ಆರ್‌.ತಾರಾನಾಥ್‌

ಚಿಕ್ಕಮಗಳೂರು [ಆ.21]:  ಮಲೆನಾಡಿಗೂ, ಮಳೆಗೂ ಒಂದು ರೀತಿ ಸಹೋದರಿಯರ ಸಂಬಂಧವಿದ್ದಂತ. ಮುಂಗಾರು ಮಳೆ ಬಂದರೆ ಮಾತ್ರ ಪ್ರಕೃತಿಯ ಮಡಿಲು ಅಚ್ಚಹಸಿರಾಗಿರುತ್ತದೆ. ಮಳೆಗಾಲದ ಸುಂದರಿಯರು ಎಂದು ಕರೆಸಿಕೊಂಡಿರುವ ಝರಿಗಳು ಶೋಲಾಕಾಡಿನ ಮಧ್ಯದಲ್ಲಿ ಹಾದು ಹೋಗುತ್ತ ಪ್ರವಾಸಿಗರನ್ನು ಕೈಬಿಸಿ ಕರೆಯುತ್ತವೆ.

ಒಂದು ಕಾಲದಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ವರ್ಷದ 6 ತಿಂಗಳು ಭಾರಿ ಮಳೆ ಬರುತ್ತಿತ್ತು. ಇಲ್ಲಿನ ಜನರಿಗೆ ಮಳೆ ಹೊಸತೇನೂ ಅಲ್ಲ, ಅದಕ್ಕೆ ಹೊಂದಿಕೊಂಡೇ ಜೀವನ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ, ಆಗಸ್ಟ್‌ 2ರಿಂದ 14 ರವರೆಗೆ ಸುರಿದ ಭಾರಿ ಮಳೆಗೆ ಧರೆ ಕುಸಿದು, ನದಿ, ಹಳ್ಳಗಳು ತುಂಬಿ ಹರಿದ ಪರಿಣಾಮ 10 ಮಂದಿ ಪ್ರಾಣ ಕಳೆದುಕೊಂಡರು. ಇಷ್ಟುಸಂಖ್ಯೆಯಲ್ಲಿ ಮಳೆಯಿಂದ ಸಾವು ಸಂಭವಿಸಿರುವುದು ಇತ್ತೀಚಿನ ವರ್ಷಗಳಲ್ಲಿ ಇದೇ ಪ್ರಥಮ. ಅದರಲ್ಲೂ ಹೆಚ್ಚು ಮಂದಿ ಮೃತಪಟ್ಟಿದ್ದು ಮೂಡಿಗೆರೆ ತಾಲೂಕಿನಲ್ಲಿ.

ಧರೆ ಕುಸಿತ:  ಮೂಡಿಗೆರೆ ತಾಲೂಕಿನ ಬಾಳೂರು, ಕಳಸ, ಬಣಕಲ್‌ ಹೋಬಳಿಯ ಹಲವು ಗ್ರಾಮಗಳಲ್ಲಿ ಏಕಕಾಲದಲ್ಲಿ ಭೂ ಕುಸಿತ ಉಂಟಾಗಿದೆ. ಆ.9ರಂದು, ಅದಕ್ಕೂ ಒಂದು ವಾರದ ಮೊದಲೇ ಅಂದರೆ ಆ.2ರಂದು ಸುರಿದ ಮಳೆಗೆ ಚಾರ್ಮಾಡಿ ರಸ್ತೆಗೆ ಸಂಪರ್ಕಿಸಿರುವ ಅಲೇಖಾನ್‌ ಹೊರಟ್ಟಿಗ್ರಾಮದ ಮಾರ್ಗದಲ್ಲಿ ಭಾರಿ ಪ್ರಮಾಣದಲ್ಲಿ ಧರೆ ಕುಸಿದು ಬೃಹತ್‌ ಬಂಡೆ ಮತ್ತು ಮಣ್ಣು ರಸ್ತೆಯ ಮೇಲೆ ಬಿದ್ದಿತ್ತು. ಆ.9ರಂದು ಸುರಿದ ಮಳೆಗೆ ತಾಲೂಕಿನ ಹಲವೆಡೆ ಇದೇ ರೀತಿಯಲ್ಲಿ ಭೂ ಕುಸಿತ ಉಂಟಾಯಿತು. 11 ವರ್ಷದ ಬಾಲಕ ಸೇರಿದಂತೆ 4 ಮಂದಿ ಮೃತಪಟ್ಟರು. ಅಂದರೆ, ಒಂದು ವಾರದ ಮೊದಲೇ ಭಾರಿ ಮಳೆಯಾಗಿ ಭೂ ಕುಸಿತ ಉಂಟಾಗಲಿದೆ ಎಂಬ ಮುನ್ಸೂಚನೆ ಪ್ರಕೃತಿ ನೀಡಿತ್ತೆ ಎಂಬ ಚಿಕ್ಕದೊಂದು ಸಂದೇಹ ಜನರ ಮಧ್ಯ ಓಡಾಡುತ್ತಿದೆ.

