ಗವಿಮಠ ಜಾತ್ರೆಗೆ 1 ಲಕ್ಷ ಶೇಂಗಾ ಹೋಳಿಗೆ: ಮುಸ್ಲಿಂ ಭಕ್ತರಿಂದಲೂ ಸೇವೆ

ಗವಿಮಠ ಜಾತ್ರೆ ದಾಸೋಹಕ್ಕೆ ಲಕ್ಷ ಶೇಂಗಾ ಹೋಳಿಗೆ ಕರ್ಕಿಹಳ್ಳಿ ಭಕ್ತರಿಂದ ಶೇಂಗಾ ಹೋಳಿಗೆ ಸೇವೆ ದಾಖಲೆ | ಜಗದೀಶ ಕೆರೆಹಳ್ಳಿ, ಪೀರಸಾಬ್ ಗೊಂದಿಹೊಸಳ್ಳಿ, ಫಕೀರಸಾಬ್ ನೇತೃತ್ವದಲ್ಲಿ ಸೇವೆ | 48 ಗಂಟೆ ನಿರಂತರ ಶ್ರಮಿಸಿದ 150 ಭಕ್ತರು|

Muslim Devotees Donate Sweet to Gavimath Fair in Koppal

ಸೋಮರಡ್ಡಿ ಅಳವಂಡಿ

ಕೊಪ್ಪಳ(ಜ.17): ಗವಿಮಠ ಜಾತ್ರೆಯ ಮಾರನೇ ದಿನ (ಸೋಮವಾರ) ದಾಸೋಹಕ್ಕೆ ಬಂದ ಭಕ್ತರೆಲ್ಲರಿಗೂ ಮಿರ್ಚಿ ಚಪ್ಪರಿಸುವ ಭಾಗ್ಯವಾದರೆ, ಗುರುವಾರ ಎಲ್ಲರಿಗೂ ಸಿಹಿ ಸಿಹಿಯಾದ ಶೇಂಗಾ ಹೋಳಿಗೆ ಸವಿಯುವ ಯೋಗ. ಕೊಪ್ಪಳ ಗವಿಸಿದ್ಧೇಶ್ವರ ಜಾತ್ರೆ ಒಂದರ್ಥದಲ್ಲಿ ಅಸಾಧ್ಯಗಳ ಸಾಧ್ಯವಾಗಿಸುವ ತಾಣ. ಇಲ್ಲಿಯ ದಾಸೋಹ ವ್ಯವಸ್ಥೆ, ಜಾತ್ರೆಗೆ ಸೇರುವ ಲಕ್ಷಾಂತರ ಮಂದಿಗೆ ಅಗತ್ಯ ಸೌಲಭ್ಯ, ರಕ್ಷಣೆ, ಸ್ವಚ್ಛತೆ, ಜನರು ಸ್ವಯಂಸ್ಫೂರ್ತಿಯಿಂದ ಪಾಲ್ಗೊಳ್ಳುವಿಕೆ ಪ್ರತಿಯೊಂದು ವಿಭಿನ್ನ, ವಿಶೇಷ. ಅದಕ್ಕೇ ಇದೊಂದು ಐತಿಹಾಸಿಕ, ದಕ್ಷಿಣ ಭಾರತದ ಕುಂಭಮೇಳ ಎಂಬ ಖ್ಯಾತಿಯನ್ನು ಹೊತ್ತಿದೆ. 

ಈ ಜಾತ್ರೆಯ ದಾಸೋಹದ ರಥವನ್ನು ಸುತ್ತಲಿನ ಹತ್ತಾರು ಗ್ರಾಮಗಳ ಜನರು ಜಾತಿ, ಮತ, ಧರ್ಮದ ಎಲ್ಲೆಯನ್ನು ಮೀರಿ ಎಳೆಯುತ್ತಾರೆ. ಪ್ರತಿ ವರ್ಷ ಈ ಸಾಲಿಗೆ ಹೊಸ ಗ್ರಾಮ, ಹೊಸ ಜನ, ಹೊಸ ಖಾದ್ಯ ಸೇರುತ್ತಲೇ ಇರುತ್ತದೆ. ಈ ಬಾರಿ ಕೊಪ್ಪಳ ತಾಲೂಕಿನ ಕರ್ಕಿಹಳ್ಳಿ ಗ್ರಾಮದ ಭಕ್ತರು ಸ್ವಯಂಪ್ರೇರಣೆಯಿಂದ 1 ಲಕ್ಷ ಶೇಂಗಾ ಹೋಳಿಗೆ ಸಿದ್ಧಪಡಿಸಿಕೊಂಡು ಬಂದಿದ್ದು, ಗುರುವಾರ ಭಕ್ತರ ದಾಸೋಹದ ತಟ್ಟೆಗೆ ಹೋಳಿಗೆ ಸೇರಿದೆ. 

Muslim Devotees Donate Sweet to Gavimath Fair in Koppal

ಮನೆಗೆ ಬರುವ ನಾಲ್ಕಾರು ಅತಿಥಿಗಳಿಗೆ, ನೆಂಟರಿಗೆ ಶೇಂಗಾ ಹೋಳಿಗೆ ಮಾಡಿ ಬಡಿಸುವುದೇ ಕಷ್ಟದ ಕೆಲಸ. ಅಂತದ್ದರಲ್ಲಿ ಗ್ರಾಮಸ್ಥರೆಲ್ಲ ಸೇರಿ ಸತತ 48 ಗಂಟೆಗಳ ಕಾಲ ಸೇವೆ ಸಲ್ಲಿಸಿ 1 ಲಕ್ಷ ಹೋಳಿಗೆ ಸಿದ್ಧಪಡಿಸಿ ಗುರುವಾರ ಮೆರವಣಿಗೆಯಲ್ಲಿ ತಂದು ಗವಿಮಠದ ಜಾತ್ರೆಯ ದಾಸೋಹ ಮಂಟಪಕ್ಕೆ ಅರ್ಪಿಸಿದರು. ಈ ಹೋಳಿಗೆ ಸಿದ್ಧತೆಯಲ್ಲಿ ಎಲ್ಲ ಧರ್ಮ, ಜಾತಿಯ ಜನರು ಸೇರಿದ್ದು, ಮುಸಲ್ಮಾನರು ಇದರ ನೇತೃತ್ವ ವಹಿಸಿದ್ದೂ ಸಹ ವಿಶೇಷ 

ಸಿದ್ಧಪಡಿಸಿದ್ದು ಹೇಗೆ, ಯಾವಾಗ: 

ಸುಮಾರು 3.5 ಕ್ವಿಂಟಲ್ ಬೆಲ್ಲ, ಅಷ್ಟೇ ಪ್ರಮಾಣದ ಶೇಂಗಾ, ಜೊತೆಗೆ 1 ಕ್ವಿಂಟಲ್ ಮೈದಾ ಹಿಟ್ಟು ಎಣ್ಣೆಯನ್ನು ಬಳಸಿ 150 ಜನ ಸ್ವಯಂಸೇವಕರು ನಿರಂತರವಾಗಿ 48 ಗಂಟೆಗಳ ಕಾಲ ನಿರಂತರವಾಗಿ ಹೋಳಿಗೆಯನ್ನು ಒತ್ತಿ (ಲಟ್ಟಿಸಿ), ಸುಟ್ಟು 1 ಲಕ್ಷ ಹೋಳಿಗೆ ಸಿದ್ಧಪಡಿಸಿದ್ದಾರೆ. ಎರಡು ದಿನಗಳ ಕಾಲ ಪ್ರತ್ಯೇಕ ತಂಡವಾಗಿ ಸಿದ್ಧತೆಯ ಕಾರ್ಯ ಕೈಗೊಂಡಿದ್ದಾರೆ. ಇದಕ್ಕಾಗಿಯೇ ಊರಿನಲ್ಲಿ ದೊಡ್ಡ ಪೆಂಡಾಲ್ ಹಾಕಲಾಗಿದ್ದು, ಗ್ರಾಮಸ್ಥರೆಲ್ಲ ಇದೊಂದು ಅಜ್ಜನ ಸೇವೆ ಎಂದು ಉತ್ಸಾಹದಿಂದ ಭಾಗಿಯಾಗಿದ್ದರು. 

Muslim Devotees Donate Sweet to Gavimath Fair in Koppal

ಗವಿಮಠ ಜಾತ್ರೆಯಲ್ಲಿ ಲಕ್ಷಗಟ್ಟಲೆ ರೊಟ್ಟಿ, ಭಾರೀ ಪ್ರಮಾಣದಲ್ಲಿ ಮಾದಲಿಗಳನ್ನು ಭಕ್ತರು ಸಿದ್ಧಪಡಿಸಿಕೊಂಡು ತಂದುಕೊಡುವುದು ಮಾಮೂಲಿ. ಕೆಲ ಭಕ್ತರು ನೂರು, ಸಾವಿರದ ಸಂಖ್ಯೆಯಲ್ಲಿ ಹೋಳಿಗೆ, ಊಂಡೆ ಸೇರಿದಂತೆ ಮತ್ತಿತರ ಸಿಹಿ ಪದಾರ್ಥಗಳನ್ನು ನೀಡುವುದೂ ಸಹ ವಾಡಿಕೆ. ಆದರೆ ಇದೇ ಮೊದಲ ಬಾರಿಗೆ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಶೇಂಗಾ ಹೋಳಿಗೆಯನ್ನು ಒಂದೇ ಗ್ರಾಮಸ್ಥರು ನೀಡಿದ್ದು ವಿಶೇಷ. ಶೇಂಗಾ ಹೋಳಿಗೆ ಸಿದ್ಧಪಡಿಸುವುದು ಸಾಮಾನ್ಯದ ಕೆಲಸ ಅಲ್ಲ. ಅದಕ್ಕೆ ಪೂರ್ವ ಸಿದ್ಧತೆಯ ಅಗತ್ಯವೂ ಇದೆ. ಹದವಾದ ಹೂರಣ ಸಿದ್ಧಪಡಿಸಿಕೊಳ್ಳಬೇಕು. ಅಷ್ಟೊಂದು ಬಾಣಸಿಗರು, ಜನಬೆಂಬಲದ ಅಗತ್ಯವೂ ಇದೆ. ಅಜ್ಜನ ಜಾತ್ರೆಯಲ್ಲಿ ಎಲ್ಲ ಅಸಾಧ್ಯಗಳೂ ಸಾಧ್ಯವಾಗುತ್ತಿವೆ. 

