ಕೊರೋನಾ ವೈರಸ್ 3ನೇ ಅಲೆ : ಮೈಸೂರಲ್ಲಿ ಸೂಕ್ತ ಮುನ್ನೆಚ್ಚರಿಕೆ
- ಕೊರೋನಾ ವೈರಸ್ 3ನೇ ಅಲೆಯ ಮುಂಜಾಗ್ರತಾ ಕ್ರಮವಾಗಿ ಮಕ್ಕಳಿಗೆ ಚಿಕಿತ್ಸೆ ನೀಡಲು 400 ಐಸಿಯು ಬೆಡ್‌ಗಳ ವ್ಯವಸ್ಥೆ
- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಚ್. ಪ್ರಸಾದ್ ಮಾಹಿತಿ
ಮೈಸೂರು (ಜು.28): ಕೊರೋನಾ ವೈರಸ್ 3ನೇ ಅಲೆಯ ಮುಂಜಾಗ್ರತಾ ಕ್ರಮವಾಗಿ ಮಕ್ಕಳಿಗೆ ಚಿಕಿತ್ಸೆ ನೀಡಲು 400 ಐಸಿಯು ಬೆಡ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಚ್. ಪ್ರಸಾದ್ ತಿಳಿಸಿದರು.
ಕರ್ನಾಟಕ ರಾಜ್ಯ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಮಂಗಳವಾರ ನಡೆದ ಕೋವಿಡ್ ಮೊದಲನೇ ಮತ್ತು ಎರಡನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಿರುವ ತಾಲೂಕಿನ ಅಧಿಕಾರಿ ವರ್ಗ ಮತ್ತು ಜನಪ್ರತಿನಿಧಿಗಳಿಗೆ 3ನೇ ಅಲೆಯನ್ನು ತಡೆಗಟ್ಟುವ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ನಿತ್ಯ 3 ರಿಂದ 5 ಸಾವಿರ ಮಕ್ಕಳಿಗೆ ಕೊರೋನಾ ಪಾಸಿಟಿವ್ ಬಂದರೂ ಸಮರ್ಥವಾಗಿ ಎದುರಿಸಲು ಇನ್ನು ಹತ್ತು ದಿನಗಳಲ್ಲಿ 400 ಐಸಿಯು ಬೆಡ್‌ಗಳ ವ್ಯವಸ್ಥೆಯನ್ನು ಸನ್ನದ್ದುಗೊಳಿಸುವ ಕಾರ್ಯ ನಡೆಯುತ್ತಿದೆ ಎಂದರು.
ಪಾಸಿಟಿವಿಟಿ ಹೆಚ್ಚಳ, ಕೇಸು ಏರಿಕೆಗೆ ಕೇಂದ್ರ ಆತಂಕ!
ಚೆಲುವಾಂಬ ಆಸ್ಪತ್ರೆಯಲ್ಲಿ 153, ಜಿಲ್ಲಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ 150, ಜಿಲ್ಲಾಸ್ಪತ್ರೆಯಲ್ಲಿ 75, ಖಾಸಗಿ ಆಸ್ಪತ್ರೆಗಳಿಂದ 120 ಬೆಡ್‌ಗಳನ್ನು ಸಿದ್ಧಗೊಳಿಸಲಾಗುತ್ತಿದೆ. ಇದಲ್ಲದೆ 600 ಆಕ್ಸಿಜನ್ ಬೆಡ್‌ಗಳನ್ನು ಮಾಡಲು ಕೆಲಸ ಶುರು ಮಾಡಿದ್ದು, ಪ್ರತಿ ಕೋವಿಡ್ ಕೇರ್ ಸೆಂಟರ್‌ನಲ್ಲಿ 15 ಮಕ್ಕಳ ಬೆಡ್‌ಗಳು, ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ಐದು ಐಸಿಯು ಬೆಡ್‌ಗಳನ್ನು ಮೀಸಲಿಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಮೊದಲ ಅಲೆಯಲ್ಲಿ 9 ತಿಂಗಳಲ್ಲಿ 60 ಸಾವಿರ ಪ್ರಕರಣ ದಾಖಲಾಗಿದ್ದರೆ, ಎರಡನೇ ಅಲೆಯಲ್ಲಿ ಮೇ ತಿಂಗಳಲ್ಲಿ 60 ಸಾವಿರ ಕೇಸುಗಳು ದಾಖಲಾಗಿದ್ದವು. ಈ ಸರಾಸರಿಯನ್ನು ಗಮನಿಸಿ ನೋಡಿದರೆ ದಿನಕ್ಕೆ ಮೂರು ಸಾವಿರ ಪ್ರಕರಣ ದಾಖಲಾದರೂ ಶೇ.2 ಐಸಿಯು ವೆಂಟಿಲೇಟರ್ ಬೇಕಾಗುತ್ತದೆ. ಒಂದು ವೇಳೆ ಐದು ಸಾವಿರ ಕೇಸ್ ದಾಖಲಾದರೆ ಮೂರರಷ್ಟು ಐಸಿಯು, ವೆಂಟಿಲೇಟರ್ ಬೇಕಾಗಬಹುದೆಂದು ಅಂದಾಜಿಸಲಾಗಿದೆ ಎಂದರು.
