Asianet Suvarna News Asianet Suvarna News

ಅವೈಜ್ಞಾನಿಕ ಕಾಮಗಾರಿಯಿಂದ ಪ್ರಕೃತಿ ವಿಕೋಪ; ಪರಿಸರ ತಜ್ಞರು

  • ಅವೈಜ್ಞಾನಿಕ ಕಾಮಗಾರಿಯಿಂದ ಪ್ರಕೃತಿ ವಿಕೋಪ
  • ಪರಿಸರ ತಜ್ಞರಿಂದ ಪರಿಸರ ರಕ್ಷಣೆ ಮತ್ತು ಭೂಕುಸಿತ ತಡೆಯಲು ಸರ್ಕಾರಕ್ಕೆ ವರದಿ ಸಲ್ಲಿಕೆ
  • ಸಭೆಯಲ್ಲಿ ಹಲವು ವಿಷಯಗಳ ಪ್ರಸ್ತಾಪ
Natural disaster due to unscientific work uttara kannada muttalli
Author
Hubli, First Published Aug 24, 2022, 1:47 PM IST

ಭಟ್ಕಳ (ಆ.24) : ತಾಲೂಕಿನ ಮುಟ್ಟಳ್ಳಿಯಲ್ಲಿ ಭಾರೀ ಮಳೆಗೆ ಆ.2ರಂದು ಸಂಭವಿಸಿದ ಭೂ ಕುಸಿತ ಹಾಗೂ ನಂತರದ ಬೆಳವಣಿಗೆಗಳ ಅಧ್ಯಯನಕ್ಕೆ ಆಗಮಿಸಿದ್ದ ಪರಿಸರ ಮತ್ತು ಜೀವ ವೈವಿಧ್ಯ ಮಂಡಳಿ ತಜ್ಞರ ತಂಡ ಇಲ್ಲಿನ ತಹಸೀಲ್ದಾರ ಕಚೇರಿಯಲ್ಲಿ ಪಶ್ಚಿಮಘಟ್ಟಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಹಲವು ವಿಷಯಗಳ ಕುರಿತು ಚರ್ಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವ ನಿರ್ಣಯ ಕೈಗೊಂಡಿತು.

ಸಭೆಯಲ್ಲಿ ಮಾತನಾಡಿದ ಪರಿಸರ ತಜ್ಞರ ತಂಡದ ಸದಸ್ಯ ಅನಂತ ಹೆಗಡೆ ಅಶೀಸರ, ಭೂಕುಸಿತ ತಡೆಯಲು ಆಯಾ ಪ್ರದೇಶಗಳ ಪರಿಸ್ಥಿತಿ ಅಧ್ಯಯನ ಮಾಡಿ ಅಲ್ಲಿನ ಪರಿಸರಕ್ಕೆ ಅನುಗುಣವಾಗಿ ಮಾರ್ಗೋಪಾಯಗಳನ್ನು ಕಂಡುಕೊಳ್ಳಬೇಕು. ಭೂ ಕುಸಿತ ತಪ್ಪಿಸಲು ಅಕ್ರಮ ಗಣಿಗಾರಿಕೆ, ಜೆಸಿಬಿ ಸೇರಿದಂತೆ ಕಂಪನದ ಯಂತ್ರ ಬಳಕೆ ನಿಲ್ಲಿಸುವುದು, ಹಾಡಿಗಳ ಹಸಿರು ಹೆಚ್ಚಿಸಲು ರೈತರ ಸಹಭಾಗಿತ್ವದಲ್ಲಿ ವನೀಕರಣ ನಡೆಸುವುದು ಸೇರಿದಂತೆ ಕನಿಷ್ಠ ಒಂದು ವರ್ಷಗಳ ಕಾಲ ಈ ಭಾಗದಲ್ಲಿ ಭೂಮಿಯ ವಾಣಿಜ್ಯ ಬಳಕೆಗೆ ನಿರ್ಬಂಧ ಹೇರಬೇಕು ಎನ್ನುವ ಸಲಹೆ ನೀಡಿದರು.

ಗುಡ್ಡ ಕುಸಿತ ದುರಂತ: ಮನೆಯ ಆಧಾರಸ್ತಂಭವನ್ನೇ ಕಳೆದುಕೊಂಡ ಕುಟುಂಬ

ಕರಾವಳಿ ಪರಿಸರ ಕಾನೂನು ತಜ್ಞ ಡಾ. ಮಹಾಬಲೇಶ್ವರ ಮಾತನಾಡಿ, ಕರಾವಳಿ ಭಾಗದಲ್ಲಿ ಮಳೆ ಅಧ್ಯಯನ ಮಾಡದೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆ ಅಗಲೀಕರಣ ಕಾರ್ಯ ಮಾಡಿದ್ದರಿಂದ ಹಾಗೂ ಮಳೆ ನೀರು, ಹಳ್ಳ, ಹೊಳೆ, ನದಿಗಳ ಹರಿವು ಅರಿಯದೇ ಸೇತುವೆ ನಿರ್ಮಾಣ ಮಾಡಿದ್ದರಿಂದ ಹೆದ್ದಾರಿ ಬದಿಯಲ್ಲಿನ ರೈತರ ಬದುಕು ಸಂಕಷ್ಟಕ್ಕೆ ಸಿಲುಕಿದೆ. ಹಲವಾರು ನಗರ, ಗ್ರಾಮಗಳಲ್ಲಿ ಪ್ರವಾಹಕ್ಕೆ ಇಂತಹ ಅವೈಜ್ಞಾನಿಕ ಕಾಮಗಾರಿಯೇ ಕಾರಣವಾಗಿದೆ ಎಂದರು.

ಸಿಆರ್‌ಜೆಡ್‌ ಪ್ರಾಧಿಕಾರದ ಸದಸ್ಯ ಡಾ. ಸುಭಾಸಚಂದ್ರನ್‌ ಮಾತನಾಡಿ, ಜೀವವೈವಿಧ್ಯ ಮಂಡಳಿ ಸದಸ್ಯರಾದ ಡಾ. ಪ್ರಕಾಶ ಮೇಸ್ತ, ಪರಿಸರ ವಿಜ್ಞಾನಿ ಡಾ. ಕೇಶವ ಕೊರ್ಸೆ, ಕಂದಾಯ ಅಧಿಕಾರಿಗಳು, ಅರಣ್ಯ ಅಧಿಕಾರಿಗಳು, ಗ್ರಾಮೀಣಾಭಿವೃದ್ಧಿ, ಪಂ.ರಾಜ್‌ ಅಧಿಕಾರಿಗಳಲ್ಲಿ ಮುಟ್ಟಳ್ಳಿಯಲ್ಲಿ ಮಾದರಿ ಪರಿಸರ ಪುನಶ್ಚೇತನ ಯೋಜನೆ ಜಾರಿ ಮಾಡಬೇಕು ಎಂದರು.

ರಾಜ್ಯದ ಪ್ರಕೃತಿ ವಿಕೋಪ ಮಿಟಿಗೇಶನ್‌ ನಿಧಿ ಬಳಕೆ ಮಾಡಿಕೊಂಡು ಸಂತ್ರಸ್ತರಿಗೆ ಹಾಗೂ ಆ ಭಾಗದಲ್ಲಿ ಪುನರ್‌ವಸತಿ ಕಾರ್ಯ ಮಾಡಬೇಕು. ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಪಶ್ಚಿಮಘಟ್ಟಕಾರ್ಯಪಡೆಯ ನೂತನ ಅಧ್ಯಕ್ಷ ಗೋವಿಂದ ನಾಯ್ಕ ಅವರನ್ನು ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅಭಿನಂದಿಸಿ ಹಲವು ವರದಿಗಳನ್ನು ನೀಡಿದರು. ಸಭೆಯಲ್ಲಿ ತಹಸೀಲ್ದಾರ್‌ ಡಾ. ಸುಮಂತ್‌ ಬಿ.ಇ., ಎಸಿಎಫ್‌ ಕೆ.ಟಿ. ಬೋರಯ್ಯ, ತಾಪಂ ಕಾ.ನಿ.ಅಧಿಕಾರಿ ಪ್ರಭಾಕರ ಚಿಕ್ಕನಮನೆ, ವಲಯ ಅರಣ್ಯಾಧಿಕಾರಿ ಶರತ್‌ ಶೆಟ್ಟಿಮುಂತಾದವರಿದ್ದರು.

ಭೂ ಕುಸಿತ ನಿರಾಶ್ರಿತರಿಗೆ ಸರ್ಕಾರ ಶೀಘ್ರ ಪುನರ್ವಸತಿ ಕಲ್ಪಿಸಲಿ: ಅನಂತ ಹೆಗಡೆ ಆಶೀಸರ:

ತಾಲೂಕಿನ ಮುಟ್ಟಳ್ಳಿಯಲ್ಲಿ ಗುಡ್ಡ ಕುಸಿತ ಉಂಟಾಗಿ ನಾಲ್ವರು ದುರ್ಮರಣಕ್ಕೀಡಾದ ಪ್ರದೇಶಕ್ಕೆ ಪಶ್ಚಿಮ ಘಟ್ಟಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ, ಜಿಲ್ಲಾ ಪರಿಸರ ಸಂರಕ್ಷಣಾ ಸಮಿತಿ, ವೃಕ್ಷಲಕ್ಷ ಆಂದೊಲನದ ಜಂಟಿ ಆಶ್ರಯದಲ್ಲಿ ಪರಿಸರ ತಜ್ಞರ ತಂಡದ ಸದಸ್ಯರಾಗಿ ರಾಜ್ಯ ಸರ್ಕಾರ ನೇಮಿಸಿದ್ದ ಭೂಕುಸಿತ ಅಧ್ಯಯನ ಸಮಿತಿ ಅಧ್ಯಕ್ಷರಾಗಿದ್ದ ಅನಂತ ಹೆಗಡೆ ಅಶೀಸರ, ರಾಜ್ಯ ಸಿಆರ್‌ಜೆಡ್‌ ಪ್ರಾಧಿಕಾರದ ಸದಸ್ಯ ಡಾ. ಸುಭಾಸಚಂದ್ರನ್‌ ಜೀವವೈವಿಧ್ಯ ಮಂಡಳಿ ಸದಸ್ಯರು ಭೇಟಿ ನೀಡಿ ಪರಿಶೀಲಿಸಿದರು.

ಉತ್ತರಕನ್ನಡ: ಬಸ್‌ಗಳಿಗೆ ಮುಕ್ತವಾಗದ ಅನಶಿ ಘಾಟ್, ವಾಹನ ಸವಾರರ ಪರದಾಟ

ಈ ಸಂದರ್ಭದಲ್ಲಿ ಮಾತನಾಡಿದ ಅನಂತ ಹೆಗಡೆ ಅಶೀಸರ, ಮುಟ್ಟಳ್ಳಿ ಭೂ ಕುಸಿತದ ನಿರಾಶ್ರಿತರಾಗುವ 7 ಮನೆಗೆ ಪುನರ್ವಸತಿ ಕಲ್ಪಿಸುವಂತಾಗಬೇಕು. ಗುಡ್ಡ ಕುಸಿತ ಪ್ರದೇಶದಲ್ಲಿ ಅಧ್ಯಯನವಾಗಬೇಕು. ಮುಂದೆ ಈ ರೀತಿಯಾಗಿ ಕುಸಿಯದಂತೆ ಸೂಕ್ತ ಮುಂಜಾಗ್ರತಾ ಕ್ರಮಕ್ಕೆ ಮುಂದಾಗಬೇಕು ಎಂದರು. ಪಶ್ಚಿಮಘಟ್ಟಕಾರ್ಯಪಡೆಯ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ, ಮುಟ್ಟಳ್ಳಿ ಭಾಗದಲ್ಲಿ ಅನೇಕ ವರ್ಷಗಳಿಂದ ವಾಸ್ತವ್ಯ ಮಾಡಿ ಬಂದವರನ್ನು ಮನೆ ಖಾಲಿ ಮಾಡಿ ಎಂದರೆ ಅದು ಅಸಾಧ್ಯ. ಸರ್ಕಾರ ಅವರಿಗೆ ಪರ್ಯಾಯವಾಗಿ ಉಳಿಯುವ ವ್ಯವಸ್ಥೆ ಮಾಡಬೇಕು ಎಂದರು. ಈ ಸಂದರ್ಭದಲ್ಲಿ ತಹಸೀಲ್ದಾರ್‌ ಡಾ. ಸುಮಂತ್‌ ಬಿ.ಇ., ಎಸಿಎಫ್‌ ಕೆ.ಟಿ. ಬೋರಯ್ಯ, ತಾಪಂ ಕಾ.ನಿ.ಅಧಿಕಾರಿ ಪ್ರಭಾಕರ ಚಿಕ್ಕನಮನೆ, ವಲಯ ಅರಣ್ಯಾಧಿಕಾರಿ ಶರತ್‌ ಶೆಟ್ಟಿ, ಮುಟ್ಟಳ್ಳಿ ಗ್ರಾಪಂ ಅಧ್ಯಕ್ಷ ಶೇಷಗಿರಿ ನಾಯ್ಕ, ಪಿಡಿಒ ರಾಜೇಶ್ವರಿ, ಗ್ರಾಮಸ್ಥರು ಇದ್ದರು.

Follow Us:
Download App:
  • android
  • ios