ಜಾನುವಾರು ಸಾಗಾಟ ಸುರಕ್ಷೆಗೆ ಹೊಸ ಆ್ಯಪ್‌

ಇಂದು ನಾನಾ ವಿಧದ ಮೊಬೈಲ್‌ ಆ್ಯಪ್‌ಗಳು ಲಭ್ಯವಿದೆ. ಜನ ತಮಗೆ ಬೇಕಾಗಿರುವುದನ್ನು ಆರಿಸಿ ಬಳಸುತ್ತಾರೆ. ಇದೀಗ ಕಾನೂನು ಬದ್ಧವಾಗಿ ಗೋಸಾಗಿಸುವವರ ಮೇಲೆ ನಡೆಯುವ ಹಲ್ಲೆ ತಡೆಯುವ ನಿಟ್ಟಿನಲ್ಲಿ ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಈ ಆ್ಯಪ್‌ನಲ್ಲಿ ಸಾಗಾಟ ಮಾಡುವ ಜಾನುವಾರು, ಲೈಸೆನ್ಸ್ ಹೀಗೆ ಎಲ್ಲ ಮಾಹಿತಿಗಳೂ ಅಡಕವಾಗಿರಲಿದೆ.

New Mobile Application launched for cattle transport in Mangalore

ಮಂಗಳೂರು(ಆ.07): ಜಾನುವಾರುಗಳನ್ನು ಕಾನೂನುಬದ್ಧವಾಗಿ ಸಾಗಿಸುವವರ ಸುರಕ್ಷತೆಗಾಗಿ ದ.ಕ. ಜಿಲ್ಲಾಡಳಿತದಿಂದ ಹೊಸ ಮೊಬೈಲ್‌ ಆ್ಯಪ್‌ ‘ಎಲ್‌ಎಲ್‌ಸಿ’ (ಲೈವ್‌ಸ್ಟಾಕ್‌ ಲಾಜಿಸ್ಟಿಕ್‌ ಕಂಟ್ರೋಲ್‌) ತಯಾರಿಸಲಾಗಿದೆ. ಎರಡು ದಿನದೊಳಗೆ ಈ ಆ್ಯಪ್‌ ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ.

ಕಾನೂನು ಪ್ರಕಾರ ಎಲ್ಲ ದಾಖಲೆಗಳನ್ನು ಇಟ್ಟುಕೊಂಡು ಜಾನುವಾರು ಸಾಗಿಸುತ್ತಿದ್ದರೂ ಅವರಿಗೆ ಬಾಹ್ಯ ವ್ಯಕ್ತಿಗಳಿಂದ ಅನಗತ್ಯ ಕಿರುಕುಳ ಉಂಟಾಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಮುಂಬರುವ ಬಕ್ರೀದ್‌ ಹಬ್ಬದ ಹಿನ್ನೆಲೆಯಲ್ಲಿ ಜಾನುವಾರು ಸಾಗಾಟಗಾರರ ಮನವಿಯ ಮೇರೆಗೆ ಈ ಆ್ಯಪ್‌ ತಯಾರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನೋಂದಣಿ, ಲೈಸೆನ್ಸ್‌ ಡೀಟೇಲ್ಸ್ ಆ್ಯಪ್‌ನಲ್ಲಿ ಲಭ್ಯ:

ದನ, ಕುರಿ, ಎಮ್ಮೆ ಇತ್ಯಾದಿ ಜಾನುವಾರುಗಳ ಕಾನೂನುಬದ್ಧ ಸಾಗಾಟಗಾರರು, ರೈತರು ಈ ಆ್ಯಪ್‌ ಡೌನ್ಲೋಡ್‌ ಮಾಡಿಕೊಳ್ಳಬಹುದು. ಅದರಲ್ಲಿ ತಮ್ಮ ಮೊಬೈಲ್‌ ಸಂಖ್ಯೆಯನ್ನು ನಮೂದಿಸಿ ಒಟಿಪಿ (ಒನ್‌ಟೈಮ್‌ ಪಾಸ್‌ವರ್ಡ್‌) ಪಡೆದ ಬಳಿಕ ಸಾಗಿಸಲಾಗುತ್ತಿರುವ ಜಾನುವಾರುಗಳ ಸಂಖ್ಯೆ, ಜಾನುವಾರುಗಳನ್ನು ಎಲ್ಲಿಂದ ಎಲ್ಲಿಗೆ ಸಾಗಿಸಲಾಗುತ್ತಿದೆ, ವಾಹನದ ನೋಂದಣಿ ಸಂಖ್ಯೆಯನ್ನು ನಮೂದಿಸಬಹುದು. ದನ, ಜಾನುವಾರುಗಳನ್ನು ಸಾಗಿಸುತ್ತಿರುವ ಫೋಟೋಗಳನ್ನೂ ಅಪ್‌ಲೋಡ್‌ ಮಾಡಬಹುದು. ಈ ಮಾಹಿತಿ ಕೂಡಲೆ ಅಧಿಕಾರಿಗಳಿಗೆ ತಲುಪಿ, ಬಾಹ್ಯ ಶಕ್ತಿಗಳಿಂದ ಸಾಗಾಟದಾರರಿಗೆ ಕಿರುಕುಳ ಆಗುವುದನ್ನು ತಪ್ಪಿಸಲು ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಕಡ್ಡಾಯವಲ್ಲ:

ಮೊಬೈಲ್‌ ಅಪ್ಲಿಕೇಶನ್‌ ಲಿಂಕ್‌ನ್ನು ಈಗಾಗಲೇ ಜಾನುವಾರು ವ್ಯಾಪಾರಿಗಳಿಗೆ, ದನ ಸಾಗಣೆಯಲ್ಲಿ ತೊಡಗಿರುವ ಸಂಘಗಳಿಗೆ ಕಳುಹಿಸಲಾಗಿದೆ. ಇದು ಕಡ್ಡಾಯವಲ್ಲ. ಹೀಗೆ ಮಾಡುವುದರಿಂದ ಜಾನುವಾರುಗಳ ಸಾಗಾಟದ ಕುರಿತು ಮಾಹಿತಿ ಪಡೆಯಲು ಕೂಡ ಸಹಕಾರಿಯಾಗಲಿದೆ ಎಂದರು.

ಭವಿಷ್ಯದಲ್ಲಿ ಈ ಮೊಬೈಲ್‌ ಅಪ್ಲಿಕೇಶನ್‌ನ್ನು ಸಾರಿಗೆಗೆ ಆನ್‌ಲೈನ್ ಅನುಮೋದನೆ ನೀಡಲು, ದಾಖಲೆಗಳನ್ನು ಅಪ್ಲೋಡ್‌ ಮಾಡಲು, ಜಾನುವಾರುಗಳನ್ನು ಸಾಗಿಸುವ ವಾಹನಗಳನ್ನು ಪತ್ತೆ ಹಚ್ಚಲು ಬಳಸಬಹುದು ಎಂದು ಹೇಳಿದರು.

ಜಾನುವಾರು ಸಾಗಾಟ ಮಾಡುವವರು ದನಗಳನ್ನು ಎಲ್ಲಿಂದ ಪಡೆಯುತ್ತಾರೆ ಎಂಬುದನ್ನು ತೋರಿಸುವ ದಾಖಲೆ ಹೊಂದಿರಬೇಕು. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಜಾನುವಾರುಗಳ ಸಾಗಾಟವನ್ನು ಸುಗಮಗೊಳಿಸಲು ಉಡುಪಿ ಜಿಲ್ಲಾಧಿಕಾರಿಯೊಂದಿಗೂ ಈ ಕುರಿತು ಚರ್ಚಿಸಲಾಗುವುದು ಎಂದು ಸಸಿಕಾಂತ್‌ ಸೆಂಥಿಲ್‌ ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮೇಕಾಂತ್‌, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಮುಹಮ್ಮದ್‌ ನಝೀರ್‌ ಇದ್ದರು.

ಕಾನೂನು ಕೈಗೆತ್ತಿದರೆ ಜಾಗ್ರತೆ: ಡೀಸಿ ಖಡಕ್‌ ವಾರ್ನಿಂಗ್‌:

ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುವವರು ಹಾಗೂ ಅಕ್ರಮ ಸಾಗಾಟದ ಹೆಸರಿನಲ್ಲಿ ಕಾನೂನು ಕೈಗೆತ್ತಿ ದಾಳಿ ನಡೆಸುವವರ ವಿರುದ್ಧ ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಖಡಕ್‌ ವಾರ್ನಿಂಗ್‌ ನೀಡಿದ್ದಾರೆ. ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ದಾಳಿ ನಡೆಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದಿದ್ದಾರೆ.

ಅಕ್ರಮ ಗೋ ಸಾಗಣೆಗೆ ಮಂಗಳೂರು ಮುಸ್ಲಿಮರ ವಿರೋಧ

ಅಕ್ರಮ ಸಾಗಾಟದ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದರೆ ಅದನ್ನು ಸಂಬಂಧಪಟ್ಟಅಧಿಕಾರಿಗಳ ಗಮನಕ್ಕೆ ತರಬೇಕು. ಅದಕ್ಕಾಗಿ ಸಹಾಯವಾಣಿ ಸಂಖ್ಯೆ 1077 ಅಥವಾ 100 ಕ್ಕೆ ಕರೆ ಮಾಡಬೇಕು. ಇದನ್ನು ಬಿಟ್ಟು ದಾಳಿ ನಡೆಸಲು ಹೊರಟರೆ ಕಠಿಣ ಕಾನೂನು ಕ್ರಮಕ್ಕೆ ಗುರಿಯಾಗಬೇಕಾಗುತ್ತದೆ ಎಂದರು.

4-5 ಮಂದಿಯಿಂದ ಸೌಹಾರ್ದತೆ ಹಾಳು: ತಮ್ಮ ಧರ್ಮಗಳ ಪ್ರಕಾರ ಎಲ್ಲರಿಗೂ ಹಬ್ಬಗಳನ್ನು ಸಂಭ್ರಮದಿಂದ ಆಚರಿಸಲು ಹಕ್ಕಿದೆ. ಅದಕ್ಕೆ ಎಲ್ಲರೂ ಸಹಕರಿಸಬೇಕು. ಅದಕ್ಕೆ ತೊಂದರೆ ನೀಡಿದರೆ ಸಹಿಸಲಾಗದು ಎಂದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ಕೇವಲ ನಾಲ್ಕೈದು ಮಂದಿಯಿಂದ ಜಿಲ್ಲೆಯ ಸೌಹಾರ್ದತೆ ಹಾಳಾಗುತ್ತಿದೆ. ಅಂಥ ಕೃತ್ಯಗಳಿಗೆ ಅವಕಾಶ ನೀಡುವುದಿಲ್ಲ. ಇದಕ್ಕೆ ಜಿಲ್ಲೆಯ ಎಲ್ಲ ಸಾರ್ವಜನಿಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಜಾನುವಾರು ಅಕ್ರಮ ಸಾಗಾಟ ತಡೆಗೆ 5 ಗಸ್ತು ವಾಹನ

ಜಿಲ್ಲೆಯಲ್ಲಿ ಜಾನುವಾರು ಅಕ್ರಮ ಸಾಗಾಟ ತಡೆಗಟ್ಟುವ ಉದ್ದೇಶಕ್ಕಾಗಿಯೇ 5 ವಿಶೇಷ ಗಸ್ತು ವಾಹನಗಳನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮಿ ಪ್ರಸಾದ್‌ ತಿಳಿಸಿದ್ದಾರೆ. ಬಂಟ್ವಾಳದಲ್ಲಿ 2 ಗಸ್ತು ವಾಹನಗಳು ಹಾಗೂ ಪುತ್ತೂರು, ಸುಳ್ಯ, ಬೆಳ್ತಂಗಡಿಯಲ್ಲಿ ತಲಾ ಒಂದು ವಾಹನಗಳನ್ನು ಗಸ್ತಿಗೆ ನಿಯೋಜಿಸಲಾಗಿದೆ. ಜಾನುವಾರು ಅಕ್ರಮ ಸಾಗಾಟದ ಕುರಿತು ಸಾರ್ವಜನಿಕರಿಂದ ಬರುವ ಎಲ್ಲ ದೂರುಗಳಿಗೆ ಶೀಘ್ರ ಸ್ಪಂದಿಸಿ ಕ್ರಮ ಜರುಗಿಸಲಾಗುವುದು ಎಂದರು.

ಜಾನುವಾರು ಅಕ್ರಮ ಪ್ರಕರಣಗಳು (ಜನವರಿಯಿಂದ ಈವರೆಗೆ- ಕಮಿಷನರೇಟ್‌ ಹೊರತುಪಡಿಸಿ): 6 ಜಾನುವಾರು ಕಳ್ಳತನ ಪ್ರಕರಣಗಳು ನಡೆದಿದ್ದು, ಅವುಗಳಲ್ಲಿ 5 ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆಹಚ್ಚಲಾಗಿದೆ. 19 ಜಾನುವಾರು ಅಕ್ರಮ ಸಾಗಾಟ ಪ್ರಕರಣಗಳು, ಜಾನುವಾರುಗಳನ್ನು ಅಕ್ರಮವಾಗಿ ಹತ್ಯೆ ಮಾಡಿದ 12 ಪ್ರಕರಣಗಳು ನಡೆದಿವೆ ಎಂದು ಲಕ್ಷ್ಮೇ ಪ್ರಸಾದ್‌ ಮಾಹಿತಿ ನೀಡಿದರು.

Latest Videos
Follow Us:
Download App:
  • android
  • ios