ರಾಜ್ಯದಲ್ಲಿ ಈ ಬಾರಿಯೂ ಉತ್ತಮ ಮಳೆ: ಮುರನಾಳ ಮಠದ ವಾಣಿ
ಪ್ರಸಕ್ತ ವರ್ಷ ಮುಂಗಾರು ಮಳೆ ಸಂಪೂರ್ಣ ಮಳೆ| ರೋಹಿಣಿ, ಮೃಗಶಿರಾ, ಹಿಂಗಾರು ಮಳೆಗಳಲ್ಲಿ ಮಗಿ, ಹುಬ್ಬಿ ಮಳೆಗಳು ಸಂಪೂರ್ಣ| ಮುರನಾಳದಲ್ಲಿ ಶ್ರೀ ಮಳೆರಾಜೇಂದ್ರಸ್ವಾಮಿ ಮಠದ ಜಾತ್ರಾ ಮಹೋತ್ಸವ|
ಬಾಗಲಕೋಟೆ(ಮಾ.06): ಪ್ರಸಕ್ತ ವರ್ಷ ಮುಂಗಾರು ಮಳೆಗಳಾದ ರೋಹಿಣಿ, ಮೃಗಶಿರಾ, ಹಿಂಗಾರು ಮಳೆಗಳಲ್ಲಿ ಮಗಿ, ಹುಬ್ಬಿ ಮಳೆಗಳು ಸಂಪೂರ್ಣ ಸುರಿಯಲಿವೆ ಎಂಬುವುದು ಮುರನಾಳ ಮಳೆರಾಜೇಂದ್ರಸ್ವಾಮಿ ಮಠದ ವಾಣಿಯಾಗಿದೆ.
ಈ ಭಾಗದ ಕೃಷಿಕರ ಮಠವೆಂದು ಖ್ಯಾತಿ ಪಡೆದಿರುವ ಮುರನಾಳ ಮಳೆರಾಜೇಂದ್ರಸ್ವಾಮಿ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ರಾತ್ರಿ ನಡೆದ ಕಡುಬಿನ ಕಾಳಗಮಳೆ ಬೆಳೆ ಸೂಚನೆದಲ್ಲಿ ಸೂಚನೆ ದೊರೆತಿದೆ.ಈ ವರ್ಷದ ಮುಂಗಾರಿನಲ್ಲಿ ರೋಹಣಿ, ಮೃಗಶಿರಾ ಸಂಪೂರ್ಣ, ಆರಿದ್ರಾ,ಪುನರ್ವಸು ಉತ್ತಮ ಮಳೆಗಳು, ಪುಷ್ಯಾ ಸಾಧಾರಣ ವಾಗಲಿವೆ ಬೀಳಲಿವೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹಿಂಗಾರಿನಲ್ಲಿ ಮಗಿ ಸಂಪೂರ್ಣ, ಹುಬ್ಬಿ ಉತ್ತಮ, ಉತ್ತರಿ ಚಿತ್ತಿ, ಸ್ವಾತಿ ಸಾಧಾರಣವಾಗಿ ಮಳೆಗಳು ಸುರಿಯಲಿವೆ ಎಂಬುದಾಗಿ ಶ್ರೀ ಮಠದ ಸೂಚನೆ ದೊರೆಯಿತು ಎಂದು ಮಠದ ಮಠಾಧೀಶರಾದ ಗುರುನಾಥ ಸ್ವಾಮಿ ತೀರ್ಥಯ್ಯಸ್ವಾಮಿ ಮಹಾಪುರುಷ ಅವರು ನೆರೆದ ಭಕ್ತಾದಿಗಳಿಗೆ ತಿಳಿಸಿದರು.
ಪ್ರತಿ ವರ್ಷದಂತೆ ಹೊಸ ಮುರನಾಳದಲ್ಲಿ ಶ್ರೀ ಮಳೆರಾಜೇಂದ್ರಸ್ವಾಮಿ ಮಠದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆದಿದ್ದು, ಜಾತ್ರೆಯ ಅಂಗವಾಗಿ ನಡೆಯುವ ಕಡುಬಿನ ಕಾಳಗ ಮಳೆ ಬೆಳೆ ಸೂಚನೆ ಕಳೆದ ವರ್ಷ ಬರ ಬಿದ್ದ ಹಿನ್ನೆಲೆಯಲ್ಲಿ ಈ ವರ್ಷವಾದರು ಮಳೆ ಚೆನ್ನಾಗಿ ಆಗಲಿ ಎಂದು ಪ್ರಾರ್ಥಿಸುತ್ತ ಸುತ್ತಮುತ್ತಲಿನ ಗ್ರಾಮಗಳ ರೈತಾಪಿ ಜನರು ಮಳೆ ಸೂಚನೆಗಾಗಿ ಕುತೂಹಲದಿಂದ ಕಾಯ್ದು ನಿಂತಿದ್ದರು.
ಮಳೆ-ಬೆಳೆ ಕುರಿತಂತೆ ಮಠದ ಸೂಚನೆ ಪಡೆದ ರೈತರು ಪ್ರಸಕ್ತ ವರ್ಷದ ಸಾಧಕ-ಬಾಧಕಗಳ ಬಗ್ಗೆ ತಮ್ಮ ತಮ್ಮಲ್ಲಿಯೆ ವಿಚಾರ ವಿನಿಮಯ ಮಾಡಿಕೊಂಡರು.
