ಕಂಪ್ಲಿಯಲ್ಲಿ ಭುಗಿಲೆದ್ದ ಮಸೀದಿ-ಮಂದಿರ ವಿವಾದ: ವಿಘ್ನ ನಿವಾರಕನಿಗೆ ವಿಘ್ನ
* ಸಮುದಾಯ ಭವನದಲ್ಲಿ ರಾತ್ರೋ ರಾತ್ರಿ ಗಣೇಶ ಮೂರ್ತಿ ಪ್ರತಿಷ್ಠಾಪನೆ
* ಮೂರ್ತಿ ತೆರವಿಗೆ ಮುಸ್ಲಿಮರ ಆಗ್ರಹ
* ಗಣೇಶ ಮೂರ್ತಿ ತೆರವು ಮಾಡೋದಾದ್ರೆ ಮೊದಲು ಮಸೀದಿ ತೆರವಿಗೆ ಪ್ರತಿಪಟ್ಟು
ವರದಿ : ನರಸಿಂಹ ಮೂರ್ತಿ ಕುಲಕರ್ಣಿ
ಬಳ್ಳಾರಿ, (ಮೇ.22): ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಈಗಾಗಲೇ ಕರ್ನಾಟಕದಲ್ಲಿ ಹಿಂದೂ-ಮುಸ್ಲಿಂ ನಡುವೆ ಧರ್ಮ ದಂಗಲ್ ನಡೆದಿದೆ. ಇದರ ಮಧ್ಯೆ ಬಳ್ಳಾರಿಯಲ್ಲಿ ಹಿಂದೂ-ಮುಸ್ಲಿಂ ಫೈಟ್ ಆಗಿದೆ.
ಹೌದು... ಗಣೇಶನನ್ನ ವಿಘ್ನ ನಿವಾರಕ ಅಂತಾರೆ. ಆದ್ರೆ ಇಲ್ಲಿ ಗಣೇಶ ಮೂರ್ತಿ ಸ್ಪಾಪನೆಯೇ ವಿಘ್ನಕ್ಕೆ ಕಾರಣವಾಗಿದೆ. ವಿಘ್ನ ನಿವಾರಕ ಗಣೇಶನ ಮೂರ್ತಿ ಸ್ಪಾಪನೆ ವಿರೋಧಿಸಿ ಒಂದು ಕೋಮಿನ ಜನರು ಹೋರಾಟಕ್ಕೆ ಇಳಿದಿದ್ದಾರೆ. ಇನ್ನೊಂದು ಕೋಮಿನ ಜನರು ಗಣೇಶನನ್ನ ತೆರವು ಮಾಡೋದಾದ್ರೆ ಮೊದಲು ಸುಪ್ರೀಂ ಕೋರ್ಟ್ ನಿಯಮದ ಪ್ರಕಾರ ರಸ್ತೆ ಮಧ್ಯೆ ಇರೋ ಮಸೀದಿ ತೆರವು ಮಾಡಿ ಎಂದು ಪಟ್ಟು ಹಿಡಿದಿದ್ದಾರೆ. ಹಿಜಾಬ್, ಹಲಾಲ್. ಜಟ್ಕಾ ಕಟ್ ನಂತರ ಮಂದಿರ-ಮಸೀದಿಗಳ ವಿಚಾರದಲ್ಲೂ ಈಗ ಧರ್ಮ ದಂಗಲ್ ಶುರುವಾಗಿದೆ..
ಮಂಗಳೂರು ಮಸೀದಿಯಲ್ಲಿ ದೇವರ ಅಸ್ತಿತ್ವ ಪತ್ತೆಗೆ ತಾಂಬೂಲ ಪ್ರಶ್ನೆಗೆ ಮುಂದಾದ VHP
ವಿಘ್ನ ನಿವಾರಕನಿಗೆ ವಿಘ್ನ
ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದ ಪುರಸಭೆಯ ಅಧೀನದಲ್ಲಿರುವ ಸಮುದಾಯ ಭವನದಲ್ಲಿ ಪ್ರತಿಷ್ಠಾಪನೆಗೊಂಡಿರುವ ಗಣೇಶ ಮೂರ್ತಿ ವಿಚಾರ ಈಗ ವಿವಾದಕ್ಕೆ ಕಾರಣವಾಗಿದೆ. ಕಂಪ್ಲಿಯ ಮಾರುತಿ ನಗರದಲ್ಲಿ 12 ವರ್ಷಗಳ ಹಿಂದೆ ಸುಮುದಾಯ ಭವನವನ್ನು ನಿರ್ಮಾಣ ಮಾಡಲಾಗಿತ್ತು. ಈ ಬೃಹತ್ತಾದ ಭವನದಲ್ಲಿ ಇದೂವರೆಗೂ ಮುಸ್ಲಿಂ ಹಾಗೂ ಹಿಂದುಗಳ ಸಭೆ ಸಮಾರಂಭ ಮದುವೆ ಕಾರ್ಯಗಳನ್ನ ಮಾಡಿದ್ರು. ಆದ್ರೆ ಮೊನ್ನೆ ರಾತ್ರೋ ರಾತ್ರಿ ಈ ಸಮುದಾಯ ಭವನದ ಆವರಣದೊಳಗೆ ಕಟ್ಟೆಯ ಮೇಲೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ. ಈಗ ಅದು ವಿವಾದಕ್ಕೆ ಕಾರಣವಾಗಿದೆ.
ಹಿಂದುಗಳ ಮದುವೆ ಕಾರ್ಯದ ವೇಳೆ ದೇವರ ಪೂಜೆ. ದೇವಸ್ಥಾನ ಬೇಕು. ಹೀಗಾಗಿ ಸಮುದಾಯ ಭವನದ ಆವರಣದೊಳಗೆ ಕಟ್ಟೆಯ ಮೇಲೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದೇವೆ ಎಂದು ಸ್ಥಳೀಯರು ಹೇಳ್ತಿದ್ದಾರೆ. ಆದ್ರೆ ಸಮುದಾಯ ಭವನದ ಆವರಣದೊಳಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿರೋದು ಮುಸ್ಲಿಂ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ಸಮುದಾಯ ಭವನದೊಳಗೆ ಪ್ರತಿಷ್ಠಾಪನೆ ಮಾಡಿರೋ ಗಣೇಶ ಮೂರ್ತಿ ತೆರವು ಮಾಡಿ ಎಂದು ತಹಶೀಲ್ದಾರರಿಗೆ ಮತ್ತು ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಸಮುದಾಯ ಭವನದೊಳಗೆ ಪ್ರತಿಷ್ಠಾಪನೆ ಮಾಡಿರೋ ಗಣೇಶ ಮೂರ್ತಿ ತೆರವು ಮಾಡೋದಾದ್ರೆ ಮೊದಲು ಸರ್ಕಾರದ ಜಾಗವನ್ನ ಒತ್ತುವರಿ ಮಾಡಿಕೊಂಡು ಪುರಸಭೆಯ ಪಾರ್ಕ್‌ನಲ್ಲಿ ನಿರ್ಮಿಸಿರುವ ಮಸೀದಿ ತೆರವು ಮಾಡಿ ಎಂದು ಮತ್ತೊಂದು ಸಮುದಾಯದ ಜನರು ಪಟ್ಟು ಹಿಡಿದಿದ್ದಾರೆ
ಸಮುದಾಯ ಭವನಕ್ಕೆ ಬೀಗ
ಸಮುದಾಯ ಭವನದೊಳಗೆ ಎಲ್ಲ ಜಾತಿ ಜನಾಂಗ ಮತ್ತು ಸಮುದಾಯದ ಜನರು ಸಭೆ ಸಮಾರಂಭ ಮದುವೆ ಕಾರ್ಯಗಳು ಮಾಡುತ್ತಾರೆ. ಮುಸ್ಲಿಮರ ಶಾದಿ ವೇಳೆ ಮಾಂಸಾಹಾರಿ ಊಟದ ವ್ಯವಸ್ಥೆ ಇರುತ್ತೆ. ಅಲ್ಲಿ ಹಿಂದೂ ದೇವರು ಇರೋದು ಸರಿಯಲ್ಲ. ಯಾರಾದ್ರು ಕಿಡಿಗೇಡಿಗಳು ಮಾಂಸದೂಟವನ್ನು ಆ ಕಡೆ ಈ ಕಡೆ ಚೆಲ್ಲಿದ್ರೆ ಪರಿಸ್ಥಿತಿ ಹದಗೆಡುತ್ತೆ ಹೀಗಾಗಿ ಸಮುದಾಯ ಭವನದೊಳಗೆ ಗಣೇಶ ಮೂರ್ತಿ ಹಾಗೂ ಹಿಂದು ದೇವಸ್ಥಾನ ಸ್ಪಾಪನೆ ಬೇಡ ಅನ್ನೋದು ಮುಸ್ಲಿಮರ ವಾದವಾಗಿದೆ. ಈ ವಾದ- ವಿವಾದ ಹಿನ್ನೆಲೆಯಲ್ಲಿ ಸಧ್ಯಕ್ಕೆ ಸಮುದಾಯ ಭವನಕ್ಕೆ ಬೀಗ ಹಾಕಲಾಗಿದೆ.
ಹೊಸ ವಿವಾದಕ್ಕೆ ನಾಂದಿ
ರಾಜ್ಯದಲ್ಲಿ ಹಿಜಾಬ್, ಹಲಾಲ್. ಜಟ್ಕಾ ಕಟ್ ವಿವಾದದ ಬೆನ್ನಲ್ಲೆ ಇದೂವರೆಗೂ ಶಾಂತವಾಗಿದ್ದ ಕಂಪ್ಲಿ ಪಟ್ಟಣದಲ್ಲೀಗ ಗಣೇಶ ಮೂರ್ತಿ ಸ್ಪಾಪನೆ ವಿಚಾರ ವಿವಾದಕ್ಕೆ ಕಾರಣವಾಗಿದೆ. ಗಣೇಶ ಮೂರ್ತಿ ತೆರವು ಮಾಡೋದಾದ್ರೆ ಮಸೀದಿಯನ್ನೂ ತೆರವು ಮಾಡಿ ಅನ್ನೋ ವಿವಾದ ಹುಟ್ಟಿಕೊಂಡಿದೆ. ಹೀಗಾಗಿ ಪುರಸಭೆ ಆಡಳಿತ ಮಂಡಳಿ ಸಮುದಾಯ ಭವನಕ್ಕೆ ಬೀಗ ಹಾಕಿದ್ದು. ತಹಶೀಲ್ದಾರ ಹಾಗೂ ಪೊಲೀಸರು ಸ್ಥಳೀಯರ ಮನವೊಲಿಕೆಗೆ ಮುಂದಾಗಿದ್ದಾರೆ. ಆದ್ರೆ ಗಣೇಶ ಮೂರ್ತಿ ವಿವಾದ ಎಲ್ಲಿಗೆ ಹೋಗಿ ತಲುಪುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.