ಮೈಸೂರು : ಅನುಕಂಪ ಆಧಾರ - ಇದು ಎರಡನೇ ಪ್ರಕರಣ

ಸಾರ್ವತ್ರಿಕ ಚುನಾವಣೆಯಲ್ಲಿ ಅನುಕಂಪದ ಆಧಾರದ ಮೇಲೆ ಸಾರ್ವತ್ರಿಕ ಚುನಾವಣೆ ಎದುರಿಸುತ್ತಿರುವ ಎರಡನೇ ಪ್ರಕರಣ ಅವಿಭಜಿತ ಮೈಸೂರು ಜಿಲ್ಲೆಯಲ್ಲಿ ಈ ಬಾರಿ ಕಂಡು ಬಂದಿದೆ.

Mysore : Compassionate basis - This is the second case snr

 ಅಂಶಿ ಪ್ರಸನ್ನಕುಮಾರ್‌

  ಮೈಸೂರು :  ಸಾರ್ವತ್ರಿಕ ಚುನಾವಣೆಯಲ್ಲಿ ಅನುಕಂಪದ ಆಧಾರದ ಮೇಲೆ ಸಾರ್ವತ್ರಿಕ ಚುನಾವಣೆ ಎದುರಿಸುತ್ತಿರುವ ಎರಡನೇ ಪ್ರಕರಣ ಅವಿಭಜಿತ ಮೈಸೂರು ಜಿಲ್ಲೆಯಲ್ಲಿ ಈ ಬಾರಿ ಕಂಡು ಬಂದಿದೆ.

ಕಾಡುಗಳ್ಳ ವೀರಪ್ಪನ್‌ನಿಂದ ಅಪಹರಣಕ್ಕೊಳಗಾಗಿದ್ದಾಗ ಮಾಜಿ ಸಚಿವ ಎಚ್‌. ನಾಗಪ್ಪ ಅವರು ಸಾವಿಗೀಡಾಗಿದ್ದರು. ಇದಾದ ನಂತರ ಅವರ ಪತ್ನಿ ಪರಿಮಳ ಅವರು 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಹನೂರು ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಆದರೆ ಇದು ಉಪ ಚುನಾವಣೆಯಲ್ಲ. ಆದರೂ ಅನುಕಂಪ ಅವರನ್ನು ಕೈಹಿಡಿದಿತ್ತು.

ಅದೇ ರೀತಿ ಈ ಬಾರಿ ನಂಜನಗೂಡಿನಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ದರ್ಶನ್‌ ಅನುಕಂಪದ ಆಧಾರದ ಮೇಲೆ ಚುನಾವಣೆ ಎದುರಿಸುತ್ತಿದ್ದಾರೆ. ಅವರು ಚಾಮರಾಜನಗರದ ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್‌. ಧ್ರುವನಾರಾಯಣ ಅವರ ಪುತ್ರ. ಸಂತೇಮರಹಳ್ಳಿ ಹಾಗೂ ಕೊಳ್ಳೇಗಾಲದಿಂದ ತಲಾ ಒಂದು ಬಾರಿ ಶಾಸಕ, ಚಾಮರಾಜನಗರದಿಂದ ಎರಡು ಬಾರಿ ಸಂಸದರಾಗಿದ್ದ ಧ್ರುವನಾರಾಯಣ ಅವರು 2019ರ ಲೋಕಸಭಾ ಚುನಾವಣೆ ಸೋತಿದ್ದರು. ಈ ಬಾರಿ

ತಂದೆ ಬದಲು ಮಗ, ಪತಿ ಬದಲು ಪತ್ನಿ ಆಯ್ಕೆ:

ಮೈಸೂರಿನ ನರಸಿಂಹರಾಜ ಕ್ಷೇತ್ರ ಶಾಸಕರಾಗಿದ್ದ ಅಜೀಜ್‌ಸೇಠ್‌ ಅವರ ನಿಧನದಿಂದ 2002 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಅವರ ಪುತ್ರ ತನ್ವೀರ್‌ ಸೇಠ್‌ ಆಯ್ಕೆಯಾಗಿದ್ದರು. ಗುಂಡ್ಲುಪೇಟೆಯಲ್ಲಿ ಮಹದೇವಪ್ರಸಾದ್‌ ನಿಧನದಿಂದ 2017 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಅವರ ಪತ್ನಿ ಡಾ.ಗೀತಾ ಆಯ್ಕೆಯಾದರು.