ವಿಶಿಷ್ಟ ಪರಂಪರೆ:
ಕಡುಬಿನ ಕಾಳಗದ ಮುಂಚೆ ನಡೆದ ಮಳೆರಾಜೇಂದ್ರಸ್ವಾಮಿಗಳ ಮೂರ್ತಿ ಹೊತ್ತ ಪಲ್ಲಕ್ಕಿ ಮೆರವಣಿಗೆಯಲ್ಲಿ ಗ್ರಾಮದ ಸಾವಿರಾರು ಮಹಿಳೆಯರು ಆರತಿ ಹಾಗೂ ಪಂಚಬಿಂದಿಗೆಯೊಂದಿಗೆ ಪಾಲ್ಗೊಂಡಿದ್ದರು. ಗಂಗೆಯ ಪೂಜೆಗಾಗಿ ನಿರ್ಮಿಸಿರಿರುವ ಹೊಂಡದವರೆಗೆ ಮೆರವಣಿಗೆಯಲ್ಲಿ ಸಾಗಿದ ಗ್ರಾಮಸ್ಥರು ಗಂಗೆಗೆ ಪೂಜೆ ಸಲ್ಲಿಸಿದ ಬಳಿಕ ಪಂಚ ಬಿಂದಿಗೆಗಳಲ್ಲಿ ಗಂಗೆಯನ್ನು ತುಂಬುತ್ತಾರೆ. ಹೀಗೆ ತುಂಬಲ್ಪಟ್ಟ ಪ್ರತಿ ಬಿಂದಿಯ ಮೇಲೆ ಎರಡೆರಡು ಮಳೆಗಳು ಹೆಸರನ್ನು ನಮೂದಿಸಲಾಗುತ್ತದೆ. ಪಂಚ ಬಿಂದಿಗೆ ಹೊತ್ತು ನಂತರ ಗಂಗಾ ಹೊಂಡದಿಂದ ಪುನಃ ಮೆರವಣಿಗೆಯಲ್ಲಿ ರಥೋತ್ಸವ ಇರುವ ಸ್ಥಳಕ್ಕೆ ಬರುತ್ತಾರೆ.
ರಥೋತ್ಸವವನ್ನು ಪ್ರದಕ್ಷಣೆ ಹಾಕಿ ಪಂಚಬಿಂದಿಗೆ ಪೂಜೆ ಸಲ್ಲಿಸಿ ತರುವಾಯ ಮಳೆ-ಬೆಳೆ ಸೂಚನೆ ನೀಡಲಾಗುತ್ತದೆ. ಮಳೆಗಳ ಹೆಸರನ್ನು ಹೊಂದಿರುವ ಬಿಂದಿಗೆಗಳ ಬಸಿಯುವಿಕೆ(ಸೋರಿಕೆ) ಆಧಾರದ ಮೇಲೆ ಮಳೆ,ಬೆಳೆ ಸೂಚನೆ ಹೊರಬೀಳುತ್ತದೆ. ಸೋರಿಕೆ ಪ್ರಮಾಣದ ಮೇಲೆಯೇ ಯಾವ ಮಳೆ ಹೆಚ್ಚು ಸುರಿಯುತ್ತದೆ ಹಾಗೂ ಯಾವುದು ಕಡಿಮೆಯಾಗುತ್ತದೆ ಎಂಬುದನ್ನು ಹೇಳಲಾಗುತ್ತದೆ.
ಗುರುವಾರ ರಾತ್ರಿ ಸಂಭ್ರಮದಿಂದ ನಡೆದ ಕಡುಬಿನ ಕಾಳಗದಲ್ಲಿ ಮಠಾಧೀಶರಾದ ಗುರುನಾಥಸ್ವಾಮಿಗಳು, ಮಂಜುನಾಥಸ್ವಾಮಿಗಳು, ಮೇಘ ರಾಜಸ್ವಾಮಿಗಳು, ನಿತ್ಯಾನಂದ ಸ್ವಾಮಿಗಳು, ಗ್ರಾಮದ ಪ್ರಮುಖರಾದ ಹುಚ್ಚಪ್ಪ ಶಿರೂರ, ಶಿವಣ್ಣ ಬೂದಿಹಾಳ ಮಳೆಯಪ್ಪ ತೆಗ್ಗಿ, ರಾಮಣ್ಣ ಗಣಿ, ಸಿದ್ದಪ್ಪ ಮುಚಖಂಡಿ, ಶಂಕ್ರಪ್ಪ ಪತ್ತಾರ, ಸಿದ್ದಪ್ಪ ಬಂಗಿ, ರಂಗಪ್ಪ ಗೊರವರ, ಪ್ರಕಾಶ ದೊಡಮನಿ, ಮುರಗೇಶ ದೊಡಮನಿ, ಮಳಿಯಪ್ಪ ಬಿಸಾಳಿ, ರಾಚಪ್ಪ ದೊಡಮನಿ, ಭರತಕುಮಾರ ಬಾರಕೇರ, ಮುತ್ತು ಗಡಗಡೆ, ಮಳಿಯಪ್ಪ ಗೂಳಬಾಳ,ಹನಮಂತ ಬಿಸಾಳಿ, ಸೋಮು ಸಾಲಮನಿ, ಯಂಕಪ್ಪ ಬಾರಕೇರ ಶೇಖು ಗಣಿ, ಮೌನೇಶ ಬಡಿಗೇರ, ಈರಣ್ಣ ಬಡಿಗೇರ ಸೇರಿದಂತೆ ಗ್ರಾಮದ ಹಿರಿಯರು,ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು.