ಬೆಂಗಳೂರು[ಆ.14]: ಆನ್‌ಲೈನ್‌ ಮೂಲಕ ಮೆಟ್ರೋ ಕಾರ್ಡ್‌ ರೀಚಾಜ್‌ರ್‍ ಮಾಡುವ ಸೇವೆಯಲ್ಲಿ ಉಂಟಾಗಿದ್ದ ತಾಂತ್ರಿಕ ದೋಷವನ್ನು ಸರಿಪಡಿಸಲಾಗಿದ್ದು, ಎಂದಿನಂತೆ ಆನ್‌ಲೈನ್‌ ರೀಚಾಜ್‌ರ್‍ ಸೇವೆ ಆರಂಭಿಸಲಾಗಿದೆ ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್‌) ತಿಳಿಸಿದೆ.

ಬಿಎಂಆರ್‌ಸಿಎಲ್‌ನ ಅರ್ಜಿ ಸಲ್ಲಿಸುವ ಕಾರ್ಯವಿಧಾನದಲ್ಲಿ ಜು.29ರಂದು ತಾಂತ್ರಿಕ ದೋಷ ಕಂಡುಬಂದಿತ್ತು. ಆದ್ದರಿಂದ ಜು.29, ಆ.3 ಮತ್ತು 5ರಂದು ರೀಚಾಜ್‌ರ್‍ ಮಾಡಿದ್ದ ಒಂಬತ್ತು ಸಾವಿರಕ್ಕೂ ಹೆಚ್ಚು ಕಾರ್ಡ್‌ಗಳು ರೀಚಾಜ್‌ರ್‍ ಆಗಿರಲಿಲ್ಲ. ಬಳಿಕ ಅಂತಹ ಕಾರ್ಡ್‌ ಹೊಂದಿರುವ ಪ್ರಯಾಣಿಕರಿಗೆ ಎಲ್ಲ ನಿಲ್ದಾಣಗಳಲ್ಲೂ ರೀಚಾಜ್‌ರ್‍ ವ್ಯವಸ್ಥೆ ಮಾಡಲಾಗಿತ್ತು. ಜತೆಗೆ ಆನ್‌ಲೈನ್‌ ಮೂಲಕ ಸ್ಮಾರ್ಟ್‌ ಕಾರ್ಡ್‌ ಟಾಪ್‌ಅಪ್‌ ವ್ಯವಸ್ಥೆ ಸರಿಪಡಿಸುವ ಉದ್ದೇಶದಿಂದ ಬಿಎಂಆರ್‌ಸಿಎಲ್‌ ವೆಬ್‌ಸೈಟ್‌ ಮೂಲಕ ರೀಚಾಜ್‌ರ್‍ ಮಾಡುವ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ತಾಂತ್ರಿಕ ದೋಷವನ್ನು ಸರಿಪಡಿಸಲಾಗಿದ್ದು, ಎಂದಿನಂತೆ ರೀಚಾಜ್‌ರ್‍ ಮಾಡಿಕೊಳ್ಳಬಹುದಾಗಿದೆ.

ತಾಂತ್ರಿಕ ದೋಷದ ಸಂದರ್ಭದಲ್ಲಿ ಟಾಪ್‌-ಆಪ್‌ ಮಾಡಲು ಪ್ರಯತ್ನಿಸಿದ 3092 ಪ್ರಯಾಣಿಕರಿಗೆ ಅನಾನುಕೂಲ ಉಂಟಾಗಿತ್ತು. ಸದರಿ ಪ್ರಯಾಣಿಕರು ಸ್ಮಾರ್ಟ್‌ಕಾರ್ಡ್‌ ಅನ್ನು ಮರು ತುಂಬಿಸಲು ಯಾವುದಾದರೂ ಮೆಟ್ರೋ ನಿಲ್ದಾಣಕ್ಕೆ ಹೋಗಿ ಮೆಟ್ರೋ ಸ್ಮಾರ್ಟ್‌ಕಾರ್ಡ್‌ಅನ್ನು ಪ್ರವೇಶ ದ್ವಾರದ ಕೌಂಟರ್‌ನಲ್ಲಿ ಸಲ್ಲಿಸಿದರೆ, ಅದನ್ನು ಸಿಬ್ಬಂದಿ ರೀಚಾಜ್‌ರ್‍ ಮಾಡಿ ಕೊಡಲಿದ್ದಾರೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.