ಜೆಡಿಎಸ್‌ನಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳಾಗಲಿಲ್ಲ. ಈ ನಿಟ್ಟಿನಲ್ಲಿ ಕಮಲ ಅರಳುವುದು ನಿಶ್ಚಿತ ಎಂದು ಭವಿಷ್ಯ ನುಡಿಯಲಾಗಿದೆ
ಮಂಡ್ಯ (ಡಿ.20): ಹಾಸನ ಮತ್ತು ಮಂಡ್ಯ ಜಿಲ್ಲೆಗಳನ್ನು ತನ್ನೆರಡು ಕಣ್ಣುಗಳು ಎಂದು ಹೇಳಿಕೊಂಡು ಬಂದಿದ್ದ ಜೆಡಿಎಸ್ ಹಾಸನಕ್ಕೆ ಬೆಣ್ಣೆ ಹಚ್ಚಿ, ಮಂಡ್ಯದ ಕಣ್ಣಿಗೆ ಸುಣ್ಣ ಹಚ್ಚುವ ಮೂಲಕ ಜಿಲ್ಲೆಯ ಅಭಿವೃದ್ಧಿಯನ್ನು ಶೂನ್ಯವಾಗಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ. ನಾರಾಯಣಗೌಡ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಜೆಡಿಎಸ್ ಮುಖಂಡರಿಗೆ ತಿರುಗೇಟು ನೀಡಿದರು.
ನಗರದ ಎ.ಸಿ.ಮಾದೇಗೌಡ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಮಂಡ್ಯ ಜಿಲ್ಲೆ ಬಗ್ಗೆ ನಮಗೆ ವಿಶೇಷವಾದ ಪ್ರೀತಿ ಇದೆ ಎಂದು ಹೇಳುತ್ತಲೇ ಮಂಡ್ಯ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಿದರು. ರೈತರ ಜೀವನಾಡಿಯಾಗಿರುವ ಎರಡು ಸಕ್ಕರೆ ಕಾರ್ಖಾನೆಗಳ ಪ್ರಾರಂಭಕ್ಕೆ ಯಾವುದೇ ಯೋಜನೆ ರೂಪಿಸಲಿಲ್ಲ ಎಂದು ಟೀಕಿಸಿದರು.
ಪಾಂಡವಪುರ ಮತ್ತು ಮೈಷುಗರ್ ಸಕ್ಕರೆ ಕಾರ್ಖಾನೆಗಳ ಪ್ರಾರಂಭಕ್ಕೆ ಮತ್ತೆ ಈ ಜಿಲ್ಲೆಯ ವರಪುತ್ರ ಬಿ.ಎಸ್. ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿ ಬರಬೇಕಾಯಿತು. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಎರಡೂ ಕಾರ್ಖಾನೆಗಳನ್ನು ಚಾಲನೆ ಮಾಡಿದ್ದರು. ಈಗ ಪಿಎಸ್‌ಎಸ್‌ಕೆ ಗುತ್ತಿಗೆ ಆಧಾರದಲ್ಲಿ ಪ್ರಾರಂಭವಾಗಿದೆ. ಒಂದೆರಡು ತಿಂಗಳಲ್ಲಿ ಮೈಷುಗರ್ ಸಹ ಪ್ರಾರಂಭವಾಗಲಿದೆ ಎಂದು ಭರವಸೆ ನೀಡಿದರು.
BJP ಜೊತೆಗೆ ಜೆಡಿಎಸ್ ವಿಲೀನವಾಗುತ್ತಾ? ಬಿಜೆಪಿ ಉಪಾಧ್ಯಕ್ಷ ಸ್ಫೋಟಕ ಸುಳಿವು .
