ಕಾಂಗ್ರೆಸ್‌ ರೌಡಿಗಳ ಪಕ್ಷ ಅಲ್ಲ ಎಂದು ಯಾರೂ ಹೇಳಿಲ್ಲ ದೇಶದಲ್ಲಿ ಎಲ್ಲ ಕೆಟ್ಟಚಾಳಿಗಳಿಗೆ ಪ್ರೇರಣೆ ನೀಡಿರುವುದೇ ಕಾಂಗ್ರೆಸ್‌   ಬಿಜೆಪಿ ರಾಜ್ಯಾಧ್ಯಕ್ಷ, ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲ್‌ 

ಮಂಗಳೂರು (ಜು.12):  ಕಾಂಗ್ರೆಸ್‌ ರೌಡಿಗಳ ಪಕ್ಷ ಅಲ್ಲ ಎಂದು ಯಾರೂ ಹೇಳಿಲ್ಲ. ಇವರ ಇತಿಹಾಸ ತೆಗೆದರೆ ರೌಡಿ ಮಾತ್ರವಲ್ಲ, ದೇಶದಲ್ಲಿ ಎಲ್ಲ ಕೆಟ್ಟಚಾಳಿಗಳಿಗೆ ಪ್ರೇರಣೆ ನೀಡಿರುವುದೇ ಕಾಂಗ್ರೆಸ್‌ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲ್‌ ಸಮರ್ಥಿಸಿಕೊಂಡಿದ್ದಾರೆ.

ಮಂಗಳೂರಿನಲ್ಲಿ ಭಾನುವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ರೌಡಿಗಳ ಪಕ್ಷ ಎಂದು ಬಿಜೆಪಿ ಮುಖಂಡರು ಹೇಳಿರುವುದನ್ನು ಸಮರ್ಥಿಸಿದರು.

ಇಂದು ಜಾರಕಿಹೊಳಿ- ಕಟೀಲ್ ಭೇಟಿ; ರಾಜೀನಾಮೆ ಪ್ರಹಸಕ್ಕೆ ಬೀಳುತ್ತಾ ತೆರೆ.? .

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಕಾಂಗ್ರೆಸ್‌ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿರುವುದು ಸರಿಯಲ್ಲ. ಕಾರ್ಯಕರ್ತರೇ ಪಕ್ಷದ ಜೀವಾಳವಾಗಿದ್ದು, ಅವರನ್ನು ಆ ರೀತಿ ನಡೆಸಿಕೊಳ್ಳಬಾರದು. ಕಾರ್ಯಕರ್ತರು ನಾಯಕರ ಬಳಿ ಅಪೇಕ್ಷೆ ಮತ್ತು ಬೇಡಿಕೆ ಇರಿಸಿಕೊಂಡು ಬರುತ್ತಾರೆ. ಆಗ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕಾದ್ದು ನಮ್ಮ ಸಂಸ್ಕೃತಿ. ಯಾರೇ ರಾಜಕಾರಣಿಯಾದರೂ ಎಲ್ಲೆ ಮೀರಿ ವರ್ತಿಸಬಾರದು ಎಂದರು.

ಇಂತಹ ಘಟನೆ ನಡೆಯುತ್ತಿರುವುದು ಕಾಂಗ್ರೆಸ್‌ನಲ್ಲಿ ಇದೇ ಮೊದಲಲ್ಲ. ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧ ಪ್ರವೇಶ ವೇಳೆ ತೊಡೆ ತಟ್ಟು ಯುದ್ಧಕ್ಕೆ ಕರೆದು ಒಳಪ್ರವೇಶಿಸಿದ್ದರು. ದೇವಸ್ಥಾನದಂತೆ ಇರುವ ವಿಧಾನಸೌಧಕ್ಕೆ ಅಗೌರವ ತೋರಿಸಿದವರು ಕಾರ್ಯಕರ್ತರಿಗೆ ಗೌರವ ತೋರಿಸುತ್ತಾರಾ ಎಂದು ನಳಿನ್‌ ಕುಮಾರ್‌ ಪ್ರಶ್ನಿಸಿದರು.

ಸಂಸದೆ ಸುಮಲತಾ ಮತ್ತು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ನಡುವಿನ ವಾಗ್ಯುದ್ಧ ಕುರಿತಂತೆ ಪ್ರತಿಕ್ರಿಯಿಸಲು ನಿರಾಕರಿಸಿದ ನಳಿನ್‌ ಕುಮಾರ್‌, ನಾವು ರಾಜಕೀಯ ಕ್ಷೇತ್ರದಲ್ಲಿ ಇರುವವರು. ಯಾರ ಬಗ್ಗೆಯೂ ವೈಯಕ್ತಿಕವಾಗಿ ಮಾತನಾಡುವುದಿಲ್ಲ. ಆದರೆ ಸಮಾಜ ನಮ್ಮನ್ನು ಗಮನಿಸುತ್ತಿರುತ್ತದೆ ಎಂದರು.