Mysuru : ಕೆಂಪೇಗೌಡರ ಸ್ಮರಣೆ ಹೊತ್ತಲ್ಲಿ ದೇವೇಗೌಡರ ಕಡೆಗಣನೆ
ನಾಡಪ್ರಭು ಕೆಂಪೇಗೌಡರ 108 ಅಡಿಯ ಪ್ರತಿಮೆಯ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಕಡೆಗಣಿಸಿರುವುದು ಸರಿಯಲ್ಲ ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹಾಗೂ ಮೈಸೂರು ಮಹಾನಗರ ಪಾಲಿಕೆಯ ಸದಸ್ಯ ಕೆ.ವಿ. ಶ್ರೀಧರ್ ಖಂಡಿಸಿದ್ದಾರೆ.
ಮೈಸೂರು (ನ.12): ನಾಡಪ್ರಭು ಕೆಂಪೇಗೌಡರ 108 ಅಡಿಯ ಪ್ರತಿಮೆಯ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಕಡೆಗಣಿಸಿರುವುದು ಸರಿಯಲ್ಲ ಎಂದು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹಾಗೂ ಮೈಸೂರು ಮಹಾನಗರ ಪಾಲಿಕೆಯ ಸದಸ್ಯ ಕೆ.ವಿ. ಶ್ರೀಧರ್ ಖಂಡಿಸಿದ್ದಾರೆ.
ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ಸಮುದಾಯದ ಆಸ್ಮಿತೆ ಮಾತ್ರವಲ್ಲದೆ, ಈ ನಾಡಿನ ಹೆಮ್ಮೆಯ ರಾಜ. ಅವರ ಹೆಸರಿನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮಕ್ಕೆ ಅದೇ ಸಮುದಾಯದ ಹಿರಿಯ ರಾಜಕೀಯ ಮುತ್ಸದ್ದಿ ಎಚ್.ಡಿ. ದೇವೇಗೌಡರನ್ನು ಆಹ್ವಾನಿಸದಿರುವುದು ರಾಜ್ಯ ಹಾಗೂ ಕೇಂದ್ರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರಗಳ ನಿರ್ಲಕ್ಷ್ಯತನದ ಪರಮಾವಧಿ ಎಂದು ಕಿಡಿಕಾರಿದ್ದಾರೆ.
ದೇವೇಗೌಡರು ಒಕ್ಕಲಿಗ ಸಮುದಾಯದ ಪ್ರಶ್ನಾತೀತ ನಾಯಕ ಎಂಬುದು ಒಂದೆಡೆಯಾದರೆ, ಕರ್ನಾಟಕದಿಂದ ಪ್ರಧಾನಿಯಾಗಿ ಆಯ್ಕೆಯಾದ ಏಕಮೇವಾದ್ವಿತೀಯ ಎಂಬ ಅಂಶವನ್ನು ಬಿಜೆಪಿ ಅರಿಯಬೇಕಿತ್ತು. ಓರ್ವ ಮಾಜಿ ಪ್ರಧಾನಿ ಎಂಬ ಹಿನ್ನೆಲೆಯಲ್ಲಾದರೂ ದೇವೇಗೌಡರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕಿತ್ತು. ದುರಾದೃಷ್ಟವಶಾತ್ ದೇವೇಗೌಡರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದಿರುವುದು ಈ ನೆಲಕ್ಕೆ ಬಿಜೆಪಿಗರು ಮಾಡಿದ ಅಪಮಾನ ಎಂದು ದೂರಿದ್ದಾರೆ.
ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನು ಬೆರಳೆಣಿಕೆ ದಿನಗಳು ಬಾಕಿ ಇರುವ ಹೊತ್ತಿನಲ್ಲಿ ಬಿಜೆಪಿಯ ಕ್ಷುಲ್ಲಕ ರಾಜಕಾರಣ ರಾಜ್ಯದ ಜನತೆ ಎದುರು ಬಟಾಬಯಲಾಗಿದೆ. ಪ್ರಧಾನಿ ಮೋದಿಯವರನ್ನು ಕರೆತಂದ ಮಾತ್ರಕ್ಕೆ ರಾಜ್ಯದ ಜನತೆ ಮರುಳಾಗಿ ಮತ ಹಾಕುವರೆಂಬ ಭ್ರಮೆಯ ಸುಳಿಯಲ್ಲಿ ಬಿಜೆಪಿ ಸಿಲುಕಿದ್ದು, ಇದಕ್ಕೆ ತಕ್ಕ ಉತ್ತರ ಸದ್ಯದಲ್ಲಿಯೇ ಸಿಗಲಿದೆ ಎಂದು ತಿಳಿಸಿದ್ದಾರೆ.
