ಮೈಸೂರು [ಆ.27]:  ವಿವಾಹವಾಗುವಂತೆ ಕೇಳಿದ ಪ್ರಿಯತಮೆಯ ಮೇಲೆ ಹಲ್ಲೆ ನಡೆಸಿ ಮ್ಯಾನ್‌ಹೋಲ್‌ನಲ್ಲಿ ಜೀವಂತವಾಗಿ ಸುಟ್ಟು ಹಾಕಿದ ವ್ಯಕ್ತಿಗೆ ಮೈಸೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ಪ್ರಮೋದ್‌ ಕುಮಾರ್‌(35) ಎಂಬಾತನೇ ಮರಣ ದಂಡನೆಗೆ ಗುರಿಯಾದವ. ಈತನು ಅದೇ ಗ್ರಾಮದ ತನ್ನ ಪ್ರೇಯಸಿ ಕೃತಿಕಾ ದೇವ್‌ ಎಂಬವರನ್ನು ಹತ್ಯೆ ಮಾಡಿ ಈ ಶಿಕ್ಷೆಗೆ ಗುರಿಯಾಗಿದ್ದಾನೆ.

ಕೊಳ್ಳೇಗಾಲದಲ್ಲಿ ಬಿ.ಕಾಂ ಓದುತ್ತಿದ್ದ ಕೃತಿಕಾ ದೇವ್‌ನನ್ನು ಪ್ರಮೋದ್‌ ಕುಮಾರ್‌ ಮದುವೆಯಾಗುವುದಾಗಿ ನಂಬಿಸಿ ಪ್ರೀತಿಸುತ್ತಿದ್ದ. 2014ರಲ್ಲಿ ವಿವಾಹವಾಗುವಂತೆ ಕೃತಿಕಾ ಕೇಳಿದಾಗ, ತನಗೆ ಈಗಾಗಲೇ ವಿವಾಹ ನಿಶ್ಚಯವಾಗಿದ್ದು, ಜಾತಿಯ ಕಾರಣದಿಂದ ವಿವಾಹಕ್ಕೆ ಮನೆಯವರು ಒಪ್ಪುವುದಿಲ್ಲ ಎಂದು ಪ್ರಮೋದ್‌ ಕುಮಾರ್‌ ಸಮಜಾಯಿಷಿ ನೀಡಿದ್ದ. ಇದಕ್ಕೆ ಒಪ್ಪದ ಕೃತಿಕಾ ತನ್ನನ್ನು ಮದುವೆಯಾಗುವಂತೆ ಪದೇ ಪದೇ ಒತ್ತಡ ಹಾಕಿದ್ದಾರೆ.

ಕೃತಿಕಾ ಮನವೊಲಿಸುವ ಉದ್ದೇಶದಿಂದ 2014ರ ಡಿ.21 ರಂದು ಆಕೆಯನ್ನು ಮೈಸೂರಿಗೆ ಕರೆ ತಂದು ಲಾಡ್ಜ್‌ನಲ್ಲಿ ಇರಿಸಿದ್ದ ಪ್ರಮೋದ್‌ಕುಮಾರ್‌, ಕೃತಿಕಾ ಚಿನ್ನಾಭರಣಗಳನ್ನು ಅಡವಿಟ್ಟು ಮಜಾ ಮಾಡಿದ್ದಾನೆ. ಅಲ್ಲದೆ, ಈ ವೇಳೆ ಬ್ರೇಕ್‌ ಅಪ್‌ ಮಾಡಿಕೊಳ್ಳಲು ಪ್ರಮೋದ್‌ ಕುಮಾರ್‌ ನಡೆಸಿದ ಪ್ರಯತ್ನ ವಿಫಲವಾಗಿ, ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದಾನೆ.

ಮೈಸೂರು ಹೊರ ವಲಯದ ಆರ್‌.ಟಿ. ನಗರ ಬಡಾವಣೆಯ 18ನೇ ಕ್ರಾಸ್‌ನ ತಿರುವಿನಲ್ಲಿರುವ ನಿರ್ಜನ ಪ್ರದೇಶಕ್ಕೆ ರಾತ್ರಿ 11ಕ್ಕೆ ಕಾರಿನಲ್ಲಿ ಕೃತಿಕಾಳನ್ನು ಕರೆದುಕೊಂಡು ಹೋದ ಪ್ರಮೋದ್‌ಕುಮಾರ್‌, ಕಾರಿನ ವ್ಹೀಲ್‌ ಸ್ಪಾನರ್‌ನಿಂದ ಕೃತಿಕಾ ತಲೆಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆಯನ್ನು ಮ್ಯಾನ್‌ಹೋಲ್‌ಗೆ ಹಾಕಿ, ಆಕೆಯ ಮೊಬೈಲ್‌ ಸಿಮ್‌ಗಳನ್ನು ತೆಗೆದುಕೊಂಡು ಮತ್ತೆ ಕಾರಿನಲ್ಲಿ ಖಾಸಗಿ ಹಾಸ್ಟೆಲ್‌ಗೆ ಬಂದು ಅಲ್ಲಿ ತನ್ನ ಬಟ್ಟೆಬದಲಿಸಿದ್ದಾನೆ.

ಕರ್ನಾಟಕ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಂತರ ಪೆಟ್ರೋಲ್‌ ಬಂಕ್‌ನಿಂದ ಪೆಟ್ರೋಲ್‌ ಖರೀದಿಸಿ, ರಾತ್ರಿ 12.45ಕ್ಕೆ ಮತ್ತೆ ಆರ್‌.ಟಿ. ನಗರಕ್ಕೆ ತೆರಳಿದ್ದಾನೆ. ತಾನು ಧರಿಸಿದ್ದ ರಕ್ತಸಿಕ್ತ ಬಟ್ಟೆಯನ್ನು ಕೃತಿಕಾ ಮೇಲೆ ಹಾಕಿ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾನೆ. ಅಲ್ಲದೆ, ಕೃತಿಕಾ ಬಟ್ಟೆ, ಇತರೆ ವಸ್ತುಗಳಿದ್ದ ಬ್ಯಾಗ್‌ ಹಾಗೂ ಮೊಬೈಲ್‌ ಅನ್ನು ಟಿ. ನರಸೀಪುರ ಬಳಿ ಕಪಿಲಾ ನದಿಗೆ ಎಸೆದು ಪರಾರಿಯಾಗಿದ್ದನು.

ಈ ಸಂಬಂಧ ಜಯಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮೊದಲು ಶವದ ಗುರುತು ಪತ್ತೆ ಹಚ್ಚಿದರು. ಘಟನಾ ಸ್ಥಳದಲ್ಲಿ ಸಿಕ್ಕ ಸಾಕ್ಷ್ಯ, ಸಿಸಿಟಿವಿ ಕ್ಯಾಮರಾದಲ್ಲಿ ಪತ್ತೆಯಾದ ದೃಶ್ಯಾವಳಿ ಮತ್ತು ಕೃತಿಕಾ ಹಿನ್ನಲೆ ಮೂಲಕ ಕೊಲೆ ಮಾಡಿದ್ದ ಪ್ರಮೋದ್‌ಕುಮಾರ್‌ನನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷರೋಪ ಪಟ್ಟಿಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶೆ ಜಯಶ್ರೀ ಅವರು ಪ್ರಮೋದ್‌ಕುಮಾರ್‌ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಆನಂದ್‌ ಹೊಸಮನಿ, ವಾಸಂತಿ ಎಂ. ಅಂಗಡಿ ಮತ್ತು ಮಂಜುಳಾ ವಾದಿಸಿದ್ದರು.