ಮಂಗಳೂರು(ಜ.20):  ಡಿ.16ರಂದು ನಗರದ ನ್ಯೂಚಿತ್ರಾ ಟಾಕೀಸ್‌ ಬಳಿ ಬಂದರು ಠಾಣೆಯ ಪೊಲೀಸ್‌ ಹೆಡ್‌ಕಾನ್‌ಸ್ಟೇಬಲ್‌ ಕೊಲೆ ಯತ್ನ ಪ್ರಕರಣ ಇದೀಗ ಬೆಚ್ಚಿಬೀಳಿಸುವ ತಿರುವು ಪಡೆದುಕೊಂಡಿದೆ. ಮಂಗಳೂರು ಗೋಲಿಬಾರ್‌ಗೆ ಪ್ರತೀಕಾರವಾಗಿ ನಡೆದಿದ್ದ ಈ ದಾಳಿಗೆ ಸಂಬಂಧಿಸಿ ಬಂಧಿತ ಬಾಲಕನಿಗೆ ಅಮಲಿನ ಮಾತ್ರೆ ಕೊಟ್ಟು ಪೊಲೀಸರ ಕೊಲೆಗೆ ಪ್ರಚೋದನೆ ನೀಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ಮತ್ತೆ ಆರು ಮಂದಿಯನ್ನು ಬಂಧಿಸಿದ್ದು, ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಎಂಟಕ್ಕೇರಿದೆ.

ಕುದ್ರೋಳಿ ನಿವಾಸಿಗಳಾದ ಅನಿಶ್‌ ಅಶ್ರಫ್‌ (22), ಅಬ್ದುಲ್‌ ಖಾದರ್‌ ಫಹದ್‌(23), ರಾಹಿಲ್‌ ಯಾನೆ ಚೋಟು ರಾಹಿಲ್‌(18), ಬಜ್ಪೆಯ ಶೇಕ್‌ ಮುಹಮ್ಮದ್‌ ಹ್ಯಾರಿಸ್‌ (31), ತಣ್ಣೀರುಬಾವಿಯ ಮುಹಮ್ಮದ್‌ ಖಾಯಿಸ್‌ (24) ಹಾಗೂ ಬಿ.ಸಿ.ರೋಡ್‌ನ ಮುಹಮ್ಮದ್‌ ನವಾಝ್‌ (30) ಬಂಧಿತರು. ಕುದ್ರೋಳಿ ನವಾಝ್‌ ಮತ್ತು ಕೃತ್ಯ ಎಸಗಿದ್ದ ಬಾಲಕನನ್ನು ಈ ಹಿಂದೆಯೇ ಬಂಧಿಸಲಾಗಿದೆ. ಆರೋಪಿಗಳು ಗಸ್ತಿನಲ್ಲಿದ್ದ ಹೆಡ್‌ಕಾನ್ಸ್‌ಟೇಬಲ್‌ ಗಣೇಶ್‌ ಕಾಮತ್‌ಗೆ ಇರಿದು ಹತ್ಯೆಗೆ ಯತ್ನಿಸಿದ್ದರು.

ಪ್ರತೀಕಾರದ ದಾಳಿ:

ಸಿಎಎ, ಎನ್‌ಆರ್‌ಸಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ವೇಳೆ 2019ರ ಡಿಸೆಂಬರ್‌ 19ರಂದು ನಗರದಲ್ಲಿ ಗೋಲಿಬಾರ್‌ ನಡೆದು ಇಬ್ಬರು ಮೃತಪಟ್ಟಿದ್ದರು. ಇದೀಗ ಬಂಧಿತ ಆರೋಪಿಗಳು ಮೃತರಿಬ್ಬರ ಸಂಬಂಧಿಕರು, ಸ್ನೇಹಿತರಾಗಿದ್ದು, ಸಾವಿನ ಪ್ರತೀಕಾರಕ್ಕಾಗಿ ಪೊಲೀಸರ ಮೇಲೆ ಹಲ್ಲೆ ನಡೆಸಲೆಂದೇ ಈ ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿದೆ. ಆರೋಪಿಗಳು ಡಿ.19ರಂದೇ ಕೃತ್ಯ ನಡೆಸಲು ಮುಂದಾಗಿದ್ದರು. ಆದರೆ ಆ ದಿನ ಕೃತ್ಯ ನಡೆಸಿದರೆ ಹೆಚ್ಚಿನ ಬಂದೋಬಸ್ತ್ ಇರುವ ಹಿನ್ನೆಲೆಯಲ್ಲಿ ಪೊಲೀಸರ ಕೈಗೆ ಸಿಕ್ಕಿ ಬೀಳುವ ಸಾಧ್ಯತೆ ಇದ್ದ ಕಾರಣ 2 ದಿನಗಳ ಮೊದಲೇ ಸಂಚು ರೂಪಿಸಿದ್ದರು ಎಂದು ನಗರ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ಸುದ್ದಿಗಾರರಿಗೆ ತಿಳಿಸಿದರು.

ಪೊಲೀಸರ ಕೊಲ್ಲಲು ಮಂಗಳೂರಿನಲ್ಲಿ ಹುಟ್ಟಿಕೊಂಡಿದೆ ಮಾಯಾ ಗ್ಯಾಂಗ್; ಗೋಲಿಬಾರ್‌ಗೆ ಪ್ರತೀಕಾರ! ..

ನಶೆಯಲ್ಲಿದ್ದ ಅಪ್ರಾಪ್ತ: ಆರಂಭದಲ್ಲಿ ಈ ಕೃತ್ಯವನ್ನು ಈಗಾಗಲೇ ಅಪರಾಧದ ಹಿನ್ನೆಲೆ ಹೊಂದಿರುವ ಅನೀಶ್‌ ಎಂಬಾತ ನಡೆಸಲು ಮುಂದಾಗಿದ್ದ. ಆದರೆ ಪೊಲೀಸರಿಗೆ ಅನುಮಾನ ಹೆಚ್ಚುವ ಸಾಧ್ಯತೆ ಹಿನ್ನೆಲೆಯಲ್ಲಿ ಅಪ್ರಾಪ್ತ ಬಾಲಕನನ್ನು ಈ ಕೃತ್ಯಕ್ಕಾಗಿ ಆಯ್ಕೆ ಮಾಡಿಕೊಂಡಿದ್ದರು. ಅವನಿಗೆ ಅಮಲಿನ ಮಾತ್ರೆ ನೀಡಿ ಇತರರು ಕೃತ್ಯಕ್ಕೆ ಪ್ರಚೋದನೆ ನೀಡಿದ್ದರು. ಸಂದರ್ಭಕ್ಕನುಸಾರವಾಗಿ ಚೂರಿಯಿಂದ ಇರಿಯಲು ಬಾಲಕನಿಗೆ ತಿಳಿಸಲಾಗಿತ್ತು. ಅದರಂತೆ ಈ ಕೃತ್ಯ ಎಸಗಿದಾಗ ಅದೃಷ್ಟವಶಾತ್‌ ಹೆಡ್‌ಕಾನ್‌ ಸ್ಟೇಬಲ್‌ ಕೈ ಅಡ್ಡಹಿಡಿದ ಕಾರಣ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಯುಕ್ತರು ತಿಳಿಸಿದರು.

ವೈದ್ಯರ ಸಲಹೆ ಮೇರೆಗೆ ಮೆಡಿಕಲ್‌ನಲ್ಲಿ ನೀಡಬಹುದಾದ (ಬಹುತೇಕ ಹಿರಿಯ ನಾಗರಿಕರಿಗೆ ನೀಡುವ) ಮಾತ್ರೆ ಸೇವಿಸಿ ಬಾಲಕ ಈ ಕೃತ್ಯ ಎಸಗಿದ್ದಾನೆ. ಮೆಡಿಕಲ್‌ ಸ್ಟೋರ್‌ನಲ್ಲಿ ಕೆಲಸಕ್ಕಿರುವ ಮುಹಮ್ಮದ್‌ ನವಾಝ್‌ ಸ್ಟ್ರಿಪ್‌ ಒಂದಕ್ಕೆ .600ಗೆ ಈ ಮಾತ್ರೆ ಮಾರಾಟ ಮಾಡಿದ್ದ ಎಂದು ಮಾಹಿತಿ ನೀಡಿದರು.

ಪ್ರತೀಕಾರಕ್ಕಾಗಿ ‘ಮಾಯಾ ಗ್ಯಾಂಗ್‌’!

ಆರೋಪಿಗಳು ಸೇರಿ ತಮ್ಮ ತಂಡಕ್ಕೆ ‘ಮಾಯಾ ಗ್ಯಾಂಗ್‌’ ಎಂದು ಹೆಸರಿಟ್ಟಿದ್ದು, ಸ್ಥಳೀಯವಾಗಿ ಅದೇ ಹೆಸರಿನಿಂದ ಗುರುತಿಸಿಕೊಂಡಿದ್ದರು. ಈ ತಂಡದ ಜತೆಗೆ ಇನ್ನೊಂದು ತಂಡ ಸೇರಿ ಅತ್ಯಂತ ವ್ಯವಸ್ಥಿತವಾಗಿ ಈ ಕೃತ್ಯ ಎಸಗಿರುವುದು ಗೊತ್ತಾಗಿದೆ. ಆರೋಪಿಗಳ ಬಗ್ಗೆ ಸಾಕಷ್ಟುಮಾಹಿತಿ ಕಲೆ ಹಾಕಲಾಗಿದ್ದು, ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ. ಅಮಲಿನ ಮಾತ್ರೆ ನೀಡಿದ ಮೆಡಿಕಲ್‌ ಮಾಲೀಕರನ್ನೂ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಪೊಲೀಸ್‌ ಆಯುಕ್ತ ಶಶಿಕುಮಾರ್‌ ತಿಳಿಸಿದರು.