ಇತರೆ ಉಪ ಚುನಾವಣೆಗಳಲ್ಲಿ ಗೆದ್ದವರು

ಡಿ. ದೇವರಾಜ ಅರಸು, ಸಿದ್ದರಾಮಯ್ಯ, ಎಂ. ವೆಂಕಟಲಿಂಗಯ್ಯ, ಬಿ.ಎನ್‌. ಕೆಂಗೇಗೌಡ, ಪ್ರೊ.ಪಿ.ಎಂ. ಚಿಕ್ಕಬೋರಯ್ಯ,ಜಿ.ಟಿ. ದೇವೇಗೌಡ, ಎಸ್‌. ಚಿಕ್ಕಮಾದು, ತನ್ವೀರ್‌ ಸೇಠ್‌, ಜಿ.ಎನ್‌. ನಂಜುಂಡಸ್ವಾಮಿ, ಡಾ.ಗೀತಾ ಮಹದೇವಪ್ರಸಾದ್‌, ಕಳಲೆ ಕೇಶವಮೂರ್ತಿ, ಎಚ್‌.ಪಿ. ಮಂಜುನಾಥ್‌

-1972ರ ಸಾರ್ವತ್ರಿಕ ಚುನಾವಣೆಯಲ್ಲಿ ಡಿ. ದೇವರಾಜ ಅರಸು ಅವರು ಸ್ಪರ್ಧಿಸಿರಲಿಲ್ಲ. ಕೆಪಿಸಿಸಿ ಅಧ್ಯಕ್ಷರಾಗಿದ್ದ ಅವರು ಇಡೀ ರಾಜ್ಯಾದ್ಯಂತ ಪ್ರಚಾರ ಮಾಡಬೇಕಾದದ್ದು ಇದಕ್ಕೆ ಕಾರಣ. ಆದರೆ ಆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು, ಅರಸು ಅವರೇ ಮುಖ್ಯಮಂತ್ರಿಯಾದರು. ನಂತರ ಹುಣಸೂರಿನಿಂದ ಆಯ್ಕೆಯಾಗಿದ್ದ ಡಿ. ಕರಿಯಪ್ಪಗೌಡರು ರಾಜೀನಾಮೆ ನೀಡಿ, ವಿಧಾನ ಪರಿಷತ್‌ ಸದಸ್ಯರಾದರು. ಆಗ ನಡೆದ ಉಪ ಚುನಾವಣೆಯಲ್ಲಿ ಅರಸು ಆಯ್ಕೆಯಾದರು.

ಸಿದ್ದರಾಮಯ್ಯ ಅವರು 1983 ರಿಂದ 2004 ರವರೆಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ನಾಲ್ಕು ಬಾರಿ ಆಯ್ಕೆಯಾಗಿದ್ದರು. 1996 ಹಾಗೂ 2004 ರಲ್ಲಿ ಮುಖ್ಯಮಂತ್ರಿ ಗಾದಿಗೆ ಅವರ ಹೆಸರು ಕೇಳಿ ಬಂದಿತ್ತು. 1996 ರಲ್ಲಿ ಎಚ್‌.ಡಿ. ದೇವೇಗೌಡರು ಪ್ರಧಾನಿಯಾದಾಗ ಜೆ.ಎಚ್‌. ಪಟೇಲ್‌ ಮುಖ್ಯಮಂತ್ರಿಯಾದರು. ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು. 2004 ರಲ್ಲಿ ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕಿತ್ತು. ಆದರೆ ಎನ್‌. ಧರಂಸಿಂಗ್‌ ಸಿಎಂ, ಸಿದ್ದರಾಮಯ್ಯ ಎರಡನೇ ಬಾರಿ ಡಿಸಿಎಂ ಆಗಬೇಕಾಯಿತು.

ಹುಬ್ಬಳ್ಳಿ ಅಹಿಂದ ಸಮಾವೇಶ ಸಂಘಟನೆ ಸಂಬಂಧ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಹಾಗೂ ಸಿದ್ದರಾಮಯ್ಯ ನಡುವೆ ವಿರಸ ಉಂಟಾಯಿತು. ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಸ್ಥಾನ ತ್ಯಜಿಸಬೇಕಾಯಿತು. ನಂತರ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ, ಕಾಂಗ್ರೆಸ್‌ ಸೇರಿದರು. ಚಾಮುಂಡೇಶ್ವರಿಯಲ್ಲಿ 2006 ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾದರು. ಆಗ ರಾಜ್ಯದಲ್ಲಿ ಜೆಡಿಎಸ್‌- ಬಿಜೆಪಿ ಸಮ್ಮಿಶ್ರ ಸರ್ಕಾರ ಇತ್ತು. ಎಚ್‌.ಡಿ. ಕುಮಾರಸ್ವಾಮಿ- ಸಿಎಂ, ಬಿ.ಎಸ್‌. ಯಡಿಯೂರಪ್ಪ -ಡಿಸಿಎಂ ಆಗಿದ್ದರು. ಶಿವಬಸಪ್ಪ ಎಂಬ ಅನಾಮಧೇಯ ವ್ಯಕ್ತಿಯನ್ನು ಸಿದ್ದರಾಮಯ್ಯ ಎದುರು ಕಣಕ್ಕಿಳಿಸಿ, ಪ್ರಬಲ ಹೋರಾಟ ನಡೆಸಿದರು. ಸೋತೆ ಹೋದರೂ ಎಂಬ ಸಿದ್ದರಾಮಯ್ಯ ತಿಣುಕಾಡಿ 257 ಮತಗಳ ಕೂದಲೆಳೆಯ ಅಂತರದಲ್ಲಿ ಗೆದ್ದರು. ಈ ರಾಜಕೀಯ ಪುನರ್ಜನ್ಮದಿಂದ ಅವರ ಅದೃಷ್ಟವೇ ಬದಲಾಗಿ ಹೋಯಿತು.

ಸಂಬಂಧಿಕರಲ್ಲದವರ ಆಯ್ಕೆ

ಶಾಸಕರು ನಿಧನರಾದಾಗ ನಡೆದ ಉಪ ಚುನಾವಣೆಯಲ್ಲಿ ಮೃತರ ಕುಟುಂಬದಲ್ಲವರು ಆಯ್ಕೆಯಾಗಿದ್ದಾರೆ. 1957 ರಲ್ಲಿ ನಂಜನಗೂಡಿನಲ್ಲಿ ಮಹದೇವಯ್ಯ ಅವರ ನಿಧನರಾದಾಗ ಜೆ.ಬಿ. ಮಲ್ಲಾರಾಧ್ಯ, ಕೃಷ್ಣರಾಜದಿಂದ 1974 ರಲ್ಲಿ ಡಿ. ಸೂರ್ಯನಾರಾಯಣ ನಿಧನರಾದಾಗ ವೆಂಕಟಲಿಂಗಯ್ಯ, 1977 ರಲ್ಲಿ ಚಾಮರಾಜದಲ್ಲಿ ಕೆ. ಪುಟ್ಟಸ್ವಾಮಿ ಅವರ ನಿಧನರಾದಾಗ ಬಿ.ಎನ್‌. ಕೆಂಗೇಗೌಡ, 1986 ರಲ್ಲಿ ಚಾಮರಾಜದಲ್ಲಿ ಕೆಂಪೀರೇಗೌಡರು ನಿಧನರಾದಾಗ ಪ್ರೊ.ಪಿ.ಎಂ. ಚಿಕ್ಕಬೋರಯ್ಯ ಆಯ್ಕೆಯಾಗಿದ್ದರು.

ಹುಣಸೂರು ಕ್ಷೇತ್ರದಲ್ಲಿ ಚಂದ್ರಪ್ರಭಾ ಅರಸು ಲೋಕಸಭೆಗೆ ಆಯ್ಕೆಯಾಗಿದ್ದರಿಂದ 1991 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಎಸ್‌. ಚಿಕ್ಕಮಾದು, ಸಿ.ಎಚ್‌. ವಿಜಯಶಂಕರ್‌ ಲೋಕಸಭೆಗೆ ಆಯ್ಕೆಯಾಗಿದ್ದರಿಂದ 1998 ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಜಿ.ಟಿ. ದೇವೇಗೌಡ ಆಯ್ಕೆಯಾಗಿದ್ದರು.

ಚಾಮರಾಜನಗರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರಿಂದ ಆರ್‌. ಧ್ರುವನಾರಾಯಣ ರಾಜೀನಾಮೆ ನೀಡಿದಾಗ 2009 ರಲ್ಲಿ ಕೊಳ್ಳೇಗಾಲದಿಂದ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ಜಿ.ಎನ್‌. ನಂಜುಂಡಸ್ವಾಮಿ ಆಯ್ಕೆಯಾಗಿದ್ದರು.

2017 ರಲ್ಲಿ ವಿ. ಶ್ರೀನಿವಾಸಪ್ರಸಾದ್‌ ಅವರ ರಾಜೀನಾಮೆಯಿಂದಾಗಿ ನಡೆದ ಉಪ ಚುನಾವಣೆಯಲ್ಲಿ ನಂಜನಗೂಡಿನಿಂದ ಕಳಲೆ ಕೇಶವಮೂರ್ತಿ ಆಯ್ಕೆಯಾದರು. ಶ್ರೀನಿವಾಸಪ್ರಸಾದ್‌ ಸೋತರು.

2018ರ ಸಾರ್ವತ್ರಿಕ ಚುನಾವಣೆಯಲ್ಲಿ ಹುಣಸೂರಿನಿಂದ ಗೆದ್ದಿದ್ದ ಎಚ್‌. ವಿಶ್ವನಾಥ್‌ ಆಪರೇಷನ್‌ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರಿದ್ದರಿಂದ ಉಪ ಚುನಾವಣೆ ನಡೆಯಿತು. ಆಗ ಕಾಂಗ್ರೆಸ್‌ನ ಎಚ್‌.ಪಿ. ಮಂಜುನಾಥ್‌ ಗೆದ್ದರು. ವಿಶ್ವನಾಥ್‌ ಸೋತರು.

Latest Videos
Follow Us:
Download App:
  • android
  • ios