಯ ಪ್ರದೇಶ ಸಂಪರ್ಕಿಸುವ ದಾರಿ ಮಧ್ಯೆ ಕೊಚ್ಚಿ ಗುಡ್ಡೆ ಮೇಲ್ಭಾಗದಲ್ಲಿ ಅಲ್ಲಲ್ಲಿ ನೀರಿನ ಬುಗ್ಗೆಗಳು ನಿರ್ಮಾಣಗೊಂಡು ಕಲ್ಲು, ಮಣ್ಣು, ಹಾಗೂ ಮರಗಳ ಬೇರಿನ ಸಮೇತ ಕೆಳಗಿನ ಪ್ರದೇಶಕ್ಕೆ ಕೊಚ್ಚಿಕೊಂಡು ಹರಿದು ಬಂದಿರುವುದನ್ನು ಗಮನಿಸಿದ ಸ್ಥಳೀಯರು ಭಯಭೀತರಾಗಿದ್ದಾರೆ. ಕಳೆದ ವರ್ಷದ ಜೋಡುಪಾಲದ ಸ್ಥಿತಿಯನ್ನು ನೆನಪಿಸಿಕೊಂಡು ಆತಂಕಪಟ್ಟಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಹಸೀಲ್ದಾರ್ ಭೇಟಿ:

ಒಂದು ವೇಳೆ ಭೂ ಕುಸಿತವಾದರೆ ಕೆಳಗಿನ ಪ್ರದೇಶದಲ್ಲಿರುವ ಬಂದಡ್ಕದ ಸಂಪರ್ಕ ರಸ್ತೆ ಹಾಗೂ ಕಣಕ್ಕೂರು ಕೊಯಿಂಗಾಜೆ ಭಾಗದ ಪ್ರದೇಶಗಳಿಗೆ ಹರಿದು ಬರುವ ಸಾಧ್ಯತೆ ಇದೆ. ಈ ಬಗ್ಗೆ ಪರಿಸರದ ಯುವಕರು ಹಾಗೂ ಸ್ಥಳೀಯ ಮುಖಂಡರು ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ತಹಸೀಲ್ದಾರ್‌ ಮತ್ತು ಸಂಬಂಧಪಟ್ಟಅಧಿಕಾರಿಗಳಿಗೆ ತಿಳಿಸಿದರು.

ಸ್ಥಳಕ್ಕಾಗಮಿಸಿದ ತಹಸೀಲ್ದಾರ್‌ ಮತ್ತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಈ ಬಗ್ಗೆ ಭೂ ವಿಜ್ಞಾನಿಗಳನ್ನು ಕರೆಸಿ ಪರಿಶೀಲಿಸುವಂತೆ ತಿಳಿಸಿದರು.

ಸೂಕ್ತ ಕ್ರಮದ ಭರವಸೆ:

ಈ ಪ್ರದೇಶವು ಗಟ್ಟಿಮಣ್ಣಿನಿಂದ ಕೂಡಿದ್ದು, ಮಡಿಕೇರಿಯಂತಾಗುವ ಸಾಧ್ಯತೆ ಬಹಳ ಕಡಿಮೆ. ಆತಂಕಪಡುವ ಅವಶ್ಯಕತೆ ಇಲ್ಲ ಎಂದು ತಹಸೀಲ್ದಾರ್‌ ಕುಂಞಿಅಹಮ್ಮದ್‌ ಅಲ್ಲಿನ ಪರಿಸರ ನಿವಾಸಿಗಳಿಗೆ ಧೈರ್ಯ ತುಂಬಿದ್ದಾರೆ. ಬಳಿಕ ಕೋಲ್ಚಾರು ಎಂಬಲ್ಲಿಯ ಬಾಳ್ಯಾಡಿ ಸೇತುವೆ ನಾದುರಸ್ತಿಯಲ್ಲಿದ್ದು ಇದರ ವೀಕ್ಷಣೆಯನ್ನೂ ಮಾಡಿದರು. ದುರಸ್ತಿಗೆ ಸಂಬಂಧಪಟ್ಟಇಲಾಖೆಯ ಇಂಜಿನಿಯರ್‌ಗೆ ತಿಳಿಸಿ, ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

3-4 ದಿನ ಭಾರಿ ಮಳೆ : 10 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಪಂಚಾಯಿತಿ ಮಾಜಿ ಅಧ್ಯಕ್ಷ ಪುರುಷೋತ್ತಮ ಕೋಲ್ಚಾರು, ಮಾಜಿ ಉಪಾಧ್ಯಕ್ಷ ಹರೀಶ್‌ ಕೊಯಿಂಗಾಜೆ, ಮಾಜಿ ಸದಸ್ಯ ಸೀತಾರಾಮ ಕೊಲ್ಲರಮೂಲೆ, ನ್ಯಾಯವಾದಿ ಧರ್ಮಪಾಲ ಕೊಯಿಂಗಾಜೆ ಮತ್ತಿತರರಿದ್ದರು.