ಮುಳ್ಳುಸೋಗೆ ಮಹಿಳೆಯ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಸ್ಪಷ್ಟನೆ!
ಕೊಡಗು ಜಿಲ್ಲೆಯ ಕುಶಾಲನಗರದ ಮುಳ್ಳುಸೋಗೆ ಗ್ರಾಮದ ಮಹಿಳೆಯೊಬ್ಬರ ಮನೆಯನ್ನು ವಕ್ಫ್ ಬೋರ್ಡ್ ಆಸ್ತಿ ಎಂದು ಹೇಳಿ ಖಾಲಿ ಮಾಡುವಂತೆ ಧಮ್ಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಪೋಸ್ಟ್ ಆಧರಿಸಿ ಪೊಲೀಸರು ಮಹಿಳೆಯ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿ ಎಫ್‌ಐಆರ್ ದಾಖಲಿಸಿದ್ದಾರೆ.
ಕೊಡಗು (ನ.10): ಕೊಡಗು ಜಿಲ್ಲೆಯ ಕುಶಾಲನಗರದ ಮುಳ್ಳುಸೋಗೆ ಗ್ರಾಮದ ಮಹಿಳೆಯೊಬ್ಬರ ಮನೆಯನ್ನು ವಕ್ಫ್ ಬೋರ್ಡ್ ಆಸ್ತಿ ಎಂದು ಹೇಳಿ ಖಾಲಿ ಮಾಡುವಂತೆ ಧಮ್ಕಿ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಪೋಸ್ಟ್ ಆಧರಿಸಿ ಪೊಲೀಸರು ಮಹಿಳೆಯ ಮನೆಗೆ ಭೇಟಿ ನೀಡಿ ವಿಚಾರಣೆ ನಡೆಸಿ ಎಫ್‌ಐಆರ್ ದಾಖಲಿಸಿದ್ದಾರೆ.
ನವೆಂಬರ್ 6ರಂದು ಶ್ರೀಮತಿ ಪುಚ್ಚಿಮಂಡ ರೇಣುಕಾ ಉತ್ತಪ್ಪ ಎಂಬುವವರಿಗೆ ಸೇರಿದ ಕುಶಾಲನಗರ ಮುಳ್ಳುಸೋಗೆ ಗ್ರಾಮದಲ್ಲಿರುವ ಆಸ್ತಿಗೆ 2 ಜನರು ಬಂದು ಇದು ವಕ್ಫ್ ಬೋರ್ಡ್‌ಗೆ ಸೇರಿದ ಆಸ್ತಿ ನೀವು ಈ ಜಾಗವನ್ನು ಖಾಲಿ ಮಾಡಬೇಕು. ಇಲ್ಲದಿದ್ದರೆ ಜಾಗ ಖಾಲಿ ಮಾಡಿಸಲು ಹೊರಗೆ 15 ಜನ ಇದ್ದರೆ ಎಂಬುದಾಗಿ ಕೊಡವ ಸಮಾಜದ ವಿಳಾಸಕ್ಕೆ ಬರೆದಿರುವ ಪತ್ರವು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಆಗಿರುವುದು ಕಂಡುಬಂದಿದೆ. ಆದರೆ, ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕಾರ ಆಗಿರುವುದಿಲ್ಲ. ಆದರೆ, ಸಾಮಾಜಿಕ ಜಾಲಾತಾಣಗಳಲ್ಲಿ ಹರದಾಡುತ್ತಿರುವ ಪೋಸ್ಟ್ ಕುರಿತು ಕುಶಾಲನಗರ ಪೊಲೀಸ್ ಠಾಣಾ ಸಿಬ್ಬಂದಿ ಬೆಂಗಳೂರುನಲ್ಲಿ ವಾಸವಿದ್ದ ಪುಚ್ಚಿಮಂಡ ರೇಣುಕಾ ಉತ್ತಪ್ಪ ಅವರ ಮನೆಗೆ ತೆರಳಿ ವಿಚಾರಣೆಯನ್ನು ನಡೆಸಿ ಎಫ್‌ಐಆರ್ ದಾಖಲಿಸಿದ್ದಾರೆ.
