Mysuru : ಎಆರ್‌ಕೆ, ಎಂಕೆಎಸ್‌ ಗೆದ್ದರೆ ಮೂರನೇ ಬಾರಿ ಅವಕಾಶ

ಮೈಸೂರು- ಚಾಮರಾಜನಗರ ಜಿಲ್ಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಾದ ಕೃಷ್ಣರಾಜದ ಎಂ.ಕೆ. ಸೋಮಶೇಖರ್‌ ಹಾಗೂ ಕೊಳ್ಳೇಗಾಲದ ಎ.ಆರ್‌. ಕೃಷ್ಣಮೂರ್ತಿ ಅವರು ಗೆದ್ದರೆ ಮೂರನೇ ಬಾರಿ ವಿಧಾನಸಭೆ ಪ್ರವೇಶಿಸಿದಂತೆ ಆಗುತ್ತದೆ.

Mysuru Third chance if AR Krishnamurthy  MK Somashekar win snr

 ಅಂಶಿ ಪ್ರಸನ್ನಕುಮಾರ್‌

 ಮೈಸೂರು :  ಮೈಸೂರು- ಚಾಮರಾಜನಗರ ಜಿಲ್ಲೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಾದ ಕೃಷ್ಣರಾಜದ ಎಂ.ಕೆ. ಸೋಮಶೇಖರ್‌ ಹಾಗೂ ಕೊಳ್ಳೇಗಾಲದ ಎ.ಆರ್‌. ಕೃಷ್ಣಮೂರ್ತಿ ಅವರು ಗೆದ್ದರೆ ಮೂರನೇ ಬಾರಿ ವಿಧಾನಸಭೆ ಪ್ರವೇಶಿಸಿದಂತೆ ಆಗುತ್ತದೆ.

ಎಂ.ಕೆ. ಸೋಮಶೇಖರ್‌ ಅವರು 2004 ರಲ್ಲಿ ಜೆಡಿಎಸ್‌, 2013 ರಲ್ಲಿ ಕಾಂಗ್ರೆಸ್‌ ಟಿಕೆಟ್‌ ಮೇಲೆ ಆಯ್ಕೆಯಾಗಿದ್ದರು. 1999 ರಲ್ಲಿ ಜನತಾದಳ, 2008 ಹಾಗೂ 2018 ರಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸೋತಿದ್ದಾರೆ. ಇದು ಅವರಿಗೆ ಸತತ ಆರನೇ ಚುನಾವಣೆ.

ಅದೇ ರೀತಿ ಎ.ಆರ್‌. ಕೃಷ್ಣಮೂರ್ತಿ ಅವರು ಸಂತೇಮರಹಳ್ಳಿಯಿಂದ 1989 ರಲ್ಲಿ ಜನತಾದಳ ಅಭ್ಯರ್ಥಿಯಾಗಿ ಸೋತಿದ್ದರು. 1994 ರಲ್ಲಿ ಜನತಾದಳ, 1999 ರಲ್ಲಿ ಜನತಾದಳ (ಸಂಯುಕ್ತ) ಟಿಕೆಟ್‌ ಮೇಲೆ ಗೆದ್ದಿದ್ದಾರೆ. 2004 ರಲ್ಲಿ ಸಂತೇಮರಹಳ್ಳಿಯಿಂದಲೇ ಜೆಡಿಎಸ್‌, 2008 ರಲ್ಲಿ ಕೊಳ್ಳೇಗಾಲದಲ್ಲಿ ಜೆಡಿಎಸ್‌, 2018 ರಲ್ಲಿ ಕಾಂಗ್ರೆಸ್‌ ಟಿಕೆಟ್‌ ಮೇಲೆ ಸ್ಪರ್ಧಿಸಿ ಸೋತಿದ್ದಾರೆ. ವಿಧಾನಸಭೆಗೆ ಏಳನೇ ಚುನಾವಣೆ. ಇದಲ್ಲದೇ ಲೋಕಸಭಾ ಚುನಾವಣೆಯಲ್ಲಿ 2009, 2014 ರಲ್ಲಿ ಸೋತಿದ್ದಾರೆ.

