ನನ್ನ ಉದ್ದೇಶ ಮಂತ್ರಿಗಿರಿ ಅಲ್ಲ : ವಿಜಯೇಂದ್ರ
- ಮಂತ್ರಿ ಆಗಬೇಕು, ಪಕ್ಷದ ರಾಜ್ಯಾಧ್ಯಕ್ಷ ಆಗಬೇಕು ಎನ್ನುವ ಪ್ರಶ್ನೆ ಇಲ್ಲ
- ಪಕ್ಷ ವಹಿಸುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದಷ್ಟೇ ನಮ್ಮ ಕೆಲಸ
ಶಿವಮೊಗ್ಗ (ಆ.17): ಮಂತ್ರಿ ಆಗಬೇಕು, ಪಕ್ಷದ ರಾಜ್ಯಾಧ್ಯಕ್ಷ ಆಗಬೇಕು ಎನ್ನುವ ಪ್ರಶ್ನೆ ಇಲ್ಲ. ಪಕ್ಷ ವಹಿಸುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದಷ್ಟೇ ನಮ್ಮ ಕೆಲಸ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಶಿವಮೊಗ್ಗದ ರವೀಂದ್ರ ನಗರ ಶ್ರೀ ಪ್ರಸನ್ನ ಗಣಪತಿ ದೇವಾಲಯದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರ ಹುಟ್ಟುಹಬ್ಬದ ಅಂಗವಾಗಿ ಸೋಮವಾರ ಸ್ನೇಹಿತರು ಮತ್ತು ಅಭಿಮಾನಿಗಳು ಏರ್ಪಡಿಸಿದ್ದ ವಿಶೇಷ ಪೂಜೆಯಲ್ಲಿ ಭಾಗವಹಿಸಿ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನಾನು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆ ಆಕಾಂಕ್ಷಿಯಲ್ಲ: ಬಿ ವೈ ವಿಜಯೇಂದ್ರ
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಹಿಂದೆ ರಾಜ್ಯದಲ್ಲಿ ಹಲವಾರು ಹೋರಾಟ ನಡೆಸಿದ್ದಾರೆ. ರಾಜ್ಯದಲ್ಲಿ ತಾವು ಅಧಿಕಾರ ನಡೆಸಬೇಕು, ಮಂತ್ರಿ ಆಗಬೇಕು, ಮುಖ್ಯಮಂತ್ರಿ ಆಗಬೇಕು ಎಂಬ ಉದ್ದೇಶವಿಟ್ಟುಕೊಂಡು ಹೋರಾಟ ಮಾಡಲಿಲ್ಲ. ಪಕ್ಷ ಅಧಿಕಾರಕ್ಕೆ ಬರಬೇಕೆಂಬ ಉದ್ದೇಶ ಅವರದಾಗಿತ್ತು. ಅದೇ ರೀತಿ ನಾವು ಕೂಡ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬ ಉದ್ದೇಶದಿಂದ ಸಂಘಟನೆಯಲ್ಲಿ ತೊಡಗಿಕೊಂಡಿದ್ದೇವೆ ಎಂದರು.