ಪೊಲೀಸರ ವಿಚಾರಣೆಯಲ್ಲಿ ತಿಳಿದುಬಂದ ಅಂಶಗಳು:
- ರೇಣುಕಾ ಉತ್ತಪ್ಪ ಅವರ ಆಸ್ತಿ ಖಾಸಗಿ ಆಸ್ತಿಯಾಗಿದ್ದು, ಆಗಿದ್ದು, ವಕ್ಸ್ ಬೋರ್ಡ್ ಆಸ್ತಿಯಾಗಿರುವುದಿಲ್ಲ. ಜೊತೆಗೆ ವಕ್ಫ್ ಬೋರ್ಡ್ ಕಛೇರಿಯಿಂದ ಯಾವುದೇ ವ್ಯಕ್ತಿಗಳು ಬಂದಿರುವುದಿಲ್ಲ ಹಾಗೂ ಜಾಗ ಖಾಲಿ ಮಾಡುವ ಸಂಬಂಧ ವಕ್ಸ್ ಬೋರ್ಡ್‌ನಿಂದ ಯಾವುದೇ ನೋಟೀಸ್ ನೀಡಿರುವುದು ಕಂಡುಬಂದಿರುವುದಿಲ್ಲ.
- ಈ ಘಟನೆ ಕುರಿತು ಅವರ ಮನೆಯ ಸುತ್ತ-ಮುತ್ತಲಿನ ಜನರನ್ನೂ ವಿಚಾರಿಸಲಾಗಿದ್ದು, ಮಹಿಳೆಯ ಮನೆ ಖಾಲಿ ಮಾಡಿಸಲು ಜನರು ಬಂದಿರುವುದು ಕಂಡುಬಂದಿಲ್ಲ.
- ಪುಚ್ಚಿಮಂಡ ರೇಣುಕಾ ಉತ್ತಪ್ಪ ಅವರು ತಮಗೆ ಕೆಲವರು ಅ.29 ಹಾಗೂ ಅ.30ರಂದು ಕರೆ ಮಾಡಿ ಬೆದರಿಕೆ ಹಾಕಿರುವ ಬಗ್ಗೆ ತಿಳಿಸಿದ್ದಾರೆ. ಆದರೆ, ಮೊಬೈಲ್ ಕರೆಗಳನ್ನು ಪರಿಶೀಲಿಸಲಾಗಿದ್ದು, ಅವರಿಗೆ ಬೆದರಿಕೆ ಕರೆ ಬಂದಿರುವ ಮಾಹಿತಿ ಲಭ್ಯವಾಗಿಲ್ಲ. ಜೊತೆಗೆ ಅವರ ಪೋನ್ ಪರಿಶೀಲಿಸಲಾಗಿದ್ದು, ಅಂತಹ ಯಾವುದೇ ಕರೆ ಸ್ವೀಕರಿಸಿರುವ ಬಗ್ಗೆ ಮಾಹಿತಿ ಇರುವುದಿಲ್ಲ.
- ಇನ್ನು ದೂರುದಾರರ ಹೇಳಿಕೆಯಂತೆ 2 ಜನರು ಬಂದಿದ್ದಾರೆಯೇ ಅಥವಾ ಇಲ್ಲವೇ? ಒಂದು ವೇಳೆ ಬಂದಿದ್ದರೆ ವೈಯಕ್ತಿಕ ವಿಚಾರ ಅಥವಾ ಬೇರೆ ಯಾವ ಕಾರಣಗಳಿಗಾಗಿ ಬಂದಿದ್ದರು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ಸ್ಪಷ್ಟೀಕರಣ ನೀಡಿದೆ.
ಆದ್ದರಿಂದ ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯ ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದನ್ನು ನಿಲ್ಲಿಸುವಂತೆ ಕೋರಿದೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಯನ್ನು ಹರಡಿಸಿ ಸಮಾಜದ ಸಾಮರಸ್ಯವನ್ನು ಕದಡುವ ಪ್ರಯತ್ನ ಮಾಡಬಾರದು. ಯಾವುದೇ ಅಪರಿಚಿತ ವ್ಯಕ್ತಿಗಳು ಯಾವುದೇ ಸರ್ಕಾರಿ ಇಲಾಖೆ ಅಥವಾ ಸರ್ಕಾರದ ವತಿಯಿಂದ ಬಂದಿರುವುದಾಗಿ ತಿಳಿಸಿ ಬೆದರಿಕೆ ಹಾಕುವುದು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ/ ತುರ್ತು ಸಹಾಯವಾಣಿ 112 ಗೆ ಕರೆ ಮಾಡಿ ಮಾಹಿತಿ ನೀಡಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಕೋರುತೇವೆ. ಆಕ್ರಮ ಚಟುವಟಿಕೆಗಗಳ ಕುರಿತು ಮಾಹಿತಿ ಒದಗಿಸುವವರ ವಿವರಗಳನ್ನು ಬಹಿರಂಗಪಡಿಸುವುದಿಲ್ಲ ಎಂದು ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.