ರಾಮನಗರ [ನ.30]: ರಾಜ್ಯದಲ್ಲಿ ಬಿಜೆಪಿ ನಾಲ್ಕು ತಿಂಗಳಿನಿಂದ ನಡೆಸುತ್ತಿರುವ ಆಡಳಿತ ಜನತೆಗೆ ತೃಪ್ತಿ ನೀಡಿಲ್ಲ ಎಂದು ಸಂಸದ ಡಿ.ಕೆ ಸುರೇಶ್ ಹೇಳಿದ್ದಾರೆ. 

ರಾಮನಗರದಲ್ಲಿ ಮಾತನಾಡಿದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ.ಸುರೇಶ್, ರೈತರ ಕಷ್ಟ ಸುಖಗಳಿಗೆ ಬಿಜೆಪಿಯವರು ಸ್ಪಂದಿಸುತ್ತಿಲ್ಲ ಎಂದರು. 

ಇನ್ನು ಸದ್ಯ ರಾಜ್ಯದ 15 ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ಈ ಚುನಾವಣೆ ರಾಜ್ಯದ ಹಿತದೃಷ್ಟಿಯಿಂದ ನಡೆಯುತ್ತಿರುವ ಚುನಾವಣೆಯಲ್ಲ.  ಇದು ಮಂತ್ರಿಗಿರಿಗಾಗಿ ನಡೆಯುತ್ತಿರುವ ಚುನಾವಣೆ. ಹಲವರು ಮಂತ್ರಿಗಿರಿ ಆಸೆಗಾಗಿ ನಿಂತಿದ್ದಾರೆ. ಅವರನ್ನೆಲ್ಲಾ ನೀವು ತಿರಸ್ಕಾರ ಮಾಡಬೇಕು ಎಂದು ಜನರಲ್ಲಿ ಡಿ.ಕೆ.ಸುರೇಶ್ ಮನವಿ ಮಾಡಿದರು. 

ಇನ್ನು ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು ವಿಚಾರವಾಗಿಯೂ ಪ್ರಸ್ತಾಪಿಸಿದ ಡಿ.ಕೆ.ಸುರೇಶ್  ರಾಜ್ಯ ಸರ್ಕಾರದವರು ಚಿಕ್ಕಬಳ್ಳಾಪುರ ಜನರನ್ನು ಮೋಸ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಸಮಯದಲ್ಲೇ ಇಲ್ಲಿಗೆ ಮೆಡಿಕಲ್ ಕಾಲೇಜು ಮಂಜೂರಾಗಿತ್ತು. ಆದರೆ ಅವರು ಕೇಂದ್ರ ಸರ್ಕಾರಕ್ಕೆ ಹಣಕಾಸಿನ ನೆರವು ಕೇಳಿದ್ದರು. ಈಗ ಇದಕ್ಕೆ 900 ಕೋಟಿ ರು. ಮಂಜೂರಾಗಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಇನ್ನು ಕನಕಪುರಕ್ಕೆ ಸಿಗಬೇಕಾದ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಕಿತ್ತುಕೊಂಡು ಹೋಗಿದ್ದಾರೆ. ಚುನಾವಣೆ ಬಳಿಕ ಈ ಬಗ್ಗೆ ಹೋರಾಟದ ರೂಪುರೇಷೆಗಳನ್ನು ರಚನೆ ಮಾಡುತ್ತೇವೆ. 450 ಕೋಟಿ ರು. ವೆಚ್ಚದಲ್ಲಿ ನಮ್ಮ ಮೆಡಿಕಲ್ ಕಾಲೇಜು ಮಂಜೂರಾಗಿತ್ತು. ಆದರೆ ಚಿಕ್ಕಬಳ್ಳಾಪುರಕ್ಕೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅನುದಾನ ಸೇರಿ 900 ಕೋಟಿ ರು. ಮಂಜೂರಾಗಿದೆ. ಆದ್ದರಿಂದ ಚಿಕ್ಕಬಳ್ಳಾಪುರದವರು ಈ ಬಗ್ಗೆ ಖುಷಿ ಪಡಬೇಕು. ಕನಕಪುರ ಹಾಗೂ ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜಿಗೂ ಯಾವುದೇ ಸಂಬಂಧ ಇಲ್ಲ ಎಂದು ಡಿ.ಕೆ.ಸುರೇಶ್ ಹೇಳಿದರು.

ಡಿಸೆಂಬರ್ 5 ರಂದು ರಾಜ್ಯದಲ್ಲಿ ಉಪಚುನಾವಣೆ ನಡೆಯಲಿದ್ದು 9 ರಂದು ಫಲಿತಾಂಶ ಪ್ರಕಟವಾಗಲಿದೆ