ಸಾರಥ್ಯ: 

ಗ್ರಾಪಂ ಅಧ್ಯಕ್ಷ ಗವಿಸಿದ್ದಪ್ಪ ಕುಂಬಾರ, ಜಗದೀಶ ಕೆರೆಹಳ್ಳಿ, ಪೀರಾಸಾಬ್ ಗೊಂದಿಹೊಸಳ್ಳಿ, ಫಕೀರಸಾಬ್ ಎನ್.ಬಿ. ಹಸನಸಾಬ್ ನದಾಫ್ ಸೇರಿದಂತೆ ಇಡೀ ಗ್ರಾಮಸ್ಥರು ಸೇರಿಕೊಂಡು ಈ ದಾಖಲೆ ಮಾಡಿದ್ದಾರೆ. ಜಾತ್ರೆಯಲ್ಲಿ ಲಕ್ಷ ಭಕ್ತರು ಪ್ರಸಾದ ಸ್ವೀಕಾರ ಮಾಡುತ್ತಾರೆ. ಹಲವಾರು ಗ್ರಾಮದ ಭಕ್ತರು ತಮ್ಮ ಸೇವೆ ಮಾಡುತ್ತಿದ್ದಾರೆ. ನಮ್ಮೂರಿನಿಂದಲೂ ಏನಾದರೂ ಮಾಡಬೇಕು ಎಂದು ವಿಶೇಷ ಎನ್ನುವ ಶೇಂಗಾ ಹೋಳಿಗೆ ಸಿದ್ಧ ಮಾಡಿ, ಕೊಡಲು ತೀರ್ಮಾನಿಸಿದ್ದಾರೆ.
ಗ್ರಾಮಸ್ಥರೆಲ್ಲರೂ ಸೇರಿ ಈ ನಿರ್ಧಾರ ಮಾಡಿ, ಹಗಲು-ರಾತ್ರಿ 2 ದಿನಗಳ ಕಾಲ ಸಿದ್ಧಪಡಿಸಿದ್ದೇವೆ. ಶೇಂಗಾ ಹೋಳಿಗೆಯನ್ನೇ ಮಾಡಿಕೊಡಬೇಕು ಎಂದು ತೀರ್ಮಾನಿಸಿದಂತೆ ಮಾಡಿಕೊಟ್ಟಿದ್ದೇವೆ. ಗ್ರಾಮದ ಪ್ರತಿಯೊಬ್ಬರ ಸೇವೆಯೂ ಇದರಲ್ಲಿ ಇದೆ ಎಂದು ಭಕ್ತ ಪೀರಸಾಬ್ ಗೊಂದಿಹೊಸಳ್ಳಿ ಅವರು ಹೇಳಿದ್ದಾರೆ. 

ಶೇಂಗಾ ಹೋಳಿಗೆ ಭಕ್ತರು ಪ್ರತಿ ವರ್ಷ ತಂದು ಕೊಡುತ್ತಾರೆ. ಆದರೆ ಈ ಬಾರಿ ಅತ್ಯಧಿಕ ಪ್ರಮಾಣದಲ್ಲಿ ತಂದಿದ್ದು, ಲಕ್ಷಕ್ಕೂ ಅಧಿಕ ಪ್ರಮಾಣದಲ್ಲಿ ಅರ್ಪಿಸಿದ್ದಾರೆ. ಗುರುವಾರದ ಮಹಾದಾಸೋಹದಲ್ಲಿ ಅದನ್ನು ಭಕ್ತರಿಗೆ ಬಡಿಸಲಾಗಿದೆ ಎಂದು ದಾಸೋಹ ವ್ಯವಸ್ಥೆಯ ಉಸ್ತುವಾರಿ ರಾಮನಗೌಡ ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios