ಹುಬ್ಬಳ್ಳಿ(ಡಿ.26): ಮಂಗಳೂರು ಗಲಭೆ ವೇಳೆ ಮೃತಪಟ್ಟವರಿಬ್ಬರ ಕುಟುಂಬಕ್ಕೆ ಘೋಷಿಸಿದ್ದ 10 ಲಕ್ಷ ರುಪಾಯಿ ಪರಿಹಾರವನ್ನು ತಡೆಹಿಡಿದ ಸರ್ಕಾರದ ನಿರ್ಧಾರಕ್ಕೆ ಸಂಸದ ತೇಜಸ್ವಿ ಸೂರ್ಯ ಬೆಂಬಲ ವ್ಯಕ್ತಪಡಿಸಿದ್ದಾರೆ. ಕಾನೂನು ಉಲ್ಲಂಘಿಸಿದವರಿಗೆ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಮಂಗಳೂರು ಪ್ರಕರಣ, ತನಿಖೆ ಮಾಡಿ ಪರಿಹಾರ ಕೊಡ್ಲೇಬೇಕು: ಶ್ರೀರಾಮುಲು

ನಗರದ ನಾಗಶೆಟ್ಟಿಕೊಪ್ಪದಲ್ಲಿ ಬುಧವಾರ ಮಹಾನಗರ ಜಿಲ್ಲಾ ಬಿಜೆಪಿಯಿಂದ ಏರ್ಪಡಿಸಿದ್ದ ಪೌರತ್ವ ಕಾಯ್ದೆ ತಿದ್ದುಪಡಿ ಕುರಿತ ಜನಜಾಗೃತಿ ಸಭೆಯಲ್ಲಿ ಮಾತನಾಡಿ, ಮಂಗಳೂರಿನ ಗಲಭೆಯಲ್ಲಿ ಮರಣ ಹೊಂದಿದ ಇಬ್ಬರೂ ಕಾನೂನು ಉಲ್ಲಂಘನೆ ಮಾಡಿರುವುದು ಸ್ಪಷ್ಟವಾಗಿದೆ. ಇದೇ ಕಾರಣಕ್ಕೆ ರಾಜ್ಯ ಸರ್ಕಾರ ತಾನು ಮೃತರ ಕುಟುಂಬಕ್ಕೆ ಘೋಷಿಸಿದ್ದ ತಲಾ 10 ಲಕ್ಷ ಪರಿಹಾರವನ್ನು ತಡೆಹಿಡಿದಿದೆ. ಕಾನೂನು ಉಲ್ಲಂಘನೆ ಮಾಡುವವರಿಗೆ ಪರಿಹಾರ ನೀಡಲು ರಾಜ್ಯದಲ್ಲಿರುವುದು ಸಿದ್ದರಾಮಯ್ಯ ಸರ್ಕಾರ ಅಲ್ಲ, ಕಾನೂನು ಗೌರವಿಸುವ ಬಿ.ಎಸ್‌. ಯಡಿಯೂರಪ್ಪ ಸರ್ಕಾರ ಎಂಬುವುದನ್ನು ಕಾಂಗ್ರೆಸ್‌ನವರು ಅರ್ಥ ಮಾಡಿಕೊಳ್ಳಬೇಕು ಎಂದರು.

ಮಂಗಳೂರು ಗೋಲಿಬಾರ್‌ನಲ್ಲಿ ಮೃತಪಟ್ಟವರಿಗೆ ಪರಿಹಾರ ಇಲ್ಲ! ಆದೇಶ ಹಿಂಪಡೆದ ಸಿಎಂ

ಇದೇ ವೇಳೆ, ಎನ್‌ಆರ್‌ಸಿ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಯು.ಟಿ. ಖಾದರ್‌, ಮತ್ತು ಅವರು ಬೆಳೆಸಿದ ಮರಿ ಟಿಪ್ಪುಗಳು ಸೇರಿ ಗಲಭೆ ಹಚ್ಚುತ್ತಿದ್ದಾರೆ. ಪೆನ್ನು ಹಿಡಿಯಬೇಕಿರುವ ಯುವಕರು ಕೈಯಲ್ಲಿ ಕಲ್ಲುಗಳನ್ನು ಹಿಡಿದು ಪೊಲೀಸರ ಮೇಲೆ ಎಸೆಯುವಂತೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಪೊಲೀಸರ ಮೇಲೆ ಗೂಬೆ ಕೂರಿಸುತ್ತಿರುವ ಸಿದ್ದು

