ಮಂಡ್ಯ: ವಾಹನ ಸವಾರರಿಗೆ ಸವಾಲಾದ ರಕ್ಕಸ ಗುಂಡಿಗಳು!

ಕಣ್ಣಿದ್ದೂ ಕುರುಡಾಗಿರುವ ಜನಪ್ರತಿನಿಧಿಗಳು ಅಧಿಕಾರಿಗಳು, ಗುಂಡಿ ಮುಚ್ಚುವ ಕನಿಷ್ಠ ಕಾಳಜಿಯನ್ನೂ ತೋರಿಸದೆ ಅಸಡ್ಡೆ

Motorists Faces Problems Due to Road Potholes in Mandya grg

ಮಂಡ್ಯ ಮಂಜುನಾಥ

ಮಂಡ್ಯ(ಅ.22): ನಗರ ವ್ಯಾಪ್ತಿಯ ರಸ್ತೆಗಳ ಸ್ಥಿತಿ ಅಧೋಗತಿಗೆ ಇಳಿದು ದಶಕಗಳಾಗಿವೆ. ಮುಖ್ಯ ರಸ್ತೆಯಿಂದ ಸಣ್ಣ ರಸ್ತೆಯವರೆಗೂ ಸಂಪೂರ್ಣವಾಗಿ ಹಾಳಾಗಿಹೋಗಿದೆ. ರಕ್ಕಸ ಗುಂಡಿಗಳು ಒಂದೆಡೆ ಸವಾರರಿಗೆ ಸವಾಲಾಗಿ ಪರಿಣಮಿಸಿದರೆ, ಮತ್ತೊಮ್ಮೆ ಮೃತ್ಯುಕೂಪದಂತೆ ಗೋಚರಿಸುತ್ತಿವೆ. ಇಷ್ಟಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಕಣ್ಣಿದ್ದೂ ಕುರುಡರಾಗಿದ್ದಾರೆ. ನಗರಾಭಿವೃದ್ಧಿ ಬಗ್ಗೆ ಯಾರೊಬ್ಬರಿಗೂ ಆಲೋಚನೆಯೂ ಇಲ್ಲ, ಆಸಕ್ತಿಯೂ ಇಲ್ಲ. ದಶಕದಿಂದ ರಸ್ತೆಗಳ ಸ್ಥಿತಿ ಹದಗೆಟ್ಟಿದೆ. ಹಾಳಾದ ರಸ್ತೆಗಳ ಕಡೆ ಯಾರೊಬ್ಬರೂ ತಿರುಗಿ ನೋಡುತ್ತಿಲ್ಲ. ನಗರಸಭೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ನಮಗೂ ರಸ್ತೆಗಳಿಗೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ.

ನಗರದ ಯಾವುದೇ ರಸ್ತೆಗಿಳಿದರೂ ಹಳ್ಳ-ಗುಂಡಿಗಳದ್ದೇ ಕಾರು-ಬಾರು. ಮಳೆ ಹೊಯ್ದರಂತೂ ರಸ್ತೆ ಯಾವುದು, ಗುಂಡಿ ಯಾವುದು ಎಂದೇ ಕಾಣುವುದಿಲ್ಲ. ಇದರ ನಡುವೆಯೂ ರಸ್ತೆಗಳನ್ನು ಬಗೆದು ಹಾಳುವ ಪ್ರಕ್ರಿಯೆಯಂತೂ ಕೊನೆಗೊಂಡಿಲ್ಲ. ಹಾಳಾಗಿರುವ ರಸ್ತೆಗಳ ಸುಧಾರಣೆ ಯಾವಾಗ ಎನ್ನುವುದೇ ಯಕ್ಷಪ್ರಶ್ನೆಯಾಗಿದೆ.

Mandya : ಬಿಜೆಪಿ ಟಿಕೆಟ್‌ ಸಿಗುವ ವಿಶ್ವಾಸ ಇದೆ : ಮತ್ತೆ ಚುನಾವಣೆ ಸ್ಪರ್ಧೆ

ನಗರ ಪ್ರದಕ್ಷಿಣೆಗೆ ಪುರುಸೊತ್ತಿಲ್ಲ:

ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳಿಗೆ ನಗರ ಪ್ರದಕ್ಷಿಣೆ ಹಾಕುವುದಕ್ಕೆ ಪುರುಸೊತ್ತೇ ಇಲ್ಲ. ಸದಾಕಾಲ ಸಭೆಗಳನ್ನು ನಡೆಸುವುದರಲ್ಲೇ ನಿರತರಾಗಿದ್ದಾರೆಯೇ ವಿನಃ ನಗರದ ರಸ್ತೆಗಳ ಪರಿಸ್ಥಿತಿ ಹೇಗಿದೆ?, ಜನರ ಸಂಚಾರ ವ್ಯವಸ್ಥೆ ಹೇಗಿದೆ?, ಯಾವ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ತುರ್ತಾಗಿ ನಡೆಸಬೇಕಾಗಿರುವ ರಸ್ತೆ ಕಾಮಗಾರಿಗಳು ಯಾವುವು ಎಂಬ ಬಗ್ಗೆ ವಿವೇಚಿಸುವ, ವೀಕ್ಷಿಸುವ, ಅನುಷ್ಠಾನಕ್ಕೆ ತರುವ ಇಚ್ಛಾಶಕ್ತಿ ಇಲ್ಲದಿರುವುದೇ ನಗರದ ರಸ್ತೆಗಳು ದಶಕಗಳಿಂದ ಗುಂಡಿಗಳಿಂದ ಆವೃತವಾಗಿರುವುದಕ್ಕೆ ಪ್ರಮುಖ ಕಾರಣವಾಗಿದೆ.

ಪ್ರಮುಖ ರಸ್ತೆಗಳೇ ಗುಂಡಿಮಯ:

ನಗರದ ಗುತ್ತಲು ರಸ್ತೆ, ಬೆಸಗರಹಳ್ಳಿ ರಾಮಣ್ಣ ಸರ್ಕಲ್‌, ಅಂಬೇಡ್ಕರ್‌ ವೃತ್ತ, ಬನ್ನೂರು ರಸ್ತೆ, ವಿಶ್ವೇಶ್ವರಯ್ಯ ರಸ್ತೆಯಂತಹ ಪ್ರಮುಖ ರಸ್ತೆಗಳಲ್ಲೇ ಮಂಡಿಯುದ್ದ ಗುಂಡಿಬಿದ್ದಿವೆ. ಈ ರಸ್ತೆಗಳಲ್ಲಿ ಸಂಚರಿಸುವಾಗ ಆಗುವ ಅನುಭವ ಹೇಳಲಾಗದು. ದ್ವಿಚಕ್ರ ವಾಹನ ಸವಾರರು ಕಣ್ಣಲ್ಲಿ ಕಣ್ಣಿಟ್ಟು ವಾಹನಗಳನ್ನು ಚಾಲನೆ ಮಾಡಬೇಕಿದೆ. ಸ್ವಲ್ಪ ಎಚ್ಚರ ತಪ್ಪಿದರೂ ವಾಹನಗಳು ಗುಂಡಿಗಿಳಿದು ಬೀಳುವುದು ನಿಶ್ಚಿತ. ಈಗಾಗಲೇ ಹಲವಾರು ಮಂದಿ ಗುಂಡಿಗಳಲ್ಲಿ ಬಿದ್ದು ಕೈ-ಕಾಲು ಮುರಿದುಕೊಂಡಿದ್ದಾರೆ. ಕಾರು, ಆಟೋಗಳೂ ಕೂಡ ಸಂಚರಿಸಲಾಗದಷ್ಟುಅಧ್ವಾನ ಸ್ಥಿತಿ ತಲುಪಿದ್ದರೂ ರಸ್ತೆಗಳನ್ನು ಅಭಿವೃದ್ಧಿ ಪಡಿಸುವುದಕ್ಕೆ ಯಾರೊಬ್ಬರೂ ಮುಂದಾಗುತ್ತಿಲ್ಲ.

ಬನ್ನೂರು ರಸ್ತೆಯಂತೂ ಹರಿದು ಛಿದ್ರವಾಗಿದೆ. ಆ ರಸ್ತೆಯಲ್ಲಿ ನಿತ್ಯ ಸಂಚರಿಸುವವರು ಮೈ-ಕೈ ನೋವು, ಸೊಂಟನೋವುಗಳಿಂದ ಬಳಲುತ್ತಿದ್ದಾರೆ. ಅಂಬೇಡ್ಕರ್‌ ಸರ್ಕಲ್‌ ತಿರುವಿನಲ್ಲೇ ದೊಡ್ಡ ಗುಂಡಿಗಳು ನಿರ್ಮಾಣವಾಗಿವೆ. ಗುತ್ತಲು ರಸ್ತೆಯಲ್ಲೂ ಗುಂಡಿಗಳೊಳಗೆ ಇಳಿದು ನೆಗೆಯುತ್ತಾ ಸರ್ಕಸ್‌ ಮಾಡಿಕೊಂಡು ವಾಹನಗಳು ಮುನ್ನಡೆಯಬೇಕಿದೆ. ಪ್ರಮುಖ ರಸ್ತೆಗಳನ್ನು ಬಿಟ್ಟು ಬಡಾವಣೆಯ ಸಣ್ಣ ರಸ್ತೆಗಳಲ್ಲಿ ಹೋಗೋಣವೆಂದರೆ ಅವುಗಳ ಸ್ಥಿತಿ ಇನ್ನೂ ಕೆಟ್ಟದ್ದಾಗಿದೆ. ಯಾವುದೇ ಬಡಾವಣೆಯ ಒಂದೇ ಒಂದು ರಸ್ತೆ ಚೆನ್ನಾಗಿದೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲದಂತೆ ಕಿತ್ತುಬಂದಿವೆ.

