ಸುಬ್ರಹ್ಮಣ್ಯ [ಜು.29]: ಶಿರಾಡಿ ಘಾಟಿಯ ಎಡಕುಮೇರಿ ರೈಲು ಹಳಿಯಲ್ಲಿ ಗಸ್ತು ನಿರತ ಸಿಬ್ಬಂದಿಗೆ ಅಪರಿಚಿತ ವ್ಯಕ್ತಿಗಳು ಬೆದರಿಕೆ ಒಡ್ಡಿದ ಘಟನೆ ನಡೆದ ಬಳಿಕ ನಕ್ಸಲ್‌ ನಿಗ್ರಹ ಪಡೆಯ (ಎಎನ್‌ಎಫ್‌) ಯೋಧರು ಈ ಭಾಗದಲ್ಲಿ ತೀವ್ರವಾದ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. 

ಭಾನುವಾರ 18ರಿಂದ 20 ಜನ ಎಎನ್‌ಎಫ್‌ ಯೋಧರ ತಂಡವು ಗುಂಡ್ಯ, ಅಡ್ಡಹೊಳೆ, ಮಿತ್ತಮಜಲು ರಕ್ಷಿತಾರಣ್ಯ ಒಳಭಾಗದಲ್ಲಿ ಕೂಂಬಿಂಗ್‌ ಕಾರ್ಯಾಚರಣೆ ನಡೆಸಿದೆ. ಕಾರ್ಕಳ ಎಎನ್‌ಎಫ್‌ ಪಡೆಯ ಇನ್ಸ್‌ಪೆಕ್ಟರ್‌ ಸಂತೋಷ್‌ ಅವರ ನೇತೃತ್ವದಲ್ಲಿ ದಕ್ಷಿಣ ಕನ್ನಡ ಮತ್ತು ಸಕಲೇಶಪುರ ಗಡಿಭಾಗದ ರಕ್ಷಿತಾರಣ್ಯದಲ್ಲಿ ತೀವ್ರವಾದ ಶೋಧ ಕಾರ್ಯ ನಡೆಸಿದರು. 

ಎಡಕುಮೇರಿ ಸುರಂಗ ಮಾರ್ಗದ ಸಮೀಪ ಕರ್ತವ್ಯ ನಿರತ ರೈಲ್ವೆ ಕಾರ್ಮಿಕ ರಾಜು ಅವರಿಗೆ ಪಿಸ್ತೂಲ್‌ ದಾರಿಗಳಿಬ್ಬರು ಜು.22ರಂದು ಬೆದರಿಕೆ ಹಾಕಿದ್ದರು. ಅವರು ಶಂಕಿತ ನಕ್ಸಲರು ಎಂಬ ಅನುಮಾನದ ಮೇರೆಗೆ ಆ ಬಳಿಕ ದಕ್ಷಿಣ ಕನ್ನಡ, ಕೊಡಗು ಮತ್ತು ಸಕಲೇಶಪುರ ಜಿಲ್ಲೆಗಳ ಗಡಿಭಾಗದ ಅರಣ್ಯಪ್ರದೇಶದಲ್ಲಿ ಎಎನ್‌ಎಫ್‌ ಯೋಧರು ತೀವ್ರವಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.