ಹಾವೇರಿ: ಸಾವಿನಲ್ಲೂ ನಾಲ್ವರ ಬಾಳಿಗೆ ಬೆಳಕಾದ ಯುವತಿ

*  ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ನಡೆದ ಘಟನೆ
*  ಸಾವಿನಲ್ಲೂ ಸಾರ್ಥಕತೆ ಮೆರೆದ ಯುವತಿ
*  ಮುಗಿಲು ಮುಟ್ಟಿದ್ದ ಕುಟುಂಬಸ್ಥರ ಆಕ್ರಂದನ 
 

Multiple Organ Donation of Dead Young Woman in Haveri grg

ರಟ್ಟಿಹಳ್ಳಿ(ಸೆ.15):  20 ವರ್ಷದ ಯುವತಿಯೊಬ್ಬಳು ಹಲವರ ಬದುಕಿಗೆ ಬೆಳಕಾಗುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿರುವ ಘಟನೆ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕವನಾ ಮಳ್ಳಯ್ಯ ಹಿರೇಮಠ (20) ಇತರರಿಗೆ ಮಾದರಿಯಾದ ಯುವತಿ.

ಹಳ್ಳೂರ ಗ್ರಾಮದ ಕವನ ಹಿರೇಮಠ ಶಿಕಾರಿಪುರದ ಗಾಮೆಂಟ್ಸ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಸೆ. 9ರಂದು ಹೊನ್ನಾಳಿ ತಾಲೂಕು ಸೊರಟೂರ ಗ್ರಾಮದ ಬಳಿ ಓಮಿನಿ-ಚಕ್ಕಡಿಗಾಡಿ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಕವನಾ ಗಂಭೀರವಾಗಿ ಗಾಯಗೊಂಡಿದ್ದರು.

ಒಟ್ಟಿಗೆ ಬದುಕಿ, ಒಟ್ಟಿಗೆ ಸತ್ತರು: ಸಾವಿನ ಬಳಿಕ 12 ಮಂದಿಯ ಪ್ರಾಣ ಕಾಪಾಡಿದ ಆಪ್ತ ಸ್ನೇಹಿತರು!

ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಕವನರನ್ನು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಕೋಮಾಗೆ ತಲುಪಿದ್ದರು. ಅವರ ಮೆದುಳು ನಿಷ್ಕ್ರೀಯಗೊಂಡಿತ್ತು. ಈ ವಿಷಯ ತಿಳಿಯುತ್ತಿದ್ದಂತೆ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಮಗಳಂತೂ ಇನ್ನು ಬದುಕುವುದಿಲ್ಲ, ಅವಳ ಅಂಗಾಂಗವಾದರೂ ಇತರರಿಗೆ ಬದುಕು ನೀಡಲಿ ಎಂದು ನಿರ್ಧರಿಸಿದ ಆಕೆಯ ಕುಟುಂಬಸ್ಥರು ವೈದ್ಯರೊಂದಿಗೆ ಚರ್ಚಿಸಿದರು. 

ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಮೃತಳ ಕುಟುಂಬಸ್ಥರು ಕಿಡ್ನಿ, ಹೃದಯ, ಲಿವರ್‌, ಕಣ್ಣು, ಚರ್ಮ ದಾನ ಮಾಡಿದರು. ತಕ್ಷಣವೇ ಅಂಗಾಂಗಗಳನ್ನು ಬೇರೆ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಇದರಿಂದ ನಾಲ್ವರ ಬಾಳಿಗೆ ಬೆಳಕು ನೀಡಿದಂತಾಗಿದೆ. ಬಾಳಿ ಬೆಳಗಬೇಕಿದ್ದ ಮಗಳನ್ನು ಕಳೆದುಕೊಂಡಿರುವ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
 

Latest Videos
Follow Us:
Download App:
  • android
  • ios