ನರಗುಂದ: 7ನೇ ವರ್ಷಕ್ಕೆ ಕಾಲಿಟ್ಟ ಮಹದಾಯಿ ಹೋರಾಟ

* ಮಹದಾಯಿ ಹೋರಾಟಗಾರರ ನಿರಂತರ ಧರಣಿ
* ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆಯುತ್ತಿರುವ ಮಹದಾಯಿ ಹೋರಾಟ
* ನ್ಯಾಯ ಸಿಗುವ ವರೆಗೂ ನಮ್ಮ ಹೋರಾಟ ಕೈಬಿಡುವುದಿಲ್ಲ: ರೈತರು
 

6 Years Completed of Mahaydayi Struggle at Nargund in Gadag grg

ಎಸ್‌.ಜಿ. ತೆಗ್ಗಿನಮನಿ

ನರಗುಂದ(ಜು.16): ಮಹದಾಯಿ ನೀರಿನ ಹಕ್ಕು ಹಾಗೂ ಕಳಸಾ ಬಂಡೂರಿ ನದಿ ಜೋಡಣೆಗೆ ಆಗ್ರಹಿಸಿ ನರಗುಂದದಲ್ಲಿ ಮಹದಾಯಿ ಹೋರಾಟಗಾರರು ನಡೆಸುತ್ತಿರುವ ಹೋರಾಟ 6 ವರ್ಷಗಳನ್ನು ಪೂರೈಸಿ ಶುಕ್ರವಾರ 7ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದೆ!

ಈ ಯೋಜನೆಗಾಗಿ ಹಲವಾರು ರೀತಿಯ ವಿಭಿನ್ನ, ವಿನೂತನ ಹೋರಾಟ ನಡೆದರೂ ರೈತರಿಗೆ ಈ ವರೆಗೆ ನ್ಯಾಯ ಸಿಕ್ಕಿಲ್ಲ. ಮಹದಾಯಿ ನೀರಿಗಾಗಿ ಚಾತಕಪಕ್ಷಿಗಳಂತೆ ಕಾಯುತ್ತಿರುವ ರೈತರಲ್ಲಿ ಹೋರಾಟದ ಕಿಚ್ಚು, ರೊಚ್ಚು ಇನ್ನೂ ಆರಿಲ್ಲ. ನ್ಯಾಯಕ್ಕಾಗಿ ಇನ್ನಷ್ಟು ಹೋರಾಟ ನಡೆಸುವ ಛಲ ಹೊಂದಿದ್ದಾರೆ.

ಪಟ್ಟು ಬಿಡದ ರೈತರು:

ಉತ್ತರ ಕರ್ನಾಟಕ ಭಾಗದ ಧಾರವಾಡ, ಗದಗ, ಬಾಗಲಕೋಟೆ, ಬೆಳಗಾವಿ ಜಿಲ್ಲೆಗಳ 11 ತಾಲೂಕಿನ ರೈತರ ಜೀವನಾಡಿಯಾಗಿದೆ ಮಲಪ್ರಭಾ ನದಿ. ಈ ನದಿಗೆ ಕಳಸಾ-ಬಂಡೂರಿ ನಾಲೆಗಳನ್ನು ತಿರುವಿಕೊಳ್ಳುವ ಯೋಜನೆ ಇದು. ಇದರಿಂದ ಇಲ್ಲಿಯ ಕುಡಿಯುವ ಹಾಗೂ ಕೃಷಿಗೆ ಅಗತ್ಯ ನೀರಿನ ಸೌಲಭ್ಯ ಒದಗಲಿದೆ. ಬರಪೀಡಿತ ಪ್ರದೇಶಗಳ ರೈತರ ಜೀವನ ಉಜ್ವಲವಾಗುವುದಲ್ಲದೇ ಈ ಪ್ರದೇಶಗಳ ಅಭಿವೃದ್ಧಿಗೂ ಹೊಸ ಭಾಷ್ಯ ಬರೆಯಲಿದೆ.

ಈ ಹಿನ್ನೆಲೆಯಲ್ಲಿ ರೈತರು, ರೈತ ಸಂಘಟನೆಗಳು ಮಹದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆ ಜಾರಿಗೊಳಿಸುವಂತೆ ಸರ್ಕಾರಗಳಿಗೆ ಕಳೆದ 25 ವರ್ಷಗಳಲ್ಲಿ ಹಲವು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗದೇ ಇರುವ ಹಿನ್ನೆಲೆಯಲ್ಲಿ 2016ರ ಜುಲೈ 16ರಂದು ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಶ್ರೀಗಳ ನೇತೃತ್ವದಲ್ಲಿ ರೈತರು ನರಗುಂದದಲ್ಲಿ ನಿರಂತರ ಹೋರಾಟ ಪ್ರಾರಂಭಿದ್ದಾರೆ.