ಮಳೆಯ ಮೇಲೆ ಗೂಬೆ:

ಅನಿಷ್ಠಕ್ಕೆಲ್ಲಾ ಶನೇಶ್ವರ ಕಾರಣ ಎಂಬ ಮಾತಿನಂತೆ ನಗರ ವ್ಯಾಪ್ತಿಯ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗದಿರುವ ತಮ್ಮ ದೌರ್ಬಲ್ಯವನ್ನು ಮುಚ್ಚಿಡಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ರಸ್ತೆಗಳು ಹಾಳಾಗಿರುವುದಕ್ಕೇ ಮಳೆಯೇ ಮೂಲ ಕಾರಣ ಎಂದು ಎಲ್ಲರೂ ಮಳೆಯ ಕಡೆಯೇ ಬೊಟ್ಟು ಮಾಡಿ ತೋರಿಸುವುದು ವಾಡಿಕೆಯಾಗಿದೆ. ತಮ್ಮ ಬೇಜವಾಬ್ದಾರಿ, ನಿರ್ಲಕ್ಷ್ಯ, ಇಚ್ಛಾಶಕ್ತಿಯ ಕೊರತೆಯನ್ನು ಮರೆಮಾಚುವುದಕ್ಕಾಗಿ ಎಲ್ಲರೂ ಮಳೆಯ ಮೇಲೆ ಗೂಬೆ ಕೂರಿಸುತ್ತಿದ್ದಾರೆ.

ಕಳೆದ ಮೂರು ವರ್ಷಗಳಿಂದ ದಾಖಲೆಯ ಮಳೆಯಾಗುತ್ತಿರುವುದು ಎಲ್ಲರಿಗೂ ತಿಳಿದಿದೆ. ಅದಕ್ಕಿಂತ ಮೊದಲು ಮಂಡ್ಯ ನಗರದ ರಸ್ತೆಗಳು ಅಭಿವೃದ್ಧಿ ಕಂಡಿದ್ದವೇ ಎಂದರೆ ಯಾರ ಬಳಿಯೂ ಉತ್ತರವೇ ಇಲ್ಲ. ದಶಕಗಳಿಂದಲೂ ಹಾಳಾದ ಸ್ಥಿತಿಯಲ್ಲೇ ರಸ್ತೆಗಳಿದ್ದರೂ ಸಣ್ಣ ಪ್ರಮಾಣದ ಅಭಿವೃದ್ಧಿಯನ್ನೂ ಮಾಡದೆ ದೂರ ಉಳಿದು ಈಗ ಮಳೆಯ ನೆಪವನ್ನು ಮುಂದಿಟ್ಟುಕೊಂಡು ಜನರನ್ನು ದಿಕ್ಕುತಪ್ಪಿಸುವ ಪ್ರಯತ್ನಿಸುತ್ತಿರುವ ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಗುಂಡಿಗಳನ್ನು ಮುಚ್ಚುವ ಯೋಗ್ಯತೆಯೂ ಇಲ್ಲ:

ಪ್ರಮುಖ ರಸ್ತೆಗಳಲ್ಲಿ ಮೂರ್ನಾಲ್ಕು ಅಡಿಯಷ್ಟುಗುಂಡಿ ಬಿದ್ದಿದ್ದರೂ ಕನಿಷ್ಠ ಅವುಗಳನ್ನಾದರೂ ಮುಚ್ಚುವ ಯೋಗ್ಯತೆಯೂ ಅಧಿಕಾರಿಗಳಿಗೆ ಇಲ್ಲವಾಗಿದೆ. ಜನರಿಂದ ತೆರಿಗೆ ರೂಪದಲ್ಲಿ ಹಣವನ್ನು ಸುಲಭವಾಗಿ ಬೊಕ್ಕಸಕ್ಕೆ ಸೇರಿಸಿಕೊಳ್ಳುವ ರೀತಿಯಲ್ಲೇ ನಗರದ ರಸ್ತೆಗಳನ್ನು ಉತ್ತಮ ಸ್ಥಿತಿಯಲ್ಲಿಡುತ್ತಿಲ್ಲ. ಸಂಚಾರಕ್ಕೆ ಅಯೋಗ್ಯವೆನ್ನಿಸುವ ಸ್ಥಿತಿಯನ್ನು ರಸ್ತೆಗಳು ತಲುಪಿದ್ದರೂ ಅವುಗಳನ್ನು ಸುಸ್ಥಿತಿಗೆ ತರದೆ ಯಥಾಸ್ಥಿತಿಯಲ್ಲಿರಿಸಿರುವ ಅಧಿಕಾರಿಗಳು, ಜನಪ್ರತಿನಿಧಿಗಳ ಭಂಡತನಕ್ಕೆ ನಗರದ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಬನ್ನೂರು ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಿಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತೇಪೆ ಹಾಕುವ ಕೆಲಸ ಮಾಡಿದರಾದರೂ ಅದನ್ನಾದರೂ ಸರಿಯಾಗಿ ಮಾಡಿದ್ದರೆ ಪುಣ್ಯಪ್ರಾಪ್ತಿಯಾಗುತ್ತಿತ್ತು. ತೇಪೆ ಹಾಕಿದ ಒಂದು ವಾರದಲ್ಲೇ ರಸ್ತೆ ಛಿದ್ರವಾಗಿದೆ. ಎಲ್ಲಾ ಭಾಗಗಳಿಂದಲೂ ಕಿತ್ತುಬಂದಿದ್ದು, ಸಣ್ಣ ಸಣ್ಣ ಜಲ್ಲಿಕಲ್ಲುಗಳು ಮೇಲೆದ್ದಿವೆ. ದ್ವಿಚಕ್ರವಾಹನ ಸವಾರರು ಚಲಿಸುವಾಗ ಆಯತಪ್ಪಿ ಜಾರಿಬಿದ್ದಿರುವ ಘಟನೆಗಳು ನಡೆದಿದ್ದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಕುಂಭಕರ್ಣನ ನಿದ್ರೆಯಲ್ಲಿರುವ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚರಗೊಳ್ಳಲು ದೊಡ್ಡ ಅನಾಹುತವೇ ಸಂಭವಿಸಬೇಕು. ಅದಕ್ಕಾಗಿ ಎಲ್ಲರೂ ಕಾಯುತ್ತಾ ಕುಳಿತರಬಹುದೆಂಬ ಭಾವನೆ ಜನರಲ್ಲಿ ಮೂಡಿದೆ.

ರಸ್ತೆಗಳನ್ನು ನೋಡಿದರೆ ದ್ವಿಚಕ್ರವಾಹನಗಳಲ್ಲಿ ಹೋಗುವುದಕ್ಕೆ ಭಯವಾಗುತ್ತದೆ. ರಾತ್ರಿ ವೇಳೆ ಸಂಚರಿಸುವುದಂತೂ ಇನ್ನೂ ಕಷ್ಟ. ವಯಸ್ಸಾದವರು, ಮಕ್ಕಳನ್ನು ಕೂರಿಸಿಕೊಂಡು ಹೋಗುವವರು ಜೀವವನ್ನು ಅಂಗೈಯ್ಯಲ್ಲಿಡಿದು ಚಾಲನೆ ಮಾಡಬೇಕು. ಮಂಡ್ಯ ರಸ್ತೆಗಳಲ್ಲಿ ಸಂಚರಿಸುವವರು ಸ್ವಲ್ಪ ಎಚ್ಚರ ತಪ್ಪಿದರೂ ಅನಾಹುತ ನಿಶ್ಚಿತ ಅಂತ ಮಂಡ್ಯದ ನಿವೃತ್ತ ಶಿಕ್ಷಕ ನಾರಾಯಣಸ್ವಾಮಿ ತಿಳಿಸಿದ್ದಾರೆ. 

