ನನ್ನದು ಪಕ್ಷ ನಿಷ್ಠೆ, ಕಟ್ಟಕಡೆಯ ಚುನಾವಣೆ. ಜೆಡಿಎಸ್‌ ವರಿಷ್ಠರು ಮರು ಪರಿಶೀಲನೆ ಮಾಡಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್‌ ನೀಡಬೇಕು ಎಂದು ತಾಲೂಕು ಜೆಡಿಎಸ್‌ ಮುಖಂಡ ಬಿ.ಎಲ್.ದೇವರಾಜು ಮನವಿ ಮಾಡಿದರು

 ಕೆ.ಆರ್‌.ಪೇಟೆ : ನನ್ನದು ಪಕ್ಷ ನಿಷ್ಠೆ, ಕಟ್ಟಕಡೆಯ ಚುನಾವಣೆ. ಜೆಡಿಎಸ್‌ ವರಿಷ್ಠರು ಮರು ಪರಿಶೀಲನೆ ಮಾಡಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್‌ ನೀಡಬೇಕು ಎಂದು ತಾಲೂಕು ಜೆಡಿಎಸ್‌ ಮುಖಂಡ ಬಿ.ಎಲ್.ದೇವರಾಜು ಮನವಿ ಮಾಡಿದರು.

ಪಟ್ಟಣದ ಟಿಎಪಿಎಂಎಸ್‌ ಆವರಣದಲ್ಲಿ ಪಕ್ಷದ ಅಭ್ಯರ್ಥಿ ಆಯ್ಕೆಯ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಆಗ್ರಹಿಸಿ ಬಿ.ಎಲ್….ದೇವರಾಜು ಅಭಿಮಾನಿಗಳು ಆಯೋಜಿಸಿದ್ದ ಬೃಹತ್‌ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, ವಕೀಲನಾಗಿದ್ದ ನಾನು 1983ರಲ್ಲಿ ಜನತಾ ಪಕ್ಷಕ್ಕೆ ಸೇರಿದೆ. ಜನತಾ ಪಕ್ಷ ವಿಭಜನೆಯಾದಾಗ ಎಚ್‌.ಡಿ.ದೇವೇಗೌಡರ ಪರ ನಿಂತು ಪಕ್ಷ ಕಟ್ಟಿದ್ದೇನೆ ಎಂದರು.

ನಾನು ದೇವೇಗೌಡರ ಪಕ್ಷವನ್ನು ಒಂದು ಕುಟುಂಬದಂತೆ ಭಾವಿಸಿದ್ದೇನೆ. ಅವರ ಕುಟುಂಬದಲ್ಲಿ ಒಬ್ಬನಾಗಿ ದುಡಿದಿದ್ದೇನೆ. 2013ರಲ್ಲಿ ನನಗೆ ಕೊಟ್ಟಿದ್ದ ಪಕ್ಷದ ಬಿ.ಫಾರಂ ಅನ್ನು ಕೆ.ಸಿ.ನಾರಾಯಣಗೌಡರ ಕೈಗೆ ಕೊಟ್ಟಾಗಲೂ ನಾನು ವರಿಷ್ಠರ ಆಶಯವನ್ನು ಗೌರವಿಸಿ ನಡೆದುಕೊಂಡಿದ್ದೇನೆ ಎಂದರು.

2018ರಲ್ಲಿ ನನಗೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರೇ ಖುದ್ದು ಕರೆ ಮಾಡಿ ಬಿ.ಫಾರಂ ನೀಡಿದ್ದರು. ಕೆ.ಸಿ.ನಾರಾಯಣಗೌಡರಿಗೆ ಟಿಕೆಚ್‌ ತಪ್ಪಿದ ಕೂಡಲೇ ಅಂದು ಕೆ.ಸಿ.ನಾರಾಯಣಗೌಡರ ಬೆಂಬಲಿಗರ ಪಡೆಯ ಮುಖ್ಯಸ್ಥರಾಗಿದ್ದ ಇಂದಿನ ಜೆಡಿಎಸ್‌ ಅಭ್ಯರ್ಥಿ ಎಚ್‌.ಟಿ.ಮಂಜು ಮತ್ತು ತಾಲೂಕು ಜೆಡಿಎಸ್‌ ಅಧ್ಯಕ್ಷ ಎ.ಎನ್‌.ಜಾನಕೀರಾಮ ಅವರು ದೇವೇಗೌಡರ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ಮಾಡಿದರು. ನನ್ನ ಮನೆಗೆ ಕಲ್ಲು ಹೊಡೆಸುವ ಯತ್ನ ನಡೆಸಿದರು ಎಂದು ಆರೋಪಿಸಿದರು.

