ಶಿರಸಿ(ಆ.30): ಟಿಪ್ಪು ಸುಲ್ತಾನ್‌ ಕುರಿತ ಪಾಠಗಳನ್ನು ಶಾಲಾ ಪಠ್ಯ ಪುಸ್ತಕಗಳಿಂದ ತೆಗೆದು ಹಾಕುವ ಮಹತ್ತರ ನಿರ್ಧಾರವನ್ನು ಕೈಗೊಂಡ ಮುಖ್ಯಮಂತ್ರಿ ಯಡಿಯೂರಪ್ಪ ನಡೆಯನ್ನು ನಾನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ಅಲ್ಲದೇ ದಿಟ್ಟ ನಿರ್ಧಾರವನ್ನು ಮುಕ್ತ ಕಂಠದಿಂದ ಶ್ಲಾಘಿಸುತ್ತೇನೆಂದು ಸಂಸದ ಅನಂತಕುಮಾರ ಹೆಗಡೆ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮೈಸೂರು ಸಂಸ್ಥಾನದ ಅರಸರನ್ನು ಒತ್ತೆಯಾಳಾಗಿರಿಸಿ ಅಕ್ರಮವಾಗಿ ರಾಜ್ಯಭಾರ ಮಾಡಿದ ಟಿಪ್ಪು ಸುಲ್ತಾನನು ಓರ್ವ ಕ್ರೂರ ಮತಾಂಧನಾಗಿದ್ದ, ಹಿಂದೂ ಮತ್ತು ಕ್ರಿಶ್ಚಿಯನ್ನರನ್ನು ತುಂಬಾ ಕ್ರೌರ್ಯದಿಂದ ನಡೆಸಿಕೊಂಡದ್ದಕ್ಕೆ, ಅತ್ಯಾಚಾರ, ಹತ್ಯಾಕಾಂಡ ಎಸಗಿದ್ದಕ್ಕೆ, ಬಲವಂತದ ಸಾಮೂಹಿಕ ಮತಾಂತರ ನಡೆಸಿದ್ದಕ್ಕೆ ಸಾಕಷ್ಟು ಐತಿಹಾಸಿಕ ದಾಖಲೆಗಳಿವೆ. ಹೈದರಾಲಿ ಮತ್ತು ಟಿಪ್ಪು ಸುಲ್ತಾನನ ಆಸ್ಥಾನದಲ್ಲೇ ಇದ್ದ ಇತಿಹಾಸಕಾರ ಮೀರ್‌ ಹುಸೈನ್‌ ಅಲಿಖಾನ್‌ ಕಿರ್ಮಾನಿಯೇ ಸ್ವತಃ ಬರೆದಿರುವ ನಿಶಾನ್‌ -ಇ -ಹೈದರಿ ಮತ್ತು ತಜ್ಕೀರತ್‌ ಉಲ್‌ ಬಿಲಾದ್‌ ವಲ್‌ ಹುಕುಂ ಮುಂತಾದ ಅಧಿಕೃತ ಇತಿಹಾಸದಲ್ಲೇ ಟಿಪ್ಪು ಸುಲ್ತಾನನ ಕ್ರೌರ್ಯದ ದಾಖಲೆಗಳಿವೆ. ಟಿಪ್ಪು ಸುಲ್ತಾನ ಮಡಿಕೇರಿಯ ಕೊಡವರನ್ನು, ಮಂಗಳೂರಿನ ಕ್ಯಾಥೋಲಿಕ್‌ ಕ್ರಿಶ್ಚಿಯನ್ನರನ್ನು, ಚಿತ್ರದುರ್ಗದ ವಾಲ್ಮೀಕಿ ನಾಯಕರನ್ನು, ಕೇರಳದ ನಾಯರ್‌ ಜನಾಂಗವನ್ನು ಬಲವಂತವಾಗಿ ಮತಾಂತರ ಮಾಡಿದ್ದಕ್ಕೆ ಟಿಪ್ಪು