ದೊಡ್ಡ ಸಮಾವೇಶ: ನಾನು ಆಯ್ಕೆಯಾದ ಸ್ವಲ್ಪ ದಿನಗಳಲ್ಲೇ ಮುಖ್ಯಮಂತ್ರಿಗಳು, ಸಚಿವರು, ಕೇಂದ್ರ ಸಚಿವರನ್ನು ಮಂಡ್ಯಕ್ಕೆ ಕರೆಯಿಸಿ ದೊಡ್ಡ ಮಟ್ಟದ ಸಮಾವೇಶ ಮಾಡಬೇಕು. ಆ ಮೂಲಕ ಜಿಲ್ಲೆಯ ಜನರಿಗೆ ಕೃತಜ್ಞತೆ ಸಲ್ಲಿಸಬೇಕು ಎಂದು ಬಿಜೆಪಿ ಅಧ್ಯಕ್ಷರು ಮತ್ತು ನಾನು ತೀರ್ಮಾನ ಮಾಡಿದ್ದೆವು. ಆದರೆ, ಅಷ್ಟರಲ್ಲಿ ಕೋವಿಡ್-19 ಮಹಾಮಾರಿ ವಕ್ಕರಿಸಿದ ಕಾರಣ ಕಾರ್ಯಕ್ರಮ ಮಾಡಲಾಗಲಿಲ್ಲ. ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಸಮಾವೇಶ ಮಾಡಿಸಿ ಯಡಿಯೂರಪ್ಪ ಅವರ ಬಾಯಿಯಿಂದಲೇ ಜಿಲ್ಲೆಯ ಅಭಿವೃದ್ಧಿಗೆ ಯೋಜನೆ ರೂಪಿಸಿರುವುದನ್ನು ಹೇಳಿಸುತ್ತೇನೆ ಎಂದರು.
ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಕೆ.ಆರ್.ಪೇಟೆ ತಾಲೂಕಿಗೆ 650 ಕೋಟಿ ರು. ಅನುದಾನ ನೀಡಿ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡಿದ್ದರು. ಅದೇ ರೀತಿ ಈಗಲೂ ಸಹ ಜಿಲ್ಲೆಯ ಅಭಿವೃದ್ಧಿಗೆ ಕಂಕಣ ತೊಟ್ಟಿದ್ದಾರೆ ಎಂದರು.
ಜಿಲ್ಲೆಯಲ್ಲಿ ಕಮಲ ಅರಳುವುದು ನಿಶ್ಚಿತ: .ಆರ್. ಪೇಟೆಯಿಂದ ಕಮಲ ಅರಳುವುದು ಪ್ರಾರಂಭವಾಗಿದೆ. ಇದೀಗ ಜಿಲ್ಲಾದ್ಯಂತ ಪಸರಿಸುತ್ತಿದೆ. ಇದಕ್ಕೆ ಗ್ರಾಪಂ ಚುನಾವಣೆಯೇ ಸಾಕ್ಷಿ. ಗ್ರಾಪಂ ಚುನಾವಣೆಯಲ್ಲಿ ಹೆಚ್ಚಿನ ಮಟ್ಟದಲ್ಲಿ ಬಿಜೆಪಿ ಬೆಂಬಲಿತರು ಆಯ್ಕೆಯಾಗುತ್ತಾರೆ. ನನ್ನ ಕಾಲಿಗೆ ಪೆಟ್ಟಾಗಿರುವುದರಿಂದ ಎಲ್ಲಡೆ ಓಡಾಡಲು ಸಾಧ್ಯವಾಗುತ್ತಿಲ್ಲ. ಇಲ್ಲದಿದ್ದರೆ ಜಿಲ್ಲಾದ್ಯಂತ ಸಂಚರಿಸಿ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೆ. ಮುಂದಿನ ತಾಪಂ, ಜಿಪಂ ಚುನಾವಣೆಯಲ್ಲಿ ಬಿಜೆಪಿ ಕಮಲ ಹಿಡಿಯುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜೆ. ವಿಜಯಕುಮಾರ್, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯ ಡಾ. ಸಿದ್ದರಾಮಯ್ಯ, ವಿಭಾಗೀಯ ಪ್ರಭಾರಿ ಮೈ.ವಿ. ರವಿಶಂಕರ್, ಮಾಜಿ ಜಿಲ್ಲಾಧ್ಯಕ್ಷರಾದ ಎಚ್.ಪಿ. ಮಹೇಶ್, ನಾಗಣ್ಣಗೌಡ, ಮೈಷುಗರ್ ಅಧ್ಯಕ್ಷ ಶಿವಲಿಂಗೇಗೌಡ, ಮುಖಂಡರಾದ ಎನ್. ಶಿವಣ್ಣ, ಎಸ್.ಪಿ.ಸ್ವಾಮಿ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Dec 20, 2020, 3:56 PM IST