ಮಂಡ್ಯವನ್ನು ನಗರ ಎಂದು ಹೇಳಿಕೊಳ್ಳುವುದಕ್ಕೆ ನಾಚಿಕೆಯಾಗುತ್ತೆ. ನಗರ ರಸ್ತೆಗಳಿಗಿಂತ ಹಳ್ಳಿ ರಸ್ತೆಗಳೇ ಎಷ್ಟೋ ಉತ್ತಮವಾಗಿವೆ. ನಗರದ ಯಾವುದಾದರೂ ಒಂದು ರಸ್ತೆಯಲ್ಲಿ ಆರಾಮವಾಗಿ ಹೋಗಲು ಸಾಧ್ಯವಿಲ್ಲ. ರಸ್ತೆಗಳು ಕುಲಗೆಟ್ಟು ಹಾಳಾಗಿದ್ದರೂ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮರ್ಯಾದೆಯೇ ಇಲ್ಲ ಅಂತ ಮಂಡ್ಯದ ಕಲಾವಿದ ಪ್ರಕಾಶ್‌ ಹೇಳಿದ್ದಾರೆ.  

Mandya : ಸತ್ತವನ ಹೆಸರಿನಲ್ಲಿ ಆಧಾರ್‌ ಕಾರ್ಡ್‌ ಸೃಷ್ಟಿ

ನಗರ ರಸ್ತೆಗಳಂತೂ ದುರವಸ್ಥೆಯಲ್ಲಿವೆ. ಗುಂಡಿಗಳನ್ನು ಮುಚ್ಚುವುದಕ್ಕೂ ಇವರಿಗೆ ಸಾಧ್ಯವಾಗದಿದ್ದ ಮೇಲೆ ನಗರಸಭೆ, ಲೋಕೋಪಯೋಗಿ ಇಲಾಖೆಗಳ ಅವಶ್ಯಕತೆಯಾದರೂ ಏನಿದೆ. ರಸ್ತೆಯಲ್ಲಿ ಸಂಚರಿಸುವ ಜನರ ಕಷ್ಟಗಳು ಇವರಿಗೆ ಅರಿವಾಗುತ್ತಿಲ್ಲವೇ?, 10 ವರ್ಷಗಳಿಂದ ರಸ್ತೆಗಳು ಹಾಳಾಗಿದ್ದರೂ ಕಣ್ಮುಚ್ಚಿ ಕುಳಿತಿರುವ ನಮ್ಮನ್ನಾಳುವವರಿಗೆ ನಾಚಿಕೆಯಾಗಬೇಕಿದೆ ಅಂತ ಮಂಡ್ಯ ನಗರದ ಗೃಹಿಣಿ ನಾಗರತ್ನ ಎಂಬುವರು ತಿಳಿಸಿದ್ದಾರೆ. 

ನಗರೋತ್ಥಾನ ಮೂರನೇ ಹಂತದಲ್ಲಿ 1.26 ಕೋಟಿ ರು. ಹಾಗೂ ನಾಲ್ಕನೇ ಹಂತದಲ್ಲಿ 18.50 ಕೋಟಿ ರು. ಕಾಮಗಾರಿಗೆ ಟೆಂಡರ್‌ ಆಗಿದೆ. ಕಾರ್ಯಾದೇಶ ಪಡೆದು ಕಾಮಗಾರಿ ನಡೆಸಬೇಕಿದೆ. ಇದಲ್ಲದೆ ಗುತ್ತಲು, ವಿಶ್ವೇಶ್ವರಯ್ಯ ರಸ್ತೆ, ಬೆಸಗರಹಳ್ಳಿ ರಾಮಣ್ಣ ಸರ್ಕಲ್‌ನಿಂದ ಅಂಬೇಡ್ಕರ್‌ ವೃತ್ತದವರೆಗೆ ನಗರಸಭೆಯಿಂದಲೇ ರಸ್ತೆ ಅಭಿವೃದ್ಧಿಪಡಿಸಲು ಜಿಲ್ಲಾಧಿಕಾರಿಗಳಿಂದ ಅನುಮೋದನೆ ದೊರಕಿದೆ. ಎಪಿಎಂಸಿ ರಸ್ತೆ ಅಭಿವೃದ್ಧಿಗೆ 30 ಲಕ್ಷ ರು. ಅನುಮೋದನೆ ಸಿಕ್ಕಿದ್ದು, ಮಳೆಗಾಲ ಮುಗಿದ ಕೂಡಲೇ ಕಾಮಗಾರಿ ಆರಂಭಿಸಲಾಗುವುದು ಅಂತ ನಗರಸಭೆ ಅಧ್ಯಕ್ಷ ಎಚ್‌.ಎಸ್‌.ಮಂಜು ತಿಳಿಸಿದ್ದಾರೆ. 
 

Latest Videos
Follow Us:
Download App:
  • android
  • ios