ಮೈಸೂರು(ಜ.29): ಮಳೆಯಾಶ್ರಿತ ಜಮೀನಿನನ್ನು ಬೋರ್‌ವೆಲ್‌ ಅಳವಡಿಸಿಕೊಂಡು ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡ ರೈತರೊಬ್ಬರು ಬಾಳೆ ಬೆಳೆಯುವ ಮೂಲಕ ತಮ್ಮ ಆದಾಯ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಮೈಸೂರು ಜಿಲ್ಲೆ ಹುಣಸೂರು ತಾಲೂಕು ಬಿಳಿಕೆರೆ ಗ್ರಾಮದ ಲೇ. ಸ್ವಾಮಿ ಅವರ ಪುತ್ರ ಶಿವಕುಮಾರ್‌ ಅವರೇ ಬಾಳೆ ಬೇಸಾಯ ಮಾಡುವದರ ಮೂಲಕ ತಮ್ಮ ಆದಾಯ ಹೆಚ್ಚಿಸಿಕೊಂಡವರು. ಪತ್ನಿ, ಇಬ್ಬರು ಮಕ್ಕಳೊಂದಿಗೆ ವಾಸವಾಗಿರುವ ಶಿವಕುಮಾರ್‌ ಅವರು, ತಮ್ಮ ಒಂದೂವರೆ ಎಕರೆ ಜಮೀನನಲ್ಲಿ ಇದೇ ಮೊದಲ ಬಾರಿಗೆ ಏಲಕ್ಕಿ, ಕಂದುಬಾಳೆ ಬೆಳೆಯುವ ಮೂಲಕ ಯಶಸ್ವಿ ಕೃಷಿಕರಾಗಿದ್ದಾರೆ.

ಮೈಸೂರು: ಮದುವೆ ಹೊಸ್ತಿಲಿನಲ್ಲಿದ್ದವನಿಗೆ ಮಚ್ಚಿನೇಟು

ಶಿವಕುಮಾರ್‌ ಈ ಹಿಂದೆ ಸಾಂಪ್ರದಾಯಿಕ ಪದ್ಧತಿಯಿಂದ ರಾಗಿ, ಜೋಳ, ಅಲಸಂದೆ ಬೇಸಾಯ ಮಾಡುತ್ತಿದ್ದರು. ಇದರಿಂದ ಕೇವಲ . 5000 ರಿಂದ . 6000 ವಾರ್ಷಿಕ ಆದಾಯ ಪಡೆಯುತ್ತಿದ್ದರು. ಪ್ರಸ್ತುತ ಬೋರ್‌ವೆಲ್‌ ಹಾಕಿಸಿಕೊಂಡು, ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಅಧಿಕ ಸಾಂದ್ರತೆಯಲ್ಲಿ ಬಾಳೆ ಗಿಡಗಳ ನಾಟಿ ಹಾಗೂ ರಸಾವರಿ ಪದ್ಧತಿ ಎಂಬ ಹೊಸ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಏಲಕ್ಕಿ ಹಾಗೂ ಕಂದು ಬಾಳೆ ಬೆಳೆದು . 3.50 ಲಕ್ಷ ವಾರ್ಷಿಕ ಆದಾಯ ಪಡೆಯುವ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾರೆ.

ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಮಳೆಯಾಶ್ರಿತ ಬೆಳೆಗಳಿಂದ ವಾರ್ಷಿಕ . 5 ರಿಂದ 6 ಸಾವಿರ ಆದಾಯ ಬರುತ್ತಿತ್ತು. ಆದರೆ, ಈಗ ಬೋರ್‌ವೆಲ್‌ ಕೊರೆಸಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡು ಬಾಳೆ ಬೆಲೆ ಬೆಳೆದಿದ್ದರಿಂದ ಲಾಭ ಸಿಕ್ಕಿದೆ ಎನ್ನುತ್ತಾರೆ ಬಿಳಿಕೆರೆಯ ರೈತ ಶಿವಕುಮಾರ್‌.

ಹೆಚ್ಚಿನ ಆದಾಯ

ತೋಟಗಾರಿಕೆ ಇಲಾಖೆಯಿಂದ 2018- 19ನೇ ಸಾಲಿನಲ್ಲಿ ಸಮಗ್ರ ತೋಟಗಾರಿಕೆ ಅಭಿವೃದ್ಧಿ (ಸಿಎಚ್‌ಡಿ) ಯೋಜನೆಯಲ್ಲಿ ಬಾಳೆ ಬೆಳೆಗೆ . 39,255 ಸಹಾಯಧನ ಪಡೆದ ರೈತ ಶಿವಕುಮಾರ್‌ ಅವರು, ಇದರ ಜೊತೆಗೆ ತೋಟಗಾರಿಕೆ ಇಲಾಖೆ ಹಾಗೂ ಸಲಹಾ ಕೇಂದ್ರದಿಂದ (ಹಾರ್ಟಿ ಕ್ಲಿನಿಕ್‌) ಪಡೆದ ಮಾಹಿತಿ ಹಾಗೂ ಹೊಸ ತಾಂತ್ರಿಕತೆಗಳನ್ನು ಅಳವಡಿಸಿಕೊಂಡು ಬಾಳೆ ಬೆಳೆಯುವುದರ ಮೂಲಕ ಹೆಚ್ಚಿನ ಆದಾಯ ಪಡೆದಿದ್ದಾರೆ.

-ಬಿ. ಶೇಖರ್‌ ಗೋಪಿನಾಥಂ