ಬಹುಕೋಟಿ ರೂಪಾಯಿ ವಂಚನೆ ಪ್ರಕರಣದಲ್ಲಿ ಬಂಧಿತನಾಗಿರುವ ರೋಶನ್ ಸಲ್ಡಾನ್ಹಾ ವಿರುದ್ಧದ ನಾಲ್ಕು ಪ್ರಕರಣಗಳನ್ನು ಸಿಐಡಿ ತನಿಖೆಗೆ ವರ್ಗಾಯಿಸಲಾಗಿದೆ. ಮಂಗಳೂರಿನ ಸೆನ್ ಠಾಣೆ ಮತ್ತು ಕಂಕನಾಡಿ ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳ ತನಿಖೆಯನ್ನು ಸಿಐಡಿ ಅಧಿಕಾರಿಗಳು ನಡೆಸಲಿದ್ದಾರೆ.

ಮಂಗಳೂರು: ಬಹುಕೋಟಿ ರುಪಾಯಿ ವಂಚನೆ ಮಾಡಿದ ಪ್ರಕರಣದಲ್ಲಿ ಬಂಧಿತನಾಗಿರುವ ಮಂಗಳೂರಿನ ಬಜಾಲ್ ಬೊಲ್ಲಗುಡ್ಡೆ ನಿವಾಸಿ ರೋಶನ್ ಸಲ್ಡಾನ್ಹಾ (43) ವಿರುದ್ಧ ದಾಖಲಾಗಿರುವ ನಾಲ್ಕು ಪ್ರಕರಣಗಳು ಸಿಐಡಿಗೆ ಹಸ್ತಾಂತರಗೊಂಡಿದೆ. ಈ ಪ್ರಕರಣಗಳ ಮುಂದಿನ ತನಿಖೆಯನ್ನು ಸಿಐಡಿ ಅಧಿಕಾರಿಗಳು ಮಾಡಲಿದ್ದಾರೆ. ಬಿಹಾರ ಉದ್ಯಮಿಯೊಬ್ಬರಿಗೆ ರೋಶನ್ 10 ಕೋಟಿ.ರು. ಮೋಸ ಮಾಡಿದ ಪ್ರಕರಣ ಸೇರಿ ಮಂಗಳೂರಿನ ಸೆನ್ ಠಾಣೆಯಲ್ಲಿ ದಾಖಲಾಗಿರುವ ಎರಡು ಪ್ರಕರಣ ಮತ್ತು ಕಂಕನಾಡಿ ನಗರ ಠಾಣೆಯಲ್ಲಿ ದಾಖಲಾಗಿರುವ ಮುಂಬೈ ಮೂಲದ ಉದ್ಯಮಿಗೆ 5 ಕೋ.ರು. ಪಡೆದು ವಂಚನೆ ಪ್ರಕರಣ, ಬೆಂಗಳೂರು ಮೂಲದ ಮಹಿಳೆಯೊಬ್ಬರಿಗೆ14.74 ಲಕ್ಷ ರು. ವಂಚನೆ ಎರಡು ಪ್ರಕರಣಗಳನ್ನು ಸಿಐಡಿ ತನಿಖೆ ನಡೆಸಲಿದೆ.

ಮಂಗಳೂರಿನ ಸೆನ್ ಪೊಲೀಸರು ಜು.17ರಂದು ರೋಶನ್ ಸಲ್ಡಾನ್ಹಾನನ್ನು ಆತನ ಮನೆಯಲ್ಲಿ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದರು. ಬಳಿಕ ಆತನಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿತ್ತು. ಆತನ ಬಂಧನದ ವಿಚಾರ ತಿಳಿಯುತ್ತಿದ್ದಂತೆ ಹಲವು ಮಂದಿ ಉದ್ಯಮಿಗಳು ತಮಗಾದ ವಂಚನೆಗೆ ಸಂಬಂಧಿಸಿದಂತೆ ದೂರು ನೀಡಲು ಮುಂದೆ ಬಂದಿದ್ದರು. ಮಹಾರಾಷ್ಟ್ರದ ಉದ್ಯಮಿಗೆ 5 ಕೋ.ರು. ಮತ್ತು ಅಸ್ಸಾಂ ಮೂಲದ ವ್ಯಕ್ತಿಗೆ 20 ಕೋ.ರು. ವಂಚನೆ ಮಾಡಿರುವ ಕುರಿತಂತೆಯೂ ಪ್ರಕರಣ ದಾಖಲಾಗಿತ್ತು. ಹೈದರಾಬಾದ್ ಮೂಲದ ವ್ಯಕ್ತಿ 1 ಕೋ.ರು. ವಂಚನೆ ಬಗ್ಗೆ ದೂರು ನೀಡಿದ್ದರು.

ಸುಮಾರು 200 ಕೋಟಿ ರು.ಗೂ ಹೆಚ್ಚು ವಂಚನೆ ನಡೆಸಿದ್ದಾನೆ ಎನ್ನಲಾದ ಬಹುಕೋಟಿ ವಂಚಕ ರೋಶನ್ ಸಲ್ದಾನ ಪ್ರಕರಣದಲ್ಲಿ ಹೈಕೋರ್ಟ್ ಆರೋಪಿ ರಿಲೀಫ್ ನೀಡಿತ್ತು. ಕಳೆದ ಜುಲೈನಲ್ಲಿ ಪೊಲೀಸರ ತನಿಖಾ ಪ್ರಕ್ರಿಯೆಗೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಇತ್ತೀಚೆಗೆ ಸಾಲ ನೀಡುವ ನೆಪದಲ್ಲಿ ಭಾರೀ ವಂಚನೆ ನಡೆಸಿದ ಜಾಲದಲ್ಲಿ ಮಂಗಳೂರಿನ ಜೆಪ್ಪಿನಮೊಗರಿನಲ್ಲಿ ರೋಶನ್ ನನ್ನು ಸಿಇಎನ್ ಪೊಲೀಸರು ಬಂಧಿಸಿದ್ದರು. ಆತನ ಐಶಾರಾಮಿ ಜೀವನ ಮತ್ತು ಸೀಕ್ರೆಟ್‌ಗಳು ಇಡೀ ಮಂಗಳೂರು ಮಾತ್ರವಲ್ಲ ಇಡೀ ರಾಜ್ಯದ ಜನರನ್ನೇ ಬೆಚ್ಚಿಬೀಳಿಸಿತ್ತು. ಪೊಲೀಸರು ಕೂಡ ಆತನ ಮನೆಗೆ ಹೋದಾಗ ದಂಗಾಗಿದ್ರು.

ಮಂಗಳೂರಿನಲ್ಲಿ ಕುಖ್ಯಾತ ಡ್ರಗ್ ಪೆಡ್ಲರ್ ಆಗಿರುವ ರೋಷನ್ ಐಷಾರಾಮಿ ಮನೆಯ ಮೇಲೆ ದಾಳಿ ನಡೆಸಿದ ಪೊಲೀಸರು, ಅಲ್ಲಿ ಅನೇಕ ರಹಸ್ಯ ಕೋಣೆಗಳು, ತಪ್ಪಿಸಿಕೊಳ್ಳುವ ಮಾರ್ಗಗಳು ಮತ್ತು ಕೋಟ್ಯಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಪತ್ತೆ ಹಚ್ಚಿದ್ದರು. ಬೃಹತ್ ಸಾಲಗಳು ನೀಡುವ ಮತ್ತು ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ನಡೆಸುವ ಉನ್ನತ ಉದ್ಯಮಿಯಂತೆ ನಟಿಸುತ್ತಿದ್ದಸಲ್ಡಾನಾ ಉದ್ಯಮಿಗಳಿಗೆ ಕೋಟ್ಯಂತರ ರೂಪಾಯಿಗಳನ್ನು ವಂಚಿಸಿದ್ದ. ಕಳೆದ 3-4 ತಿಂಗಳಲ್ಲಿ 40 ಕೋಟಿ ರೂಪಾಯಿಗಳ ವಹಿವಾಟು ನಡೆದಿರುವುದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾಗಿತ್ತು.

ರಹಸ್ಯ ಕೋಣೆಗಳು, ಫೇಕ್‌ವಾಲ್‌ಗಳು, ತಪ್ಪಿಸಿಕೊಳ್ಳುವ ಮಾರ್ಗಗಳಿಗೆ ಕಾರಣವಾಗುವ ಗುಪ್ತ ಮೆಟ್ಟಿಲುಗಳು, ಗೋಡೆಗಳ ಮೇಲೆ ಹುದುಗಿರುವ ಬಾಗಿಲುಗಳು ಮತ್ತು ಭೂಗತ ಕಾರಿಡಾರ್‌ಗಳನ್ನು ಆತನ ಮನೆಯಲ್ಲಿ ಹೊಂದಿದ್ದ.ತನ್ನ ಸೀಕ್ರೆಟ್‌ ಚೇಂಬರ್‌ ಅನ್ನು ನಿರ್ಮಾಣ ಮಾಡಿದ್ದ. ಕಣ್ಗಾವಲು ಕ್ಯಾಮೆರಾಗಳು ಅವನಿಗೆ ಆಸ್ತಿಯ ರಿಯಲ್‌ ಟೈಮ್‌ ವಿವರಗಳನ್ನು ನೀಡುತ್ತಿದ್ದವು. ಇದರಿಂದಲೇ ಆತ ತಪ್ಪಿಸಿಕೊಳ್ಳುತ್ತಿದ್ದ. ಆತನ ನಿವಾಸದಲ್ಲಿ ತಲಾ 3-5 ಲಕ್ಷ ರೂ. ಮೌಲ್ಯದ ಅಪರೂಪದ ಅಲಂಕಾರಿಕ ಸಸ್ಯಗಳು, ವಿಂಟೇಜ್ ಷಾಂಪೇನ್ ಮತ್ತು ವಿದೇಶಿ ಮದ್ಯಗಳ ರಾಶಿ ಸಿಕ್ಕಿತ್ತು. ಅಧಿಕಾರಿಗಳು 2.8 ಕೋಟಿ ರೂ. ಮೌಲ್ಯದ ವಜ್ರದ ಉಂಗುರ ಮತ್ತು 667 ಗ್ರಾಂ ಚಿನ್ನವನ್ನು ಪತ್ತೆಹಚ್ಚಿದ್ದರು. ಆವರಣದಲ್ಲಿ 6.7 ಲಕ್ಷ ರೂ.ಗೂ ಹೆಚ್ಚು ಮೌಲ್ಯದ ಮದ್ಯವೂ ಪತ್ತೆಯಾಗಿತ್ತು, ಕಾನೂನು ಮಿತಿಗಳನ್ನು ಮೀರಿ ಹೊಂದಿದ್ದಕ್ಕಾಗಿ ಕರ್ನಾಟಕ ಅಬಕಾರಿ ಕಾಯ್ದೆಯಡಿ ಕೂಡ ಪ್ರಕರಣ ದಾಖಲಾಗಿದೆ.