ಅಲೇಖಾನ್‌ ಹೊರಟ್ಟಿ:  ಇದು, ಗಿರಿಪ್ರದೇಶದ ತಪ್ಪಲಿನಲ್ಲಿರುವ ಗ್ರಾಮ. ಇಲ್ಲಿರುವುದು 36 ಕುಟುಂಬಗಳು, ಜನಸಂಖ್ಯೆ 145, ಇಲ್ಲಿ ಊರು ಹುಟ್ಟುವ ಮೊದಲು ಚೆಟ್ಟಿಯಾರ್‌ ಕಂಪನಿ ಕಾಫಿ ಎಸ್ಟೇಟ್‌ ಇತ್ತು. ಇದೀಗ ಐಬಿಸಿ ಸಂಸ್ಥೆ ಇದನ್ನು ಖರೀದಿ ಮಾಡಿದೆ. ಇಲ್ಲಿ ವಾಸವಾಗಿರುವ ಜನರು ಕನಿಷ್ಠ 2 ಎಕರೆಯಿಂದ 10 ಎಕರೆವರೆಗೆ ಕಾಫಿತೋಟ, ಗದ್ದೆಯನ್ನು ಹೊಂದಿದ್ದಾರೆ. ಅಂದರೆ, ಒಳ್ಳೆಯ ಜೀವನವನ್ನು ನಡೆಸುತ್ತಿದ್ದಾರೆ.

ಇಲ್ಲಿಯ ಜನರಿಗೆ ಶಾಕ್‌ ಕೊಟ್ಟಿದ್ದು ಈ ಬಾರಿಯ ಮಳೆ, ಜಲಪ್ರಳಯದಲ್ಲಿ ಅನುಭವಿಸಿದ ತೊಂದರೆ, ಪ್ರಕೃತಿಯ ಅಬ್ಬರವನ್ನು ಕಣ್ಣಾರೆ ಕಂಡಿರುವ ಇಲ್ಲಿನ ಜನರು ಈ ಊರಿನಲ್ಲಿಯೇ ವಾಸವಾಗುವುದು ಸೇಪ್‌ ಅಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಭಾರಿ ಗಾಳಿ, ಮಳೆಗೆ ಬೆಟ್ಟದ ಮೇಲಿಂದ ನದಿಯಂತೆ ಹರಿದುಬಂದ ನೀರಿನಿಂದ ತೋಟಗಳು, ಗದ್ದೆಗಳು ಹಾಳಾಗಿವೆ. ಮತ್ತೆ ಇದೇ ಭೂಮಿಯಲ್ಲಿ ಕೃಷಿ ಮಾಡಲು ಸಾಧ್ಯವಾಗದ ಮಟ್ಟದಲ್ಲಿ ಮರಳು, ಕಲ್ಲು ಬಂಡೆಗಳು ಬಂದು ನಿಂತಿವೆ. ಕೆಲವು ಕುಟುಂಬಗಳು ಬದುಕನ್ನು ಕಳೆದುಕೊಂಡಿದ್ದಾರೆ.