ಕಾಂಗ್ರೆಸ್ಸಲ್ಲಿ ಸಿಎಂ ಸೀಟಿಗೆ ಈಗಲೇ ಟವೆಲ್‌: ಕಟೀಲ್‌

* ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ-ಡಿಕೆಶಿ ಹಗ್ಗಜಗ್ಗಾಟ
* ಶಾಸಕ ಜಾರಕಿಹೊಳಿ ರಾಜೀನಾಮೆ ಬಗ್ಗೆ ನನ್ನೊಂದಿಗೆ ಮಾತನಾಡಿಲ್ಲ-ಕಟೀಲ್‌
* ಸಿದ್ದರಾಮಯ್ಯರನ್ನು ಮೂಲ ಕಾಂಗ್ರೆಸ್ಸಿಗರು ಒಪ್ಪುತ್ತಿಲ್ಲ
 

Nalin Kumar Kateel Slam Congress grg

ಕೊಪ್ಪಳ(ಜೂ.24): ಕಾಂಗ್ರೆಸ್‌ನವರು ಕೂಸು ಹುಟ್ಟುವ ಮೊದಲೇ ಕುಲಾಯಿ ಹೊಲಿಸಿದಂತೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ ಬಣದ ನಡುವೆ ಮುಖ್ಯಮಂತ್ರಿ ಖುರ್ಚಿಗಾಗಿ ಹಗ್ಗಜಗ್ಗಾಟ ನಡೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ ಕಟೀಲ್‌ ವ್ಯಂಗ್ಯವಾಡಿದ್ದಾರೆ. 

ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ವಲಸಿಗ, ಮೂಲ ಕಾಂಗ್ರೆಸಿಗರೆಂಬ ಗೊಂದಲ ಆರಂಭವಾಗಿದೆ. ಸಿದ್ದರಾಮಯ್ಯ ಅವರನ್ನು ಮೂಲ ಕಾಂಗ್ರೆಸಿಗರು ಒಪ್ಪುತ್ತಿಲ್ಲ. ಹೀಗಾಗಿ ಮ್ಯೂಸಿಕಲ್‌ ಚೇರ್‌ ಆಟ ಆರಂಭವಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಈಗಿನಿಂದಲೇ ಟವೆಲ್‌ ಹಾಕುತ್ತಿದ್ದಾರೆ. ಇನ್ನೂ ಮದುವೆಯೇ ಆಗಿಲ್ಲ. ಈಗಲೇ ಮಗುವಿಗೆ ಕುಲಾಯಿ ಹೊಲಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

'ಸಿದ್ದರಾಮಯ್ಯ ಮುಖ್ಯಮಂತ್ರಿ ಆಗೋದು ಹಗಲು ಕನಸು'

ಶಾಸಕ ರಮೇಶ ಜಾರಕಿಹೊಳಿ ರಾಜೀನಾಮೆ ನೀಡುವ ಬಗ್ಗೆ ನನ್ನೊಂದಿಗೆ ಮಾತನಾಡಿಲ್ಲ. ಅವರ ಸಮಸ್ಯೆಗಳೇನಿದ್ದರೂ ಪರಿಹರಿಸಲಾಗುವುದು. ಸಣ್ಣಪುಟ್ಟ ಗೊಂದಲ ಇದ್ದವು. ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಬಂದು ಪರಿಹರಿಸಿದ್ದಾರೆ. ಸದ್ಯಕ್ಕೆ ಬಿಜೆಪಿಯಲ್ಲಿ ಯಾವುದೇ ಭಿನ್ನಾಭಿಪ್ರಾಯ, ಗೊಂದಲಗಳಿಲ್ಲ. ಇದ್ದಲ್ಲಿ ಪರಸ್ಪರ ಮಾತನಾಡಿ ಬಗೆಹರಿಸಿಕೊಳ್ಳುತ್ತೇವೆ ಎಂದರು.

ಇನ್ನು ಎಲ್ಲ ಜಿಲ್ಲೆಗಳಲ್ಲಿ ಬಿಜೆಪಿ ಸ್ವಂತ ಕಟ್ಟಡ ಕಾಮಗಾರಿ ನಡೆದಿವೆ. ಸದ್ಯ 9 ಜಿಲ್ಲೆಯಲ್ಲಿ ಸ್ವಂತ ಕಚೇರಿಗಳಿವೆ. 11 ಜಿಲ್ಲೆಯಲ್ಲಿ ಕಟ್ಟಡ ಕಾಮಗಾರಿ ನಡೆದಿದೆ. ಹೀಗಾಗಿ ಎಲ್ಲ ಜಿಲ್ಲೆಗೆ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸುತ್ತಿರುವೆ. ಕೊಪ್ಪಳ ಜಿಲ್ಲಾ ಕಚೇರಿ ಕಾಮಗಾರಿ ಬಹುಪಾಲು ಪೂರ್ಣಗೊಂಡಿದೆ. ದೀಪಾವಳಿ ಒಳಗೆ ಕಚೇರಿ ಉದ್ಘಾಟನೆ ಮಾಡಲಾಗುವುದು. ಇದರೊಂದಿಗೆ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಟೀಲ್‌ ತಿಳಿಸಿದರು. ಸಂಸದ ಕರಡಿ ಸಂಗಣ್ಣ, ಶಾಸಕ ಪರಣ್ಣ ಮುನವಳ್ಳಿ, ವಿರೂಪಾಕ್ಷಪ್ಪ ಸಿಂಗನಾಳ ಇದ್ದರು.
 

Latest Videos
Follow Us:
Download App:
  • android
  • ios