ಸುಲ್ತಾನನ ಆಸ್ಥಾನ ಇತಿಹಾಸಕಾರ ಮೀರ್‌ ಹುಸೈನ್‌ ಕಿರ್ಮಾನಿಯೇ ಆಧಾರ ಒದಗಿಸಿದ್ದಾನೆ. ಆತನ ಪುಸ್ತಕಗಳ ಇಂಗ್ಲಿಷ್‌ ಭಾಷಾಂತರದ ಆವೃತ್ತಿಗಳು ಈಗಲೂ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಶಿರಸಿ: ಆಸ್ಪತ್ರೆಯಲ್ಲಿ ರೋಗಿಯಿಂದ ದಾಂಧಲೆ, 9 ಲಕ್ಷ ರೂ. ಹಾನಿ

ಸೆರೆಸಿಕ್ಕ ಹೆಂಗಸರು ಮಕ್ಕಳನ್ನೂ ಬಿಡದೆ ಎಲ್ಲರನ್ನೂ ಇಸ್ಲಾಮಿಗೆ ಮತಾಂತರ ಮಾಡಿದ್ದ ಟಿಪ್ಪು ಸುಲ್ತಾನ ಹೀಗೆ ಮತಾಂತರಕ್ಕೊಳಗಾದ ಮುಸ್ಲಿಮರನ್ನೇ ಸೇರಿಸಿ ‘ಚೇಲಾ ಬೆಟಾಲಿಯನ್‌’ ಎಂಬ ಸೈನ್ಯದ ತುಕಡಿಯನ್ನೇ ರಚಿಸಿದ್ದ... ನೂರಾರು ಚರ್ಚ್‌ಗಳನ್ನೂ ಸಾವಿರಾರು ದೇವಸ್ಥಾನಗಳನ್ನೂ ಟಿಪ್ಪು ಸುಲ್ತಾನ್‌ ಧ್ವಂಸ ಮಾಡಿದ್ದ ವಿವರಗಳನ್ನು ಟಿಪ್ಪುವಿನ ಆಸ್ಥಾನಿಕರೇ ದಾಖಲಿಸಿದ್ದಾರೆ. ಮಂಗಳೂರಿನ ಕ್ರಿಶ್ಚಿಯನ್ನರ, ಕೇರಳದ ನಾಯರ್‌ಗಳ ಮತ್ತು ಕೊಡಗಿನ ಕೊಡವರ ಮಾರಣಹೋಮದ ವಿವರಗಳಂತೂ ಭಯಾನಕವಾಗಿದೆ. ಇದರ ಪುರಾವೆ ಇವತ್ತಿಗೂ ಶ್ರೀರಂಗಪಟ್ಟಣದ ಮಸೀದಿಯ ದಕ್ಷಿಣ ಪಾಶ್ರ್ವದ ಗೋಡೆಯಲ್ಲಿರುವ ಆರಾಬಿಕ್‌ ಮತ್ತು ಪಾರ್ಸಿ ಭಾಷೆಯ ಶಾಸನಗಳಲ್ಲಿದೆ.

ಟಿಪ್ಪು ಸುಲ್ತಾನ ಮೈಸೂರು ರಾಜ್ಯದ ಆಡಳಿತ ಭಾಷೆಯಾಗಿದ್ದ ಕನ್ನಡವನ್ನೇ ಕಿತ್ತು ಹಾಕಿ ಆ ಜಾಗದಲ್ಲಿ ಪರ್ಷಿಯನ್‌ ಭಾಷೆಯನ್ನು ಅಧಿಕೃತ ಆಡಳಿತ ಭಾಷೆಯನ್ನಾಗಿಸಿದ್ದ. ಕರುನಾಡಿನ ಸುಮಾರು ಐವತ್ತಕ್ಕೂ ಹೆಚ್ಚಿನ ಪಟ್ಟಣಗಳ ಹೆಸರುಗಳನ್ನೂ ಬದಲಿಸಿ ಇಸ್ಲಾಮಿಕ್‌ ಹೆಸರುಗಳನ್ನಿಟ್ಟಿದ್ದ. ಕಂದಾಯ ದಾಖಲೆಗಳಲ್ಲಿ, ಅಳತೆ ಮಾಪನಗಳಲ್ಲಿಯೂ ಪಾರ್ಸಿ ಭಾಷೆಯನ್ನೂ ಇಸ್ಲಾಮಿಕ್‌ ಧರ್ಮವನ್ನೂ ತುರುಕಿದ್ದ. ಭಾರತದ ಮೇಲೆ ದಾಳಿ ಮಾಡಿ ಭಾರತವನ್ನು ವಶಪಡಿಸಿಕೊಳ್ಳುವಂತೆ ಫ್ರೆಂಚ್‌ ರಾಜ ನೆಪೋಲಿಯನ್ನನಿಗೂ ಅಷ್ಘಾನಿಸ್ತಾನದ ರಾಜ ಝಮಾನ್‌ ಶಾಹನಿಗೂ ಟಿಪ್ಪು ಬರೆದಿದ್ದ ಹಲವಾರು ಪತ್ರಗಳು ಇವತ್ತಿಗೂ ಬ್ರಿಟಿಷ್‌ ಮ್ಯೂಸಿಯಮ್ಮಿನಲ್ಲಿ ಲಭ್ಯವಿದೆ. ಇಂಥಹಾ ನಾಡ ದ್ರೋಹಿ, ಭಾಷಾ ದ್ರೋಹಿ, ದೇಶದ್ರೋಹಿ ಟಿಪ್ಪು ಸುಲ್ತಾನನ್ನು ದೇಶಪ್ರೇಮಿ ಎಂಬಂತೆ, ಸ್ವಾತಂತ್ರ್ಯ ಹೋರಾಟಗಾರನನೆಂಬಂತೆ ಬಿಂಬಿಸುವ ಹುನ್ನಾರವನ್ನು ಹಲವಾರು ದಶಕಗಳಿಂದಲೂ ಎಡಪಂಥೀಯರು ಮಾಡುತ್ತಲೇ ಬಂದಿದ್ದಾರೆ. ಇದರ ಪರಿಣಾಮವಾಗಿಯೇ ಟಿಪ್ಪು ಸುಲ್ತಾನನ ನೈಜ ಚರಿತ್ರೆಯನ್ನು ಮುಚ್ಚಿಟ್ಟು, ಆತನನ್ನು ವೈಭವೀಕರಿಸುವ ಪಾಠಗಳು ನಮ್ಮ ಶಾಲಾ ಪಠ್ಯಪುಸ್ತಕಗಳಲ್ಲಿ ಸೇರಿ ಹೋಯಿತು. ಕಾಂಗ್ರೆಸ್‌ ಸರ್ಕಾರಗಳ ನಿರಂತರ ಓಲೈಕೆ ರಾಜಕಾರಣದ ಫಲವಾಗಿ ದೇಶದ್ರೋಹಿ ಟಿಪ್ಪುವನ್ನು ದೇಶಪ್ರೇಮಿ ಅಂತ ನಮ್ಮದೇ ರಾಜ್ಯದ ಮಕ್ಕಳಿಗೆ ಸುಳ್ಳು ಇತಿಹಾಸವನ್ನು ಬೋಧಿಸುವ ಕೆಲಸ ಇದುವರೆಗೂ ನಡೆಯುತ್ತಾ ಬಂದಿತ್ತು.

ಈಗ ರಾಜ್ಯದಲ್ಲಿ ಆಡಳಿತ ಯಡಿಯೂರಪ್ಪ ನೇತೃತ್ವದ ಭಾಜಪ ಸರ್ಕಾರ ಒಂದು ಮಹತ್ತರ ನಿರ್ಧಾರ ತಳೆದು ಸುಳ್ಳು ಇತಿಹಾಸವನ್ನು ಬೋಧಿಸುವ ಪಾಠಗಳನ್ನು ಪಠ್ಯಪುಸ್ತಕಗಳಿಂದ ತೆಗೆದುಹಾಕುವ ನಿರ್ಧಾರವನ್ನು ಕೈಗೊಂಡಿದೆ. ಈ ನಿರ್ಧಾರವನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ ಮತ್ತು ಸಂಪೂರ್ಣವಾಗಿ ಬೆಂಬಲಿಸುತ್ತೇನೆ ಎಂದಿದ್ದಾರೆ.