Asianet Suvarna News Asianet Suvarna News

'ಕಾಂಗ್ರೆಸ್ ಈಗ ಮುಳುಗುವ ಹಡಗಿನಂತಿದೆ, ಮುಸ್ಲಿಂ ಯುವಕರು ಎಚ್ಚೆತ್ತುಕೊಳ್ಳಬೇಕು'

ಕಾಂಗ್ರೆಸ್ ಈಗ ಮುಳುಗುವ ಹಡಗಿನಂತಿದೆ, ಕಾಂಗ್ರೆಸ್ ಅಹಂಕಾರದಿಂದಲೇ ನಾಶ ಎಂದ ಎಐಎಮ್‍ಐಎಮ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಸಾದುದ್ದೀನ್ ಓವೈಸಿ| ಜೆಡಿಎಸ್ ಪಕ್ಷವು ಕಾಂಗ್ರೆಸನ್ನು ನಂಬಿ ಹಾಳಾಯಿತು, ಕೊನೆಗೆ ಹೆಚ್. ಡಿ. ಕುಮಾರಸ್ವಾಮಿ ಸಿಎಂ ಪದವಿ ಕಳೆದುಕೊಂಡರು| ಆರ್‍ಎಸ್‍ಎಸ್ ನನ್ನನ್ನು ಕೆಣಕಿದರೆ ಸುಮ್ಮನೇ  ಕೇಳಿಸಿಕೊಳ್ಳುವವ ನಾನಲ್ಲ, ನಾನು ಕೆಂಡಯಿದ್ದಂತೆ ಎಂದ ಓವೈಸಿ| 

Muslims Do Not Trust Congress Party: Asaduddin Owaisi
Author
Bengaluru, First Published Sep 27, 2019, 10:17 AM IST

ಕಲಬುರಗಿ(ಸೆ.27) ಕಾಂಗ್ರೆಸ್ ಪಕ್ಷವು ಮುಸ್ಲಿಂ ಸಮುದಾಯವನ್ನು ಗುಲಾಮರನ್ನಾಗಿ ಮಾಡಿಕೊಂಡಿದೆ ಎಂದು ಎಐಎಮ್‍ಐಎಮ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಅವರು ಶುಕ್ರವಾರ ಕಲಬುರಗಿ ನ್ಯಾಷನಲ್ ಕಾಲೇಜಿನಲ್ಲಿ ಮುಸ್ಲಿಂ ಸಮುದಾಯದವರನ್ನ ಉದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷವನು ಹಿಗ್ಗಾಮುಗ್ಗಾ ಟೀಕಿಸಿದ್ದಾರೆ.

ಪೀಳಿಗೆಯಿಂದ ಪೀಳಿಗೆಗೆ ಕಾಂಗ್ಸೆಸ್ ನಂಬಿ ಹಾಳಾಗಿದ್ದೀರಿ.  ದಯವಿಟ್ಟು ಆ ಮನೋಧೋರಣೆಯಿಂದ ಹೊರಬರಬೇಕೆಂದು ಅಲ್ಲಿ ಸೇರಿದ್ದ ಮುಸ್ಲಿಂ ಬಾಂಧವರಿಗೆ ಕರೆ ನೀಡಿದರು.

ಮುಸ್ಲಿಂ ಬಾಂಧವರು ಜೇಬು ತುಂಬಿಸಿಕೊಳ್ಳಲು ಕಾಂಗ್ರೆಸ್ ಪಕ್ಷದ ಗುಲಾಮರಾಗುತ್ತಿದ್ದಾರೆ. ಇದಕ್ಕಾಗಿಯೇ ತಾಯಿ ಒಂಬತ್ತು ತಿಂಗಳು ಹೊತ್ತು ಜನ್ಮ ನೀಡಿದ್ದಾಳೆಯೇ? ಎಂದು ಪ್ರಶ್ನಿಸಿದ ಅವರು, ತಲೆ ಎತ್ತಿ ಬದುಕುವುದನ್ನು ಕಲಿಯಿರಿ. ಕಾಂಗ್ರೆಸ್ ಈಗ ಮುಳುಗುವ ಹಡಗಿನಂತಿದೆ. ಸ್ವತ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್‍ಗಾಂಧಿ ಅಮೇಠಿಯಲ್ಲಿ ಸೋಲುತ್ತೇನೆಂದು ಗೊತ್ತಾಗಿ ಕೇರಳದಿಂದ  ಮುಸ್ಲಿಮರ ಮತ ಪಡೆದು ಗೆದ್ದರು. ದೋಣಿ ಮುಳುಗುವಾಗ ಪ್ರಯಾಣಿಕರನ್ನು ಬಿಟ್ಟು ಕ್ಯಾಪ್ಟನ್ ಪಲಾಯನ ಮಾಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಅಲ್ಲಾ ಬಿಟ್ಟರೆ ಯಾರ ಮುಂದೆಯೇ ತಲೆ ಬಾಗಿಸಬಾರದು. ಕಾಂಗ್ರೆಸ್ ಮತ್ತು ಬಿಜೆಪಿ ಮುಂದೆ ತಲೆಬಾಗಿಸುವುದನ್ನು ಇನ್ನೂ ಮುಂದೆ ನಿಲ್ಲಿಸಬೇಕು. ಬಾಯಿಯಲ್ಲಿ ಗುಟಕಾ, ಕೈಯಲ್ಲಿ ಸಿಗರೇಟ್ ಹಿಡಿದು ಅಲ್ಲಾ ಹೆಸರು ಹೇಳಿದರೆ ಉಪಯೋಗವಿಲ್ಲ. ಅಂತರಾತ್ಮದಿಂದ ಅಲ್ಲಾ ಹೆಸರು ಹೇಳುವುದನ್ನು ಕಲಿಯಬೇಕು ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ಅಹಂಕಾರದಿಂದಲೇ ನಾಶ:

ಕಾಂಗ್ರೆಸ್ ಪಕ್ಷವನ್ನು ನಂಬಿ ಮಲ್ಲಿಕಾರ್ಜುನ ಖರ್ಗೆಯವರಿಗೆ ಗೆಲ್ಲಿಸಲು ಅವರ ಹಿಂದೆ ಹಿಂದೆ ಬಾಲಂಗೋಚಿಗಳಾಗಿ ತಿರುಗಾಡಿದ್ದೀರಿ. ನೀವೇ ಗೆಲ್ಲುತ್ತೀರೆಂದು ಹೇಳಿ ಅವರ ಗುಲಾಮರಾಗಿದ್ದೀರಿ. ಅವರ ಕೈಯಲ್ಲಿ ಬೆಳೆದವರು ಹೇಗೆ ಗೆದ್ದರು ಎಂಬುದನ್ನು ಯೋಚಿಸಿದ್ದೀರಾ? ಹಾಗಾದರೆ ನಿಮ್ಮ ಓಟುಗಳು ಎಲ್ಲಿಗೆ ಹೋದವು? ಅಧಿಕಾರದ ಆಟವನ್ನು ಅರ್ಥಮಾಡಿಕೊಳ್ಳಬೇಕು. ಕಾಂಗ್ರೆಸ್ ಪಕ್ಷ ಈಗ ಮೊದಲಿನಂತಿಲ್ಲ. ಮುಸ್ಲಿಂ ಸಮುದಾಯವನ್ನು ಕೇವಲ ಓಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ. ಮುಳುಗುವ ಹಡಗನ್ನು ನಂಬುತ್ತೀರೋ ಅಥವಾ ನಿಮ್ಮ ಸಾಮರ್ಥ್ಯದ ಮೇಲೆ ನಿಲ್ಲುತ್ತೀರೋ ಎಂಬುದನ್ನು ಇಂದಿನ ಯುವಕರು ನಿರ್ಧರಿಸಬೇಕಾಗಿದೆ. ಕಾಂಗ್ರೆಸ್ ಪಕ್ಷವು ತನ್ನ ಅಹಂಕಾರದಿಂದಲೇ ನಾಶವಾಗುತ್ತಿದೆ ಎಂದು ಹೇಳಿದ್ದಾರೆ. 

ಕಾಂಗ್ರೆಸ್ ಪಕ್ಷವು ಕ್ಯಾನ್ಸರ್ ರೋಗದಂತಿದೆ:

ಜೆಡಿಎಸ್ ಪಕ್ಷವು ಕಾಂಗ್ರೆಸನ್ನು ನಂಬಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದರು. ಕೊನೆಗೆ ಏನಾಯಿತು. ಮಾಜಿ ಸಿಎಂ ಸಿದ್ದರಾಮಯ್ಯ ಕುಮಾರಸ್ವಾಮಿಗೆ ನಿದ್ದೆಯಿಲ್ಲದಂತೆ ಮಾಡಿ ಕೊನೆಗೆ ಮುಖ್ಯಮಂತ್ರಿ ಪದವಿಯಿಂದ ಇಳಿಸಿಯೇ ಬಿಟ್ಟರು. ಇದು ಕಾಂಗ್ರೆಸ್‍ನ ಕುಟಿಲ ನೀತಿಯಾಗಿದೆ, ಕ್ಯಾನ್ಸರ್ ರೋಗ ನಿಧಾನವಾಗಿ ಮನುಷ್ಯನನ್ನು ಸಾಯಿಸುವಂತೆ ಕಾಂಗ್ರೆಸ್ ಪಕ್ಷವು ನಿರ್ನಾಮ ಮಾಡುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಮೆರಿಕ ಅಧ್ಯಕ್ಷರ ವಿರುದ್ಧ ಟೀಕೆ:

ಅಮೆರಿಕದ ಅಧ್ಯಕ್ಷ ಪ್ರಧಾನಿ ನರೇಂದ್ರ ಮೋದಿಯವರನ್ನು ರಾಷ್ಟ್ರಪತಿ ಎಂದು ಹೇಳಿದರೆ ಮೋದಿ ತಾವು ಆ ಮಟ್ಟಕ್ಕೆ ಬೆಳೆದಿಲ್ಲವೆಂದು ಸಹ ಹೇಳಲಿಲ್ಲ. ಗಾಂಧೀಜಿಯವರೆಲ್ಲಿ, ಮೋದಿ ಎಲ್ಲಿ ಎಂಬುದನ್ನು ಟ್ರಂಪ್‍ರವರಿಗೆ ಗೊತ್ತಿಲ್ಲವೆನಿಸುತ್ತದೆ. ತಮ್ಮನ್ನು ರಾಷ್ಟ್ರವಿರೋಧಿ ಎಂದು ಹೇಳುವ ಅಮೆರಿಕದ ಅಧ್ಯಕ್ಷ ಟ್ರಂಪ್ ನನ್ನ ಕಾಲಿನ ಧೂಳಿಗೆ ಸಮವಾಗಿದ್ದಾನೆ. ಅವರು ಅಮೆರಿಕದ ಅಧ್ಯಕ್ಷರಾಗಿರಬಹುದು. ಆದರೆ ನನಗೆ ಯಾವ ಲೆಕ್ಕ. ಇಂತಹವರಿಂದ ತಾವು ಹೆದರುವುದಿಲ್ಲ ಎಂದು ಕಿಡಿ ಕಾರಿದ್ದಾರೆ. 

ಆರ್ ಎಸ್ ಎಸ್  ವಿರದ್ಧ ಕಿಡಿ:

ಆರ್ ಎಸ್ ಎಸ್  ಸಹ ನಮ್ಮ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವುದನ್ನು ನಿಲ್ಲಿಸಬೇಕು. ನನ್ನನ್ನು ಕೆಣಕಿದರೆ ಸುಮ್ಮನೇ  ಕೇಳಿಸಿಕೊಳ್ಳುವವ ನಾನಲ್ಲ, ಅಲ್ಲಾ ನನಗೆ ದೊಡ್ಡ ಧ್ವನಿ ಕೊಟ್ಟಿದ್ದಾನೆ. ಭಯ ಎಂಬುದೇ ನನಗೆ ಗೊತ್ತಿಲ್ಲ. ಆರ್‍ಎಸ್‍ಎಸ್‍ನ ಆಟ ಹೆಚ್ಚು ದಿನ ನಡೆಯುವುದಿಲ್ಲ ಎಂದು ಕಿಡಿಕಾರಿದರು. ಇತ್ತೀಚೆಗೆ ಕೇಂದ್ರ ಸರ್ಕಾರವು ತಮಗೆ ತೋಚಿದವರಿಗೆ ಆತಂಕವಾದಿಗಳೆಂದು ಪಟ್ಟಿ ಬಿಡುಗಡೆ ಮಾಡುತ್ತಿದ್ದರಿಂದ ದೇಶಾದ್ಯಂತ ಆತಂಕ ಸೃಷ್ಟಿಯಾಗಿದೆ. ಕೇಂದ್ರ ಸರ್ಕಾರದ ಆತಂಕವಾದ ಗುರುತಿಸುವುದನ್ನು ಟೀಕಿಸಿದರು.

ಎಐಎಮ್‍ಐಎಮ್ ಜಿಲ್ಲಾ ಕಚೇರಿಯನ್ನು ಉದ್ಘಾಟಿಸಿ ವಿವಿಧ ಪದಾಧಿಕಾರಿಗಳನ್ನು ನೇಮಕ ಮಾಡಿದರು. ಕರ್ನಾಟಕದ ವಿಧಾನಸಭೆ, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಎಐಎಮ್‍ಐಎಮ್ ಸ್ಪರ್ಧಿಸಲಿದೆ ಎಂದರು. ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಉಸ್ಮಾನ್ ಘನಿ, ಅಬ್ದುಲ್ ರಹೀಂ ಮಿರ್ಚಿಸೇಠ, ಮೌಲಾನಾ ಜಾವೀದ್ ಆಲಂಕಾಶ್ಮಿ, ರಿಜ್ವಾನ್ ಸಿದ್ದಿಕಿ,ಗುರುಶಾಂತ ಪಟ್ಟೇದಾರ ಇದ್ದರು.

ಕಾಂಗ್ರೆಸ್ ನಿಮಗೆ ಕಷ್ಟ ಕೊಡುತ್ತಾರೆಂದು ಕುಮಾರಸ್ವಾಮಿಗೆ ಹೇಳಿದ್ದೆ

ಲೋಕಸಭೆ ಚುನಾವಣೆ ವೇಳೆ ಹೆಚ್.ಡಿ.ಕುಮಾರಸ್ವಾಮಿ ನನಗೆ ಕರೆ ಮಾಡಿ, ಬ್ರದರ್ ವೇರ್ ಆರ್‍ಯು ಎಂದು ಕೇಳಿದ್ದರು. ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದು ಕೇಳಿಕೊಂಡರು. ಆಗ ನೀವು ಕಾಂಗ್ರೆಸ್ ಜೊತೆ ಮೈತ್ರಿ ಸರ್ಕಾರ ನಡೆಸುತ್ತೀದ್ದೀರಿ. ಕಾಂಗ್ರೆಸ್ ನವರು ಎಐಎಂಐಎಂ ಪಕ್ಷವನ್ನು ಬಿಜೆಪಿಯ ಬಿ-ಟೀಮ್, ಸಿ-ಟೀಮ್ ಎಂದಿದ್ದರು. ನನ್ನ ಪಕ್ಷದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿದವರ ಜೊತೆ ಕೈಜೋಡಿಸಲ್ಲ ಎಂದೆ. ಅಲ್ಲದೇ, ಇದೇ ಕಾಂಗ್ರೆಸ್ ನವರು ನಿಮಗೆ ಕಷ್ಟ ಕೊಡ್ತಾರೆ, ನಿಮ್ಮ ಸರ್ಕಾರ ಬೀಳುತ್ತೆ ಅಂತಾ ಆಗ್ಲೇ ಹೇಳಿದ್ದೆ ಎಂದರು.

ಒಂದೇ ನಾಣ್ಯದ ಎರಡು ಮುಖಗಳಿದ್ದಂತಿರುವ ಕಾಂಗ್ರೆಸ್, ಬಿಜೆಪಿ ಮುಂದೆ ನಾವು ಎಂದೂ ತಲೆಬಾಗಲ್ಲ. ಅಲ್ಲಾ ಅಂದ್ರೆ ದೇವರು.. ದೇವರ ಮುಂದೆ ಮಾತ್ರ ನಾವು ತಲೆಬಾಗುತ್ತೇವೆ. ಕಾಂಗ್ರೆಸ್ ಪಕ್ಷದ ಶಾಸಕರು, ಸಂಸದರು, ನಾಯಕರು ಬಿಜೆಪಿಗೆ ಹೋಗುತ್ತಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿಗೆ ಹೋದವರೆಲ್ಲರೂ ಸಿದ್ದರಾಮಯ್ಯರ ಲೆಫ್ಟ್ ಹ್ಯಾಂಡ್, ರೈಟ್ ಹ್ಯಾಂಡ್‍ಗಳೇ ಎಂದು ವಾಗ್ದಾಳಿ ನಡೆಸಿದರು

ಕರ್ನಾಟಕದಲ್ಲಿ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದರೂ ಲೋಕಸಭೆಯಲ್ಲಿ ಎರಡೇ ಅಭ್ಯರ್ಥಿಗಳು ಗೆದ್ದರು. ನಾವಿಬ್ಬರು ನಮಗಿಬ್ಬರು ಎಂಬಂತೆ ಇಬ್ಬರನ್ನೇ ಹುಟ್ಟಿಸಿದರು. ಬಿಜೆಪಿ ಅಧಿಕಾರದಲ್ಲಿರದಿದ್ದರೂ 25 ಜನರನ್ನು ಹುಟ್ಟಿಸಿದರು. ಸಿಎಂ, ಡಿಸಿಎಂ, ಅಧಿಕಾರ, ಎಲ್ಲವೂ ಇದ್ದರೂ ಸಮ್ಮಿಶ್ರ ಸರ್ಕಾರಕ್ಕೆ ಹೆಚ್ಚಿನ ಅಭ್ಯರ್ಥಿಗಳನ್ನು ಗೆಲ್ಲಿಸಲಿಕ್ಕಾಗಲಿಲ್ಲ ಎಂದು ಲೇವಡಿ ಮಾಡಿದ್ದಾರೆ. 

Follow Us:
Download App:
  • android
  • ios