ತಕ್ಷಣ ಚಿಕಿತ್ಸೆ ಪಡೆಯಬೇಕು
ಚೆಲುವಾಂಬ ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ.ಎಂ.ಆರ್. ಸವಿತಾ ಮಾತನಾಡಿ, ಜಿಲ್ಲೆಯಲ್ಲಿ 174 ಮಕ್ಕಳಿಗೆ ಕೊರೋನಾ ಸೋಂಕು ತಗುಲಿದ್ದು, ಅದರಲ್ಲಿ 52 ಮಕ್ಕಳಲ್ಲಿ ಮಿಸ್ಸಿ (ಮಲ್ಟಿಆರ್ಗನ್ ಇನ್ಲಾಮೇಟರಿ ಸಿಂಡ್ರೊಮ್ ಇನ್ ಚಿಲ್ಡ್ರನ್) ಪ್ರಕರಣಗಳು ಪತ್ತೆಯಾಗಿದೆ. ನವಜಾತ ಶಿಶು ಸೇರಿ 12 ವರ್ಷದ ಮಕ್ಕಳಿಗೆ ರೂಪಾಂತರಿ ಕೊರೋನಾ ಲಕ್ಷಣ ಕಂಡು ಬಂದಲ್ಲಿ ತಕ್ಷಣವೇ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು.
ಚೆಲುವಾಂಬ ಆಸ್ಪತ್ರೆಯಲ್ಲಿ ಕೊರೋನಾ ಪಾಸಿಟಿವ್ ಬಂದಿರುವ 174 ಮಕ್ಕಳಿದ್ದವು. ಇದರಲ್ಲಿ 143 ಮಕ್ಕಳು ಹೋಂ ಐಸೊಲೇಷನ್‌ನಲ್ಲಿ ಇದ್ದು ಗುಣಮುಖರಾಗಿದ್ದರೆ, 16 ಕೋವಿಡ್ ಡೆತ್ ಆಗಿದೆ. 52 ಮಿಸ್ಸಿ ಪ್ರಕರಣಗಳಲ್ಲಿ 11 ಸಾವಿನ ಪ್ರಕರಣಗಳು ಸಂಭವಿಸಿವೆ ಎಂದು ಅವರು ತಿಳಿಸಿದರು.
ಮಕ್ಕಳಿಗೆ ಕೊರೋನಾ ಕಾಣಿಸಿಕೊಂಡರೆ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಬೇಕು. ದೊಡ್ಡವರಂತೆ ಗಂಟಲು ದ್ರವ ತೆಗೆಯಬೇಕು. ಒಂದು ವೇಳೆ ಮಿಸ್ಸಿ ವೈರಸ್ ಕಾಣಿಸಿಕೊಂಡಲ್ಲಿ ರಕ್ತ ಪರೀಕ್ಷೆ ಮಾಡಬೇಕು. ನೆಗೆಟಿವ್ ಬರುವ ತನಕ ರಕ್ತ ಪರೀಕ್ಷೆ ಮಾಡುತ್ತಲೇ ಇರಬೇಕು. ಮಕ್ಕಳಿಗೆ ಸೋಂಕು ಕಾಣಿಸಿಕೊಂಡಾಗ ಪೋಷಕರು ಗಾಬರಿಗೊಳ್ಳುವುದು, ಭಯಪಡುವ ಕಾರಣ ಟೆಲಿ ಕೌನ್ಸಿಲಿಂಗ್ ಮಾಡಬೇಕಾಗಿದೆ ಎಂದರು.
ಶಾಸಕರಾದ ಜಿ.ಟಿ. ದೇವೇಗೌಡ, ಡಾ. ಯತೀಂದ್ರ ಸಿದ್ದರಾಮಯ್ಯ, ಎಂಡಿಸಿಸಿ ಬ್ಯಾಂಕಿನ ಅಧ್ಯಕ್ಷ ಜಿ.ಡಿ. ಹರೀಶ್‌ಗೌಡ, ಜಿಪಂ ಸಿಇಒ ಎ.ಎಂ. ಯೋಗೀಶ್, ಉಪ ಕಾರ್ಯದರ್ಶಿ ಎಚ್.ಎನ್. ಪ್ರೇಮ್‌ಕುಮಾರ್, ತಹಸೀಲ್ದಾರ್ ಕೆ.ಆರ್. ರಕ್ಷಿತ್, ತಾಪಂ ಇಒ ರಮೇಶ್ ಇದ್ದರು.