ನನಗೆ ಸಿಕ್ಕಿದ್ದ ಬಿ.ಫಾರಂ ಕಿತ್ತು ಸಿ.ಫಾರಂ ತರುವ ಮೂಲಕ ಕೆ.ಸಿ.ನಾರಾಯಣಗೌಡರನ್ನು ಎರಡನೇ ಅವಧಿಗೆ ಕ್ಷೇತ್ರದ ಶಾಸಕರನ್ನಾಗಿಸಿದರು. ಆಗಲೂ ನಾನು ಪಕ್ಷದ ವಿರುದ್ಧ ಕೆಲಸ ಮಾಡಲಿಲ್ಲ. ಅವರು ಹೋರಾಟ ಮಾಡಿ ಸಿ.ಫಾರಂ ಪಡೆದು ಶಾಸಕರಾದ ಕೆ.ಸಿ.ನಾರಾಯಣಗೌಡ ಪಕ್ಷದ ವರಿಷ್ಠರಿಗೆ ಕೈಕೊಟ್ಟು ಬಿಜೆಪಿ ಸೇರಿ ಮಂತ್ರಿಯಾಗಿದ್ದಾರೆ ಎಂದರು.

ಅಂದು ನಾರಾಯಣಗೌಡರ ಪರ ನಿಂತು ದೇವೇಗೌಡರಿಗೆ ಧಿಕ್ಕಾರದ ಕೂಗಿದ ವ್ಯಕ್ತಿಗಳಿಗೆ ಇಂದು ಜೆಡಿಎಸ್‌ ಟಿಕೆಚ್‌ ನೀಡುವುದಕ್ಕೆ ನನ್ನ ವಿರೋಧವಿದೆ. ನನ್ನ ಹಣದಿಂದಲೇ ಹಾರ ತುರಾಯಿ ತರಿಸಿಕೊಂಡು ಪಟಾಕಿ ಹೊಡೆಸಿಕೊಳ್ಳುವ ಸಂಸ್ಕೃತಿ ನನ್ನದಲ್ಲ. ಇಂದಿನ ಸಭೆಗೆ ಜನರು ಬರದಂತೆ ಕೆಲಸ ಮಾಡಿದರು. ಆದರೂ ಜನ ನನ್ನ ನಿರೀಕ್ಷೆಗೆ ಮೀರಿ ಇಲ್ಲಿಗೆ ಬಂದಿದ್ದಾರೆ. ಪಕ್ಷದ ನಿಷ್ಠಾವಂತನಾದ ನನಗೆ ಅವಕಾಶ ನೀಡಿ. ಕ್ಷೇತ್ರದ ಅಭ್ಯರ್ಥಿ ಪ್ರಕಟಣೆಯನ್ನು ಮರು ಪರಿಶೀಲಿಸುವಂತೆ ಮನವಿ ಮಾಡಿದರು.

ಮುಂದಿನ ಚುನಾವಣೆಯಲ್ಲಿ ಟಿಕೆಟ್‌ ಕೊಟ್ಟರು, ಕೊಡದಿದ್ದರೂ ಇದೇ ಕೊನೆ. ಮತ್ತೆ ನಾನು ರಾಜಕಾರಣಕ್ಕೆ ಬರಲ್ಲ. ಕಳೆದ ಉಪಚುನಾವಣೆಯಲ್ಲಿ 56 ಸಾವಿರ ಮತ ಪಡೆದು ಹತ್ತಿರದಲ್ಲಿ ಸೋತೆ. ಎಚ್ಡಿಕೆ ನನ್ನ ಪರ ಪ್ರಚಾರ ಮಾಡಲಿಲ್ಲ. ಸರ್ಕಾರ ಹಾಗೂ ಯಡಿಯೂರಪ್ಪ ಪುತ್ರ ಇಲ್ಲೇ ಇದ್ದು ಚುನಾವಣೆ ಮಾಡಿದರು. ಆದರೂ ಹತ್ತಿರದಲ್ಲಿ ಬಂದು ಸೋತೆ. ಆ ಚುನಾವಣೆಯಲ್ಲಿ ಹಣ ಆಸ್ತಿ ಕಳೆದುಕೊಂಡಿದ್ದೇನೆ ಎಂದರು.

ಎಚ್‌.ಟಿ ಮಂಜುಗೆ 9 ವರ್ಷಕ್ಕೆ ಹಲವು ಅಧಿಕಾರ ಸಿಕ್ಕಿದೆ. ಜಿಪಂ ಸದಸ್ಯರಾಗಿ, ಮನ್ಮುಲ್… ನಿರ್ದೇಶಕನಾಗಿ ಅಧಿಕಾರ ಅನುಭವಿಸಿದ್ದಾರೆ. ನಾವು ಸೀನಿಯರ್‌ ಆಗಿದ್ದೀನಿ. ನಮಗೂ ಮತ್ತೊಮ್ಮೆ ಅವಕಾಶ ಮಾಡಿಕೊಡಿ. ಧರ್ಮಸ್ಥಳ ಮಂಜುನಾಥನ ಮೇಲಾಣೆಗೂ ಯಾರ ಬಳಿಯೂ ಒಂದು ಪೈಸಾ ಲಂಚ ಪಡೆದಿಲ್ಲ. ದಯವಿಟ್ಟು ಘೋಷಣೆಯಾದ ಟಿಕೆಟ್‌ ಮತ್ತೊಮ್ಮೆ ಪರಿಶೀಲಿಸಬೇಕು ಎಂದು ವರಿಷ್ಠರನ್ನು ಕೋರಿದರು.

ಬಂಡಾಯದ ಸಭೆಯಲ್ಲ:

ಮುಖಂಡ ಬಸ್‌ ಕೃಷ್ಣೇಗೌಡ ಮಾತನಾಡಿ, ಇದು ಬಂಡಾಯದ ಸಭೆಯಲ್ಲ. ಬದಲಾಗಿ ಕಾರ್ಯಕರ್ತರ ಆಶಯದ ಧ್ವನಿಯನ್ನು ಪಕ್ಷದ ವರಿಷ್ಠರಿಗೆ ಮುಟ್ಟಿಸುವ ನಿವೇದನಾ ಸಭೆ. ಬಿ.ಎಲ….ದೇವರಾಜು ಸಮರ್ಥ ಆಡಳಿತಗಾರ. ತತ್ವ ಮತ್ತು ಸಿದ್ಧಾಂತದ ಚೌಕಟ್ಟಿನಲ್ಲಿ ಕೆಲಸ ಮಾಡುವ ರಾಜಕಾರಣಿ ಎಂದರು.

ಕ್ಷೇತ್ರದ ಟಿಕೆಟ್‌ ಆಕಾಂಕ್ಷಿತರೆಲ್ಲರೂ ದೇವರಾಜುಗಾಗಿ ಹೋರಾಟವನ್ನು ನಿಲ್ಲಿಸಿದ್ದೇವೆ. ಬಿ.ಎಲ್….ದೇವರಾಜು ಅವರ ಪ್ರಾಮಾಣಿಕ ಸೇವೆ ಗುರುತಿಸಿ ಟಿಕೆಟ್‌ ವಿಚಾರದಲ್ಲಿ ವರಿಷ್ಠರು ತೆಗೆದುಕೊಂಡಿರುವ ತೀರ್ಮಾನವನ್ನು ಪುನರ್‌ ಪರಿಶೀಲಿಸುವಂತೆ ಒತ್ತಾಯಿಸಿದರು.

ಜನರ ಮಧ್ಯೆ ಇರುವವರನ್ನು ಗುರುತಿಸಿ:

ಮುಖಂಡ ಬಸ್‌ ಸಂತೋಷ್‌ಕುಮಾರ್‌ ಮಾತನಾಡಿ, ದೇವರಾಜು ಹೋರಾಟದ ಮೂಲಕ ಪಕ್ಷ ಕಟ್ಟಿದ್ದಾರೆ. ವರಿಷ್ಠರ ಮನೆ ಬಾಗಿಲು ಸುತ್ತುವವರನ್ನು ಪರಿಗಣಿಸಿ ಟಿಕೆಚ್‌ ನೀಡುವ ಬದಲು ಜನರ ಮಧ್ಯೆ ದುಡಿಯುವ ಜನನಾಯಕರನ್ನು ಗುರುತಿಸಿ ಟಿಕೆಟ್‌ ನಿಡುವಂತೆ ಮನವಿ ಮಾಡಿದರು.

ಸಭೆಯಲ್ಲಿ ಜಿಪಂ ಮಾಜಿ ಸದಸ್ಯ ರಾಮದಾಸ್‌, ತಾಪಂ ಮಾಜಿ ಸದಸ್ಯರಾದ ಕಡಹೆಮ್ಮಿಗೆ ಧನಂಜಯ, ಎ.ಎಂ.ಸಂಜೀವಪ್ಪ, ಬಿ.ಎನ್‌.ದಿನೇಶ್‌, ಮುಖಂಡರಾದ ಕೆ.ಎನ್‌.ಕಿರಣ(ಗುಂಡ), ಸೋಮಯ್ಯ, ಶಶಿಧರ ಸಂಗಾಪುರ, ಎಂ.ಪಿ.ಲೋಕೇಶ್‌, ಮಡುವಿನಕೋಡಿ ಚಂದ್ರಶೇಖರ್‌, ಮಡುವಿನಕೋಡಿ ನಾಗೇಶ್‌, ಚಿಕ್ಕತಾರಹಳ್ಳಿ ರಾಮಕೃಷ್ಣೇಗೌಡ, ಕೋಟಹಳ್ಳಿ ಶ್ರೀನಿವಾಸ್‌, ಕಾಯಿ ಸುರೇಶ್‌, ತೊಳಸಿ ಮಂಜಣ್ಣ, ತಿಮ್ಮೇಗವಡ, ಕುಂದನಹಳ್ಳಿ ಶಿವಕುಮಾರ್‌, ರಾಯಸಮುದ್ರ ಕುಮಾರ್‌, ಶಿವಲಿಂಗೇಗೌಡ, ಬಿ.ಆರ್‌.ವೆಂಕಟೇಶ್‌, ವಕೀಲರಾದ ಬಳ್ಳೇಕೆರೆ ಯೋಗೇಶ್‌, ಮದ್ದಿಕ್ಯಾಚುಮನಹಳ್ಳಿ ಸುರೇಶ್‌ ಸೇರಿದಂತೆ ಹಲವು ಮುಖಂಡರು ವೇದಿಕೆಯಲ್ಲಿದ್ದು ಬಿ.ಎಲ್….ದೇವರಾಜು ಪರ ಬೆಂಬಲ ಸೂಚಿಸಿದರು.

18ಕೆಎಂಎನ್‌ ಡಿ11,12

ಕೆ.ಆರ್‌.ಪೇಟೆ ಟಿಎಪಿಸಿಎಂಎಸ್‌ ಆವರಣದಲ್ಲಿ ನಡೆದ ಜೆಡಿಎಸ್‌ ಟಿಕೆಟ್‌ ನಿರ್ಧಾರ ಮರುಪರಿಶೀಲಿಸುವಂತೆ ಆಗ್ರಹಿಸಿ ಅಭಿಮಾನಿಗಳು ಆಯೋಜಿಸಿದ್ದ ಬೃಹತ್‌ ಬಹಿರಂಗ ಸಭೆಯನ್ನು ಉದ್ಘಾಟಿಸಿ ಬಿ.ಎಲ್….ದೇವರಾಜು ಮಾತನಾಡಿದರು.