ಬಿಜೆಪಿ ಮುಖಂಡ ಎಂಟಿಬಿ ನಾಗರಾಜ್ ತಮ್ಮ ಕ್ಷೇತ್ರದ ಜನರಿಗೆ ಉಚಿತವಾಗಿ ಆಯುಷ್ಮಾನ್ ಕಾರ್ಡ್ ವಿತರಣೆ ಮಾಡಿದರು, ಈ ವೇಳೆ ಶೀಘ್ರ ಅವರಿಗೆ ಸಚಿವ ಸ್ಥಾನ ಸಿಗುವ ಭರವಸೆಯನ್ನು ಮುಖಂಡರು ವ್ಯಕ್ತಪಡಿಸಿದರು. 

ಹೊಸಕೋಟೆ (ಸೆ.11):  ಆಯುಷ್ಮಾನ್‌ ಭಾರತ್‌ ಯೋಜನೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನ ಕೂಸಾಗಿದ್ದು, ಬಡವರಿಗೆ ಗುಣಮಟ್ಟದ ಆರೋಗ್ಯ ಸೇವೆ ಉಚಿತವಾಗಿ ಲಭ್ಯವಾಗಲೆಂಬ ದೃಷ್ಟಿಯಿಂದ ಜಾರಿಗೆ ತರಲಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಎಂಟಿಬಿ ನಾಗರಾಜ್‌ ತಿಳಿಸಿದರು.

ನಂದಗುಡಿ ಹೋಬಳಿಯ ಮಾರಸಂಡಹಳ್ಳಿ ಗ್ರಾಮದಲ್ಲಿ ಗುರುವಾರ 1 ಸಾವಿರ ಹಿಂದುಳಿದ ವರ್ಗದ ಬಡ ಕುಟುಂಬಕ್ಕೆ ಉಚಿತವಾಗಿ ಆಯುಷ್ಮಾನ್‌ ಭಾರತ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಿ ಮಾತನಾಡಿ, ಸರ್ಕಾರಿ ಮತ್ತು ಸರ್ಕಾರದಿಂದ ನೋಂದಾಯಿಸಲ್ಪಟ್ಟ ಖಾಸಗಿ ಆಸ್ಪತ್ರೆಗಳಲ್ಲಿ ಬಿಪಿಎಲ್‌ ಮತ್ತು ಎಪಿಎಲ್‌ ಕಾರ್ಡ್‌ ಹೊಂದಿರುವ ಬಡವರಿಗೂ ಉಚಿತವಾಗಿ ಹಾಗೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದರು.

ನಂದಗುಡಿ ಜಿಪಂ. ಸದಸ್ಯ ಸಿ. ನಾಗರಾಜ್‌ ಮಾತನಾಡಿ, ತಾಲೂಕಿನ ಎಲ್ಲ ಗ್ರಾಮಗಳಿಗೆ ಉಚಿತವಾಗಿ ಆಯುಷ್ಮಾನ್‌ ಭಾರತ ಆರೋಗ್ಯ ಕಾರ್ಡ್‌ ವಿತರಣೆ ಮಾಡುವಲ್ಲಿ ವಿಧಾನ ಪರಿಷತ್‌ ಸದಸ್ಯ ಎಂಟಿಬಿ ನಾಗರಾಜ್‌ ಮುಂದಾಗಿದ್ದು, ತಾಲೂಕಿನ ಬಡವರ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಸಚಿವರಾಗಲಿದ್ದು, ತಾಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡಲಿದ್ಧಾರೆ ಎಂದರು.

'ನನಗೆ ಈ ಕೊರಗೊಂದು ಕಾಡುತ್ತಿದೆ' : ಎಂಟಿಬಿ ನಾಗರಾಜ್ ...

ತಾಪಂ ಅಧ್ಯಕ್ಷ ಜಯದೇವಯ್ಯ, ಬಿಜೆಪಿ ತಾಲೂಕು ಅಧ್ಯಕ್ಷ ಕೆ. ಸತೀಶ್‌ ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷೆ ಸುಜಾತ ನಾಗರಾಜ್‌, ಸಂಚಾಲಕಿ ಸುಮತಿರೆಡ್ಡಿ, ಹೊಸಕೋಟೆ ಕುರುಬರ ಸಂಘದ ನಿರ್ದೇಶಕರಾದ ಆರ್‌. ಮಂಜುನಾಥ್‌ ಎಂಪಿಸಿಎಸ್‌ ಕಾರ್ಯದರ್ಶಿ ರಾಮಯ್ಯ, ಮಾಜಿ ಗ್ರಾಪಂ ಸದಸ್ಯ ಎಂ.ಬಿ.ಮುನಿರಾಜ್‌, ಮುಖಂಡರಾದ ಚಿಕ್ಕಣ್ಣ, ಮಂಜುನಾಥ್‌, ಮುರಳಿ, ನರೇಂದ್ರಬಾಬು, ಮುನಿಯಪ್ಪ, ನಾಗರಾಜ್‌, ವೆಂಕಟೇಶ್‌, ಗುರುದೇವ್‌ ಹಾಜರಿದ್ದರು.