ಬೆಂಗಳೂರು(ಫೆ.26): ಗುತ್ತಿಗೆದಾರನ ಹೆಸರಿನಲ್ಲಿ ಹಣ ಲಪಟಾಯಿಸಿದ ಪ್ರಕರಣದಲ್ಲಿ ಎಷ್ಟೇ ಉನ್ನತ ಅಧಿಕಾರಿ ಹಾಗೂ ಪ್ರಭಾವಿ ವ್ಯಕ್ತಿ ಭಾಗಿಯಾಗಿದ್ದರೂ ತನಿಖೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ತಿಳಿಸಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಗುತ್ತಿಗೆದಾರರನ ಹೆಸರಿನಲ್ಲಿ ಅಧಿಕಾರಿಗಳೇ ನಕಲಿ ಬ್ಯಾಂಕ್‌ ಖಾತೆ ಸೃಷ್ಟಿಸಿ 4.15 ಕೋಟಿ ರು. ಲಪಟಾಯಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಂಟಿಎಫ್‌ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ 3.86 ಕೋಟಿ ರು. ವಶಕ್ಕೆ ಪಡೆದುಕೊಂಡಿದ್ದಾರೆ. ಯಾರನ್ನೂ ರಕ್ಷಿಸುವ ಪ್ರಯತ್ನವನ್ನು ಮಾಡುವುದಿಲ್ಲ ಎಂದು ಹೇಳಿದ್ದಾರೆ. ಬಿಎಂಟಿಎಫ್‌ ನಿಂದ ಸೂಕ್ತ ರೀತಿಯ ತನಿಖೆ ಆಗುವುದಿಲ್ಲ, ಉನ್ನತ ತನಿಖಾ ಸಂಸ್ಥೆಗೆ ಪ್ರಕರಣವನ್ನು ವಹಿಸುವಂತೆ ಯಾವುದೇ ಸಲಹೆ ತಮ್ಮ ಬಳಿ ಬಂದಿಲ್ಲ. ಬಿಎಂಟಿಎಫ್‌ ಅಧಿಕಾರಿಗಳು ಸಮರ್ಥವಾಗಿ ತನಿಖೆ ನಡೆಸುತ್ತಿದ್ದಾರೆ ಎಂದರು.

ಮತ್ತೆ ಕೆಲವರಿಗೆ ಬಿಎಂಟಿಎಫ್‌ ನೋಟಿಸ್‌:

ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಂಟಿಎಫ್‌ ಅಧಿಕಾರಿಗಳು ಹಂಪಿನಗರದ ಜನತಾ ಕೋ-ಆಪರೇಟಿವ್‌ ಬ್ಯಾಂಕ್‌ನ ಮ್ಯಾನೇಜರ್‌, ಗುತ್ತಿಗೆದಾರ ಮಂಜುನಾಥ್‌ ಹಾಗೂ ಯೂನಿಯನ್‌ ಲೀಡರ್‌ ನಲ್ಲಪ್ಪ ಎಂಬುವವರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ. ಆದರೆ, ಈ ಎಲ್ಲರೂ ತಲೆಮರೆಸಿಕೊಂಡಿದ್ದು, ಬಿಎಂಟಿಎಫ್‌ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ.

ಪ್ರಕರಣದಲ್ಲಿ ಬಿಬಿಎಂಪಿಯ ಮಾಜಿ ಮೇಯರ್‌ ಒಬ್ಬರ ಹೆಸರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಬಿಎಂಟಿಎಫ್‌ ಅಧಿಕಾರಿಗಳು ಮಾಜಿ ಮೇಯರ್‌ ಸಂಬಂಧಿಕರನ್ನು ವಿಚಾರಣೆ ನಡೆಸಿದ್ದಾರೆ. ಜತೆಗೆ ಮಾಜಿ ಮೇಯರ್‌ ಅವರ ಸಂಬಂಧಿಯ ಬ್ಯಾಂಕ್‌ ಖಾತೆ ಜಪ್ತಿ ಮಾಡಲಾಗಿದೆ ಎಂದು ಬಿಎಂಟಿಎಫ್‌ ಮೂಲಗಳು ಮಾಹಿತಿ ನೀಡಿವೆ.

BBMP ವಾರ್ಡ್‌ ಮರು ವಿಂಗಡಣೆ: ಬದಲಾಗುತ್ತಾ ವಾರ್ಡ್ ನಂಬರ್..?

ಇನ್ನು ಪ್ರಕರಣದಲ್ಲಿ ಪಾಲಿಕೆಯ ಮಾಜಿ ಮೇಯರ್‌ ಹಾಗೂ ಮತ್ತಿತರ ಪಾಲಿಕೆ ಸದಸ್ಯರು ಭಾಗಿಯಾಗಿರುವ ಹಿನ್ನೆಲೆಯಲ್ಲಿ ಬಿಎಂಟಿಎಫ್‌ನಿಂದ ಸೂಕ್ತ ರೀತಿಯ ತನಿಖೆ ಆಗುವುದು ಅನುಮಾನ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಎಸಿಬಿಯಿಂದ ತನಿಖೆಗೆ ನೀಡಬೇಕು ಎಂಬ ಅಭಿಪ್ರಾಯವನ್ನು ಬಿಬಿಎಂಪಿ ಸದಸ್ಯರು ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತಾ ವಾಸುದೇವ್‌ ಅವರು ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.