ಬಸವಕಲ್ಯಾಣ(ಮಾ.08): ದೇಶದಲ್ಲಿ ಗೋಹಂತಕರ ಪರ ನಿಂತ ಕಾಂಗ್ರೆಸ್‌ಗೆ ಗೋಹತ್ಯೆಯ ಶಾಪ ತಟ್ಟಿದೆ ರಾಮರಾಜ್ಯದ ಪರಿಕಲ್ಪನೆ ಕೊಟ್ಟ ಮಹಾತ್ಮಾ ಗಾಂಧಿಯ ಚಿಂತನೆಯನ್ನು ಬದಿಗಿಟ್ಟು ಮತಕ್ಕಾಗಿ ಗಾಂಧಿ ಹೆಸರು ಬಳಿಸಿ ಗಾಂಧಿ ಶಾಪ ತಟ್ಟಿದ್ದರಿಂದ ದೇಶದಲ್ಲಿ ವಿರೋಧ ಪಕ್ಷವಾಗಲೂ ಕಾಂಗ್ರೆಸ್‌ ನಾಲಾಯಕ್‌ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್‌ ಆರೋಪಿಸಿದ್ದಾರೆ. 

ಅವರು ಉಪಚುನಾವಣೆಯ ಪೂರ್ವಭಾವಿಯಾಗಿ ಭಾನುವಾರ ಇಲ್ಲಿನ ಅಕ್ಕಮಹಾದೇವಿ ಮೈದಾನದಲ್ಲಿ ಬೂತ್‌ ಮಟ್ಟದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಮೋದಿ ಆಡಳಿತ ಪರಿವರ್ತನೆಯನ್ನು ತರುತ್ತಿದೆ, ರಾಜ್ಯದ ಉಪಚುನಾವಣೆಗಳಲ್ಲಷ್ಟೇ ಅಲ್ಲ ಪಶ್ಚಿಮ ಬಂಗಾಳದಲ್ಲಿಯೂ ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ಧ್ವಜ ಹಾರುತ್ತೆ, ಕಾಂಗ್ರೆಸ್‌ಗೆ ದಿಕ್ಕಿಲ್ಲದಂತಾಗುತ್ತದೆ ಎಂದರು.

ಅಧಿಕಾರಕ್ಕಾಗಿ ಗುರು ದ್ರೋಹವೆಸಗಿದ ಮಾಜಿ ಸಿಎಂ ಸಿದ್ದುಗೆ ಟಾಂಗ್‌:

ಅಧಿಕಾರಕ್ಕೋಸ್ಕರ ಗುರುವನ್ನು ಬಿಟ್ಟು ಬಂದ, ಉಪಮುಖ್ಯಮಂತ್ರಿ ಮಾಡಿದವರಿಗೆ ಕೈಕೊಟ್ಟ, ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ್‌ ಖರ್ಗೆಯಂಥವರನ್ನ ಮೂಲೆಗುಂಪು ಮಾಡಲು ಬಂದವರಿಂದ ಅಧಿಕಾರದ ಕಿಂಚಿತ್‌ ಆಸೆ ಇಲ್ಲದೆ ಅಯೋಧ್ಯೆ ಬಿಟ್ಟು ವನವಾಸಕ್ಕೆ ತೆರಳಿದ್ದ ಶ್ರೀರಾಮನಿಗೆ ಅಯೋಧ್ಯೆಯಲ್ಲಿ ಮಂದಿರ ಯಾಕೆ ಎಂಬ ಪ್ರಶ್ನೆ ಹಾಸ್ಯಾಸ್ಪದ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪರೋಕ್ಷವಾಗಿ ಕಟೀಲ್‌ ವಾಗ್ದಾಳಿ ನಡೆಸಿದರು.

ಮನ್ನಣೆ ಇದ್ದರೂ ತಪ್ಪಲಿಲ್ಲ ಮಂಜಮ್ಮ ಜೋಗತಿ ಕಣ್ಣೀರು

ಏತ ನೀರಾವರಿ ಗ್ಯಾರಂಟಿ, 6 ತಿಂಗಳಲ್ಲಿ ಹುತಾತ್ಮರ ಸ್ಮಾರಕ ನಿರ್ಮಾಣ :

ಕೋವಿಡ್‌ ಸಂದರ್ಭದಲ್ಲಿ ಇಡೀ ದೇಶ ಲಾಕ್‌ಡೌನ್‌ ಆಗಿದ್ದರೂ ಈ ರಾಜ್ಯದ ಯಾರಿಗೂ ಅನ್ನ, ಆರೋಗ್ಯದ ಕೊರತೆಯಾಗದಂತೆ ನೋಡಿಕೊಂಡ ಸಿಎಂ ಬಿಎಸ್‌ ಯಡಿಯೂರಪ್ಪ ಅವರಿಂದ ಬಸವಕಲ್ಯಾಣದಲ್ಲಿನ ಏತ ನೀರಾವರಿ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಸಿಗಲಿದೆ ಎಂದು ಹೇಳುವ ಮೂಲಕ ಸೋಮವಾರದ ಬಜೆಟ್‌ನಲ್ಲಿ ಬಸವಕಲ್ಯಾಣಕ್ಕೆ ಬಂಪರ್‌ ಘೋಷಣೆಯ ಸುಳಿವನ್ನು ನಳೀನಕುಮಾರ ಕಟೀಲ್‌ ನೀಡಿದರು.

ನಮ್ಮ ಯುವ ಮೋರ್ಚಾ ಹುಡುಗರು ಗೋರ್ಟಾ ಹುತಾತ್ಮರ ಸ್ಮಾರಕ ಹಾಗೂ ಸರದಾರ ಪಟೇಲರ ಮೂರ್ತಿ ನಿರ್ಮಾಣಕ್ಕೆ ಮುಂದಾಗಿದ್ದರು ಅದ್ಯಾವುದೋ ಕಾರಣಗಳಿಂದ ವಿಳಂಬವಾಗಿದೆ ಇನ್ನು ಐದಾರು ತಿಂಗಳಲ್ಲಿ ಸ್ಮಾರಕ ನಿರ್ಮಾಣ ಮಾಡಿಯೇ ಮಾಡುತ್ತೇವೆ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ್‌ ಭರವಸೆ ನೀಡಿದರು.

ಈ ಸಂದರ್ಭ ಡಿಸಿಎಂ ಲಕ್ಷ್ಮಣ ಸವದಿ, ಸಚಿವರಾದ ವಿ. ಸೋಮಣ್ಣ, ಪ್ರಭು ಚವ್ಹಾಣ, ಸಂಸದ ಭಗವಂತ ಖೂಬಾ, ಶಾಸಕರಾದ. ಬಸವರಾಜ ಮತ್ತಿಮೂಡ, ರಾಜಕುಮಾರ ಪಾಟೀಲ್‌ ತೇಲ್ಕೂರ, ರಘುನಾಥ ಮಲ್ಕಾಪುರೆ, ಮಾಜಿ ಸಚಿವ ಬಾಬುರಾವ್‌ ಚಿಂಚನೂರ, ಮಾಜಿ ಶಾಸಕ ಮಾಲಿಕಯ್ಯ ಗುತ್ತೆದಾರ, ಮಾಜಿ ಎಂಎಲ್‌ಸಿ ಅಮರನಾಥ ಪಾಟೀಲ್‌ ಸೇರಿದಂತೆ ಟಿಕೆಟ್‌ ಆಕಾಂಕ್ಷಿಗಳು ಇದ್ದರು.