ದಶಕಗಳ ಕಾಲ ರಾಜ್ಯದಲ್ಲಿ ನೆಲೆ ಕಂಡುಕೊಳ್ಳಲು ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿದ್ದ ಬಿಜೆಪಿಗೆ ನೆಲೆ ಕಲ್ಪಿಸಿದ್ದು ಒಕ್ಕಲಿಗ ಸಮುದಾಯ ಎಂಬುದನ್ನು ಮರೆಯಬಾರದು. ಅನಿವಾರ್ಯ ರಾಜಕೀಯ ಸಂದರ್ಭದಲ್ಲಿ ತೆಗೆದುಕೊಂಡ ಕೆಲ ನಿರ್ಧಾರಗಳಿಂದಾಗಿ ಬಿಜೆಪಿ ರಾಜ್ಯದಲ್ಲಿ ಬೇರೂರಿತೇ ಹೊರತು, ಮೂಲತಃ ತನ್ನ ಸ್ವಶಕ್ತಿಯಿಂದ ಬಿಜೆಪಿ ರಾಜ್ಯದಲ್ಲಿ ಸ್ಥಾಪನೆಗೊಂಡಿಲ್ಲ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ. ಪ್ರತಿ ಹಂತದಲ್ಲೂ ಕ್ಷುಲ್ಲಕ ರಾಜಕೀಯದಲ್ಲಿ ತೊಡಗಿರುವ ಬಿಜೆಪಿಯ ಇತಿಹಾಸವನ್ನು ಇದೀಗ ಜನರಿಗೆ ನೆನಪಿಸುವ ಕೆಲಸವನ್ನು ತಕ್ಷಣ ಒಕ್ಕಲಿಗ ಜನಾಂಗ ಆರಂಭಿಸಲಿದೆ ಎಂದು ಹೇಳಿದ್ದಾರೆ.
ದೇವೇಗೌಡರು ಒಕ್ಕಲಿಗ ಸಮುದಾಯದ ಪ್ರಶ್ನಾತೀತ ನಾಯಕ ಎಂಬುದು ಎಷ್ಟುಸತ್ಯವೋ, ರಾಜ್ಯದ ರೈತರು ಹಾಗೂ ಕಾರ್ಮಿಕರ ಅಂತಃಸತ್ವ ಎಂಬುದೂ ಅಷ್ಟೇ ಸತ್ಯ. ಅಂತಹ ದೇವೇಗೌಡರನ್ನು ಸಂಪೂರ್ಣ ನಿರ್ಲಕ್ಷ್ಯಿಸಿರುವುದು ಬಿಜೆಪಿಗರ ದುರಹಂಕಾರಕ್ಕೆ ಸಾಕ್ಷಿಯಾಗಿದ್ದು, ಎಲ್ಲದಕ್ಕೂ ಕಾಲವೇ ಉತ್ತರಿಸಲಿದೆ. ಮೋದಿ, ಅಮಿತ್ ಶಾ ಎಂಬ ಭ್ರಮೆಯಲ್ಲಿ ಮುಳುಗಿರುವ ಬಿಜೆಪಿಗರಿಗೆ ಭವಿಷ್ಯದ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯ ತಕ್ಕ ಪಾಠ ಕಲಿಸಲೇಬೇಕಾದ ಅನಿವಾರ್ಯತೆ ಇದೆ. ಮಾತ್ರವಲ್ಲ, ಇಡೀ ಸಮುದಾಯ ಬಿಜೆಪಿಯ ಈ ನಡೆಯನ್ನು ಒಕ್ಕೊರಲಿನಿಂದ ಖಂಡಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ದೇವೇಗೌಡರಿಗೆ ತಲುಪದ ಆಹ್ವಾನ
