ದಾವಣಗೆರೆ [ಸೆ.16]: ರಂಭಾಪುರಿ ಸ್ವಾಮಿಗಳದ್ದಷ್ಟೇ ಅಲ್ಲ ಆದಿಚುಂಚನಗಿರಿ ಶ್ರೀಗಳ ಫೋನ್‌, ನನ್ನ ಫೋನ್‌ ಸಹ ಟ್ರ್ಯಾಪ್‌ ಆಗಿದೆ. ಎಲ್ಲರ ಫೋನ್‌ ಟ್ರ್ಯಾಪ್‌ ಆಗಿದೆ ಎನ್ನುವ ಮೂಲಕ ಕೆಪಿಸಿಸಿ ಹಿರಿಯ ನಾಯಕ, ದಾವಣಗೆರೆ ದಕ್ಷಿಣ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹೊಸ ಬಾಂಬ್‌ ಸಿಡಿಸಿದ್ದಾರೆ.

ಕೇವಲ ಮಠಾಧೀಶರ ಫೋನ್‌ಗಳಷ್ಟೇ ಅಲ್ಲ ನನ್ನ ಫೋನ್‌ ಸಹ ಟ್ರ್ಯಾಪ್‌ ಆಗಿದೆ. ಬರೀ ಫೋನ್‌ ಕದ್ದಾಲಿಕೆಯಷ್ಟೇ ಅಲ್ಲ ನಮ್ಮ ಮೇಲೂ ಐಟಿ ರೈಡ್‌ ಸಹ ಆಗಿವೆ. ಬರೀರಂಭಾಪುರಿ ಸ್ವಾಮಿಗಳದ್ದಷ್ಟೇ ಅಲ್ಲ ಆದಿಚುಂಚನಗಿರಿ ಮಠದ ಸ್ವಾಮಿಗಳ ಫೋನ್‌ ಸಹ ಕದ್ದಾಲಿಸಿದ್ದಾರೆ ಎಂದು ಹೇಳಿದರು.

ನಗರದ ಹೈಸ್ಕೂಲ್‌ ಮೈದಾನದಲ್ಲಿ ಭಾನುವಾರ ರಂಭಾಪುರಿ ಶ್ರೀಗಳ ಶರನ್ನವ ರಾತ್ರಿ ಧರ್ಮ ಸಮ್ಮೇಳನದ ಹಂದರಗಂಬ ಪೂಜೆ ನೆರವೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಫೋನ್‌ ಕದ್ದಾಲಿಕೆ ಪ್ರಕರಣದಲ್ಲಿ ತಮ್ಮ ಪೋನ್‌ ಸಹ ಕದ್ದಾಲಿಸಿದ್ದಾರೆ ಎಂದರು. ಮಠಾಧೀಶರು, ನಮ್ಮಂತಹವರ ಫೋನ್‌ ಕದ್ದಾಲಿಸಿದರೆ ಏನು ಸಿಗುತ್ತದೆ? ರಿಯಲ್‌ ಎಸ್ಟೇಟ್‌ ದಂಧೆ ಮಾಡುವವರ ಫೋನ್‌ಗಳನ್ನಾದರೂ ಟ್ರ್ಯಾಪ್‌ ಮಾಡಿದರೆ ಏನಾದರೂ ಸಿಗಬಹುದು. ಎಲ್ಲರ ಫೋನ್‌ ಕದ್ದಾಲಿಸಲಾಗುತ್ತಿದೆ. ಅದೆಲ್ಲಾ ಸಾಮಾನ್ಯ ಎನ್ನುವ ಮೂಲಕ ತಮ್ಮ ಫೋನ್‌ ಸಹ ಟ್ರ್ಯಾಪ್‌ ಆಗಿದೆಯೆಂಬುದಾಗಿ ತಿಳಿಸಿದರು.