ಈವರೆಗೆ ಎರಡು ಬಾರಿ ಆಯ್ಕೆಯಾದವರು

ಮೈಸೂರು ನಗರದ ಕೃಷ್ಣರಾಜ ಕ್ಷೇತ್ರದಿಂದ ಕೆ.ಎಸ್‌. ಸೂರ್ಯನಾರಾಯಣ ರಾವ್‌ 1957 ಹಾಗೂ 1962- ಕಾಂಗ್ರೆಸ್‌, ಎಚ್‌. ಗಂಗಾಧರನ್‌ 1983 ರಲ್ಲಿ ಜನತಾಪಕ್ಷ ಹಾಗೂ 1985 ರಲ್ಲಿ ಬಿಜೆಪಿ ಟಿಕೆಟ್‌ ಮೇಲೆ ಆಯ್ಕೆಯಾಗಿದ್ದರು.

ನಂಜನಗೂಡು ಕ್ಷೇತ್ರದಿಂದ ಕೆ.ಬಿ. ಶಿವಯ್ಯ 1972 ಹಾಗೂ 1978 ರಲ್ಲಿ ಕಾಂಗ್ರೆಸ್‌ ಟಿಕೆಟ್‌ ಮೇಲೆ ಆಯ್ಕೆಯಾಗಿದ್ದರು. ಜಿಲ್ಲೆಯವರೇ ಆದ ಡಿ. ದೇವರಾಜ ಅರಸರ ಸಂಪುಟದಲ್ಲಿ ರೇಷ್ಮೆ ಖಾತೆ ಸಚಿವರಾಗಿದ್ದರು. ವಿ. ಶ್ರೀನಿವಾಸಪ್ರಸಾದ್‌ 2008 ಹಾಗೂ 2013 ರಲ್ಲಿ ಕಾಂಗ್ರೆಸ್‌ ಟಿಕೆಟ್‌ ಮೇಲೆ ಆಯ್ಕೆಯಾಗಿದ್ದರು. ಜಿಲ್ಲೆಯವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಕಂದಾಯ ಸಚಿವರಾಗಿದ್ದರು. ಮೂರುಕಾಲು ವರ್ಷದ ನಂತರ ಸಚಿವ ಸಂಪುಟದಿಂದ ಕೈಬಿಟ್ಟಿದ್ದನ್ನು ವಿರೋಧಿಸಿ ಶಾಸಕ ಸ್ಥಾನಕ್ಕೆ ಹಾಗೂ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ಬಿಜೆಪಿ ಸೇರಿದರು. 2017ರ ಏಪ್ರಿಲ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೋತರು.

ಎಚ್‌.ಡಿ. ಕೋಟೆ ಕ್ಷೇತ್ರದಿಂದ 1985 ಹಾಗೂ 1999 ರಲ್ಲಿ ಕಾಂಗ್ರೆಸ್‌ ಟಿಕೆಟ್‌ ಮೇಲೆ ಆಯ್ಕೆಯಾಗಿದ್ದ ಎಂ. ಶಿವಣ್ಣ ಅವರು ಎಸ್‌.ಎಂ. ಕೃಷ್ಣ ಸಂಪುಟದಲ್ಲಿ ಸಚಿವರಾಗಿದ್ದರು. ಇದೇ ಕ್ಷೇತ್ರದಿಂದ ಎಂ.ಪಿ. ವೆಂಕಟೇಶ್‌ 1989 ಹಾಗೂ 2004 ರಲ್ಲಿ ಜೆಡಿಎಸ್‌ ಟಿಕೆಟ್‌ ಮೇಲೆ ಆಯ್ಕೆಯಾಗಿದ್ದರು.

ಹುಣಸೂರಿನಲ್ಲಿ 1983 ರಲ್ಲಿ ಜನತಾಪಕ್ಷ ಹಾಗೂ 1989 ರಲ್ಲಿ ಕಾಂಗ್ರೆಸ್‌ ಟಿಕೆಟ್‌ ಮೇಲೆ ಚಂದ್ರಪ್ರಭಾ ಅರಸು ಆಯ್ಕೆಯಾಗಿದ್ದರು. ಮೊದಲ ಬಾರಿ ಗೆದ್ದಾಗ ರಾಮಕೃಷ್ಣ ಹೆಗಡೆ ನೇತೃತ್ವದ ಸರ್ಕಾರದಲ್ಲಿ ರೇಷ್ಮೆ ಸಚಿವೆಯಾಗಿದ್ದರು. 1991 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಎಸ್‌. ಚಿಕ್ಕಮಾದು ಕಾಂಗ್ರೆಸ್‌ ಹಾಗೂ 2013 ರಲ್ಲಿ ಎಚ್‌.ಡಿ. ಕೋಟೆಯಿಂದ ಜೆಡಿಎಸ್‌ ಟಿಕೆಟ್‌ ಮೇಲೆ ಆಯ್ಕೆಯಾಗಿದ್ದರು.

