ಸಂಸದ ಬಸವರಾಜುಗೆ ರೈತರ ಬಗ್ಗೆ ಮಾತಾಡುವ ನೈತಿಕತೆ ಇಲ್ಲ : ಕೆ.ಟಿ. ಗಂಗಾಧರ್
ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ, ಹಸಿರು ಸೇನೆ, ರೈತ ಸಂಘದ ವತಿಯಿಂದ ಕ್ವಿಂಟಲ್ ಕೊಬ್ಬರಿಗೆ 20 ಸಾವಿರ ರು. ಬೆಂಬಲ ಬೆಲೆ ನಿಗದಿ ಪಡಿಸುವಂತೆ ಆಗ್ರಹಿಸಿ ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಮಂಗಳವಾರಕ್ಕೆ 9ನೇ ದಿನಕ್ಕೆ ಕಾಲಿಟ್ಟಿದ್ದು ಇಂದಿನ ಧರಣಿಗೆ ಚಿಕ್ಕಬಿದರೆ ಗ್ರಾಮದ ರೈತರು ಬೆಂಬಲ ಸೂಚಿಸಿದರು.
ತಿಪಟೂರು : ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ, ಹಸಿರು ಸೇನೆ, ರೈತ ಸಂಘದ ವತಿಯಿಂದ ಕ್ವಿಂಟಲ್ ಕೊಬ್ಬರಿಗೆ 20 ಸಾವಿರ ರು. ಬೆಂಬಲ ಬೆಲೆ ನಿಗದಿ ಪಡಿಸುವಂತೆ ಆಗ್ರಹಿಸಿ ನಗರದ ಉಪವಿಭಾಗಾಧಿಕಾರಿಗಳ ಕಚೇರಿ ಮುಂದೆ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಮಂಗಳವಾರಕ್ಕೆ 9ನೇ ದಿನಕ್ಕೆ ಕಾಲಿಟ್ಟಿದ್ದು ಇಂದಿನ ಧರಣಿಗೆ ಚಿಕ್ಕಬಿದರೆ ಗ್ರಾಮದ ರೈತರು ಬೆಂಬಲ ಸೂಚಿಸಿದರು.
ಅನಿರ್ದಿಷ್ಟಾವಧಿ ಧರಣಿಯಲ್ಲಿ ಭಾಗವಹಿಸಿದ್ದ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಮುಖಂಡ ಕೆ.ಟಿ. ಗಂಗಾಧರ್ ಮಾತನಾಡಿ, ಸಂಸದ ಜಿ.ಎಸ್. ಬಸವರಾಜು ಕಾಂಗ್ರೆಸ್ ಸರ್ಕಾರ ರೈತರಿಗೆ ಅಕ್ಕಿ ಕೊಟ್ಟು ಹಾಳು ಮಾಡಿತು. ಕೆರೆಗಳಿಗೆ ನೀರು ಹರಿಸಿದರೂ ಉಳುಮೆ ಮಾಡುವಲ್ಲಿ ರೈತರು ಸೋಮಾರಿಗಳಾಗಿದ್ದಾರೆಂದು ಹೇಳಿಕೆ ನೀಡಿರುವುದು ನಾಚಿಕೆಗೇಡಿನ ಸಂಗತಿ. ರೈತರ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ. ರೈತರು ನೀರು ಕೊಟ್ಟರು ಉಳುಮೆ ಮಾಡುತ್ತಿಲ್ಲ ಸೋಮಾರಿಗಳಾಗಿದ್ದಾರೆಂದು ಹೇಳುತ್ತಿರುವ ನೀವು ರೈತ ಬೆಳೆ ಬೆಳೆಯುವುದನ್ನು ನಿಲ್ಲಿಸಿದರೆ ದೇಶದ ಗತಿಏನಾಗುತ್ತಿದೆ ಎಂದು ಒಂದು ಬಾರಿ ನೆನಪಿಸಿಕೊಳ್ಳಿ. ಬಿಜೆಪಿ ಪಕ್ಷ ಕೂಡಲೆ ಇವರ ಮೇಲೆ ಶಿಸ್ತಿನ ಕ್ರಮಕೈಗೊಳ್ಳಬೇಕೆಂದು ಕೆ.ಟಿ. ಗಂಗಾಧರ್ ಆಗ್ರಹಪಡಿಸಿದರು.
ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಬಿ. ಯೋಗೀಶ್ವರಸ್ವಾಮಿ ಮಾತನಾಡಿ, ಸರ್ಕಾರದ ಪ್ರತಿನಿಧಿಗಳಾಗಿರುವ ಸಂಸದ ಜಿ.ಎಸ್. ಬಸವರಾಜು ರೈತರಿಂದಲೇ ಹಲವಾರು ಬಾರಿ ಆರಿಸಿ ಬಂದಿರುವುದು ಎಂಬುದನ್ನು ಮರೆಯಬಾರದು. ಕೂಡಲೆ ಅವರು ರೈತರ ಕ್ಷಮೆಯಾಚಿಸಬೇಕೆಂದರು.
ರೈತ ಮುಖಂಡ ಮನೋಹರ ಪಟೇಲ್ ಮಾತನಾಡಿ, ರೈತರ ಬಗ್ಗೆ ಕೀಳಾಗಿ ಮಾತನಾಡಿರುವ ಸಂಸದರಿಗೆ ನಾಚಿಕೆಯಾಗಬೇಕು. ಕೊಬ್ಬರಿ ಬೆಲೆ ಕುಸಿತದಿಂದ ತೆಂಗು ಬೆಳೆಗಾರರ ಜೀವನ ಅತಂತ್ರ ಸ್ಥಿತಿಯಲ್ಲಿದ್ದು ಜೀವನ ನಿರ್ವಹಣೆಗೆ ಕಷ್ಟಪಡುತ್ತಿದ್ದಾರೆ. ಇಂತಹ ಸಮಯದಲ್ಲಿ ರೈತವಿರೋಧಿ ಹೇಳಿಕೆ ನೀಡುತ್ತಿದ್ದು, ನಿಮ್ಮ ಸರ್ಕಾರಕ್ಕೆ ಜನರೇ ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಧರಣಿಯಲ್ಲಿ ನಗರಸಭೆ ಮಾಜಿ ಸದಸ್ಯೆ ರೇಖಾ ಅನೂಪ್, ಸಮಿತಿಯ ಗೌರವಾಧ್ಯಕ್ಷ ಬಿ.ಬಿ.ಸಿದ್ದಲಿಂಗಮೂರ್ತಿ, ಹೋರಾಟಗಾರ ಟಿ.ಬಿ. ಜಯಾನಂದಯ್ಯ, ರೈತ ಮುಖಂಡರಾದ ದೇವರಾಜು ತಿಮ್ಲಾಪುರ, ಚಿಕ್ಕಬಿದರೆ ಗ್ರಾಮದ ರೈತರಾದ ಕೇಶವಾಚಾರ್, ಚಂದ್ರಣ್ಣ, ಹಾಲಪ್ಪ, ಗಂಗಾಧರ್ ನಾಗರಾಜು, ಸುರೇಶ್, ಮಹೇಶ್, ರಘು, ಜಯಕುಮಾರ್, ಶಿವರಾಜು, ಮಲ್ಲಿಕಾರ್ಜುನ್, ಚೇತನ್, ಶಿವಕುಮಾರ್, ಮಲ್ಲಿಕಾರ್ಜುನಯ್ಯ ಸೇರಿದಂತೆ ಮತ್ತಿತರರು ಭಾಗವಹಿಸಿ ಬೆಂಬಲ ಸೂಚಿಸಿದರು.
ರೈತರು ಸೋಮಾರಿಗಳಾಗಿದ್ದಾರೆ ಎಂಬ ಮಾತನ್ನು ಸಂಸದ ಜಿ.ಎಸ್. ಬಸವರಾಜು ವಾಪಸ್ ತೆಗೆದುಕೊಳ್ಳಬೇಕು. ರೈತರು ಬೆಳೆ ಬೆಳೆದು ತೆರಿಗೆ ಕಟ್ಟುತ್ತಿದ್ದಾರೆ. ರೈತರ ಬಗ್ಗೆ ಇಷ್ಟುಕೀಳಾಗಿ ಮಾತಾಡುವುದನ್ನು ನಿಲ್ಲಿಸಿ ಅವರ ಕಷ್ಟವನ್ನು ಅರ್ಥಮಾಡಿಕೊಳ್ಳಿ.
- ಜಯಚಂದ್ರ ಶರ್ಮ ಸಹ ಕಾರ್ಯದರ್ಶಿ, ಕೊಬ್ಬರಿ ಬೆಳೆಗಾರರ ಹೋರಾಟ ಸಮಿತಿ, ತಿಪಟೂರು.