ಬೆಂಗಳೂರು: ರಾಜ್ಯದಲ್ಲಿ ನಿರ್ಮಾಣವಾಗಿರುವ ನಾಡಪ್ರಭು ಕೆಂಪೇಗೌಡರ ಪ್ರಗತಿಯ ಪ್ರತಿಮೆ ಲೋಕಾರ್ಪಣೆ ಮಾಡಿದ ಸರ್ಕಾರಕ್ಕೆ ಎಲ್ಲೆಡೆಯಿಂದ ಶುಭಾಶಯಗಳು ಹರಿದುಬಂದಿವೆ. ಆದರೆ, ನಮ್ಮ ನಾಡಿನವರಾದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ಆಹ್ವಾನ ನೀಡಲಿಲ್ಲ ಎಂಬ ಜೆಡಿಎಸ್ ಆರೋಪವು ಸರ್ಕಾರಕ್ಕೆ ಕೊಂಚ ಇರಿಸು-ಮುರಿಸು ತರಿಸುತ್ತಿದೆ. ಈ ಆರೋಪವನ್ನು ತಿರಸ್ಕರಿಸಿದ ಸರ್ಕಾರ, ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಜಿ ಪ್ರಧಾನಿಗೆ ಆಹ್ವಾನ ನೀಡಿರುವ ಪ್ರತಿಯನ್ನು ಹಂಚಿಕೊಂಡಿದೆ.
ವಿಮಾನ ನಿಲ್ದಾಣ (Airport)ದಲ್ಲಿ ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಬೆನ್ನಲ್ಲೇ ಸರಣಿ ಟ್ವೀಟ್‌ಗಳನ್ನು ಮಾಡಿದ ಜೆಡಿಎಸ್ (JDS)ಸರ್ಕಾರದ ವಿರುದ್ಧ ಹರಿಹಾಯ್ದಿದೆ. 'ನಾಡಪ್ರಭು ಕೆಂಪೇಗೌಡರ ನಂತರ ಬೆಂಗಳೂರು ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ ಮತ್ತು ಕನ್ನಡ ನೆಲದಿಂದ ಪ್ರಧಾನಿ ಆಗಿದ್ದ ಏಕೈಕ ಕನ್ನಡಿಗರಾದ ಎಚ್.ಡಿ. ದೇವೇಗೌಡ (H.D.Devegowda) ಅವರನ್ನು ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಆಹ್ವಾನ ಮಾಡದಿರುವುದು ಸಮಸ್ತ ಕನ್ನಡಿಗರಿಗೆ ಮಾಡಿದ ಅಪಮಾನ ಆಗಿದೆ. ಪ್ರತಿಮೆ ಸ್ಥಾಪನೆ ಕಾಮಗಾರಿಗೆ ಅಡಿಗಲ್ಲು (footstone) ಹಾಕುವ ಕಾರ್ಯಕ್ರಮಕ್ಕೆ ದೇವೇಗೌಡರನ್ನು ಆಹ್ವಾನಿಸಿದ ಬಿಜೆಪಿ ಸರ್ಕಾರ, ಈಗ ಪ್ರತಿಮೆ ಲೋಕಾರ್ಪಣೆ ಸಮಾರಂಭಕ್ಕೆ ಏಕೆ ಆಹ್ವಾನ ಮಾಡಲಿಲ್ಲ. ಸ್ಥಳೀಯ ಮಟ್ಟದ ಕಾರ್ಯಕ್ರಮ ಆಗಿದ್ದಿದ್ದರೆ ಇದನ್ಜು ಪ್ರಶ್ನೆ ಮಾಡುತ್ತಿರಲಿಲ್ಲ. ಆದರೆ, ನಾಡಪ್ರಭುಗಳ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಬರುತ್ತಾರೆ ಎಂದರೆ, ನಮ್ಮ ಹೆಮ್ಮೆಯ ಮಾಜಿ ಪ್ರಧಾನಿಗಳನ್ನು ಅಧಿಕೃತವಾಗಿ ಕರೆಯಲೇಬೇಕಿತ್ತು. ಈ ಬಗ್ಗೆ ಅನಾದರ ತೋರಿದ್ದು ಅಪಾರ ನೋವುಂಟು ಮಾಡಿದೆ' ಎಂದು ಅಸಮಾಧಾನ ವ್ಯಕ್ತಪಡಿಸಲಾಗಿದೆ.