ಚಾಮರಾಜನಗರ ಕ್ಷೇತ್ರದಿಂದ ಯು.ಎಂ. ಮಾದಪ್ಪ 1952 ಹಾಗೂ 1957 ರಲ್ಲಿ ಆಯ್ಕೆಯಾಗಿದ್ದರು. ಎಂ.ಸಿ. ಬಸಪ್ಪ 1962 ಹಾಗೂ 1978 ರಲ್ಲಿ ಆಯ್ಕೆಯಾಗಿದ್ದರು.

ಹನೂರು ಕ್ಷೇತ್ರದಿಂದ 1957 ಹಾಗೂ 1962 ರಲ್ಲಿ ಜಿ.ವಿ. ಗೌಡ ಆಯ್ಕೆಯಾಗಿದ್ದರು. 1967 ಹಾಗೂ 1994 ರಲ್ಲಿ ಎಚ್‌. ನಾಗಪ್ಪ ಆಯ್ಕೆಯಾಗಿದ್ದರು. ನಾಗಪ್ಪ ಎರಡನೇ ಬಾರಿ ಗೆದ್ದಾಗ ಜೆ.ಎಚ್‌. ಪಟೇಲರ ಸಂಪುಟದಲ್ಲಿ ಎಪಿಎಂಸಿ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.

ಗುಂಡ್ಲುಪೇಟೆ ಕ್ಷೇತ್ರದಿಂದ ಎಚ್‌.ಕೆ. ಶಿವರುದ್ರಪ್ಪ 1952 ಹಾಗೂ 1978 ರಲ್ಲಿ ಆಯ್ಕೆಯಾಗಿದ್ದರು. ಈಗ ರದ್ದಾಗಿರುವ ಸಂತೇಮರಹಳ್ಳಿ ಕ್ಷೇತ್ರದಿಂದ ಕೆ. ಸಿದ್ದಯ್ಯ 1972 ಹಾಗೂ 1989 ರಲ್ಲಿ ಆಯ್ಕೆಯಾಗಿದ್ದರು. ಇದೇ ಕ್ಷೇತ್ರದಿಂದ 2004 ರಲ್ಲಿ ಆರ್‌. ಧ್ರುವನಾರಾಯಣ ಹಾಗೂ ಪಕ್ಕದ ಕೊಳ್ಳೇಗಾಲ ಕ್ಷೇತ್ರದಿಂದ 2008 ರಲ್ಲಿ ಆಯ್ಕೆಯಾಗಿದ್ದರು.

ಕೊಳ್ಳೇಗಾಲ ಕ್ಷೇತ್ರದಿಂದ 1994 ರಲ್ಲಿ ಜನತಾದಳ ಹಾಗೂ 2013 ರಲ್ಲಿ ಕಾಂಗ್ರೆಸ್‌ ಟಿಕೆಟ್‌ ಮೇಲೆ ಎಸ್‌. ಜಯಣ್ಣ ಆಯ್ಕೆಯಾಗಿದ್ದರು.

ಇದೇ ಕ್ಷೇತ್ರದಲ್ಲಿ 1999 ರಲ್ಲಿ ಕಾಂಗ್ರೆಸ್‌ ಹಾಗೂ 2009ರ ಉಪ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ಮೇಲೆ ಜಿ.ಎನ್‌. ನಂಜುಂಡಸ್ವಾಮಿ ಆಯ್ಕೆಯಾಗಿದ್ದರು.

ಈಗ ರದ್ದಾಗಿರುವ ಬಿಳಿಗೆರೆ ಕ್ಷೇತ್ರದಿಂದ ಡಿ.ಎಂ. ಸಿದ್ದಯ್ಯ 1962 ಹಾಗೂ 1967 ರಲ್ಲಿ ಆಯ್ಕೆಯಾಗಿದ್ದರು. ಬನ್ನೂರು ಕ್ಷೇತ್ರದಿಂದ ಕೆ. ಮಾದೇಗೌಡ 1972 ಹಾಗೂ 1978, ಕೆ.ಎಂ. ಚಿಕ್ಕಮಾದನಾಯಕ 1989 ಹಾಗೂ 1999 ರಲ್ಲಿ ಆಯ್ಕೆಯಾಗಿದ್ದರು.

Latest Videos
Follow Us:
Download App:
  • android
  • ios