ಮಂಗಳೂರು ಗಲಭೆಗೆ ಸಂಬಂಧಪಟ್ಟಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸರ ಮೇಲೆ ಗೂಬೆ ಕೂಡಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಆಕ್ರೊಶ ವ್ಯಕ್ತಪಡಿಸಿದ್ದಾರೆ. ಪೌರತ್ವ ಕಾಯ್ದೆ ಕುರಿತು ಬಿಜೆಪಿ ಆಯೋಜಿಸಿದ್ದ ಜನಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಮಂಗಳೂರು ಗಲಭೆಗೆ ಸಂಬಂಧಪಟ್ಟಂತೆ ಆಯ್ದ ಸಿಸಿ ಟಿವಿ ಫುಟೇಜ್‌ಗಳನ್ನು ಪೊಲೀಸರು ಸೋರಿಕೆ ಮಾಡಿದ್ದಾರೆ. ಶಾಂತಿ ಕದಡಿದ್ದಾರೆ ಎಂದು ಹೇಳಿದ್ದಾರೆ. ಇದು ಪೊಲೀಸರ ಆತ್ಮಸ್ಥೈರ್ಯ ಮತ್ತು ಜಂಘಾಬಲವನ್ನೇ ಕುಸಿಯುವಂತೆ ಮಾಡುವ ಪ್ರಯತ್ನ. ಇಂತಹ ಹೇಳಿಕೆ ಕೊಡಬೇಡಿ. ರಾಜಕೀಯಕ್ಕಾಗಿ ಪೊಲೀಸರ ಬಳಕೆ ಸಲ್ಲದು ಎಂದರು.

‘ಹೌದು ಹುಲಿಯಾ’ ಕಾರ್ಯಕರ್ತರಿಲ್ಲ

ವಿರೋಧ ಪಕ್ಷಗಳು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ. ನಾವು ಜನರಲ್ಲಿ ಜಾಗೃತಿ ಮಾಡುತ್ತಿದ್ದೇವೆ. ನಮ್ಮಲ್ಲಿ ಪ್ರಜ್ಞಾವಂತ ಕಾರ್ಯಕರ್ತರಿದ್ದಾರೆ. ಎಲ್ಲದ್ದಕ್ಕೂ ಹೌದು ಹುಲಿಯಾ ಎಂದು ಹೇಳುವ ಕಾರ್ಯಕರ್ತರಿಲ್ಲ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.

ಅಲ್ಪಸಂಖ್ಯಾತರನ್ನು ದಾರಿ ತಪ್ಪಿಸುತ್ತಿರುವ ಕಾಂಗ್ರೆಸ್‌ ದೇಶದ್ರೋಹದ ಕೆಲಸ ಮಾಡುತ್ತಿದೆ. ಕೋಮು ಗಲಭೆಗೆ ಪ್ರಚೋದನೆ ನೀಡುವ ಮೂಲಕ ಇನ್ನೊಂದು ಸಮುದಾಯದ ಮೇಲೆ ಎತ್ತಿ ಕಟ್ಟೋದು ಎಷ್ಟುಸರಿ ಎಂದು ಪ್ರಶ್ನಿಸಿದರು. ನಮ್ಮಲ್ಲಿ ಪ್ರಜ್ಞಾವಂತರಿದ್ದಾರೆ. ಪ್ರಶ್ನೆಗಳನ್ನು ಕೇಳಿ ಗೊಂದಲಗಳನ್ನು ಪರಿಹರಿಸಿಕೊಳ್ಳುತ್ತಾರೆ. ಜನರಲ್ಲಿ ಜಾಗೃತಿಯನ್ನೂ ಮೂಡಿಸುತ್ತಾರೆ. ಎಲ್ಲದ್ದಕ್ಕೂ ಹೌದ್‌ ಹುಲಿಯಾ ಎನ್ನುವ ಕಾರ್ಯಕರ್ತರಿಲ್ಲ ಎಂದರು.

ಸುವರ್ಣ ಟಿವಿ ಅಜಿತ್‌ ಹನುಮಕ್ಕನವರಗೆ ಬೆದರಿಕೆ

ಮಂಗಳೂರು ಗೋಲಿಬಾರ್‌ ವಿಷಯಕ್ಕೆ ಸಂಬಂಧಪಟ್ಟಂತೆ ಸಿಸಿ ಟಿವಿ ಫುಟೇಜ್‌ ಪ್ರಸಾರ ಮಾಡಿ ವಿವರಣೆ ನೀಡಿದ್ದಕ್ಕೆ ಸುವರ್ಣ ವಾಹಿನಿಯ ಅಜಿತ್‌ ಹನುಮಕ್ಕನವರಿಗೆ ಬೆದರಿಕೆ ಕರೆಗಳು ಬರುತ್ತಿವೆ. ಈ ಸಂಬಂಧ ನಾನು ಈಗಾಗಲೇ ಬೆಂಗಳೂರು ಪೊಲೀಸ್‌ ಕಮಿಷನರ್‌ ಜೊತೆ ಮಾತನಾಡಿದ್ದೇನೆ. ಹನುಮಕ್ಕನವರಗೆ ಸೂಕ್ತ ರಕ್ಷಣೆ ನೀಡಲು ಹೇಳಿದ್ದೇನೆ ಎಂದು ತೇಜಸ್ವಿ ಸೂರ್ಯ ಹೇಳಿದರು.