ಮಂಗಳೂರು ಹಿಂಸಾಚಾರ: ಉಡುಪಿಯಲ್ಲಿ ಮುಸ್ಲಿಂ ವರ್ತಕರಿಂದ ಬಂದ್
ಮಂಗಳೂರಿನಲ್ಲಿ ನಡೆದ ಪೊಲೀಸ್ ಗೋಲಿಬಾರ್ ಘಟನೆ ಖಂಡಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಗಂಗೊಳ್ಳಿಯಲ್ಲಿ ಮುಸ್ಲಿಂ ವರ್ತಕರು ಬಂದ್ ಆಚರಿಸಿದ್ದಾರೆ. ತಮ್ಮ ದೈನಂದಿನ ವ್ಯವಹಾರವನ್ನು ಶುಕ್ರವಾರ ಸ್ವಯಂಪ್ರೇರಿತವಾಗಿ ಸ್ಥಗಿತಗೊಳಿಸಿದ ಮುಸ್ಲಿಂ ವರ್ತಕರು, ಶಾಂತಿಯುತವಾಗಿ ಬಂದ್ ಆಚರಿಸಿದ್ದಾರೆ.
ಉಡುಪಿ(ಡಿ.21): ಮಂಗಳೂರಿನಲ್ಲಿ ನಡೆದ ಪೊಲೀಸ್ ಗೋಲಿಬಾರ್ ಘಟನೆ ಖಂಡಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಗಂಗೊಳ್ಳಿಯಲ್ಲಿ ಮುಸ್ಲಿಂ ವರ್ತಕರು ಬಂದ್ ಆಚರಿಸಿದ್ದಾರೆ. ತಮ್ಮ ದೈನಂದಿನ ವ್ಯವಹಾರವನ್ನು ಶುಕ್ರವಾರ ಸ್ವಯಂಪ್ರೇರಿತವಾಗಿ ಸ್ಥಗಿತಗೊಳಿಸಿದ ಮುಸ್ಲಿಂ ವರ್ತಕರು, ಶಾಂತಿಯುತವಾಗಿ ಬಂದ್ ಆಚರಿಸಿದ್ದಾರೆ.
ಗಂಗೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಮುಸ್ಲಿಮರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಮುಚ್ಚಿದರೆ, ಮುಸ್ಲಿಮರ ಆಟೋ ರಿಕ್ಷಾ, ಕಾರು ಮತ್ತಿತರ ವಾಹನವನ್ನು ಸ್ಥಗಿತಗೊಳಿಸಿದ್ದಾರೆ. ಅಲ್ಲದೆ ಮುಸ್ಲಿಂ ಆಡಳಿತಕ್ಕೊಳಪಟ್ಟಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿತ್ತು.
ಹಿಂದೆ ಮಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸಿದ ಪೊಲೀಸರು ಮತ್ತೆ ಮಂಗಳೂರಿಗೆ
ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡಬಾರದು. ಯಾವುದೇ ಪ್ರಚೋದನೆಗೆ ಒಳಗಾಗದೆ ಎಲ್ಲರೂ ಕಾನೂನು ಸುವ್ಯವಸ್ಥೆ ಕಾಪಾಡಿಕೊಂಡು ಹೋಗಬೇಕು ಎಂದು ಗಂಗೊಳ್ಳಿ ಜಮಾತುಲ್ ಮನವಿ ಮಾಡಿದೆ. ಉಳಿದಂತೆ ಗಂಗೊಳ್ಳಿಯಲ್ಲಿ ಜನಜೀವನ ಎಂದಿನಂತಿದ್ದು, ಮುಸ್ಲಿಮರ ಅಂಗಡಿಗಳನ್ನು ಹೊರತುಪಡಿಸಿ ಉಳಿದ ಎಲ್ಲ ಅಂಗಡಿಗಳು ತೆರೆದಿದ್ದವು. ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು.
ಶುಕ್ರವಾರದ ಹಿನ್ನಲೆಯಲ್ಲಿ ಗಂಗೊಳ್ಳಿಯ ಕೆಲ ಅತೀಸೂಕ್ಷ್ಮ ಪ್ರದೇಶಗಳಲ್ಲಿ ಬಿಗು ಪೊಲೀಸ್ ಬಂದೋಬಸ್‌್ತ ಮಾಡಲಾಗಿತ್ತು. ಉಡುಪಿ ಜಿಲ್ಲಾ ಹೆಚ್ಚುವರಿ ಎಸ್ಪಿ ಕುಮಾರ್‌ಚಂದ್ರ, ಕುಂದಾಪುರ ಉಪವಿಭಾಗದ ಎಎಸ್ಪಿ ಹರಿರಾಮ್ ಶಂಕರ್ ಗಂಗೊಳ್ಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯ ಮಾರ್ಗದರ್ಶನ ಮಾಡಿದ್ದಾರೆ. ಗಂಗೊಳ್ಳಿ ಪೊಲೀಸ್ ಠಾಣಾ ಉಪನಿರೀಕ್ಷಕ ವಾಸಪ್ಪ ನಾಯ್ಕ್ ಮತ್ತು ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಂದೀಪ್ ನೇತೃತ್ವದಲ್ಲಿ ಗಂಗೊಳ್ಳಿ ಪೊಲೀಸರು ಗಸ್ತು ತಿರುಗುತ್ತಿದ್ದಾರೆ.
ಕೊಡಗಿನಲ್ಲಿ ಸ್ವಯಂ ಪ್ರೇರಿತ ಬಂದ್, ನಿಷೇಧಾಜ್ಞೆ ಜಾರಿ
ಕುಂದಾಪುರ ಉಪವಿಭಾಗ ವ್ಯಾಪ್ತಿಯಲ್ಲಿ ಪರಿಸ್ಥಿತಿ ಶಾಂತವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಮಂಗಳೂರು ಘಟನೆ ಹಿನ್ನಲೆಯಲ್ಲಿ ಕೆಲವು ಅತಿಸೂಕ್ಷ್ಮ ಪ್ರದೇಶದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಯಾವುದೇ ಹೆಚ್ಚಿನ ಪೊಲೀಸ್ ಭದ್ರತೆ ಮಾಡಿಲ್ಲ. ಜನರು ಶಾಂತಿ ಬಯಸಿದ್ದು, ಉಪವಿಭಾಗ ವ್ಯಾಪ್ತಿಯಲ್ಲಿ ಶಾಂತಿಯ ವಾತಾವರಣ ಇದೆ ಎಂದು ಕುಂದಾಪುರ ಉಪವಿಭಾಗದ ಎಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.