ಬಾದಾಮಿ(ಜ.12): ತಂದೆ ಮೃತಪಟ್ಟ ಸುದ್ದಿಯನ್ನು ಮಕ್ಕಳಿಗೆ ತಿಳಿಸಿದರೂ ಮಕ್ಕಳು ಆತ ನಮ್ಮನ್ನು ಬಿಟ್ಟು ಹೋಗಿ 30  ವರ್ಷವಾಯಿತು. ನೀವೆ ಮಣ್ಣು ಮಾಡಿ. ಇಲ್ಲವಾದರೆ ಅಲ್ಲಿಯೇ ಬಿಟ್ಟು ಹೋಗಿ. ಆತನಿಗೂ ನಮಗೂ ಸಂಬಂಧವಿಲ್ಲ ಎಂದು ಹೇಳಿದ್ದರಿಂದ ಆತನ ಶವವನ್ನು ಅನಾಥ ಶವವೆಂದು ಮಣ್ಣು ಮಾಡಿದ ಘಟನೆ ಶನಿವಾರ ಪಟ್ಟಣದಲ್ಲಿ ನಡೆದಿದೆ. 

ಅನಾರೋಗ್ಯದ ಹಿನ್ನೆಲೆಯಲ್ಲಿ 75 ವರ್ಷದ ವಯೋವೃದ್ಧ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ದಾಖಲಾಗಿದ್ದ. ಆತ ಚಿಕಿತ್ಸೆ ಫಲಿಸದೇ ಶುಕ್ರವಾರ ರಾತ್ರಿ ಮೃತಪಟ್ಟಿದ್ದಾನೆ. ಕೆಲಸದ ವೇಳೆ ಇದ್ದ ವೈದ್ಯರು ಮೃತನ ಸಂಬಂಧಿಕರು ಯಾರು ಇಲ್ಲದ ಕಾರಣ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಬೆಳಗ್ಗೆ 9 ಗಂಟೆಯಾದರು ಯಾರು ವಯೋವೃದ್ಧನ ಶವವನ್ನು ತೆಗೆದುಕೊಂಡು ಹೋಗದ್ದರಿಂದ ನಂತರ ಶನಿವಾರ ಪುರಸಭೆ ಸಿಬ್ಬಂದಿಯೇ ಸಂಜೆ ಅಂತ್ಯಕ್ರಿಯೆ ನೆರವೇರಿಸಿತು. 

ಮಕ್ಕಳು ಬರಲಿಲ್ಲ: 

ಮೃತ ವ್ಯಕ್ತಿ ಬಾದಾಮಿ ತಾಲೂಕಿನ ಸಮೀಪದ ಬಿ.ಎನ್. ಜಾಲಿಹಾಳ ಗ್ರಾಮದ ಹತ್ತಿರ ಹುಲಿಗೆಮ್ಮನ ಕೊಳ್ಳದಲ್ಲಿ ವಾಸವಾಗಿದ್ದ 75 ವಯೋವೃದ್ದ ಶಂಕ್ರಪ್ಪ ಎಂದು ತಿಳಿದು ಬಂದಿದೆ. ಅದೇ ಊರಿನ ಮಹಿಳೆ ಭೀಮವ್ವ ಲಕ್ಕಪ್ಪನವರ ಮಹಿಳೆ ಇವನ ಸ್ಥಿತಿಯನ್ನು ನೋಡಿ ಶುಕ್ರವಾರ ರಾತ್ರಿ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆತ ಅಸುನೀಗಿದ್ದ. ಆಗ ಮೃತನ ಮಕ್ಕಳಿಗೆ ಭೀಮವ್ವ ಲಕ್ಕಪ್ಪನವರ ಬನಹಟ್ಟಿಯಲ್ಲಿರುವ ಅವರ ಮಕ್ಕಳಿಗೆ ಫೋನ್ ಮೂಲಕ ಸಾವಿನ ಸುದ್ದಿಯನ್ನು ತಿಳಿಸಿದ್ದಾಳೆ. ಆದರೆ ಮೃತ ಶಂಕ್ರಪ್ಪನ ಮಕ್ಕಳು ನಮ್ಮನ್ನು ಬಿಟ್ಟು ಅವನು 30 ವರ್ಷಗಳ ಕಾಲವಾಗಿದೆ. ನೀವೆ ಮಣ್ಣು ಮಾಡಿ, ಇಲ್ಲವಾದರೆ ಅಲ್ಲೆ ಬಿಟ್ಟು ಹೋಗಿ ನಮಗೆ ಅವನು ಸಂಬಂಧವಿಲ್ಲವೆಂದು ತಿಳಿಸಿದ್ದಾರೆ. ಹೀಗಾಗಿ ಈ ಮಹಿಳೆ ರಾತ್ರಿ 10 ಗಂಟೆವರೆಗೂ ಕಾದು ಆಸ್ಪತ್ರೆಯಲ್ಲಿ ಶವವನ್ನು ಬಿಟ್ಟು ಹೋಗಿದ್ದಾಳೆ ಎಂದು ತಿಳಿದು ಬಂದಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ವಯೋವೃದ್ಧನ ಶವವನ್ನು ಸುಮಾರು ಗಂಟೆಗಳ ಕಾಲ ಅಲ್ಲಿಯೆ ಇಟ್ಟು ಕಾದು ನೋಡಿದ್ದಾರೆ. ಕೊನೆಗೆ ಯಾರು ಬರದೆ ಇದ್ದ ಕಾರಣ ಶವಗಾರಕ್ಕೆ ಕಳಿಸಿದ್ದಾರೆ. ಸತ್ತು ಹೋದ 24 ಗಂಟೆ ಕಳೆದರು ಮೃತನ ಶವವನ್ನು ಮಕ್ಕಳು ಸಂಬಂಧಿಕರು ಯಾರು ಬರದೆ ಹೋದ ಕಾರಣ ಆ ವಯೋವೃದ್ದನು ಅನಾಥ ಶವವಾಗಿ ಬಿದ್ದಿರುವುದನ್ನು ನೋಡಿ ಪಕ್ಕದಲ್ಲಿ ಇದ್ದವರು ನೋಡಿ ಕಣ್ಣೀರಿಟ್ಟರುವ ದೃಶ್ಯ ಮನುಕುಲುಕುವಂತಿತ್ತು. ಕೊನೆಗೆ ಸಂಜೆ ಪುರಸಭೆ ಸಿಬ್ಬಂದಿ ಶವಸಂಸ್ಕಾರ ಮಾಡಿದ್ದಾರೆ.