ಮಹದಾಯಿ ವಿವಾದ: ಮತ್ತೆ ಕ್ಯಾತೆ ತೆಗೆದ ಗೋವಾ

ಸರ್ಕಾರಗಳು ಸಕಾರಾತ್ಮಕವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಉಪವಾಸ ಸತ್ಯಾಗ್ರಹ, ಪತ್ರ ಚಳವಳಿ, ರಸ್ತ ತಡೆ, ಕೂಡಲ ಸಂಗಮದಿಂದ ಕಣಕುಂಬಿ ವರೆಗೆ ಪಾದಯಾತ್ರೆ, ಬೆಂಗಳೂರಿನ ಫ್ರೀಡಂ ಪಾರ್ಕ್, ದೆಹಲಿಯ ರಾಷ್ಟ್ರಪತಿ ವನದ ಮುಂದೆ ಧರಣಿ, ಸಂಸದರು, ಶಾಸಕರ ಮನೆಯ ಮುಂದೆ ಧರಣಿ, ರಕ್ತದಲ್ಲಿ ಮನವಿ ಅರ್ಪಣೆ ಸೇರಿದಂತೆ ಹಲವು ರೀತಿಯ ಹೋರಾಟ ನಡೆಸಿದ್ದು ಇದೀಗ ಇತಿಹಾಸ.

ಹೋರಾಟಗಳ ಹಿನ್ನೆಲೆಯಲ್ಲಿ ಮಹದಾಯಿ, ಕಳಸಾ ಬಂಡೂರಿ ಹಳ್ಳಗಳಿಂದ 13.40 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಲು 2018 ರಲ್ಲಿ ಮಹದಾಯಿ ನ್ಯಾಯಾಧಿಕರಣ ಅನುಮತಿ ನೀಡಿತು. ಕೇಂದ್ರ ಸರ್ಕಾರ ಸಹ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಿದೆ.

ಯೋಜನೆಗಾಗಿ ಸನ್ಯಾಸತ್ವ:

ಹೋರಾಟದ ನೇತೃತ್ವ ವಹಿಸಿದ್ದ ವೀರೇಶ ಸೊಬರದಮಠ ಅವರು ಮಹದಾಯಿ ಹಾಗೂ ಕಳಸಾ-ಬಂಡೂರಿ ಕುರಿತ ರೈತ ಹೋರಾಟಕ್ಕಾಗಿಯೇ ‘ರೈತ ಮಠ’ ಸ್ಥಾಪಿಸಿ, ಸನ್ಯಾಸತ್ವ ಸ್ವೀಕರಿಸಿ ಪೂರ್ಣ ಪ್ರಮಾಣದಲ್ಲಿ ಈ ರೈತ ಹೋರಾಟದಲ್ಲಿ ತೊಡಗಿದ್ದಾರೆ.

ಈ ಹೋರಾಟ ಆಡಳಿತದಲ್ಲಿರುವ ರಾಜಕಾರಣಿಗಳ ನಿದ್ದೆಗೆಡಿಸಿತು. ಪರ್ಯಾಯ ಶಕ್ತಿಯಾಗಿ ರೂಪುಗೊಂಡಿತು. ರೈತ ಹೋರಾಟಗಾರರ ಮೇಲೆ ಮಾರಣಾಂತಿಕ ಹಲ್ಲೆಗಳಾದವು. ಹೋರಾಟ ಹತ್ತಿಕ್ಕುವ ಯತ್ನವೂ ನಡೆಯಿತು. ಚುನಾವಣೆ ಸಂದರ್ಭದಲ್ಲಿ ವಿವಿಧ ರೀತಿಯ ಆಸೆ, ಆಮಿಷ ಸಹ ಒಡ್ಡಲಾಗಿತ್ತು. ಈ ಮಧ್ಯೆ ರೈತ ಸಂಘಟನೆಗಳಲ್ಲಿ ಒಡಕು ಕಾಣಿಸಿಕೊಂಡು ಪರ್ಯಾಯ ಸಂಘಟನೆಗಳು ರಚನೆಯಾದವು. ವೈಯಕ್ತಿಕ ಹಿತಾಸಕ್ತಿಗಳು, ರಾಜಕೀಯ ಮೇಲಾಟಗಳು ಆರಂಭವಾದವು. ಆದರೆ ಇಂದಿಗೂ ನಿರಂತರ ಹೋರಾಟ ನಡೆದಿದೆ. ನ್ಯಾಯ ಸಿಗುವ ವರೆಗೂ ನಮ್ಮ ಈ ಹೋರಾಟ ಕೈಬಿಡುವುದಿಲ್ಲ ಎಂಬುದು ಹೋರಾಟಗಾರರ ಒಕ್ಕೊರಲ ಮಾತು.

'ಸರ್ಕಾರ ಬೇಗ ಮಹದಾಯಿ ಕಾಮಗಾರಿ ಪ್ರಾರಂಭಿಸಬೇಕು'

ಯಾವುದೀ ಯೋಜನೆ?

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿ ಗ್ರಾಮದಲ್ಲಿ ಮಹದಾಯಿ, ಕಳಸಾ, ನಾಲಾ, ಹಳತಾರ, ಗುರ್ಕಿ, ಚೋರ್ಲಾ, ಪೋರ್ಟಾ, ಬಂಡೂರಿ ಜನ್ಮತಾಳಿ ರಾಜ್ಯದ ಅರಣ್ಯ ಪ್ರದೇಶದ 35ಕಿಮೀ ವ್ಯಾಪ್ತಿಯಲ್ಲಿ ಹರಿದು ಈ ಹಳ್ಳಗಳಿಂದ ಪ್ರತಿ ವರ್ಷ 56 ಟಿಎಂಸಿ ನೀರು ಶೇಖರಣೆಯಾಗಿ ಮಹದಾಯಿ ರೂಪಗೊಳ್ಳುತ್ತಾಳೆ. ಮುಂದೆ ಮಾಂಡೋವಿ ಹೆಸರಿನಲ್ಲಿ ಗೋವಾ ರಾಜ್ಯದ ಅರಣ್ಯ ಪ್ರದೇಶದ ಮೂಲಕ ಅರಬ್ಬಿ ಸಮುದ್ರ ಸೇರಿ ವ್ಯರ್ಥವಾಗುತ್ತಿದೆ. ಈ ವ್ಯರ್ಥವಾಗುವ ನೀರಿನಲ್ಲಿ ಕರ್ನಾಟಕ ರಾಜ್ಯ ಕೇವಲ 25ಟಿಎಂಸಿ ನೀರು ಬಳಕೆ ಮಾಡಿಕೊಳ್ಳಬೇಕೆಂದರೂ ಗೋವಾ ಸರ್ಕಾರ ಇದಕ್ಕೆ ಅಡ್ಡಗಾಲು ಹಾಕುತ್ತಿದೆ.

ದೇಶದಲ್ಲಿ ಕುಡಿಯುವದಕ್ಕಾಗಿ ನದಿ ನೀರು ಬಳಕೆ ಮಾಡಿಕೊಳ್ಳಲು ಯಾವುದೇ ಕಾನೂನು ತೊಂದರೆ ಇಲ್ಲ. ಆದರೆ, ಈ ಮಹದಾಯಿ ಯೋಜನೆ ಕುಡಿಯುವ ನೀರಿನ ಯೋಜನೆಯಾಗಿದ್ದರೂ ನಮ್ಮ ಸರ್ಕಾರಗಳು ಈ ಯೋಜನೆ ಜಾರಿ ಮಾಡುತ್ತಿಲ್ಲ. ನೀರು ಸಿಗುವವರೆಗೂ ನಮ್ಮ ಹೋರಾಟ ನಿರಂತರ ಎಂದು ರೈತ ಸೇನಾ ಸಂಘಟನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಹೇಳಿದ್ದಾರೆ.  

ನೀರು ಮನುಷ್ಯನ ಅಮೂಲ್ಯ ಜೀವವಸ್ತು. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೆ ಪಕ್ಷದ ಸರ್ಕಾರ ಇರುವುದರಿಂದ ಈ ಮಹದಾಯಿ ಯೋಜನೆಯನ್ನು ಉಭಯ ಸರ್ಕಾರಗಳು ಜಾರಿಗೆ ತಂದು ಮನುಕುಲಕ್ಕೆ ಅನುಕೂಲ ಮಾಡಿಕೊಂಡಬೇಕು ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣಾನಂದ ಶ್ರೀಗಳು ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios